ಕನ್ನಡ ಸುದ್ದಿ  /  Karnataka  /  Womens Reservation Bill Total Strength Of Mla Only 4 Percent Are Women In Legislature Karnataka News In Kannada Arc

ಶಾಸನಸಭೆಯಲ್ಲಿ ಕುಸಿಯುತ್ತಿದೆ ಮಹಿಳಾ ಪ್ರಾತಿನಿಧ್ಯ, 224 ಶಾಸಕರಲ್ಲಿ ಮಹಿಳಾ ಶಾಸಕಿಯರ ಪ್ರಾತಿನಿಧ್ಯ ಕೇವಲ 10

ದೇಶ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಮಹಿಳೆಯರು ನಿಭಾಯಿಸದ ಜವಬ್ದಾರಿಗಳೇ ಇಲ್ಲ. ಅದರಲ್ಲೂ ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ. ಆದರೆ ಶಾಸನ ಸಭೆಗಳಲ್ಲಿ ಮಾತ್ರ ಮಹಿಳೆಯರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಿದೆ.

ಶಾಸನಸಭೆಯಲ್ಲಿ ಕುಸಿಯುತ್ತಿದೆ ಮಹಿಳಾ ಪ್ರಾತಿನಿಧ್ಯ, 224 ಶಾಸಕರಲ್ಲಿ ಮಹಿಳಾ ಶಾಸಕಿಯರ ಪ್ರಾತಿನಿಧ್ಯ ಕೇವಲ 10 (HT PHOTO)
ಶಾಸನಸಭೆಯಲ್ಲಿ ಕುಸಿಯುತ್ತಿದೆ ಮಹಿಳಾ ಪ್ರಾತಿನಿಧ್ಯ, 224 ಶಾಸಕರಲ್ಲಿ ಮಹಿಳಾ ಶಾಸಕಿಯರ ಪ್ರಾತಿನಿಧ್ಯ ಕೇವಲ 10 (HT PHOTO)

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಮಸೂದೆಗೆ ಅಂಗೀಕಾರ ದೊರೆತಿದೆ. ದಶಕಗಳಿಂದ ಕೇವಲ ಚರ್ಚೆಯಲ್ಲೇ ಕಳೆದು ಹೋಗುತ್ತಿದ್ದ ಈ ಮಸೂದೆ ಜಾರಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿದ್ದೇವೆ. 2029ರ ಲೋಕಸಭೆ ಮತ್ತು ತದನಂತರದ ಶಾಸನ ಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಪ್ರತಿನಿಧಿಗಳನ್ನು ಕಾಣಬಹುದು.

ಟ್ರೆಂಡಿಂಗ್​ ಸುದ್ದಿ

ಹಾಗಾದರೆ ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಎಷ್ಟು? ಎಷ್ಟು ಮಂದಿ ಮಹಿಳಾ ಶಾಸಕಿಯರಿದ್ದಾರೆ ಎಂಬ ಅವಲೋಕನ ಇಲ್ಲಿದೆ. ಶಾಸನ ಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗುತ್ತಲೇ ಇರುವುದು ಆತಂಕದ ಸಂಗತಿ. ಮಹಿಳೆಯರು ಆಯ್ಕೆಯಾಗುವುದೇ ದುಸ್ತರವಾಗಿರುವಾಗ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಗಗನ ಕುಸುಮವೇ ಸರಿ. 1963ರಲ್ಲಿ 18 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದು ಹೊರತುಪಡಿಸಿದರೆ ಇದುವರೆಗೂ ಮಹಿಳಾ ಶಾಸಕಿಯರ ಸಂಖ್ಯೆ ಎರಡಂಕಿ ದಾಟಿಯೇ ಇಲ್ಲ. 1986ರಲ್ಲಿ ಮತ್ತು ಈಗಿನ ವಿಧಾನಸಭೆಯಲ್ಲಿ ಮಾತ್ರ 10 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ.

ದೇಶ ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿದೆ. ಮಹಿಳೆಯರು ನಿಭಾಯಿಸದ ಜವಬ್ದಾರಿಗಳೇ ಇಲ್ಲ. ಅದರಲ್ಲೂ ಕರ್ನಾಟಕ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ. ಆದರೆ ಶಾಸನ ಸಭೆಗಳಲ್ಲಿ ಮಾತ್ರ ಮಹಿಳೆಯರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಪ್ರತಿ ಸಂಪುಟದಲ್ಲಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಅದೂ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೀಮಿತ. ಗೃಹ, ನೀರಾವರಿ, ಶಿಕ್ಷಣ, ಕಂದಾಯ, ಹಣಕಾಸು ಇಂತಹ ಮಹತ್ವದ ಖಾತೆಗಳನ್ನು ನಿಭಾಯಿಸಲು ಮಹಿಳೆ ಅಶಕ್ತಳು ಎಂದು ಅಲಿಖಿತ ನಿಯಮವನ್ನು ಪುರುಷ ಪ್ರಧಾನ ಸಮಾಜ ರೂಢಿಸಿಕೊಂಡು ಬಿಟ್ಟಿದೆಯೇ ಎಂದು ಅನ್ನಿಸದೇ ಇರದು.

ಜಿಲ್ಲೆ ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಮಹಿಳೆಯರಿಗೆ ಸೂಕ್ತ ಮತ್ತು ಸಮರ್ಪಕ ಸ್ಥಾನಮಾನ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿರುವ ಉದಾಹರಣೆಗಳಿಲ್ಲ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳನ್ನು ಹೊರತುಪಡಿಸಿದರೆ ಬೃಹತ್ ಮತ್ತು ರಾಜ್ಯವ್ಯಾಪಿ ಚರ್ಚೆ, ಹಕ್ಕೊತ್ತಾಯ ನಡೆದ ಉದಾಹರಣೆಗಳು ಇಲ್ಲವೇ ಇಲ್ಲ.

ಇದುವರೆಗೂ ಆಯ್ಕೆಯಾದ ಮಹಿಳಾ ಶಾಸಕರು ಕೇವಲ 96 ಮಾತ್ರ!

ರಾಜ್ಯ ಪುನಾರಚನೆಯಾದ 1962ರಿಂದ ಇದುವರೆಗೆ ಆಯ್ಕೆಯಾದ ಮಹಿಳಾ ಶಾಸಕರ ಸಂಖ್ಯೆ ಕೇವಲ 96 ಮಾತ್ರ. ಇದೇ 61 ವರ್ಷಗಳಲ್ಲಿ ರಾಜ್ಯದಲ್ಲಿ 3,009 ಪುರುಷ ಶಾಸಕರು ಆಯ್ಕೆಯಾಗಿದ್ದಾರೆ. ಟಿಕೆಟ್ ನೀಡುವಾಗಲೂ ಮಹಿಳೆಯರನ್ನು ಪರಿಗಣಿಸುವುದೇ ಇಲ್ಲ. ಎಲ್ಲ ಪಕ್ಷಗಳೂ ಶೇ. 3-7 ರಷ್ಟು ಮಾತ್ರ ಟಿಕೆಟ್ ನೀಡುತ್ತವೆ. ಹೆಚ್ಚೆಂದರೆ ಒಂದು ಪಕ್ಷ 15 ಮಂದಿ ಮಹಿಳೆಯರನ್ನು ಮಾತ್ರ ಕಣಕ್ಕಿಳಿಸಿದ ಉದಾಹರಣೆ ಸಿಗಬಹುದು.

ಮತದಾನದಲ್ಲಿ ಸರಿ ಸಮಾನರು

ಕಳೆದ 61 ವರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಸಂಖ್ಯೆ ಸರಿ ಸುಮಾರು ಸಮಾನವಾಗಿಯೇ ಇದೆ. ಪುರುಷ ಮತ್ತು ಮಹಿಳಾ ಅನುಪಾತವು 53.47 ರಿಂದ 51.49 ಆಸುಪಾಸಿನಲ್ಲಿಯೇ ಇದೆ. ಹಲವು ಚುನಾವಣೆಗಳಲ್ಲಿ ಮತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವ ದಾಖಲೆ ಇದೆ.

2023ರ ವಿಧಾನಸಭೆಯ ಚಿತ್ರಣ

ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಮಹಿಳಾ ಶಾಸಕಿಯರ ಸಂಖ್ಯೆ ಕೇವಲ 10! ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ನಾಲ್ವರು ಮತ್ತು ಜೆಡಿಎಸ್ ನಿಂದ ಒಬ್ಬರು ಮತ್ತು ಸ್ವತಂತ್ರವಾಗಿ ಒಬ್ಬ ಶಾಸಕಿ ಆಯ್ಕೆಯಾಗಿದ್ದಾರೆ. ಟಿಕೆಟ್ ನೀಡುವಲ್ಲಿಯೂ ತಾರತಮ್ಯ ಈ ಚುನಾವಣೆಯಲ್ಲಿಯೂ ಮುಂದುವರೆದಿದೆ. ಕಾಂಗ್ರೆಸ್ 11, ಬಿಜೆಪಿ 12 ಮತ್ತು ಜೆಡಿಎಸ್ 13 ಮಹಿಳೆಯರನ್ನು ಕಣಕ್ಕಿಳಿಸಿದ್ದವು. ಆಯ್ಕೆಯಾದ ಪ್ರಮಾಣ ಮಾತ್ರ ಶೇ. 4. ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಪ್ರಮಾಣ ಪರುಷ ಮತದಾರರಿಗೆ ಸರಿ ಸಮಾನವಾಗಿಯೇ ಇತ್ತು.

ಒಟ್ಟು ಮತದಾರರಲ್ಲಿ ಪುರುಷರು 2.63 ಕೋಟಿಯಷ್ಟಿದ್ದರೆ ಮಹಿಳಾ ಮತದಾರರ ಸಂಖ್ಯೆ 2.64 ಕೋಟಿ. ಅಂದರೆ ಪ್ರತಿ 1000 ಪುರುಷ ಮತದಾರರಿಗೆ 989 ಮಹಿಳಾ ಮತದಾರರಿದ್ದಾರೆ. ಮತ ಚಲಾವಣೆಯಲ್ಲಿಯೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಮತ ಚಲಾಯಿಸಿರುವುದು ಕಂಡು ಬರುತ್ತದೆ. ಶೇ.73.68 ರಷ್ಟು ಪುರುಷ ಮತ್ತು ಶೇ.72.7ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. ಆದರೆ ವಿಧಾನಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮಾತ್ರ ಶೇ. 4 ಮತ್ತು ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಿದ್ದರಾಮಯ್ಯ ಸಂಪುಟ ಸೇರ್ಪಡೆಯಾದ ಏಕೈಕ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸರಕಾರಕ್ಕೆ ಮಹಿಳೆಯರ ಮೇಲೆ ಕಾಳಜಿ ಇದ್ದಲ್ಲಿ ಖನೀಜ್ ಫಾತಿಮಾ, ರೂಪಕಲಾ ಮತ್ತು ನಯನಾ ಮೋಟಮ್ಮ ಅವರಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದರೆ ಇಡೀ ದೇಶದಲ್ಲಿ ಸಚಿವ ಸಂಪುಟಕ್ಕೊಂದು ಮೆರುಗು ಉಂಟಾಗುತ್ತಿತ್ತು ಅಲ್ಲವೇ?

(ವರದಿ: ಎಚ್. ಮಾರುತಿ)