ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ

ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ

Yellapura Lorry Accident: ಸಣ್ಣ ವ್ಯಾಪಾರಿಗಳಾದ ಕಾರಣ ಅನಿರೀಕ್ಷಿತ ಆಘಾತವು ಮೃತರ ಕುಟುಂಬಗಳ ಬದುಕಿನ ಬಂಡಿಯನ್ನು ಹಳಿತಪ್ಪುವಂತೆ ಮಾಡಿದೆ. ಇಂದೋ ನಾಳೆಯೋ ಹುಟ್ಟಬೇಕಿದ್ದ ಮಗುವಿನ ಮುಖ ನೋಡಬೇಕಾಗಿದ್ದವ ಸದ್ದಿಲ್ಲದೇ ಹೊರಟು ಹೋದ ಎಂದು ಅಲ್ಫಾಜ್ ಜಾಫರ್ ಮಂಡಕಿ ಅವರ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.

ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟುಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ (ಕಡತ ಚಿತ್ರ)
ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟುಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ (ಕಡತ ಚಿತ್ರ)

Yellapura Lorry Accident: ಕುಮಟಾ ಸಂತೆಗೆ ವ್ಯಾಪಾರಕ್ಕೆ ಹೊರಟು ನಿದ್ದೆಯಲ್ಲೇ ಬದುಕಿನ ವ್ಯವಹಾರ ಕೊನೆಗೊಳಿಸಿದವರ ಮನೆಗಳ ಪರಿಸ್ಥಿತಿ ಅಪಘಾತ ಸ್ಥಳದ ಚಿತ್ರಕ್ಕಿಂತ ಭಿನ್ನವಾಗೇನೂ ಇಲ್ಲ. ಸಣ್ಣ ವ್ಯಾಪಾರಿಗಳಾದ ಕಾರಣ ಅನಿರೀಕ್ಷಿತ ಆಘಾತವು ಮೃತರ ಕುಟುಂಬಗಳ ಬದುಕಿನ ಬಂಡಿಯನ್ನು ಹಳಿತಪ್ಪುವಂತೆ ಮಾಡಿದೆ. ಇಂದೋ ನಾಳೆಯೋ ಹುಟ್ಟಬೇಕಿದ್ದ ಮಗುವಿನ ಮುಖ ನೋಡಬೇಕಾಗಿದ್ದವ ಸದ್ದಿಲ್ಲದೇ ಹೊರಟು ಹೋದ ಎಂದು ಅಲ್ಫಾಜ್ ಜಾಫರ್ ಮಂಡಕಿ ಅವರ ಕುಟುಂಬ ಸದಸ್ಯರು ರೋಧಿಸುತ್ತಿದ್ದಾರೆ. ಅಲ್ಫಾಜ್ ಜಾಫರ್ ಮಂಡಕಿ ಕೂಡ ಯಲ್ಲಾಪುರ ಸಮೀಪ ಅರಬೈಲ್ ಘಾಟ್‌ನ ಗುಳ್ಳಾಪುರದಲ್ಲಿ ನಡೆದ ಲಾರಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಹೀಗೆ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಗಮನಿಸಿದರೆ ಒಬ್ಬೊಬ್ಬರದ್ದೂ ಒಂದೊಂದು ವ್ಯಥೆ.

ಹೊಟ್ಟೆಪಾಡಿಗಾಗಿ ದಿನಕ್ಕೆ ನೂರಿನ್ನೂರು ದುಡಿದು ಬರುತ್ತಿದ್ದವರು ಈಗ ಇಲ್ಲ

ಮಳೆ, ಚಳಿ, ಬಿಸಿಲೆನ್ನೆದೆ ನಿತ್ಯವೂ ವ್ಯಾಪಾರಕ್ಕೆ ಹೋಗುತ್ತಿದ್ದವರು ಮಂಗಳವಾರ ತಡರಾತ್ರಿ ಸವಣೂರಿನಿಂದ ಕುಮಟಾ ಸಂತೆಗೆ ಹೊಟ್ಟಿದ್ದರು. ವಿಧಿಯಾಟವೇ ಬೇರೆ ಇತ್ತು. ಸಣ್ಣ ವ್ಯಾಪಾರಸ್ಥರ ಪೈಕಿ ಕೆಲವರ ಬದುಕಿನ ವ್ಯವಹಾರವನ್ನು ನಿದ್ದೆಯಲ್ಲೇ ಕೊನೆಗೊಳ್ಳುವಂತೆ ಮಾಡಿತು ಅದು.

ಹೌದು, ಸವಣೂರಿನಿಂದ ಲಾರಿಯೊಂದರಲ್ಲಿ ತರಕಾರಿಗಳನ್ನು ತುಂಬಿಕೊಂಡು 30ಕ್ಕೂ ಹೆಚ್ಚು ವ್ಯಾಪಾರಿಗಳು ಕುಮಟಾ ಸಂತೆಗೆ ಹೊರಟಿದ್ದರು. ತಡರಾತ್ರಿಯಾಗಿದ್ದ ಕಾರಣ ಎಲ್ಲರೂ ನಿದ್ದೆಗೆ ಜಾರಿದ್ದರು. ಅರಬೈಲ್ ಘಾಟಿಯಲ್ಲಿ ಸಂಚರಿಸುತ್ತಿದ್ದ ಲಾರಿ ಗುಳ್ಳಾಪುರ ಸಮೀಪ ಕಂದಕಕ್ಕೆ ಬಿದ್ದುಬಿಟ್ಟಿತು. ಮುಂದೇನಾಯಿತು ಎಂದು ಎಲ್ಲರಿಗೂ ಗೊತ್ತಾಗುಷ್ಟರಲ್ಲಿ 8 ಜನರ ಪ್ರಾಣಪಕ್ಷಿ ಹೊರಟುಹೋಗಿತ್ತು. ಇನ್ನೊಬ್ಬರದ್ದು ಆಸ್ಪತ್ರೆಗೆ ಸಾಗಿಸುವಾಗ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು.

ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು ಇಲ್ಲ ಎಂದಾಗ, ಅವರನ್ನು ಕಳೆದುಕೊಂಡವರ ದುಃಖ ಹೇಳತೀರದು. ಮೃತಪಟ್ಟ ವ್ಯಾಪಾರಿಗಳ ಒಂದೊಂದು ಕುಟುಂಬದ್ದೂ ಒಂದೊಂದು ಕರುಣಾಜನಕ ಕಥೆ.

ಅಪಘಾತದಲ್ಲಿ ಮೃತಪಟ್ಟ ಅಲ್ಫಾಜ್ ಜಾಫರ್ ಮಂಡಕಿ ಅವರ ಪತ್ನಿ ತುಂಬು ಗರ್ಭಿಣಿ. ಮನೆಯವರೆಲ್ಲರೂ ಇಂದೋ ನಾಳೆಯೋ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು. ಈ ನಡುವೆ, ಅಲ್ಫಾಜ್‌ ಜಾಫರ್ ನಿಧನ ಬರಸಿಡಿಲಿನಂತೆ ಅಪ್ಪಳಿಸಿದ್ದು, ಕುಟುಂಬದ ಬದುಕನ್ನೇ ಅಯೋಮಯವನ್ನಾಗಿಸಿದೆ.

ಇನ್ನು, ಸವಣೂರು ಪಟ್ಟಣದ ಖಾದರಬಾವಿ ಓಣಿಯ ಅಸ್ಲಾಂ ಬೆಣ್ಣಿ(24) ಮದುವೆಯಾಗಿ ನಾಲ್ಕು ತಿಂಗಳಷ್ಟೇ ಕಳೆದಿತ್ತು. ಮದುವೆಯಾಗಿ ಬಂದ ಯುವತಿಗೆ ಚಂದ ಸಂಸಾರ ನಡೆಸುವುದಕ್ಕೂ ಸಾಧ್ಯವಾಗದೇ ಕಣ್ಣೀರ ಕೋಡಿಯಾಗಿರುವುದು ಕಂಡುಬಂತು.

ಕುಟುಂಬದ ಆಧಾರಸ್ತಂಭವಾಗಿದ್ದ ಇಮ್ತಿಯಾಜ್‌ ಮುಳಗೇರಿ ಕೂಡ ಅಫಘಾತದಲ್ಲಿ ಮೃತಪಟ್ಟಿದ್ದ. ಆತ ಸವಣೂರು ಪಟ್ಟಣದ ದಂಡಿನಪೇಟೆಯ ನಿವಾಸಿ. ಮೊಹ್ಮದ್ ಜಾಫರ್ ಅವರ ನಾಲ್ಕು ಮಕ್ಕಳಲ್ಲಿ ಇಮ್ಮಿಯಾಜ್ ನಾಲ್ಕನೇ ಮಗ. ಕಳೆದ 10 ವರ್ಷಗಳಿಂದ ಕುಟುಂಬ ನಿರ್ವಹಣೆಯ ಹೊಣೆಗಾರಿಕೆ ಹೊತ್ತುಕೊಂಡಿದ್ದ.

ಶಬೀರ್ ಅಹ್ಮದ್ ಬಾಬಾ ಹೇಳಿದ ಪ್ರಕಾರ ಅಪಘಾತ ಆಗಿದ್ದು ಹೀಗೆ…

ಅಫಘಾತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಶಬೀರ್ ಅಹ್ಮದ್ ಬಾಬಾ ಹುಸೇನ್ ಗವಾಯಿ ಸುದ್ದಿಗಾರರ ಜತೆಗೆ ಮಾತನಾಡಿ ಹೇಳಿದ್ದಿಷ್ಟು - “ಮಂಗಳವಾರ ರಾತ್ರಿ 10.30ರ ಸುಮಾರಿಗೆ ನಾವೆಲ್ಲರೂ ಸವಣೂರಿನಿಂದ ಕುಮಟಾಕ್ಕೆ ಲಾರಿ ಹತ್ತಿದ್ದೆವು. ಹಣ್ಣು ತರಕಾರಿ ಮಾರಾಟ ಮಾಡುವ ನಾವೆಲ್ಲರೂ ನಮ್ಮದೇ ಊರಿನ ಲಾರಿ ಮಾಡಿಕೊಂಡು ಹೋಗುವುದು ವಾಡಿಕೆ. ನಾನು ಕ್ಯಾಬಿನ್‌ ಮೇಲೆ ಕುಳಿತಿದ್ದೆ. ತರಕಾರಿ ಮೂಟೆಗಳ ಮೇಲೆ 26 ಜನ ಇದ್ದರು. ನಿಜಾಮ್ ಲಾರಿ ಚಾಲನೆ ಮಾಡ್ತಾ ಇದ್ದ. ತಡ ರಾತ್ರಿ ದಟ್ಟ ಮಂಜು ಆವರಿಸಿದ್ದರಿಂದಲೋ ಅಥವಾ ಆತ ತೂಕಡಿಸಿದ್ದರಿಂದಲೋ ಗೊತ್ತಾಗಲಿಲ್ಲ. ಲಾರಿ ರಸ್ತೆ ಬಿಟ್ಟು ಬದಿಗಿದ್ದ ಕರೆಂಟ್ ಕಂಬಕ್ಕೆ ಬಡಿದು ಪಲ್ಟಿಯಾಯಿತು. ನಾನು ಚಾಲಕನ ಪಕ್ಕ ಕ್ಯಾಬಿನ್ ಮೇಲೆ ಕುಳಿತಿದ್ದ ಕಾರಣ ದೂರ ಬಿದ್ದೆ. ನನ್ನ ಪಕ್ಕದಲ್ಲೇ ನಿಂಬೆ ಹಣ್ಣು ಮಾರುವ ಗೆಳೆಯ ಕುಳಿತಿದ್ದ. ಆತ ಈಗ ಇಲ್ಲ. ಕತ್ತಲಲ್ಲಿ ಏನೂ ಕಾಣ್ತಾ ಇರಲಿಲ್ಲ. ಯಾರು ಎಲ್ಲಿದ್ದಾರೆ ಎಂದು ಗೊತ್ತಾಗಲಿಲ್ಲ, ಪೊಲೀಸರು ಬರುವಷ್ಟರಲ್ಲಿ ತಡವಾಗಿತ್ತು. ಲಾರಿ ಅಡಿಗೆ ಬಿದ್ದವರ ಪೈಕಿ 8 ಜನ ಮೃತಪಟ್ಟಿದ್ದರು”.

ಇಷ್ಟೆಲ್ಲ ಹೇಳುತ್ತಿರಬೇಕಾದರೆ ಶಬೀರ್ ಅಹ್ಮದ್ ಕಣ್ಣೀರಾದರು. ಅವರಿಗೆ ಅಪಘಾತದ ಆಘಾತದಿಂಧ ಹೊರಬರಲಾಗಲಿಲ್ಲ. ಕುಮಟಾ ಸಂತೆಗೆ ವ್ಯಾಪಾರಕ್ಕೆ ಲಾರಿಯಲ್ಲಿ ಹೀಗೆ ವ್ಯಾಪಾರಕ್ಕೆ ಹೋಗುವವರು ಸ್ಥಿತಿವಂತರಲ್ಲ. ಎಲ್ಲರೂ ಸಣ್ಣ ವ್ಯಾಪಾರಸ್ಥರಾಗಿದ್ದು, ಹೊಟ್ಟೆಪಾಡಿನ ಕಾಯಕ ಮಾಡುವವರು. ಬದುಕು ಎಷ್ಟು ಅತಂತ್ರ ಎಂಬುದನ್ನು ಅಪಘಾತದ ಬಳಿಕದ ಚಿತ್ರಣ ಕಟ್ಟಿಕೊಟ್ಟಿದೆ.

Whats_app_banner