ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ
Yellapura Accident: ಯಲ್ಲಾಪುರ ತಾಲೂಕು ಅರಬೈಲ್ ಘಾಟ್‌ನ ಗುಳ್ಳಾಪುರದಲ್ಲಿ ಇಂದು (ಜನವರಿ 22) ನಸುಕಿನ ವೇಳೆ ನಡೆದ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ನಡುವೆ, ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Yellapura Accident: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಅರಬೈಲ್ ಘಾಟ್‌ನ ಗುಳ್ಳಾಪುರದಲ್ಲಿ ಇಂದು (ಜನವರಿ 22) ನಸುಕಿನ ವೇಳೆ ನಡೆದ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 8 ಜನ ಸ್ಥಳದಲ್ಲೇ ಮೃತಪಟ್ಟರೆ, ಒಬ್ಬ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಮತ್ತೊಬ್ಬ ಚಿಕಿತ್ಸೆ ವಿಳಂಬವಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಮೃತನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು. ಲಾರಿ ದುರಂತದ ಗಾಯಾಳುಗಳ ಸಂಬಂಧಿಕರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂವಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಯಲ್ಲಾಪುರ ಲಾರಿ ದುರಂತದ ವಿವರ
ಗುಳ್ಳಾಪುರದಲ್ಲಿ ಇಂದು (ಜನವರಿ 22) ನಸುಕಿನ ವೇಳೆ ನಡೆದ ಲಾರಿ ದುರಂತದಲ್ಲಿ 8 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 11 ಗಾಯಾಳುಗಳನ್ನು ಬೆಳಗ್ಗೆ 6.30ಕ್ಕೆ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪೈಕಿ ಜಲಾಲ್ ಬಾಷಾ (27) ಆಸ್ಪತ್ರೆಗೆ ದಾಖಲಾಗುವ ಮೊದಲೇ ಮೃತಪಟ್ಟರು. ಉಳಿದವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆನಡೆಯಿತು. ಗಾಯಾಳುಗಳು ಸಣ್ಣ ವ್ಯಾಪಾರಿಗಳು ಮತ್ತು ಹಮಾಲಿ ಕಾರ್ಮಿಕರು.
ಲಾರಿಯಲ್ಲಿ ತರಕಾರಿ, ಹಣ್ಣು ಹಂಪಲು ತುಂಬಿಕೊಂಡು ಸವಣೂರಿನಿಂದ ಕುಮಟಾಕ್ಕೆ ಹೋಗುವುದಕ್ಕಾಗಿ ರಾತ್ರಿ 12 ಗಂಟೆಗೆ ಹೊರಟಿದ್ದರು. ನಸುಕಿನ 2.30ರ ವೇಳೆಗೆ ಅರಬೈಲ್ ಘಾಟ್‌ನ ಗುಳ್ಳಾಪುರದಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ. ಅದರಲ್ಲಿದ್ದವರು ಸಣ್ಣ ವ್ಯಾಪಾರಸ್ಥರು ಮತ್ತು ಹಮಾಲಿಗಳು ಎಂದು ಗಾಯಾಳುಗಳ ಸಂಬಂಧಿ ಸವಣೂರಿನ ಜುಬೇರ್ ವಿವರಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಗಾಯಾಳುಗಳನ್ನು ಮಲ್ಲಿಕ್ ರಿಹಾನ್ (22), ಅಪ್ಪರ್‌ಖಾನ್ (20), ಅಶ್ರಫ್ ಎಲ್ (20), ನಿಜಾಮುದ್ದೀನ್ ಸುಧಾಗ (28) ಖಾಜಾ ಹುಸೇನ್ (30), ಖಾಜಾ ಮೈನ್ (21), ಮಹ್ಮದ್ ಸಾದಿಕ್ (21) ಮರ್ದಾನ್ ಸಾಬ್ (21), ಇರ್ಫಾನ್ ಗುಡಿಗೇರಿ(18), ಜಾಫರ್ ಸವಣೂರು(28) ಎಂದು ಗುರುತಿಸಲಾಗಿದೆ.
ಕಿಮ್ಸ್ ಚಿಕಿತ್ಸೆ ವಿಳಂಬ ಬಗ್ಗೆ ಗಾಯಾಳುಗಳ ಸಂಬಂಧಿಕರ ಆಕ್ರೋಶ
ಗುಳ್ಳಾಪುರದಲ್ಲಿ ಲಾರಿ ದುರಂತದ ಗಾಯಾಳುಗಳನ್ನು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದರೂ, ಅವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯರೂ ಇರಲಿಲ್ಲ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡುವುದನ್ನು ಬಿಟ್ಟು, ಚೀಟಿ ಮಾಡಿ, ಆಧಾರ್ ಕಾರ್ಡ್ ಕೊಡಿ ಎಂದಿದ್ದಾರೆ. ಜನಪ್ರತಿನಿಧಿಗಳಿಂದ, ದೊಡ್ಡವರಿಂದ ಹೇಳಿಸಿದರೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಬಡವರು ಏನು ಮಾಡಬೇಕು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ' ಎಂದು ಸವಣೂರಿನ ಜುಬೇರ್ ಆಕ್ರೋಶ ವ್ಯಕ್ತಪಡಿಸಿದ್ದಾಗಿ ಮಾದ್ಯಮಗಳು ವರದಿ ಮಾಡಿವೆ.
ಹೆಸರು ತಿಳಿದುಕೊಳ್ಳುವುದಕ್ಕಾಗಿ ಆಧಾರ್ ಕಾರ್ಡ್ ಕೇಳಲಾಗಿದೆ. ಕಿಮ್ಸ್ ಆಸ್ಪತ್ರೆಗೆ ದಾಖಲಾಗುವ ಮೊದಲೇ ಒಬ್ಬರು ಮೃತಪಟ್ಟಿದ್ದರು. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರ ವಿಶೇಷ ತಂಡ ರಚಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ಸಮಯಕ್ಕೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆ ನೀಡುವುದಕ್ಕಾಗಿ ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಸದ್ಯ ಗಾಯಾಳುಗಳು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕೆಎಂಸಿ-ಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
