ಯಾದಗಿರಿ: ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  ಯಾದಗಿರಿ: ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು

ಯಾದಗಿರಿ: ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದೆ. ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಯಾದಗಿರಿಯಲ್ಲಿ ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಒಂದೇ ಕುಟುಂಬದ ಐವರು ಸಾವು (ಸಾಂದರ್ಭಿಕ ಚಿತ್ರ)
ಯಾದಗಿರಿಯಲ್ಲಿ ಬೈಕ್‌ ಮತ್ತು ಸಾರಿಗೆ ಬಸ್ ನಡುವೆ ಅಪಘಾತ; ಒಂದೇ ಕುಟುಂಬದ ಐವರು ಸಾವು (ಸಾಂದರ್ಭಿಕ ಚಿತ್ರ)

ಯಾದಗಿರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಬೈಕ್‌ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯದಲ್ಲೇ ಅಸುನೀಗಿದ್ದಾರೆ. ಸುರಪುರದಿಂದ ತಿಂಥಣಿ ಕಡೆಗೆ ಹೊರಟ್ಟಿದ್ದ ಬೈಕ್‌​ಗೆ ಸಾರಿಗೆ ಬಸ್ ಡಿಕ್ಕಿ ಹಿಡೆದಿದೆ. ಪರಿಣಾಮ ಬೈಕ್‌​ನಲ್ಲಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದರು. ಗಂಭೀರ ಗಾಯಗಳೊಂದಿಗೆ ಇನ್ನಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಕೂಡಾ ಪ್ರಾಣ ಚೆಲ್ಲಿದ್ದಾರೆ.

ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ. ಆಂಜನೇಯ (35) ಅವರ ಪತ್ನಿ ಗಂಗಮ್ಮ (28), ಇವರ ಪುಟ್ಟ ಮಗು ಹನುಮಂತ(1), ಸಂಬಂಧಿಕರಾದ ಪವಿತ್ರ (5) ಹಾಗೂ ರಾಯಪ್ಪ (3) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

KA 32 F 2684 ನಂಬರ್‌ ಪ್ಲೇಟ್‌ ಇರುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್‌ ಬಸ್‌ನ ಕೆಳಗೆ ತೂರಿದೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದರು. ಬೈಕ್‌​ನಲ್ಲಿ ಊರಿಗೆ ಹೊರಟ್ಟಿದ್ದಾಗ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುಟ್ಟ ಮಕ್ಕಳು ಉಸಿರು ಚೆಲ್ಲಿ ರಸ್ತೆಯಲ್ಲಿ ಬಿದ್ದಿದನ್ನು ನೋಡಿ ಸ್ಥಳದಲ್ಲಿದ್ದವರ ಮನಸ್ಸು ಭಾರವಾಗಿದೆ. ಕುಟುಂಬದವರ ಜೊತೆಗಿದ್ದ ಬಟ್ಟೆಬರೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತಕ್ಕೆ ಯಾರ ತಪ್ಪು ಕಾರಣ ಎಂಬುದು ತಿಳಿದುಬಂದಿಲ್ಲ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆದರೆ, ಒಂದೇ ಕುಟುಂಬದ ಎಲ್ಲರೂ ಸಾವನ್ನಪ್ಪಿರುವುದು ಖೇದಕರ.

-------

ಆಕಾಶ ಕೊಲೆ; ಮತ್ತೆ ಮೂವರ ಬಂಧನ

ಹುಬ್ಬಳ್ಳಿಯಲ್ಲಿ ಡಿಸೆಂಬರ್‌ 28ರಂದು ನಡೆದ ಆಕಾಶ ಪರಶುರಾಮ ವಾಲ್ಮೀಕಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ಮುಂದುವರೆಸಿ, ಆರೋಪಿಗಳಾದ ಆನಂದನಗರದ ಶಿವರಾಜ ನಿತ್ಯಾನಂತ ಮಿಶ್ರಿಕೋಟಿ, ರೋಹನ ರಾಜು ಬೀಳಗಿ ಮತ್ತು ವಿನಾಯಕ ದುಂಡೇಶ ಕುಪ್ಪಸಗೌಡರ ಬಂಧಿಸಲಾಗಿದೆ.

ಕ್ಷುಲ್ಲಕ ವಿಷಯಕ್ಕೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಆಕಾಶ ವಾಲ್ಮೀಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಕೂಡಲೇ ವಿದ್ಯಾನಗರ ಪೊಲೀಸರು ಫೈರಿಂಗ್ ಮಾಡಿ ಮೂವರು ಆರೋಪಿಗಳಾದ ಅಭಿಷೇಕ ಶಿರೂರ, ಯಲ್ಲಪ್ಪ ಕೋಟಿ, ವಿನೋದ ಅಂಬಿಗೇರ ಮೂವರನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಇದುವರೆಗೆ 6 ಜನರನ್ನು ಬಂಧಿಸಿದಂತಾಗಿದೆ.

ಯಾದಗಿರಿಯ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner