ಕನ್ನಡ ಸುದ್ದಿ  /  Karnataka  /  Wont Leave You Congress Mla Publicly Threatened Psi In Jamkhandi

Congress MLA Threat to PSI: 'ನಿಮ್ಮನ್ನು ಬಿಡೋದಿಲ್ಲ' ಸಾರ್ವಜನಿಕವಾಗಿ ಪಿಎಸ್ಐಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ; ವಿಡಿಯೋ ವೈರಲ್

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಸಾರ್ವಜನಿಕವಾಗಿ ಪಿಎಸ್ಐ ಮೇಲೆ ದರ್ಪ ತೋರಿರುವ ಘಟನೆ ನಡೆದಿದೆ. ನಿಮ್ಮನ್ನು ಬಿಡೋದಿಲ್ಲ ಎಂದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿಎಸ್ಐಗೆ ಸಾರ್ವಜನಿಕವಾಗಿ ಬೆದರಿಕೆ ಹಾಗುತ್ತಿರುವ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ
ಪಿಎಸ್ಐಗೆ ಸಾರ್ವಜನಿಕವಾಗಿ ಬೆದರಿಕೆ ಹಾಗುತ್ತಿರುವ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ

ಜಮಖಂಡಿ(ಬಾಗಲಕೋಟೆ): ಅಧಿಕಾರಿಗಳ ವಿರುದ್ಧ ಕೆಲ ಜನಪ್ರತನಿಧಿಗಳು ಹಾಗಾಗೆ ದರ್ಪ ತೋರುವುದನ್ನು ನೋಡಿದ್ದೇವೆ. ಕಾಂಗ್ರೆಸ್ ಶಾಸಕರೊಬ್ಬರು ಪೊಲೀಸ್ ಅಧಿಕಾರಿಯನ್ನು ನಿಂದಿಸಿ, ಸಾರ್ವಜನಿಕವಾಗಿ ಬೆದರಿಕೆ ಹಾಕಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಅವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ವಾಗ್ವಾದ ನಡೆಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡು ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮನ್ನು ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಶಾಸಕ ನ್ಯಾಮಗೌಡ ಅವರ ನಡೆಗೆ ಆಡಳಿತ ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಜಮಖಂಡಿ ಪಟ್ಟಣದಲ್ಲಿ ನಿರ್ಮಾಣವಾಗಲಿರುವ ವೃತ್ತದ ಪರಿಶೀಲನೆ ವೇಳೆ ಶಾಸಕ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ನಿರ್ಮಾಣ ಆಗುತ್ತಿರುವ ವೃತ್ತದಿಂದ ಆಗುವ ಸಮಸ್ಯೆಗಳ ಬಗ್ಗೆ ಪಿಎಸ್ಐ ಬಸವರಾಜ್ ಕೊಣ್ಣೂರ್ ವಿವರಿಸಲು ಮುಂದಾದಾಗ ಶಾಸಕರು ಕೋಪದಿಂದ, ಸುಮ್ಮನಿರು. ಇದರ ಬಗ್ಗೆ ನಿನಗೆ ಏನೂ ಗೊತ್ತಿಲ್ಲ. ನಿಮಗೆ ಪ್ರಸ್ತುತ ಸರ್ಕಾರದ ಬೆಂಬಲವಿದೆ ಎಂದು ನನಗೆ ತಿಳಿದಿದೆ. ಆದರೆ ನಾವು ಅಧಿಕಾರಕ್ಕೆ ಬಂದಾಗ ನಾನು ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಆನಂದ ಸಿದ್ದು ನ್ಯಾಮಗೌಡ ಅವರನ್ನು ಬೆಂಬಲಿಗರು ಸಮಾಧಾನ ಪಡಿಸಲು ಯತ್ನಿಸಿದರೂ ಜಗ್ಗದ ಅವರು, ನೀವು ಶಾಸಕರೇ? ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸಲು ನೀವು ಯಾರು? ನಿನ್ನ ಕರ್ತವ್ಯವನ್ನು ಮಾತ್ರ ಮಾಡು ಎಂದು ಗದರಿದ್ದಾರೆ.

ಡಿಜಿಪಿಯನ್ನೇ ನಾಲಾಯಕ್ ಎಂದ ಡಿಕೆ ಶಿವಕುಮಾರ್

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯ ಜಿಡಿಪಿ ಪ್ರವೀಣ್ ಸೂದ್ ಅವರನ್ನು ನಿಂದಿಸಿದ್ದರು. ಬಿಜೆಪಿ ಸರ್ಕಾರ ರಕ್ಷಿಸುತ್ತಿರುವ ಪ್ರವೀಣ್ ಸೂದ್ ಒಬ್ಬ ನಾಲಾಯಕ್. ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ನಾವು ಅಧಿಕಾರಕ್ಕೆ ಬಂದ ಮೇಲೆ ಇವರ ವಿರುದ್ಧ ಕಠಿಣ ಕ್ರಮ ಕೈಗೆೊಳ್ಳುತ್ತೇವೆ ಎಂದು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆ ಶಿವಕುಮಾರ್, ನಮ್ಮ ಡಿಜಿಪಿ ಒಬ್ಬ ನಾಲಾಯಕ್ (ನಿಷ್ಪ್ರಯೋಜಕ) ಮತ್ತು ಅವರು ತಮ್ಮ ಕೆಲಸಕ್ಕೆ ಯೋಗ್ಯರಲ್ಲ. ಕಳೆದ ಮೂರು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಇನ್ನೂ ಎಷ್ಟು ದಿನ ಬಿಜೆಪಿಯ ಕಾರ್ಯಕರ್ತರಾಗಿ ಮುಂದುವರಿಯುತ್ತಾರೆ? ಕಾಂಗ್ರೆಸ್ ನಾಯಕರ ಮೇಲೆ ಸುಮಾರು 25 ಪ್ರಕರಣಗಳನ್ನು ದಾಖಲಿಸಿದ್ದು, ರಾಜ್ಯದಲ್ಲಿ ಬಿಜೆಪಿ ನಾಯಕರ ಮೇಲೆ ಒಂದೇ ಒಂದು ಪ್ರಕರಣವೂ ಇಲ್ಲ.

ಅವರ ಕರ್ತವ್ಯ ಮತ್ತು ನಡವಳಿಕೆಯ ಬಗ್ಗೆ ನಾವು ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದೂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಡಿಜಿಪಿ ವಿರುದ್ಧ ಕ್ರಮ ಗಂಭೀರವಾಗಲಿದೆ. ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಕನಿಷ್ಠ 150 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಅಂತಲೂ ಡಿಕೆಶಿ ಭವಿಷ್ಯ ನುಡಿದಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮಾರ್ಟ್ ಅಂತ್ಯದ ವೇಳೆಗೆ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಇದಕ್ಕಾಗಿ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

IPL_Entry_Point