Yadgir News: ಒಂದೇ ದಿನ 8 ಅಧಿಕಾರಿಗಳನ್ನು ಅಮಾನತುಗೊಳಿಸಿದ ಯಾದಗಿರಿ ಜಿಲ್ಲಾಧಿಕಾರಿ
ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳನ್ನು ಅಮಾನತು ಮಾಡಿ ಯಾದಗಿರಿ ಜಿಲ್ಲಾಧಿಕಾರಿ( Yadgir DC) ಡಾ.ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ.
ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಎಂಟು ಮಂದಿ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಅದೂ ಒಂದೇ ದಿನದಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಎಂಟು ಮಂದಿಯನ್ನು ಅಮಾನತುಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ಧಾರೆ.
ನಿರಂತರ ಸೂಚನೆ ನಂತರವೂ ಕೆಲಸ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ 8 ಜನ ಅಧಿಕಾರಿಗಳನ್ನು ಯಾದಗಿರಿ ಜಿಲ್ಲಾಧಿಕಾರಿ ಅಮಾನತುಗೊಳಿಸಿ ಬಿಸಿ ಮುಟ್ಟಿಸಿರುವುದು ಗಡಿ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಧಿಕಾರಿಗಳ ಸಭೆಗೆ ಗೈರು ಹಾಜರಾಗುವುದರ ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದಿರುವುದ್ದಕ್ಕೆ ಒಂದೇ ದಿನ 4 ಜನ ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷರು ಮತ್ತು ಮತ್ತಿಬ್ಬರು ಸಹಾಯಕ ಕಂದಾಯ ನಿರೀಕ್ಷರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳಾದ ಸಿದ್ದಲಿಂಗಪ್ಪ, ಇಮ್ಮಾನುವೆಲ್, ಬಸವರಾಜ, ಶ್ರೀಮಂತ, ಕಂದಾಯ ನಿರೀಕ್ಷಕರಾದ ಬಸವರಾಜ ಬಿರಾದಾರ, ಗಿರೀಶ ರಾಯಕೋಟಿ ಹಾಗೂ ಯಾದಗಿರಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಡಿಸಿ ಸೂಗೂರೇಶ, ಎಸ್‌ಡಿಎ ಮಹೇಶ ಅವರನ್ನು ಅಮಾನತುಗೊಂಡವರು.
ಆಡಳಿತವನ್ನು ಸುಸೂತ್ರಗೊಳಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರೂ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂದಿತ್ತು. ಈ ಕುರಿತು ಸಾರ್ವಜನಿಕರಿಂದಲೂ ದೂರು ಬಂದಿದ್ದರು. ನಿಯಮಿತವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು ಕ್ರಮ ವಹಿಸದೇ ಇದ್ದಾಗ ವರದಿ ನೀಡುವಂತೆ ಡಿಸಿ ಸೂಚಿಸಿದ್ದರು. ವರದಿ ಆಧರಿಸಿ ಎಂಟು ಮಂದಿಯನ್ನು ಅಮಾನತುಮಾಡಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)
ವಿಭಾಗ