ಕನ್ನಡ ಸುದ್ದಿ  /  Karnataka  /  World Day Against Trafficking 2023 Cryindia Organizes Week Long Programs In Karnataka Child Missing News In Kannada Kub

Human Trafficking Day 2023:ಮಕ್ಕಳ ನಾಪತ್ತೆ ಪ್ರಕರಣ ಶೇ. 90 ರಷ್ಟು ಏರಿಕೆ: ಮಕ್ಕಳ ಹಕ್ಕುಗಳ ಜಾಗೃತಿಗೆ ಕರ್ನಾಟಕದಲ್ಲಿ ಸಿಆರ್‌ ವೈ ಅಭಿಯಾನ

ಪ್ರತಿ ಮಗುವಿಗೂ ಸುರಕ್ಷಿತ, ಪೋಷಣೆಯುಕ್ತ ವಾತಾವರಣ ಇರಬೇಕು. ಈ ವಾತಾವರಣ ಕಳ್ಳಸಾಗಣೆ ಹೆದರಿಕೆಯಿಂದ ಮುಕ್ತವಾಗಿರಬೇಕು ಎನ್ನುವುದು ಸಂವಿಧಾನದ ಮೂಲ ಆಶಯ. ಈ ನಿಟ್ಟಿನಲ್ಲಿ ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನ ಜುಲೈ 30 ರಂದು ಆಚರಿಸಲಾಗುತ್ತದೆ. ಸಿಆರ್‌ವೈ (ಚೈಲ್ಡ್ ರೈಟ್ಸ್ ಆಂಡ್ ಯು) ಕರ್ನಾಟಕದಲ್ಲಿ ಮಕ್ಕಳ ಕಳ್ಳಸಾಗಣೆ ಮೇಲೆ ಬೆಳಕು ಚೆಲ್ಲಲು ಅಭಿಯಾನ ಹಮ್ಮಿಕೊಂಡಿದೆ.

 ಸಿಆರ್‌ವೈ (ಚೈಲ್ಡ್ ರೈಟ್ಸ್ ಆಂಡ್ ಯು) ಕರ್ನಾಟಕದಲ್ಲಿ ಮಕ್ಕಳ ಕಳ್ಳಸಾಗಣೆ ಮೇಲೆ ಬೆಳಕು ಚೆಲ್ಲಲು ಅಭಿಯಾನ ಹಮ್ಮಿಕೊಂಡಿದೆ.
ಸಿಆರ್‌ವೈ (ಚೈಲ್ಡ್ ರೈಟ್ಸ್ ಆಂಡ್ ಯು) ಕರ್ನಾಟಕದಲ್ಲಿ ಮಕ್ಕಳ ಕಳ್ಳಸಾಗಣೆ ಮೇಲೆ ಬೆಳಕು ಚೆಲ್ಲಲು ಅಭಿಯಾನ ಹಮ್ಮಿಕೊಂಡಿದೆ.

ಬೆಂಗಳೂರು: ಮಕ್ಕಳ ಕಳ್ಳಸಾಗಣೆ ತಡೆ ಜಾಗೃತಿಗೆ ಸಂಬಂಧಿಸಿದಂತೆ ನಿರಂತರ ಚಟುವಟಿಕೆಗಳು ನಡೆಯುತ್ತಲಿದ್ದರೂ ಪ್ರಕರಣಗಳೂ ಹೆಚ್ಚುತ್ತಲೇ ಇವೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನದ ಹಿನ್ನೆಲೆಯಲ್ಲಿ ನಾನಾ ಚಟುವಟಿಕೆಗಳು ನಡೆಯುತ್ತಿದ್ದು, ಮಾನವ ಕಳ್ಳಸಾಗಣೆ ತಡೆ ವಿಶ್ವ ದಿನದ ಹಿನ್ನೆಲೆಯಲ್ಲಿ,ಚೈಲ್ಡ್‌ ರೈಟ್ಸ್‌ ಆಂಡ್ ಯು ( ಸಿಆರ್‌ವೈ) ತನ್ನ ಪಾಲುದಾರ ಸಂಸ್ಥೆಗಳ ಜೊತೆಗೆ ವಾರಪೂರ್ತಿ ಜಾಗೃತಿ ಮತ್ತು ತಿಳಿವಳಿಕೆ ಅಭಿಯಾನವನ್ನು ಕರ್ನಾಟಕದ ರಾಯಚೂರು, ಗುಲ್ಬರ್ಗಾ, ಬೆಳಗಾವಿ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ 2023 ಜುಲೈ 25 ರಿಂದ ಜುಲೈ 31 ರ ವರೆಗೆ ಹಮ್ಮಿಕೊಂಡಿದೆ.

ಕಳ್ಳಸಾಗಣೆಯಲ್ಲಿ ಬಲಿಪಶುವಾದ ಪ್ರತಿ ಸಂತ್ರಸ್ತರನ್ನೂ ಒಳಗೊಳ್ಳಿ, ಯಾರನ್ನೂ ಕೈಬಿಡಬೇಡಿ ಎಂಬುದು ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನದಂದು ವಿಶ್ವಸಂಸ್ಥೆ ಘೋಷಿಸಿದ ಈ ವರ್ಷದ ಸಂದೇಶ. ಭಾರತದಲ್ಲಿ ಮಾನವ ಕಳ್ಳಸಾಗಣೆಯಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ. ಪ್ರತಿ ಮಗುವಿಗೂ ಸೂಕ್ತ ಸುರಕ್ಷತೆ ಒದಗಬೇಕು ಎಂಬ ನಿಟ್ಟಿನಲ್ಲಿ ಸಿಆರ್‌ವೈ ಶ್ರಮಿಸುತ್ತಿದೆ.

ವಾರಪೂರ್ತಿ ಜಾಗೃತಿ ಅಭಿಯಾನ

ಹದಿಹರೆಯದ ಹೆಣ್ಣುಮಕ್ಕಳು, ಪಾಲಕರು ಮತ್ತು ಗ್ರಾಮ ಮಕ್ಕಳ ರಕ್ಷಣೆ ಸಮುದಾಯಗಳು ಮತ್ತು ಇತರ ಸಮುದಾಯ ಆಧರಿತ ಸಂಸ್ಥೆಗಳಿಗೆ ಮಾನವ ಕಳ್ಳಸಾಗಣೆ ವಿಷಯದ ಬಗ್ಗೆ ಅರಿವು ಮೂಡಿಸುವುದು. ಅಂಗನವಾಡಿ ಕಾರ್ಯಕರ್ತೆಯರು, ಎಎನ್‌ಎಂಗಳು, ಪಂಚಾಯಿತಿ ಕಾರ್ಯದರ್ಶಿಗಳಂತಹ ಫ್ರಂಟ್‌ಲೈನ್‌ ಕಾರ್ಯಕರ್ತರಿಗೆ ಮಾನವ ಕಳ್ಳಸಾಗಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುವುದು. ಪಂಚಾಯಿತಿ/ಮಂಡಲ/ವಿಭಾಗೀಯ/ಜಿಲ್ಲೆ ಮಟ್ಟದಲ್ಲಿ ಐಸಿಪಿಎಸ್, ಪೊಲೀಸ್ (ಎಎಚ್‌ಟಿಯುಗಳು), ಐಸಿಡಿಎಸ್, ಸಿಡಬ್ಲ್ಯೂಸಿ, ಕಂದಾಯ, ಸಾಮಾಜಿಕ ಕಲ್ಯಾಣ, ಪಂಚಾಯಿತಿ ರಾಜ್‌, ಐಕೆಪಿ, ಆರೋಗ್ಯ, ಶಿಕ್ಷಣ ವಿಭಾಗದ ಅಧಿಕಾರಿಗಳ ಜೊತೆಗೆ ಸಭೆ ನಡೆಸುವುದು. ಪ್ರಮುಖ ರೈಲ್ವೆ ಮತ್ತು ಬಸ್ ಸ್ಟೇಷನ್‌ಗಳಲ್ಲಿ ಪ್ರಯಾಣಿಕರು, ಮಾರಾಟಗಾರರು ಮತ್ತು ಅಧಿಕಾರಿಗಳಿಗೆ ಮಾನವ ಕಳ್ಳಸಾಗಣೆ ಬಗ್ಗೆ ತಿಳಿವಳಿಕೆ ಮೂಡಿಸುವುದು ಸಿಆರ್‌ವೈ ಚಟುವಟಿಕೆಯಲ್ಲಿ ಸೇರಿದೆ.

ನಾಪತ್ತೆಯಾದ ಮಕ್ಕಳೆಷ್ಟು?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಡೇಟಾ ಪ್ರಕಾರ, ಕರ್ನಾಟಕದಲ್ಲಿ ಮಕ್ಕಳ ಕಳ್ಳಸಾಗಣೆ ತಡೆಯುವ ತುರ್ತು ಇದೆ ಎಂಬುದು ತಿಳಿದುಬರುತ್ತದೆ.

ಎನ್‌ಸಿಆರ್‌ಬಿ ಡೇಟಾ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ 2021 ರಲ್ಲಿ ಐದು ಮಕ್ಕಳನ್ನು (18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು) ರಕ್ಷಿಸಲಾಗಿದೆ. ಮಕ್ಕಳ ಕಳ್ಳಸಾಗಣೆಯ ಪ್ರಮುಖ ಕಾರಣವು ಲೈಂಗಿಕ ದುರ್ಬಳಕೆ ಮತ್ತು ವೇಶ್ಯಾವಾಟಿಕೆ ಎಂದು ತೋರಿಸಲಾಗಿದೆ.

ಆತಂಕಕಾರಿ ಸಂಗತಿಯೆಂದರೆ, ನಾಪತ್ತೆಯಾಗಿರುವ ಮಕ್ಕಳ ಸಂಖ್ಯೆ ಆಘಾತಕಾರಿಯಾಗಿದೆ. ಕರ್ನಾಟಕದಿಂದ ಒಟ್ಟು 1575 ಮಕ್ಕಳು (18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು) 2021 ರಲ್ಲಿ ಕಳೆದುಹೋಗಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ಪೈಕಿ 1013 ಹೆಣ್ಣು ಮಕ್ಕಳೇ ಇದ್ದಾರೆ. ಈ ಸಂಖ್ಯೆಯ ಜೊತೆಗೆ ಹಿಂದಿನ ವರ್ಷ ನಾಪತ್ತೆಯಾಗಿ, ಪತ್ತೆಯಾಗದ 582 ಮಕ್ಕಳ ಸಂಖ್ಯೆಯನ್ನೂ ಸೇರಿಸಿಕೊಳ್ಳಬಹುದು. ಈ ಪೈಕಿ 224 ಹೆಣ್ಣುಮಕ್ಕಳಿದ್ದಾರೆ. 2021 ರ ಕೊನೆಯಲ್ಲಿ ಒಟ್ಟು ನಾಪತ್ತೆಯಾಗಿರುವ ಮಕ್ಕಳ ಸಂಖ್ಯೆ 5157 ಆಗಿದ್ದು, ಈ ಪೈಕಿ 1237 ಹೆಣ್ಣುಮಕ್ಕಳೇ ಇದ್ದಾರೆ. 2021 ರಲ್ಲಿ 982 ಹೆಣ್ಣುಮಕ್ಕಳೂ ಸೇರಿದಂತೆ 1550 ಮಕ್ಕಳನ್ನು ಪತ್ತೆ ಮಾಡಲಾಗಿದ್ದರೂ, 255 ಹೆಣ್ಣುಮಕ್ಕಳೂ ಸೇರಿದಂತೆ 607 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಅಂದರೆ, 2021 ರಲ್ಲಿ ಸರಾಸರಿಯಾಗಿ ಪ್ರತಿ ದಿನ ಎರಡು ಮಕ್ಕಳು ಕರ್ನಾಟಕದಿಂದ ನಾಪತ್ತೆಯಾಗಿದ್ದಾರೆ ಎಂಬುದು ಆತಂಕಕಾರಿ ಬೆಳವಣಿಗೆ.

ಆತಂಕಕಾರಿ ವಿದ್ಯಮಾನ

ಕಳೆದ ಹಲವು ವರ್ಷಗಳಿಂದ ಕಳ್ಳತನವಾದ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗುತ್ತಿದ್ದರೂ, ನಾಪತ್ತೆಯಾಗುತ್ತಿರುವ ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ.

ಎನ್‌ಸಿಆರ್‌ಬಿ ಡೇಟಾದ ಪ್ರಕಾರ ಕರ್ನಾಟಕದಲ್ಲಿ, 2021 ರಲ್ಲಿ ಕಳ್ಳತನವಾದ ಮಕ್ಕಳ ಸಂಖ್ಯೆ 5 ಕ್ಕೆ ಕುಸಿದಿದೆ. 2019 ರಲ್ಲಿ 42 ಮಕ್ಕಳು ಕಳ್ಳತನವಾಗಿದ್ದರು, 2020 ರಲ್ಲಿ ಸುಮಾರು ನಾಲ್ಕು ತಿಂಗಳು ಲಾಕ್‌ಡೌನ್‌ ಆಗಿತ್ತು. ಈ ಹಿನ್ನೆಲೆಯಲ್ಲಿ 2 ಮಕ್ಕಳು ಕಳ್ಳತನವಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ರಾಜ್ಯದಲ್ಲಿ ನಾಪತ್ತೆಯಾಗಿರುವ ಮಕ್ಕಳ ಸಂಖ್ಯೆ 2021 ರಲ್ಲಿ 1575 ಕ್ಕೆ ಏರಿಕೆಯಾಗಿದೆ. 2019 ರಲ್ಲಿ ಇದು 835 ಇತ್ತು. ಮೂರು ವರ್ಷಗಳಲ್ಲಿ ಇದು ಸುಮಾರು ಶೇ. 90 ಏರಿಕೆಯಾಗಿದೆ.

2020 ರಲ್ಲೂ ಕೂಡಾ ಮಾರ್ಚ್‌ನಿಂದ ಜೂನ್‌ವರೆಗೆ ಕೋವಿಡ್‌ 19 ಸಾಂಕ್ರಾಮಿಕದಿಂದಾಗಿ ಸುಮಾರು ನಾಲ್ಕು ತಿಂಗಳುಗಳವರೆಗೆ ಇಡೀ ದೇಶದಲ್ಲಿ ಲಾಕ್‌ಡೌನ್‌ ಇದ್ದಾಗಲೂ, ರಾಜ್ಯದಲ್ಲಿ 1085 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳ ರಕ್ಷಣೆಗೆ ಕೈಜೋಡಿಸೋಣ

ಚೈಲ್ಡ್ ರೈಟ್ಸ್ ಆಂಡ್ ಯು(ಸಿಆರ್‌ವೈ) ದಕ್ಷಿಣ ಭಾರತ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಾನ್ ರಾಬರ್ಟ್ಸ್ ಹೇಳುವಂತೆ, ಮಕ್ಕಳ ಕಳ್ಳಸಾಗಣೆ ಒಂದು ಹೀನ ಅಪರಾಧವಾಗಿದ್ದು, ಇದು ಮಕ್ಕಳ ಮುಗ್ಧತೆ ಮತ್ತು ಭವಿಷ್ಯವನ್ನೂ ನಾಶ ಮಾಡುತ್ತದೆ. ಮಾನವ ಕಳ್ಳಸಾಗಣೆ ತಡೆ ವಿಶ್ವ ದಿನದ ಹಿನ್ನೆಲೆಯಲ್ಲಿ, ಈ ಹೀನ ಕೃತ್ಯದ ವಿರುದ್ಧ ಎಲ್ಲರೂ ಒಟ್ಟಾಗುವ ಅಗತ್ಯವಿದೆ ಮತ್ತು ಕರ್ನಾಟಕದಲ್ಲಿನ ಎಲ್ಲ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನಾವು ಕಾಪಾಡಬೇಕಿದೆ.

ಮಾನವ ಕಳ್ಳಸಾಗಣೆ ತಡೆಯ ವಿಶ್ವ ದಿನದಂದು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಮಕ್ಕಳ ಕಳ್ಳಸಾಗಣೆಯನ್ನು ಪರಿಣಾಮಕಾರಿಯಾಗಿ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಕರ್ನಾಟಕ ಸರ್ಕಾರಕ್ಕೆ ಜಾನ್ ರಾಬರ್ಟ್ಸ್‌ ಮನವಿ.

ಸರ್ಕಾರಿ ಸಂಸ್ಥೆಗಳು ಕಳ್ಳಸಾಗಣೆದಾರರನ್ನು ನಿಯಂತ್ರಿಸುವ ಕಟ್ಟುನಿಟ್ಟಾದ ಕಾನೂನು ಜಾರಿಗೊಳಿಸಿ ಮತ್ತು ರಾಜ್ಯಗಳ ಮಧ್ಯೆ ಸಹಭಾಗಿತ್ವವನ್ನು ಹೆಚ್ಚಿಸಿ, ಗಡಿಯಾಚೆಗಿನ ಕಳ್ಳಸಾಗಣೆ ಜಾಲವನ್ನು ಸದೆಬಡಿಯಬೇಕು. ಸಮುದಾಯಗಳು ಮೊದಲೇ ಪತ್ತೆ ಮಾಡುವುದು ಮತ್ತು ವರದಿ ಮಾಡುವುದಕ್ಕಾಗಿ ಮಕ್ಕಳ ಕಳ್ಳಸಾಗಣೆಯ ಸೂಚನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಎನ್‌ಜಿಒಗಳು ಮತ್ತು ಸಾಮಾಜಿಕ ಸಂಘಟನೆಗಳು ರಕ್ಷಿಸಿದ ಮಕ್ಕಳ ಬೆಂಬಲಕ್ಕೆ, ಅವರಿಗೆ ಶಿಕ್ಷಣ, ಆರೋಗ್ಯಸೇವೆ ಮತ್ತು ಪುನಃಶ್ಚೇತನ ನೀಡುವುದಕ್ಕಾಗಿ ಸುಸ್ಥಿರವಾದ ವ್ಯವಸ್ಥೆಯನ್ನು ರಚಿಸಲು ಶ್ರಮಿಸಬೇಕು. ಜನಸಾಮಾನ್ಯರು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಮಕ್ಕಳ ಸ್ನೇಹಿ ವಾತಾವರಣವನ್ನು ರಚಿಸುವ ಗುರಿ ಹೊಂದಿರುವ ಉಪಕ್ರಮಗಳಿಗೆ ಬೆಂಬಲ ನೀಡುವಂತಾಗಬೇಕು ಎನ್ನುವುದು ಅವರ ಮನವಿ.

ಸಂಸ್ಥೆ ನಾಲ್ಕು ದಶಕದ ಪಯಣ

ಚೈಲ್ಡ್‌ ರೈಟ್ಸ್‌ ಆಂಡ್ ಯು ಎಂಬುದು ಒಂದು ಭಾರತದ ಎನ್‌ಜಿಒ ಆಗಿದ್ದು, ಪ್ರತಿ ಮಗುವೂ ಜೀವಿಸಲು, ಕಲಿಯಲು, ಬೆಳೆಯಲು ಮತ್ತು ಆಟವಾಡಲು ಹಕ್ಕು ಹೊಂದಿದೆ ಎಂಬ ನಂಬಿಕೆ ಹೊಂದಿದೆ. ನಾಲ್ಕು ದಶಕಗಳಿಂದಲೂ ಸಿಆರ್‌ವೈ ಮತ್ತು ಅದರ 850 ಉಪಕ್ರಮಗಳು ಪಾಲಕರು ಮತ್ತು ಸಮುದಾಯಗಳ ಜೊತೆಗೆ ಕೆಲಸ ಮಾಡಿದ್ದು, 3,000,000 ಕ್ಕೂ ಹೆಚ್ಚು ಅವಕಾಶವಂಚಿತ ಮಕ್ಕಳ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಭಾರತದ 19 ರಾಜ್ಯಗಳಲ್ಲಿ ಮಾಡಿದೆ.

ಸಿಆರ್‌ವೈ ಕುರಿತ ಮಾಹಿತಿಗಾಗಿ ಭೇಟಿ ನೀಡಿ

www.cry.org.

ಫೇಸ್‌ಬುಕ್: https://www.facebook.com/CRYINDIA/;

ಟ್ವಿಟರ್‌: https://twitter.com/CRYINDIA;

ಇನ್‌ಸ್ಟಾಗ್ರಾಮ್‌: https://www.instagram.com/cry_india/;

ಲಿಂಕ್ಡ್‌ಇನ್‌: https://www.linkedin.com/company/38732/admin/

ಯೂಟ್ಯೂಬ್‌: https://www.youtube.com/c/CRYChildRightsandYou ಸಂಪರ್ಕಿಸಬಹುದು.