ಕನ್ನಡ ಸುದ್ದಿ  /  Karnataka  /  World Forest Day 2024 Karnataka Using Technology To Remove Forest Encroachments Says Minister Eshwar Khandre Kub

ವಿಶ್ವ ಅರಣ್ಯ ದಿನ 2024: ಕರ್ನಾಟಕದಲ್ಲಿ ಕಾಡು ಒತ್ತುವರಿ ತೆರವಿಗೆ ತಂತ್ರಜ್ಞಾನ ಬಳಕೆ

Forest Day ಕರ್ನಾಟಕದಲ್ಲಿ ಅರಣ್ಯ ಒತ್ತುವರಿ ಪ್ರಮಾಣ ಹೆಚ್ಚುತ್ತಲೇ ಇದೆ. ಇದನ್ನು ತಡೆಗಟ್ಟಿ ಒತ್ತುವರಿ ತೆರವುಗೊಳಿಸಲು ಕರ್ನಾಟಕ ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ.

ಕರ್ನಾಟಕದ ಅರಣ್ಯ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಒತ್ತು ನೀಡಿದ್ದಾರೆ.
ಕರ್ನಾಟಕದ ಅರಣ್ಯ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಒತ್ತು ನೀಡಿದ್ದಾರೆ.

ಬೆಂಗಳೂರು: ಇಂದು ವಿಶ್ವ ಅರಣ್ಯ ದಿನ. ಅದರಲ್ಲೂ ಅರಣ್ಯದ ವಿಚಾರದಲ್ಲಿ ಹೆಚ್ಚಿನ ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆ ಒಂದು ಕಡೆಯಾದರೆ ಮಿತಿ ಮೀರಿರುವ ಅರಣ್ಯ ಒತ್ತುವರಿ ಕೂಡ ಒಂದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಕಂದಾಯ ಇಲಾಖೆ ಸಹಯೋಗದಲ್ಲಿ ಅರಣ್ಯ ಒತ್ತುವರಿಗೆ ತೆರವಿಗೆ ಗಮನ ಹರಿಸಿದೆ. ಇದಕ್ಕಾಗಿ ಸಭೆಗಳು ನಡೆದಿದ್ದು, ಕೆಳ ಹಂತದ ಅಧಿಕಾರಿಗಳು, ವಿವಿಧ ಏಜೆನ್ಸಿಗಳನ್ನು ಬಳಕೆ ಮಾಡಿಕೊಂಡು ಒತ್ತುವರಿ ತೆರವು ಮಾಡಿ ಅರಣ್ಯ ಉಳಿಸಿಕೊಳ್ಳುವ ಪ್ರಯತ್ನಗಳಿಗೆ ತಂತ್ರಜ್ಞಾನದ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ.

ವಿಶ್ವ ಅರಣ್ಯ ದಿನ 2024 ಹಿನ್ನೆಲೆಯಲ್ಲಿ ಮಾತನಾಡಿರುವ ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು, ಅರಣ್ಯ ಒತ್ತುವರಿಯ ಪತ್ತೆಯಲ್ಲಿ ಉಪಗ್ರಹ ಚಿತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಹಿಂದಿನ 5-10 ವರ್ಷಗಳಲ್ಲಿ ಅರಣ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಈ ಚಿತ್ರಗಳಿಂದ ತಿಳಿಯಲು ಸಾಧ್ಯವಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರೆ ಹೊಸ ಒತ್ತುವರಿ ತಡೆಯಲು ಸಾಧ್ಯ, ಈ ವಿಧಾನವನ್ನು ಅರಣ್ಯ ಇಲಾಖೆ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಅರಣ್ಯ ದಿನ (ಮಾ.21) ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಅವರು, ಈ ಬಾರಿಯ ಅರಣ್ಯ ದಿನದ ಧ್ಯೇಯವಾಕ್ಯ ‘ಅರಣ್ಯ ಮತ್ತು ನಾವೀನ್ಯತೆ: ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು’ (Forests and innovation: New Solutions for a better world) ಎಂಬುದಾಗಿದ್ದು, ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಜಾಗತಿಕ ಸಮಸ್ಯೆಗಳಿಗೆ ಮಾಲಿನ್ಯ ಮತ್ತು ಅರಣ್ಯ ನಾಶ ಕಾರಣವಾಗಿದ್ದು, ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎನ್ನುವುದು ಸಚಿವರ ಸಲಹೆ.

ಕಾಡ್ಗಿಚ್ಚಿನಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಉಪಗ್ರಹ ಚಿತ್ರದ ನೆರವಿನಿಂದ ಮಾಹಿತಿ ನೀಡುವ ದೂರ ಸಂವೇದಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಕಾಡ್ಗಿಚ್ಚಿನ ಮಾಹಿತಿ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (NRSC)ಗೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎನ್.ಆರ್.ಎಸ್.ಸಿ.)ಗೆ ಬರುತ್ತದೆ. ಅಲ್ಲಿಂದ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ರವಾನೆ ಆಗುತ್ತಿದೆ. ಹೀಗಾಗಿ ತಕ್ಷಣವೇ ಬೆಂಕಿ ನಂದಿಸಲು ಹಾಗೂ ಅರಣ್ಯ ರಕ್ಷಿಸಲು ಸಹಕಾರಿ ಆಗುತ್ತಿದೆ. ನಾವೀನ್ಯಪೂರ್ಣ ವಿಧಾನಗಳ ಬಳಕೆ ಅರಣ್ಯ ಸಂರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪರಿಸರ, ಪ್ರಕೃತಿ ಪ್ರೇಮಿಗಳಿಗೆ ಹಾಗೂ ನಾಡಿನ ಸಮಸ್ತ ಜನತೆ ಸಹಕಾರವಿಲ್ಲದೇ ಅರಣ್ಯ ರಕ್ಷಣೆ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅರಣ್ಯ ಉಳಿಸಿಕೊಳ್ಳಲು ಕೈ ಜೋಡಿಸಿದರೆ ಮುಂದಿನ ಪೀಳಿಗೆಗೂ ಇದನ್ನು ಉಳಿಸಬಹುದು ಎನ್ನುವುದು ಅಂತಾರಾಷ್ಟ್ರೀಯ ಅರಣ್ಯ ದಿನದ ವೇಳೆ ಸಚಿವ ಈಶ್ವರ ಖಂಡ್ರೆ ಹೇಳಿರುವ ನುಡಿ.

ವಿಭಾಗ