ಯಾವುದಾದರೂ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದೀರಾ, ನಿಮಗೆ ಪದ್ಮ ಶ್ರೇಣಿ ಪ್ರಶಸ್ತಿ ಕಾಯುತ್ತಿದೆ, ಅರ್ಜಿ ಸಲ್ಲಿಕೆಗೆ ಜುಲೈ 25 ಕಡೆ ದಿನ
ಭಾರತದ ಅತ್ಯುನ್ನತ ಪ್ರಶಸ್ತಿಗಳ ಪಟ್ಟಿಯಲ್ಲಿರುವ ಪದ್ಮ ಪ್ರಶಸ್ತಿಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2026 ನೇ ಸಾಲಿಗೆ ಅರ್ಜಿ ಸಲ್ಲಿಸಲು ಜುಲೈ 25 ಕಡೆಯ ದಿನ.

ಬೆಂಗಳೂರು: ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಕೇಂದ್ರ ಸರ್ಕಾರದಿಂದ ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿಗಳಿಗಾಗಿ ವಿವಿಧ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುವವರು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ತಮ್ಮ ಅರ್ಜಿಗಳನ್ನು ಅರ್ಹರು ಸಲ್ಲಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲೆ(ಜನಪ್ರಿಯ ಕಲೆ, ಸಂಗೀತ, ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ, ಚಲನಚಿತ್ರ, ಛಾಯಾಗ್ರಹಣ ಮತ್ತಿತರ), ಸಮಾಜದ ಕಾರ್ಯ(ಸಮಾಜ ಸೇವೆ, ಧರ್ಮಾರ್ಥ ಸೇವೆ, ಸಮುದಾಯ ಯೋಜನೆಯ ನಿಮಿತ್ತದ ಕೊಡುಗೆ ಒಳಗೊಂಡಂತೆ), ಸಾರ್ವಜನಿಕ ವ್ಯವಹಾರ(ಕಾನೂನು ಮತ್ತು ಸಾರ್ವಜನಿಕ ಜೀವನ ರಾಜಕೀಯ ಇತ್ಯಾದಿ), ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ ಮತ್ತು ಇತರ ಗೌರವಾನ್ವಿತ ವೃತ್ತಿ (ಬಾಹ್ಯಾಕಾಶ, ಎಂಜಿನಿಯರಿಂಗ್, ಅಣುವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಇತ್ಯಾದಿ), ವ್ಯಾಪಾರ ಮತ್ತು ಕೈಗಾರಿಕೆ(ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆ, ಮ್ಯಾನೇಜ್‍ಮೆಂಟ್, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ವಾಣಿಜ್ಯ ಒಳಗೊಂಡಂತೆ),
ವೈದ್ಯಕೀಯ(ವೈದ್ಯಕೀಯ ಸಂಶೋಧನೆ, ಆಯರ್ವೇದದಲ್ಲಿ ಕುಶಲತೆ, ಹೋಮಿಯೋಪತಿ, ಸಿದ್ದ, ಅಲೋಪತಿ, ನ್ಯಾಚುರೋಪತಿ ಮತ್ತಿತರ), ಸಾಹಿತ್ಯ ಮತ್ತು ಶಿಕ್ಷಣ(ಪತ್ರಿಕೋದ್ಯಮ, ಭೋದನೆ, ಪುಸ್ತಕ ಬರೆಯುವಿಕೆ, ಸಾಹಿತ್ಯ, ವೈದ್ಯ, ಶಿಕ್ಷಣ, ಅಭಿವೃದ್ಧಿ, ಶಿಕ್ಷಣ ಸುಧಾರಣೆ ಇತ್ಯಾದಿ), ನಾಗರೀಕ ಸೇವೆ(ಆಡಳಿತದಲ್ಲಿ ಸರ್ಕಾರಿ ನೌಕರರು ಸಾಧಿಸಿರುವ ಶ್ರೇಷ್ಠತೆ), ಕ್ರೀಡೆ, ಅಥ್ಲೆಟಿಕ್ಸ್, ಸಾಹಸ ಕ್ರೀಡೆ ಮತ್ತು ಯೋಗ, ಇತರೇ ಕ್ಷೇತ್ರಗಳಾದ ಮಾನವ ಹಕ್ಕುಗಳ ಸಂರಕ್ಷಣೆ, ಭಾರತದ ಸಂಸ್ಕøತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ವನ್ಯಮೃಗ ಸಂರಕ್ಷಣೆ ಒಳಗೊಂಡಂತೆ ಈ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಗಳಿಸಿ ಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
ಈ ಕ್ಷೇತ್ರಗಳಲ್ಲಿ ನೀಡಬಹುದಾದ ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಅರ್ಜಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿ ಜುಲೈ, 25 ರೊಳಗೆ ಕಚೇರಿ ವೇಳೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.
ಪದ್ಮ ಪ್ರಶಸ್ತಿ ಹಿನ್ನೆಲೆ
ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾಗಿದ್ದು, ಗಣರಾಜ್ಯೋತ್ಸವದ ಮುನ್ನಾದಿನದಂದು ವಾರ್ಷಿಕವಾಗಿ ಘೋಷಿಸಲ್ಪಡುತ್ತವೆ. ಪ್ರಶಸ್ತಿಗಳನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ: ಪದ್ಮವಿಭೂಷಣ (ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮಭೂಷಣ (ಉನ್ನತ ಶ್ರೇಣಿಯ ವಿಶಿಷ್ಟ ಸೇವೆ) ಮತ್ತು ಪದ್ಮಶ್ರೀ (ವಿಶಿಷ್ಟ ಸೇವೆ). ಸಾರ್ವಜನಿಕ ಸೇವೆಯ ಅಂಶವನ್ನು ಒಳಗೊಂಡಿರುವ ಚಟುವಟಿಕೆಗಳ ಎಲ್ಲಾ ಕ್ಷೇತ್ರಗಳು ಅಥವಾ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಲು ಈ ಪ್ರಶಸ್ತಿಯನ್ನು ಪ್ರಯತ್ನಿಸಲಾಗುತ್ತದೆ.
ಪ್ರಧಾನ ಮಂತ್ರಿಗಳು ಪ್ರತಿ ವರ್ಷ ರಚಿಸುವ ಪದ್ಮ ಪ್ರಶಸ್ತಿ ಸಮಿತಿಯು ಮಾಡುವ ಶಿಫಾರಸುಗಳ ಆಧಾರದ ಮೇಲೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಾಮನಿರ್ದೇಶನ ಪ್ರಕ್ರಿಯೆಯು ಸಾರ್ವಜನಿಕರಿಗೆ ಮುಕ್ತವಾಗಿದೆ. ಸ್ವಯಂ ನಾಮನಿರ್ದೇಶನವನ್ನು ಸಹ ಮಾಡಬಹುದು.
ಭಾರತ ಸರ್ಕಾರವು 1954 ರಲ್ಲಿ ಎರಡು ನಾಗರಿಕ ಪ್ರಶಸ್ತಿಗಳನ್ನು ಸ್ಥಾಪಿಸಿತು - ಭಾರತ ರತ್ನ ಮತ್ತು ಪದ್ಮವಿಭೂಷಣ. ಎರಡನೆಯದು ಪಹೇಲಾ ವರ್ಗ, ದುಸ್ರಾ ವರ್ಗ ಮತ್ತು ತಿಸ್ರಾ ವರ್ಗ ಎಂಬ ಮೂರು ವರ್ಗಗಳನ್ನು ಹೊಂದಿತ್ತು.1955ರ ಜನವರಿ 8 ರಂದು ಹೊರಡಿಸಲಾದ ರಾಷ್ಟ್ರಪತಿಗಳ ಅಧಿಸೂಚನೆಯ ಮೂಲಕ ಇವುಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂದು ಮರುನಾಮಕರಣ ಮಾಡಲಾಯಿತು.
ಸರ್ಕಾರಿ ನೌಕರರಿಗೆ ಅವಕಾಶವಿಲ್ಲ
ಜನಾಂಗ, ವೃತ್ತಿ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು. ಆದಾಗ್ಯೂ, ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಪಿಎಸ್‌ಯುಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಈ ಪ್ರಶಸ್ತಿಗಳಿಗೆ ಅರ್ಹರಲ್ಲ.