Karnataka Rains: ರಾಜ್ಯದಲ್ಲಿ ಮಳೆಯ ಅಬ್ಬರ; ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಕಳೆದೊಂದು ವಾರದಿಂದ ಮಳೆಯ ಪತ್ತೆ ಇರಲಿಲ್ಲ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಾತ್ರ ಮಳೆಯಾಗಿತ್ತು. ಕರಾವಳಿಯ ಕೆಲಭಾಗಗಳಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಇನ್ನೂ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ವಾರದಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಮತ್ತೆ ಹೆಚ್ಚಾಗಿದೆ.
ಬೆಂಗಳೂರು: ಕೆಲವು ದಿನಗಳಿಂದ ಮಾಯವಾಗಿದ್ದ ವರುಣ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಶುಕ್ರವಾರ ಸಂಜೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಕೂಡಾ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ (Yellow Alert) ಘೋಷಣೆ ಮಾಡಿದೆ.
ಕಳೆದೊಂದು ವಾರದಿಂದ ಮಳೆಯ ಪತ್ತೆ ಇರಲಿಲ್ಲ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಾತ್ರ ಮಳೆಯಾಗಿತ್ತು. ಕರಾವಳಿಯ ಕೆಲಭಾಗಗಳಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಇನ್ನೂ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ವಾರದಿಂದ ಕಡಿಮೆಯಾಗಿದ್ದ ಮಳೆಯ ಅಬ್ಬರ ಮತ್ತೆ ಹೆಚ್ಚಾಗಿದೆ.
ಇನ್ನೆರಡು ದಿನ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು, ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಇಂದಿನಿಂದ 2 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಳೆಯಾಗುವ ನಿರೀಕ್ಷೆಯಿದೆ.
ಎಲ್ಲೆಲ್ಲಿ ಹಳದಿ ಅಲರ್ಟ್?
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ರಾಜ್ಯದ ಉತ್ತರ ಒಳನಾಡು, ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ 2 ದಿನ ಮಳೆ ಮುಂದುವರೆಯಲಿದೆ. ಹೀಗಾಗಿ ಬೆಂಗಳೂರು ನಗರ, ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭತ್ತ ಬೆಳೆಗಾರರಿಗೆ ಆತಂಕ
ಕರಾವಳಿಯಲ್ಲಿ ಕೆಲ ದಿನಗಳಿಂದ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಹನಿ ಬೀಳುತ್ತಿತ್ತು. ಆದರೆ ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭತ್ತ ಬೆಳೆಗಾರರಿಗೆ ಆತಂಕ ಎದುರಾಗಿದೆ. ಹಲವೆಡೆ ಬೆಳೆ ಕಟಾವಿಗೆ ಬಂದಿದ್ದು, ಈ ಸಮಯದಲ್ಲಿ ಮಳೆ ಬಂದರೆ ಕಟಾವು ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅಲ್ಲದೆ ಮಳೆ ಮುಂದುವರೆದರೆ, ಭತ್ತ ಅಲ್ಲೇ ಮೊಳಕೆಯೊಡೆಯುವ ಸಾಧ್ಯತೆ ಇದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗುತ್ತದೆ.
ಬೆಂಗಳೂರಿನಲ್ಲಿ ವಿದ್ಯುತ್ ಕಡಿತ
ಇಂದು ಮತ್ತು ನಾಳೆ ಬೆಂಗಳೂರಿನ ಕೆಲವಡೆ ವಿದ್ಯುತ್ ಕಡಿತವುಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಪೂರ್ತಿಯಾಗದ ಕೆಲವು ಯೋಜನೆಗಳು, ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನಡೆಸುತ್ತಿರುವುದರಿಂದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮುಂಬರುವ ದಿನಗಳಲ್ಲಿ ಅಡೆತಡೆಗಳನ್ನು ‘ಲೈನ್ ಕ್ಲಿಯರಿಂಗ್’ ಮಾಡಲಾಗುತ್ತಿದೆ. ಬೆಳಗ್ಗೆ 10ರಿಂದ ಸಂಜೆ 4ರ ನಡುವೆ ಈ ಕಾರ್ಯ ನಡೆಯಲಿದೆ. ಹೀಗಾಗಿ ಇಂದು ಮತ್ತು ಭಾನುವಾರ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.