ಯಾದಗಿರಿಯ ವಸತಿ ನಿಲಯದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ
ಯಾದಗಿರಿ ಜಿಲ್ಲೆಯ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಯಾದಗಿರಿ: ಕಳೆದ ಕೆಲವು ತಿಂಗಳಿಂದ ಯಾದಗಿರಿ ಜಿಲ್ಲೆಯ ವಿವಿಧೆಡೆ ಕಲುಷಿತ ನೀರು ಕುಡಿದು ಮಕ್ಕಳು, ಗ್ರಾಮಸ್ಥರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ಜಿಲ್ಲಾಡಳಿತ ಕಲುಷಿತ ನೀರು ಪೂರೈಕೆ ಆಗದಂತೆ ಅಗತ್ಯ ಕ್ರಮಕೈಗೊಳ್ಳದೆ ಇರುವುದು ದುರಂತ.
ಇದೀಗ ಜಿಲ್ಲೆಯ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಶನಿವಾರ (ಸೆ.30) ನಡೆದಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಬೆಳಗ್ಗೆ ನೀರು, ಬಿಸ್ಕತ್ ಹಾಗೂ ಚಹಾ ಸೇವಿಸಿದ್ದಾರೆ. ಕೆಲವು ವಿದ್ಯಾರ್ಥಿನಿಯರಿಗೆ ಸ್ವಲ್ಪ ಹೊತ್ತಿನಲ್ಲಿ ಹೊಟ್ಟೆ ನೋವು, ತಲೆ ಸುತ್ತು ಬಂದಿದೆ. ಮತ್ತೆ ಕೆಲವು ವಿದ್ಯಾರ್ಥಿನಿಯರಿಗೆ ಶಾಲೆಗೆ ಹೋದ ಬಳಿಕ ತಲೆ ಸುತ್ತು ಬಂದು ಕೆಳಗೆ ಕುಸಿದು ಬಿದ್ದಿದ್ದು, ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಮುಖ್ಯೋಪಾಧ್ಯಯರು ಮತ್ತು ವಸತಿ ನಿಲಯದ ಮೇಲ್ವಿಚಾರಕರು ಯಕ್ತಾಪುರ ಪ್ರಾಥಮಿಕ ಮತ್ತು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಕೆಲ ವಿದ್ಯಾರ್ಥಿನಿಯರು ಚೇತರಿಸಿಕೊಂಡು ವಸತಿ ನಿಲಯಕ್ಕೆ ತೆರಳಿದ್ದಾರೆ. ಇದರಲ್ಲಿ ಇನ್ನೂ ಕೆಲ ವಿದ್ಯಾರ್ಥಿನಿಯರು ಎರಡು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಲೇ ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮತ್ತು ಜಿಪಂ ಮುಖ್ಯಾಧಿಕಾರಿ ಗರೀಮಾ ಪನ್ವಾರ್ ತಕ್ಷಣ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮತ್ತು ನಿಲಯದ ಮೇಲ್ವಿಚಾರಕರಿಂದ ಮಾಹಿತಿ ಕಲೆ ಹಾಕಿದ್ದಾರೆ ಮತ್ತು ವಿದ್ಯಾರ್ಥಿನಿಯರಿಗೆ ವಿಚಾರಿಸಿದಾಗ ಅವರು ವಸತಿ ನಿಲಯಕ್ಕೆ ಸರಿಯಾಗಿ ನೀರು ಬರುತ್ತಿಲ್ಲ. ನಾವು ವಾರಕ್ಕೊಮ್ಮೆ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
ಈ ವಿಷಯ ತಿಳಿದು ಜಿಲ್ಲಾಧಿಕಾರಿ ಡಾ.ಸುಶೀಲಾ ಮತ್ತು ಜಿಪಂ ಇಸಿಒ ಗರೀಮಾ ಪನ್ವಾರ್ ಒಂದು ಕ್ಷಣ ದಂಗಾದರು. ಶುಚಿತ್ವ ಕಾಪಾಡುವುದಕ್ಕಾಗಿ ಕಡ್ಡಾಯವಾಗಿ ನಿತ್ಯ ಸ್ನಾನ ಮಾಡಬೇಕು. ಈ ಬಗ್ಗೆ ಶೀಘ್ರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು. ಸ್ಥಳದಲ್ಲಿಯೇ ಇದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಸೂಚಿಸಿದರು. ನಂತರ ಮೂರು ಜನ ಅಧಿಕಾರಿಗಳು ಅಡುಗೆ ಕೋಣೆ, ನೀರು ಶೇಖರಣೆ ಸ್ಥಳ, ಶೌಚಗೃಹ ಸೇರಿ ಹಲವು ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ನಿಲಯಕ್ಕೆ ನೀರು ಒದಗಿಸುವ ತೆರೆದ ಬಾವಿ ನೀರನ್ನು ಪರೀಕ್ಷೆಗೊಳಪಡಿಸುವಂತೆ ಪಿಡಿಒ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ನಂತರ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಪ್ರಾಣಹಾನಿ ಇಲ್ಲ ಎಂದು ವೈದ್ಯಾಧಿಕಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ವಿದ್ಯಾರ್ಥಿನಿಯರು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಚಹಾ, ಬಿಸ್ಕಿತ್ ಸೇವಿಸಿರುವುದರಿಂದ ತೊಂದರೆಯಾಗಿದೆ. ವಸತಿ ನಿಲಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದ್ದು, ಅದನ್ನು ದುರಸ್ತಿಗೊಳಿಸಿ ಶುದ್ಧ ನೀರು ಪೂರೈಸಲಾಗುವುದು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಾಗಿದ್ದು, ಪೈಪ್‌ಲೈನ್ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ