ಯಕ್ಷರಂಗದ ಮೇರು ಪ್ರತಿಭೆ, ಯಕ್ಷ ಕನ್ಯೆ ಖ್ಯಾತಿಯ ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ವಿಧಿವಶ
ಯಕ್ಷಗಾನದ ಮೇರು ಪ್ರತಿಭೆ, ಹಿರಿಯ ಕಲಾವಿದ, ಯಕ್ಷ ಕನ್ಯೆ ಖ್ಯಾತಿಯ ಪಾತಾಳ ವೆಂಕಟ್ರಮಣ ಭಟ್ ಇಂದು ಬೆಳಿಗ್ಗೆ ವಿಧಿವಶರಾದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಪುತ್ತೂರು: ಯಕ್ಷಗಾನದ ಮೇರು ಪ್ರತಿಭೆ, ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಉಪ್ಪಿನಂಗಡಿ ಸಮೀಪದ ಪಾತಾಳದ ಸ್ವಗೃಹದಲ್ಲಿ ಬೆಳಿಗ್ಗೆ ಉಪಾಹಾರ ಸೇವಿಸಿದ ಸಂದರ್ಭದಲ್ಲಿ ಅಸ್ವಸ್ಥರಾದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ವಿಧಿವಶರಾಗಿರುವುದನ್ನು ವೈದ್ಯರು ದೃಢೀಕರಿಸಿದರು. ಪಾತಾಳ ವೆಂಕಟ್ರಮಣ ಭಟ್ ಅವರು ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕಿರಿಯ ಪುತ್ರ ಶ್ರೀರಾಮ – ಗೀತಾ ದಂಪತಿ ಜತೆಗೆ ಪಾತಾಳ ವೆಂಕಟ್ರಮಣ ಭಟ್ ಅವರು ವಾಸವಿದ್ದರು. ಯಕ್ಷ ಕನ್ಯೆಯಾಗಿ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಪಾತಾಳ ವೆಂಕಟ್ರಮಣ ಭಟ್ಟರ ಹಿರಿಯ ಪುತ್ರ ಅಂಬಾ ಪ್ರಸಾದ ಅವರು ಈಗ ಯಕ್ಷರಂಗದಲ್ಲಿ ಸ್ತ್ರೀವೇಷಧಾರಿಯಾಗಿ ಗಮನಸೆಳೆದಿದ್ದಾರೆ.
ಪಾತಾಳ ವೆಂಕಟ್ರಮಣ ಭಟ್ ಯಾರು?
ಯಕ್ಷಗಾನ ಕ್ಷೇತ್ರಕ್ಕೆ, ರಂಗ ಭೂಮಿಗೆ ಸ್ತ್ರೀಯರು ಪ್ರವೇಶಿಸದೇ ಇದ್ದ ಅಂದಿನ ದಿನಗಳಲ್ಲಿ ಯಕ್ಷಗಾನದಲ್ಲಿ ಸ್ತ್ರೀ ಪಾತ್ರವನ್ನು ನಿರ್ವಹಿಸಿ, ನಿಭಾಯಿಸಿ ಸೈ ಎನಿಸಿಕೊಂಡ ಪ್ರತಿಭಾವಂತ ಕಲಾವಿದರಾಗಿದ್ದರು ಪಾತಾಳ ವೆಂಕಟ್ರಮಣ ಭಟ್. ವಿಶೇಷ ಎಂದರೆ, ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಸೌಂದರ್ಯದ ಪ್ರತೀಕವಾದ ಈ ಪಾತ್ರಗಳನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ ವೆಂಕಟ್ರಮಣ ಭಟ್ ಅವರು, ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು. ಸ್ತ್ರೀ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ವೆಂಕಟ್ರಮಣ ಭಟ್ ಅವರಿಗೆ ದೃಷ್ಟಿ ಮಂಜಾಗುವ ತನಕವೂ ಯಕ್ಷಗಾನವೇ ಬದುಕಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯವರಾದ ಪಾತಾಳ ವೆಂಕಟರಮಣ ಭಟ್ಟರು ಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಯಕ್ಷಗಾನ ಕಲಿತರು. ಮುಲ್ಕಿಮೇಳ, ಸುರತ್ಕಲ್ ಮಹಾಮಾಯಿ ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ
ಯಕ್ಷಗಾನ ಕಲಾವಿದರಾಗಿ ದುಡಿದರು. ತೆಂಕು ಬಡಗು ಎರಡೂ ತಿಟ್ಟುಗಳ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ಮೋಹಕ ನೃತ್ಯ ಲಾಲಿತ್ಯಗಳಿಂದ ವೈವಿಧ್ಯ ವೇಷಗಳಲ್ಲಿ ಮೆರೆದವರು ವೆಂಕಟ್ರಮಣ ಭಟ್ಟರು.
ಗುರುಪೀಠ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದಲೂ ಮನ್ನಣೆ, ಆಶೀರ್ವಾದ ಪಡೆದು ಸಂತೃಪ್ತ ಭಾವ ಹೊಂದಿದವರು ವೆಂಕಟ್ರಮಣ ಭಟ್. ಅವರನ್ನು ಚೆನ್ನೈನ ಹಿಂದೂಧರ್ಮ ಸಂಘವು ಮಣಿವಿಳಾ ಬಿರುದು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಡನೀರು ಮಠ, ಸ್ವರ್ಣ ಯಕ್ಷಗಾನ ಮಂಡಳಿ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುರಸ್ಕಾರ, ಕರಾವಳಿ ಯಕ್ಷಗಾನ ಮಂಡಳಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕಲ್ಕೂರ ಪ್ರಶಸ್ತಿಗಳು, ಗೌರವಗಳು ಸಂದಿವೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಪಾತಾಳ ವೆಂಕಟ್ರಮಣ ಭಟ್ ಅವರ ಬದುಕಿನ ಹಾದಿ
ಪುತ್ತೂರು ಸಮೀಪದ ಬೈಪದವು ಎಂಬಲ್ಲಿ 1933ರ ನವೆಂಬರ್ 16 ರಂದು ಶ್ರೀರಾಮ ಭಟ್ಟ ಮತ್ತು ಹೇಮಾವತಿ ದಂಪತಿಯ ಒಬ್ಬನೇ ಮಗನಾಗಿ ಜನಿಸಿದರು. ಬಾಲ್ಯದ ಶಿಕ್ಷಣದ ಬಳಿಕ ಪುತ್ತೂರು ಕೃಷ್ಣ ಭಟ್ಟರ ಬಳಿ ಯಕ್ಷಗಾನ ಕಲಿಕೆ ಶುರುಮಾಡಿದರು. ಬಳಿಕ ಕಾಂಚನ ಮೇಳ, ಸೌಕೂರು ಮೇಳ ಸೇರಿದರು. ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮರವರಿಂದ ಬಡಗುತಿಟ್ಟಿನ ನಾಟ್ಯದ ಹೆಜ್ಜೆಗಳನ್ನೂ ಕಲಿತರು. ಪುನಃ ತೆಂಕುತಿಟ್ಟಿನ ಮೇಳಕ್ಕೆ ಬಂದಾಗ ಪೆರುವೋಡಿ ನಾರಾಯಣ ಭಟ್ಟರಿಂದ ನಾಟ್ಯಗಾರಿಕೆಯ ಕಲಿಕೆಯನ್ನು ಪೂರ್ಣಗೊಳಿಸಿದರು. ಅಲ್ಲದೆ ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿದರು. 1954ರಲ್ಲಿ ಮೂಲ್ಕಿ ಮೇಳಕ್ಕೆ ಸೇರಿದರು. 1960ರಲ್ಲಿ ಪರಮೇಶ್ವರಿ ಅಮ್ಮ ಅವರನ್ನು ವಿವಾಹವಾದರು. 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. 1980ರ ದಶಕದಲ್ಲಿ ಮೇಳಕ್ಕೆ ವಿದಾಯ ಹೇಳಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ ಎಂದೇ ಹೇಳಲಾಗುತ್ತಿದೆ.


