Karnataka Elections: ಜನ ರಾಜಕೀಯವಾಗಿ ಪ್ರಜ್ಞಾವಂತರಾಗಿದ್ದಾರೆ, ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ; ಡಾ ಜಿ ಪರಮೇಶ್ವರ್
Dr G Parameshwar: ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ, ಒಂದೆರಡು ಸಮೀಕ್ಷೆ ಬಿಟ್ಟರೆ ಬಹುತೇಕ ಸಮೀಕ್ಷೆಗಳು ಕೂಡ ಕಾಂಗ್ರೆಸ್ ಪರವೇ ಹೇಳಿವೆ, ಕಾಂಗ್ರೆಸ್ ಸರ್ಕಾರ ಮಾಡುವುದು ಖಚಿತ ಎಂದು ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು: ವಿಧಾನಸಭೆ ಚುನಾವಣೆ ಪ್ರತಿಷ್ಠಿತವಾಗಿ ನಡೆದಿದೆ. ಜನ ಬದಲಾವಣೆ ಬಯಸಿದ್ದರು, ಅದು ಈಗ ಎದ್ದು ಕಾಣುತ್ತಿದೆ. ಚುನಾವಣಾ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ (Dr G Parameshwar) ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಉತ್ತಮ ಮತದಾನ ಆಗಿದೆ. ಜನ ರಾಜಕೀಯವಾಗಿ ಪ್ರಜ್ಞಾವಂತರಾಗಿದ್ದಾರೆ, ಮತದಾನ ಮಾಡಿದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ, ಒಂದೆರಡು ಸಮೀಕ್ಷೆ ಬಿಟ್ಟರೆ ಬಹುತೇಕ ಸಮೀಕ್ಷೆಗಳು ಕೂಡ ಕಾಂಗ್ರೆಸ್ ಪರವೇ ಹೇಳಿವೆ, ಕಾಂಗ್ರೆಸ್ ಸರ್ಕಾರ ಮಾಡುವುದು ಖಚಿತ. ನಾವು ಕೊಟ್ಟಿರುವ ಭರವಸೆ ನಂಬಿ ಮತದಾರ ಮತ ಹಾಕಿರಬಹುದು, ನಾವು ನೀಡಿರುವ ಐದು ಗ್ಯಾರಂಟಿ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಸಿಎಂ ಸ್ಥಾನಕ್ಕೆ ಬಹಳಷ್ಟು ನಾಯಕರು ಆಕಾಂಕ್ಷಿಗಳು ಇದ್ದಾರೆ, ನಮ್ಮ ವರಿಷ್ಠರು ಸಿಎಂ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡಲಿದ್ದಾರೆ, ಅದಕ್ಕೆ ನಾವು ಬದ್ಧರಾಗಿದ್ದೇವೆ. ಈ ಬಾರಿ ಚುನಾವಣೆ ವಿಭಿನ್ನವಾಗಿ ನಡೆದಿದೆ, ಜನ ಪ್ರಜ್ಞಾವಂತರಾಗಿ ಮತ ಚಲಾಯಿಸಲಿದ್ದಾರೆ, ಜಿಲ್ಲೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದ್ದೇವೆ ಎಂದರು.
ಮಾಜಿ ಶಾಸಕ, ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ, ಕೆಲವು ಕ್ಷೇತ್ರದಲ್ಲಿ ಕಡಿಮೆ ಆಗಿದೆ, ಮತದಾನ ಮಾಡದಿದ್ದರೆ ಸರ್ಕಾರದ ಸೌಲಭ್ಯ ಸಿಗದಂತೆ ಕಾಯ್ದೆ ತಂದರೆ ಮತದಾನದ ಲ್ಲಿ ಹೆಚ್ಚು ಭಾಗವಹಿಸಲಿದ್ದಾರೆ ಎಂದರು. ಬಜರಂಗಿ, ಬಜರಂಗದಳಕ್ಕೂ ಏನು ಸಂಬಂಧ, ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನು ಬ್ಯಾನ್ ಆಗಲೇಬೇಕು, ಅದು ನಮ್ಮ ಉದ್ದೇಶ ಎಂದರು.
ಪ್ರಚಾರದ ವೇಳೆ ಪರಮೇಶ್ವರ್ ಮೇಲೆ ನಡೆದಿದ್ದ ದಾಳಿ
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 28 ರಂದು ಚುನಾವಣ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಅವರ ತಲೆಗೆ ತೀವ್ರ ಗಾಯವಾಗಿತ್ತು. ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಭೈರೇನಹಳ್ಳಿ ಗ್ರಾಮದಲ್ಲಿ ಚುನಾವಣ ಪ್ರಚಾರದಲ್ಲಿ ತೊಡಗಿದ್ದರು. ಪರಮೇಶ್ವರ್ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದ ಸಂದರ್ಭದಲ್ಲಿ ಯಾರೋ ಕಲ್ಲು ಎಸೆದಿದ್ದರು. ಪರಮೇಶ್ವರ್ ಅವರನ್ನು ತಕ್ಷಣವೇ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್, ಬೈರೇನಹಳ್ಳಿ ಕ್ರಾಸ್ನಲ್ಲಿ ಪ್ರಚಾರ ಮಾಡುವಾಗ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ಜೆಸಿಬಿ ಮೂಲಕ ಹಾರ, ಹೂ ಹಾಕುವಾಗ ತಲೆಗೆ ಏನೋ ಹೊಡೆದಂತೆ ಆಯ್ತು, ಗುಲಾಬಿ ಜೊತೆ ರಕ್ತ ಬರ್ತಾ ಇದ್ದಿದ್ದು ಗೊತ್ತಾಗಲಿಲ್ಲ, ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದೆ, ಹೂವಿನಲ್ಲಿ ಕಲ್ಲು ಬಂದಿರೋಲ್ಲ, ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬೇಕು. 35 ವರ್ಷದ ರಾಜಕೀಯದಲ್ಲಿ ಶತ್ರುಗಳು ಕಡಿಮೆ, ಚುನಾವಣೆ ಜನರ ತೀರ್ಪು, ಜನರ ಮುಂದೆ ಮತ ಕೇಳ್ತೀವಿ, ಆಶ್ವಾಸನೆ ಕೊಡ್ತೀವಿ ಅದನ್ನ ಬಿಟ್ಟು ಬೇರೆ ಮಾಡಬಾರದು, ದ್ವೇಷ ತಿರಿಸಿಕೊಳ್ಳುವುದಕ್ಕೆ ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು ಎಂದು ಹೇಳಿದ್ದರು.