Digital Arrest: ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ನಿವೃತ್ತ ಮಹಿಳಾ ಅಧಿಕಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Digital Arrest: ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ನಿವೃತ್ತ ಮಹಿಳಾ ಅಧಿಕಾರಿ

Digital Arrest: ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ನಿವೃತ್ತ ಮಹಿಳಾ ಅಧಿಕಾರಿ

Digital arrest cyber crime: ಯಾದಗಿರಿ ಜಿಲ್ಲೆಯ ನಿವೃತ್ತ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮಹಿಳಾ ಅಧಿಕಾರಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಸೈಬರ್‌ ಕ್ರೈಮ್‌ಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ನಿವೃತ್ತ ಮಹಿಳಾ ಅಧಿಕಾರಿ
ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ನಿವೃತ್ತ ಮಹಿಳಾ ಅಧಿಕಾರಿ

Digital arrest cyber crime: ಯಾದಗಿರಿ ಜಿಲ್ಲೆಯ ನಿವೃತ್ತ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮಹಿಳಾ ಅಧಿಕಾರಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಸೈಬರ್‌ ಕ್ರೈಮ್‌ಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಯಾದಗಿರಿಯ ಭೀಮರಾಯನಗುಡಿ ಯುಕೆಪಿ ಕ್ಯಾಂಪ್‌ನಲ್ಲಿ ವಾಸವಗಿರುವ ಕೆಬಿಜೆಎನ್‌ಎಲ್‌ನ ನಿವೃತ್ತ ಅಧಿಕಾರಿ ಸೈಬರ್‌ ಅಪರಾಧಿಗಳ ಮೋಸದಾಟಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಹೀಗಿತ್ತು ಡಿಜಿಟಲ್‌ ಅರೆಸ್ಟ್‌

ಯಾದಗಿರಿ ಜಿಲ್ಲೆಯ ಈ ನಿವೃತ್ತ ಮಹಿಳಾ ಅಧಿಕಾರಿಯು ಸಹೋದರಿಯ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರಜಾವಾಣಿ ಪತ್ರಿಕೆಯ ವರದಿ ತಿಳಿಸಿದೆ. ಇವರು ತನ್ನ ಸಹೋದರಿ ಮನೆಯಲ್ಲಿದ್ದಾಗ ವಿಡಿಯೋ ಕರೆ ಬಂದಿದೆ. ಮಧ್ಯಾಹ್ನ 12:30 ಗಂಟೆಗೆ ಕರೆ ಮಾಡಿದ ವ್ಯಕ್ತಿಯು ಹಿಂದಿಯಲ್ಲಿ "ತಾನು ಮುಂಬೈನ ಕ್ರೈಂ ಬ್ರಾಂಚ್‌ ಅಧಿಕಾರಿ" ಎಂದು ತನ್ನನ್ನು ಪರಿಚಯಿಸಿಕೊಡಿದ್ದ ಎಂದು ವರದಿ ತಿಳಿಸಿದೆ.

ಈ ಸಮಯದಲ್ಲಿ ಆ ನಕಲಿ ಕ್ರೈಂ ಬ್ರಾಂಚ್‌ ಅಧಿಕಾರಿಯು ಇವರನ್ನು ಭಯಪಡಿಸಿದ್ದಾನೆ. "ನಿಮ್ಮ ಮೇಲೆ ಮನಿ ಲ್ಯಾಂಡರಿಂಗ್‌ ಪ್ರಕರಣ ದಾಖಲಾಗಿದೆ. ನಿಮ್ಮ ಬ್ಯಾಂಕ್‌ ಖಾತೆಗಳ ಮೂಲಕ ಮನಿ ಲಾಂಡರಿಂಗ್‌ ನಡೆಯುತ್ತಿದೆ. ನಿಮ್ಮ ಮೇಲೆ ಎಫ್‌ಐಆರ್‌ ದಾಖಲಾಗಿದೆ. ನೀವೂ ಈ ಅಪರಾಧದಲ್ಲಿ ಭಾಗಿಯಾಗಿರುವ ಸಂಶಯ ನಮಗಿದೆ. ನಿಮ್ಮನ್ನು ತನಿಖೆ ಮಾಡಬೇಕಿದೆ" ಎಂದು ಭಯಪಡಿಸಿದ್ದಾರೆ.

"ನರೇಶ್‌ ಗೋಯಲ್‌ ಎಂಬ ವ್ಯಕ್ತಿ ಈ ಪ್ರಕರಣದ ಮುಖ್ಯ ಆರೋಪಿ. ಆತನೊಂದಿಗೆ ನೀವು ಶಾಮೀಲು ಆಗಿದ್ದೀರಿ ಎಂಬ ಶಂಕೆ ಇದೆ. ತಕ್ಷಣವೇ ನಮಗೆ ನೀವು ಆಧಾರ್‌ಕಾರ್ಡ್‌, ಬ್ಯಾಂಕ್‌ ಖಾತೆ ವಿವರಗಳನ್ನು ನೀಡಿ" ಎಂದಿದ್ದಾರೆ. ಈ ನಿವೃತ್ತ ಮಹಿಳಾ ಅಧಿಕಾರಿ ವಾಟ್ಸಪ್‌ನಲ್ಲಿ ಎಲ್ಲಾ ದಾಖಲೆಗಳನ್ನೂ ಕಳುಹಿಸಿದ್ದಾರೆ.

ಇದಾದ ಬಳಿಕ ವಾಟ್ಸಪ್‌ನಲ್ಲಿ ವಿಡಿಯೋ ಕರೆ ಮಾಡಲಾಗಿದೆ. ಈಗಾಗಲೇ ನರೇಶ್‌ನನ್ನು ಬಂಧಿಸಿದ್ದೇವೆ. ನಾವು ಹೇಳಿದಂತ ಕೇಳಬೇಕು. ಆನ್‌ಲೈನ್‌ ವಿಡಿಯೋ ಕಾಲ್‌ ಕಟ್‌ ಮಾಡಬಾರದು. ಮಗನಿಗೆ ವಿಷಯ ತಿಳಿಸಿದರೆ ಅವನ ಭವಿಷ್ಯಕ್ಕೆ ತೊಂದರೆಯಾಗಲಿದೆ. ನಾವು ಹೇಳಿದಂತೆ ಕೇಳಬೇಕು ಎಂದು ವಿಡಿಯೋ ಕಾಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ನ್ಯಾಯಾಧೀಶರಂತೆ ಕುಳಿತುಕೊಂಡವರನ್ನು ತೋರಿಸಿ ಭಯ ಹೆಚ್ಚಿಸಲಾಗಿದೆ. ಇದಾದ ಬಳಿಕ ಈಕೆಯಿಂದ ಹತ್ತು ಲಕ್ಷ ರೂಪಾಯಿಯನ್ನು ಹಂತಹಂತವಾಗಿ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಈ ಕುರಿತು ಯಾದಗಿರಿ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ.

ಡಿಜಿಟಲ್‌ ಅರೆಸ್ಟ್‌ ಕುರಿತು ಇರಲಿ ಎಚ್ಚರ

ಈ ರೀತಿ ಸೈಬರ್‌ ವಂಚಕರು ಪೊಲೀಸ್‌, ಸಿಬಿಐ ಇತ್ಯಾದಿ ಹೆಸರಿನಲ್ಲಿ ಭಯಪಡಿಸಿ ಹಣ ವಂಚನೆ ಮಾಡುತ್ತಾರೆ. ಇಂತಹ ಸೈಬರ್‌ ಅಪರಾಧಿಗಳ ಕರೆಗಳನ್ನು ಗುರುತಿಸಲು ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

  • ನೀವು ಯಾವುದೇ ಅಪರಾಧ ಮಾಡದೆ ಇದ್ದರೂ ಅನಿರೀಕ್ಷಿತವಾಗಿ ಇಂತಹ ಭಯಪಡಿಸುವ ಕರೆ ಬಂದಾಗ ಅಲರ್ಟ್‌ ಆಗಿರಿ. ತಕ್ಷಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರೂ ವಿಚಲಿತರಾಗಬೇಡಿ. ಈ ರೀತಿಯ ಫೋನ್‌ ಕರೆ ಅಥವಾ ಸಂದೇಶ ಬಂದಾಗ ಭಯಪಡಬೇಡಿ. ಅವರು ಹೇಳಿದಂತೆ ಕೇಳಬೇಡಿ.
  • ಭಯಗೊಳಿಸುವುದು ಮತ್ತು ಅವಸರಪಡಿಸುವುದನ್ನು ವಂಚಕರು ಮಾಡುತ್ತಾರೆ. ಈ ರೀತಿ ಕರೆ ಮಾಡುವ ವಂಚಕರು ನಿಮಗೆ ಹೆಚ್ಚು ಯೋಚಿಸಲು ಬಿಡದಂತೆ ಅವಸರ ಮಾಡುತ್ತಾರೆ. ತಕ್ಷಣ ಬಂಧಿಸಲಾಗುವುದು, ಕಾನೂನು ಕ್ರಮ ಈಗಲೇ ಕೈಗೊಳ್ಳಲಾಗುವುದು, ನೀವು ತಕ್ಷಣ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವಸರಪಡಿಸಬಹುದು.
  • ವಂಚಕರು ದೊಡ್ಡ ಮೊತ್ತದ ಹಣ ಕೇಳಬಹುದು. ಇಷ್ಟು ಹಣ ನೀಡಿದರೆ ನಿಮ್ಮನ್ನು ಈ ಅಪರಾಧದಿಂದ ಪಾರು ಮಾಡುತ್ತೇವೆ ಎಂದು ಹೇಳಬಹುದು. ನಿರ್ದಿಷ್ಟ ಯುಪಿಐ ಐಡಿಗೆ, ಬ್ಯಾಂಕ್‌ಖಾತೆಗೆ ಹಣ ಹಾಕುವಂತೆ ಕೇಳಬಹುದು. ನಿಮಗೆ ಯಾವುದಾದರೂ ಒಟಿಪಿ ಕಳುಹಿಸಿ ಆ ಒಟಿಪಿ ಹೇಳುವಂತೆ ಹೇಳಬಹುದು.
  • ಇಂತಹ ವಂಚಕರು ಫೇಕ್‌ ವಿಡಿಯೋ ಕಾಲ್‌ಗಳು ಮತ್ತು ಯೂನಿಫಾರ್ಮ್‌ಗಳ ಮೂಲಕ ಬಲಿಪಶಗಳನ್ನು ಭಯಪಡಿಸುತ್ತಾರೆ. ಕೆಲವು ವಂಚಕರು ನಕಲಿ ಪೊಲೀಸ್‌ ಸೆಟಪ್‌ ಕೂಡ ಮಾಡಿರುತ್ತಾರೆ. ಎದುರು ಇರುವ ಅಮಾಯಕರಿಗೆ ಯಾವುದೇ ಸಂಶಯ ಬರದಂತೆ ವರ್ತಿಸಬಹುದು. ಹೀಗಾಗಿ, ಇಂತಹ ಕರೆಗಳಿಗೆ ಭಯಪಡಬೇಡಿ.

ಇದನ್ನೂ ಓದಿ: Digital arrest scam: ಡಿಜಿಟಲ್‌ ಬಂಧನ ವಂಚನೆಯಿಂದ 11.8 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ, ಏನಿದು ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌?

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner