ರೀಲ್ಸ್ ಮಾಡಿ ವಿಶೇಷ ಬಹುಮಾನ ಗೆಲ್ಲಿ; ಕರ್ನಾಟಕದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ
ಕನ್ನಡ ಸುದ್ದಿ  /  ಕರ್ನಾಟಕ  /  ರೀಲ್ಸ್ ಮಾಡಿ ವಿಶೇಷ ಬಹುಮಾನ ಗೆಲ್ಲಿ; ಕರ್ನಾಟಕದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ

ರೀಲ್ಸ್ ಮಾಡಿ ವಿಶೇಷ ಬಹುಮಾನ ಗೆಲ್ಲಿ; ಕರ್ನಾಟಕದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ

Laxmi Hebbalkar: ಕರ್ನಾಟಕದ ಗೃಹಲಕ್ಮೀಯರಿಗೆ ರೀಲ್ಸ್‌ ಮಾಡಿ ಬಹುಮಾನ ಗೆಲ್ಲುವ ಅವಕಾಶ ಸಿಕ್ಕಿದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಘೋಷಣೆ ಮಾಡಿದ್ದಾರೆ.

ರೀಲ್ಸ್ ಮಾಡಿ ಬಹುಮಾನ ಗೆಲ್ಲಿ; ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ
ರೀಲ್ಸ್ ಮಾಡಿ ಬಹುಮಾನ ಗೆಲ್ಲಿ; ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ

ಬೆಂಗಳೂರು: ಕರ್ನಾಟಕದ ಗೃಹಲಕ್ಷ್ಮಿಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ಖುಷಿ ಸುದ್ದಿ ಕೊಟ್ಟಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ತಿಂಗಳು ಹಣ ಪಡೆಯುತ್ತಿರುವ ಫಲಾನುಭವಿ ಮಹಿಳೆಯರು, ಮತ್ತೆ ಬಹುಮಾನ ಗೆಲ್ಲುವ ಅವಕಾಶವಿದೆ. ಇದಕ್ಕೆ ಮನೆಯ ಯಜಮಾನಿಯರು ಮಾಡಬೇಕಾಗಿದ್ದು ಇಷ್ಟೇ. ರೀಲ್ಸ್ ಮಾಡಿದರೆ ಸಾಕು, ಬಹುಮಾನ ಗೆಲ್ಲುವ ಅವಕಾಶ ನಿಮ್ಮದಾಗುತ್ತದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯಜಮಾನಿಯರಿಗೆ ಕರೆ ನೀಡಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಮೀ ಯೋಜನೆಯು ಜಾರಿಯಾಗಿ ಒಂದು ವರ್ಷವಾಗಿದೆ. ಈ ಖುಷಿಯ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದ ಯಜಮಾನಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಖುಷಿಯಲ್ಲಿನ ಅವರಿಗೆ ಮತ್ತೊಂದು ಬಹುಮಾನ ಗೆಲ್ಲುವ ಅವಕಾಶದ ಕುರಿತು ಘೋಷಿಸಿದ್ದಾರೆ. ಆದರೆ, ಇದಕ್ಕೆ ಒಂದು ಸವಾಲಿದೆ.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇಲ್ಲಿಯವರೆಗೆ ಸರ್ಕಾರದಿಂದ ಮಾಸಿಕ ಹಣ ಪಡೆದು ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಯನ್ನು ಕಂಡುಕೊಂಡಿದ್ದಾರೆ? ತಮಗಾದ ಅನುಕೂಲ, ತಮ್ಮ ಕುಟುಂಬ ಜೀವನದಲ್ಲಾದ ಬದಲಾವಣೆಗಳ ಕುರಿತಾಗಿ ರೀಲ್ಸ್ ಮಾಡಿ ಅದನ್ನು ಫೇಸ್ ಬುಕ್, ಇನ್‌​ಸ್ಟಾಗ್ರಾಮ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಈ ಒಂದು ವರ್ಷದಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎನ್ನುವುದನ್ನು ಯಜಮಾನಿಯರು ಹಂಚಿಕೊಳ್ಳುವಂತೆ ಸಚಿವೆ ಕೋರಿದ್ದಾರೆ. ಯಾರ ರೀಲ್ಸ್‌ಗೆ ಹೆಚ್ಚು ವೀವ್ಸ್​ ಬರುತ್ತದೆಯೋ ಆ ಯಜಮಾನಿಗೆ ತಮ್ಮ ಕಡೆಯಿಂದ ವಿಶೇಷ ಬಹುಮಾನ ಘೋಷಿಸಿದ್ದಾರೆ.

ಒಂದು ತಿಂಗಳ ಅವಕಾಶ

ರೀಲ್ಸ್‌ ಕಳುಹಿಸಲು ಒಂದು ತಿಂಗಳ ಅವಕಾಶವಿದೆ. ಸೆಪ್ಟೆಂಬರ್ 30ನೇ ತಾರೀಕಿನ ಒಳಗೆ ತಾವು ಮಾಡಿದ ರೀಲ್ಸ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬೇಕು. ಜಾಸ್ತಿ ವೀಕ್ಷಣೆ​ ಪಡೆದುಕೊಂಡ ರೀಲ್ಸ್‌ಗೆ ವೈಯಕ್ತಿಕವಾಗಿ ಬಹುಮಾನವನ್ನು ನೀಡುತ್ತೇನೆ ಎಂದು ಸಚಿವೆ ಹೇಳಿಕೊಂಡಿದ್ದಾರೆ. ಮೊದಲ 50 ಗೃಹಲಕ್ಷ್ಮೀಯರ ರೀಲ್ಸ್‌ಗಾಗಿ ತಾವು ಎದುರು ನೋಡುತ್ತಿರುವುದಾಗಿ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಸಚಿವೆ ಹೇಳಿದ ಮಾತುಗಳು ಹೀಗಿವೆ

ಕರ್ನಾಟಕ ರಾಜ್ಯದ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ 'ಗೃಹಲಕ್ಷ್ಮೀ' ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಮನೆಯೊಡತಿಯರಿಗೆ/ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯಿಂದ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳಲು ಕಾತುರಳಾಗಿದ್ದೇನೆ. ನಿಮ್ಮ ಜೀವನದಲ್ಲಿ ಗೃಹಲಕ್ಷ್ಮೀ ಯೋಜನೆಯಿಂದಾದ ಬದಲಾವಣೆಯ ಕುರಿತು ಒಂದು ತಿಂಗಳ ಅವಧಿಯವರೆಗೆ (ಸೆಪ್ಟೆಂಬರ್ 30) ರೀಲ್ಸ್ ಮೂಲಕ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ. ಯಾವ ರೀಲ್ಸ್‌ಗಳು ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುತ್ತವೆಯೋ ಅಂತಾ ರೀಲ್ಸ್‌ಗೆ ವೈಯಕ್ತಿಕವಾಗಿ ಬಹುಮಾನ ವಿತರಿಸಲಿದ್ದೇನೆ‌, ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿಕೊಂಡಿದ್ದಾರೆ.

 

Whats_app_banner