'ಏಕ್ ಮಾರ್ ದೋ ತುಕಡಾ' ಎಂದು ಪ್ರಚೋದನಕಾರಿ ಭಾಷಣ ಆರೋಪದಡಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸ್ವಾಮೀಜಿ ವಿರುದ್ಧ ಕೇಸ್
Andola Siddalinga Swamiji: “ಏಕ್ ಮಾರ್ ದೋ ತುಕಡಾ. ಹೊಡೆದರೆ ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು. ಹಿಂದೂಗಳನ್ನು ಕೆಣಕಬೇಡಿ. ಹಿಂದೂಗಳನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ” ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು ಶ್ರೀ ಸಿದ್ಧಲಿಂಗ ಸ್ವಾಮೀಜಿ.
ಯಾದಗಿರಿ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರೂ ಆಗಿರುವ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸರು ಸುಮೋಟೋ (ಸ್ವಯಂ ದೂರು) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾದಗಿರಿಯ ಶಹಾಪುರ ನಗರದಲ್ಲಿ ಅಕ್ಟೋಬರ್.3 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪಾಲ್ಗೊಂಡು ಕೋಮು ಸೌಹಾರ್ದತೆಗೆ ಧಕ್ಕೆ, ಪ್ರಚೋದನೆ ಹಾಗೂ ಅನ್ಯ ಧರ್ಮೀಯರ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಭಾಷಣೆ ಮಾಡಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಹತ್ತಿರ ತಲ್ವಾರ್ ಇರಬಹುದು. ಆ ತಲ್ವಾರ್‌ನಿಂದ ನಮ್ಮನ್ನು ಎದುರಿಸೋಕೆ ಬಂದರೆ, ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ. ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ. ಏಕ್ ಮಾರ್ ದೋ ತುಕಡಾ. ಹೊಡೆದರೆ ಒಂದು ದೇಹ ಪಾಕಿಸ್ತಾನಕ್ಕೆ ಹೋಗಬೇಕು. ಇನ್ನೊಂದು ದೇಹ ಬಾಂಗ್ಲಾದೇಶಕ್ಕೆ ಹೋಗಬೇಕು. ಹಿಂದೂಗಳನ್ನು ಕೆಣಕಬೇಡಿ. ಹಿಂದೂಗಳನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು.
ಇದೀಗ ಆಂದೋಲಶ್ರೀ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ 295a, 153 ಸೆಕ್ಷನ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ