ಕನ್ನಡ ಸುದ್ದಿ  /  Karnataka  /  Yadagiri News Five Died As Cruiser Collides To Lorry At Balichakra Yadagiri Accident News In Kannada Jra

Yadagiri News: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ; ಸ್ಥಳದಲ್ಲಿಯೇ ಐವರು ಸಾವು, 13 ಮಂದಿಗೆ ಗಾಯ

Yadagiri accident: ಅಪಘಾತದಿಂದಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಪರಸ್ಪರ ಸಂಬಂಧಿಕರು ಎಂಬ ಮಾಹಿತಿ ಲಭಿಸಿದೆ.

ಯಾದಗಿರಿ ಅಪಘಾತದ ಚಿತ್ರ
ಯಾದಗಿರಿ ಅಪಘಾತದ ಚಿತ್ರ

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ಐದು ಜನ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಎ)ನಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಅಪಘಾತದಲ್ಲಿ 13 ಜನ ಗಾಯಗೊಂಡಿದ್ದಾರೆ.

ಆಂಧ್ರ ಪ್ರದೇಶದ ನಂದ್ಯಾಳ ಜಿಲ್ಲೆಯ 18 ಜನ ಕಲಬುರಗಿಯ ಖ್ಯಾತ ಬಂದೇನವಾಜ ದರ್ಗಾದ ಉರುಸ್ (ಜಾತ್ರೆಗೆ) ತೆರಳುತ್ತಿದ್ದರು. ನಸುಕಿನ ಜಾವ ನಾಲ್ಕು ಗಂಟೆಯ ವೇಳೆಗೆ ನಿದ್ದೆ ಮಂಪರಿನಲ್ಲಿದ್ದ ಕ್ರೂಸರ್ ಚಾಲಕ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಅವರೆಲ್ಲರೂ ಪರಸ್ಪರ ಸಂಬಂಧಿಕರು ಎಂಬ ಮಾಹಿತಿ ಲಭಿಸಿದೆ. ಇವರಲ್ಲಿ ತಂದೆ, ಮಗ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಆಂಧ್ರ ಪ್ರದೇಶದ ಬಂಡಿ ಆತ್ಮಕೂರ ಗ್ರಾಮದ ಮುನೀರ್ (40), ನಯಾಮತ್ (40), ಮುದಶಿರ್ (12), ರಮೀಜಾ ಬೇಗಂ (50), ಸುಮ್ಮಿ (12) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಗಾಯಗೊಂಡ ಇನ್ನೂ 13 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಬಿ ವೇದಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗಾಯಾಳುಗಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IPL_Entry_Point