Woman and newborn twins death case: ತುಮಕೂರಿನಲ್ಲಿ ಬಾಣಂತಿ,ಅವಳಿ ನವಜಾತ ಶಿಶುಗಳ ಸಾವು ಪ್ರಕರಣ; ವೈದ್ಯೆ,ಇಬ್ಬರು ನರ್ಸ್ ಗಳು ಸಸ್ಪೆಂಡ್
ತಾಯಿ ಕಾರ್ಡ್ ಇಲ್ಲ ಎಂದು ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿರುವ ಆರೋಪ ಸಂಬಂಧ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯ ಉಷಾ ಹಾಗೂ ಇಬ್ಬರು ನರ್ಸ್ ಗಳನ್ನು ಅಮಾನತು ಮಾಡಲಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ, ಅವಳಿ ಶಿಶುಗಳು ಮೃತಪಟ್ಟಿದ್ದ ಆರೋಪ ಕೇಳಿಬಂದಿತ್ತು.
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ, ಅವಳಿ ನವಜಾತ ಶಿಶುಗಳ ಸಾವು ಆರೋಪ ಪ್ರಕರಣದಲ್ಲಿ ಮೂವರ ತಲೆದಂಡವಾಗಿದೆ.
ತಾಯಿ ಕಾರ್ಡ್ ಇಲ್ಲ ಎಂದು ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿರುವ ಆರೋಪ ಸಂಬಂಧ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆ ಉಷಾ ಹಾಗೂ ಇಬ್ಬರು ನರ್ಸ್ ಗಳನ್ನು ಅಮಾನತು ಮಾಡಲಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ, ಅವಳಿ ಶಿಶುಗಳು ಮೃತಪಟ್ಟಿದ್ದ ಆರೋಪ ಕೇಳಿಬಂದಿತ್ತು. ಇದು ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ವೈದ್ಯರನ್ನು ಅಮಾನತು ಮಾಡುವವರೆಗೆ ಶವಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಇದೇ ವಿಚಾರ ಸಂಬಂಧ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಪ್ರತಿ ಪ್ರಜೆಗೂ ಬದುಕುವ ಹಾಗೂ ಆರೋಗ್ಯವನ್ನು ಪಡೆಯುವ ಹಕ್ಕಿದೆ, ಆದರೆ ತುಮಕೂರಿನಲ್ಲಿ ತಾಯಿ ಕಾರ್ಡ್ ಇಲ್ಲ ಎಂದ ಮಾತ್ರಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ್ದು ಮನವೀಯತೆಗೆ, ಕರ್ನಾಟಕದ ಘನತೆಗೆ ಕಪ್ಪುಚುಕ್ಕೆಯಾಗಿದೆ. ಆರೋಗ್ಯ ಇಲಾಖೆಯನ್ನು ಸಂಪೂರ್ಣ ಭ್ರಷ್ಟಾಚಾರದ ಇಲಾಖೆಯನ್ನಾಗಿಸಿದ @mla_sudhakar ಅವರೇ ಈ ಮೂರು ಸಾವುಗಳಿಗೆ ಹೊಣೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಾಯಿ ಕಾರ್ಡ್ ಮುಖ್ಯವೇ, ಚಿಕಿತ್ಸೆ ಮುಖ್ಯವೇ? ಜೀವ ಮುಖ್ಯವೇ, ನಿಯಮ ಮುಖ್ಯವೇ? @mla_sudhakar ಅವರೇ, ಯಾವುದು ಮುಖ್ಯ? ಭ್ರಷ್ಟಾಚಾರಕ್ಕೆ ಇಲ್ಲದ ನಿಯಮ ಚಿಕಿತ್ಸೆಗೆ ಮಾತ್ರ ಕಡ್ಡಾಯವೇ? ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಸಾವಿಗೆ ಕಾರಣವಾಗಿದ್ದು ಅಕ್ಷಮ್ಯವಾದುದು. ಇದೇನಾ ನಿಮ್ಮ ಅಚ್ಛೆ ದಿನ್ @BSBommai ಅವರೇ? ಎಂದು ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತಕ್ಕೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ. ಕೂಡಲೇ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು, ಇಲ್ಲವೇ ಸ್ವತಃ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಭಾಗ