ಎತ್ತಿನಹೊಳೆ ಯೋಜನೆಗೆ ಗೌರಿ ಹಬ್ಬದಂದೇ ಚಾಲನೆ; ಏನಿದು ಯೋಜನೆ, ಯಾರಿಗೆಲ್ಲಾ ಪ್ರಯೋಜನ, ಅನುದಾನ ಎಷ್ಟು?
Yettinahole Project Inauguration: ಸೆಪ್ಟೆಂಬರ್ 6ರ ಗೌರಿ ಹಬ್ಬದಂದು ಚಾಲನೆ ಪಡೆಯಲಿರುವ ಎತ್ತಿನ ಹೊಳೆ ಯೋಜನೆಯ ಉದ್ದೇಶವೇನು, ಯಾರಿಗೆಲ್ಲಾ ಉಪಯೋಗವಾಗಲಿದೆ, ಅನುದಾನವೆಷ್ಟು, ಖರ್ಚಾಗಿದ್ದೆಷ್ಟು, ಪೂರ್ಣಗೊಳ್ಳುವುದು ಯಾವಾಗ? ಇಲ್ಲಿದೆ ಎಲ್ಲಾ ವಿವರ.
ಬಯಲು ಸೀಮೆ ಜನತೆಯ ನೀರಿನ ದಾಹ ನೀಗಿಸುವ ಉದ್ದೇಶದಿಂದ ನಿರ್ಮಿಸಿರುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಗೌರಿ ಹಬ್ಬದ ದಿನವೇ (ಸೆಪ್ಟೆಂಬರ್ 6) ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹತ್ತು ಹಲವು ಕಾರಣಗಳಿಂದಲೂ ವಿವಾದಕ್ಕೆ ಗುರಿಯಾಗಿ ಸುದ್ದಿಯಲ್ಲಿರುವ ಏತ ನೀರಾವರಿ ಯೋಜನೆಗಳು ಬಹುತೇಕ ಪೂರ್ಣಗೊಂಡಿದ್ದು 7 ವಿಯರ್ಗಳ ಮೂಲಕ ನೀರು ಹರಿಸಲಾಗುತ್ತದೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ. ಈ ಯೋಜನೆಯ ಮೊದಲ ಹಂತದಲ್ಲಿ 8 ವಿಯರ್ಗಳ ಮೂಲಕ ನೀರನ್ನು ಮೇಲೆತ್ತಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಮೂರನೇ ಸಂಖ್ಯೆಯ ವಿಯರ್ ಇನ್ನೂ ಸಿದ್ದವಾಗದ ಕಾರಣ ಉಳಿದ 7 ವಿಯರ್ಗಳೂ ಸಿದ್ದವಾಗಿವೆ. ಮೊದಲ ಹಂತದಲ್ಲಿ 1500 ಕ್ಯೂಸೆಕ್ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ತದನಂತರ 48 ಕಿಲೋಮೀಟರ್ ತೆರೆದ ಕಾಲುವೆಯಿಂದ ವೇದ ವ್ಯಾಲಿಯಿಂದ ವಾಣಿ ವಿಲಾಸ ಅಣೆಕಟ್ಟೆಗೆ ನೀರು ಹರಿಸಲಾಗುತ್ತದೆ.
ಡಿಸಿಎಂ ಡಿಕೆಶಿ ಈ ಕುರಿತು ಮಾತನಾಡಿದ್ದು, ಇತ್ತೀಚೆಗೆ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿದ್ದವು. ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಯೋಜನೆಯ ಏತ ಕಾಮಗಾರಿಗಳಿಗೆ ಸೆಪ್ಟೆಂಬರ್ 6ರಂದು ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪ್ರಸ್ತುತ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಅರಣ್ಯ ಇಲಾಖೆಗೆ ಸೇರಿದ್ದ ಜಾಗಗಳಲ್ಲಿದ್ದ ಸಮಸ್ಯೆಗಳನ್ನೂ ಪರಿಹರಿಸಿದ್ದೇವೆ ಎಂದರು.
ಡಿಕೆಶಿ ಅವರು ಮಾತು ಮುಂದುವರೆಸಿ ಮಾತನಾಡಿದ್ದು, ಪಕ್ಷಭೇದ ಮರೆತು ಈ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ರಾಜಕೀಯ ನಾಯಕರು ಮಾತ್ರವಲ್ಲ, ಜಿಲ್ಲೆಯ ಜನತೆಯೂ ಬರಬೇಕು. ಪ್ರಮುಖವಾಗಿ ಇಲ್ಲಿ ರೈತರು ಹಾಜರಿರಬೇಕು. ಹಾಗಾಗಿ ಅವರನ್ನು ಆಹ್ವಾನಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಜಾಗವು ತುಂಬಾ ಕಿರಿದಾಗಿದೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಎಲ್ಲರೂ ಹಾಜರಿರಲಿದ್ದಾರೆ ಎಂದು ಹೇಳಿದ್ದಾರೆ.
ಏನಿದು ಈ ಯೋಜನೆ?
ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಯೋಲಜನೆ ಇದಾಗಿದೆ. ಹಾಸನದ ಸಕಲೇಶಪುರ ತಾಲೂಕಿನ ಪಶ್ವಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಕಾಡುಮನೆ ಹೊಳೆ, ಎತ್ತಿನ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ನೀರು ತರುವ ಯೋಜನೆಯಾಗಿದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಅಂದರೆ 139 ದಿನಗಳಲ್ಲಿ 24.01 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ತರುವುದಾಗಿದೆ.
ಒಟ್ಟು 29 ತಾಲೂಕಿನ 38 ಪಟ್ಟಣ ಪ್ರದೇಶಗಳ 6,657 ಹಳ್ಳಿಗಳಿಗೆ ಸೇರಿದ 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 14ಕ್ಕೂ ಹೆಚ್ಚು ಟಿಎಂಸಿ ನೀರನ್ನು ಇದಕ್ಕಾಗಿ ಬಳಸಲಾಗುತ್ತದೆ. ಅಲ್ಲದೆ ಈ ಜಿಲ್ಲೆಗಳ ವ್ಯಾಪ್ತಿಗೆ ಬರುವ 527 ಕೆರೆಗಳಿಗೆ 9ಕ್ಕೂ ಅಧಿಕ ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ 50ರಷ್ಟು ತುಂಬಿಸಿ ಅಂತರ್ಜಲ ವೃದ್ದಿಸುವುದು ಸಹ ಈ ಯೋಜನೆಯ ಉದ್ದೇಶವಾಗಿದೆ.
ಈ ಮಹತ್ವದ ಯೋಜನೆಯ ವೆಚ್ಚ ಎಷ್ಟು?
- ಯೋಜನೆಯ ಒಟ್ಟು ವೆಚ್ಚ - 23,252 ಕೋಟಿ ರೂಪಾಯಿ
- ಈಯೋಜನೆಗೆ ಆಗಸ್ಟ್ ವೇಳೆಗೆ ಖರ್ಚು ಮಾಡಲಾದ ಮೊತ್ತ - 16,152 ಕೋಟಿ ರೂಪಾಯಿ
ಕಾಮಗಾರಿ ಆರಂಭವಾಗಿದ್ದು ಯಾವಾಗ, ಪೂರ್ಣ ಎಂದು?
ಕಾಮಗಾರಿ ಆರಂಭಗೊಂಡಿದ್ದು ಇತ್ತೀಚೆಗಲ್ಲ.. ಹೌದು, 10 ವರ್ಷಗಳ ಹಿಂದೆ 2014ರಲ್ಲಿ. ಆದರೆ ಆರಂಭದಲ್ಲಿ ಸಮಸ್ಯೆಗಳು ಎದುರಾಗಿದ್ದವು. ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿ ತುಂಬಾ ಅಡಚಣೆಗಳೇ ಉಂಟಾಗಿದ್ದವು. ಜಮೀನು ಸಮಸ್ಯೆಗಳು, ಅರಣ್ಯ ಇಲಾಖೆಯ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿ ತುಂಬಾ ಸಮಯ ತೆಗೆದುಕೊಂಡಿತು. ಮತ್ತೊಂದು ವಿಶೇಷ ಅಂದರೆ ಅಂದು ಮುಖ್ಯಮಂತ್ರಿ ಆಗಿದ್ದೂ ಸಿದ್ದರಾಮಯ್ಯ ಅವರೇ ಎಂಬುದು ವಿಶೇಷ. ಆದರೆ ಈ ಕಾಮಗಾರಿ ಪೂರ್ಣಗೊಳ್ಳುವುದು 2027ರಲ್ಲಿ. ಈ ವರ್ಷದ ಮಾರ್ಚ್ 31ಕ್ಕೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.
ಕರಾವಳಿ ಭಾಗದಲ್ಲಿ ತೀವ್ರ ವಿರೋಧ
ಬಯಲು ಸೀಮೆ ಜಿಲ್ಲೆಗಳ ಜನರು ಈ ಯೋಜನೆಯಿಂದ ಸಂತಸಗೊಂಡಿದ್ದರೆ, ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಘಟ್ಟಗಳನ್ನು ಅಗೆಯಲಾಗುತ್ತಿದೆ. ನೇತ್ರಾವತಿ ನದಿಯ ನೀರನ್ನು ಬರಿದುಗೊಳಿಸಲಾಗುತ್ತದೆ, ಮುಂದಿನ ದಿನಗಳಲ್ಲಿ ನದಿ ಪಾತ್ರದುದ್ದಕ್ಕೂ ಜಲಕ್ಷಾಮ ಉಂಟಾಗಬಹುದು ಎಂದು ಆತಂಕ ಹೊರಹಾಕಿದ್ದಾರೆ. ಕರಾವಳಿ ಭಾಗದವರ ವಿರೋಧದ ನಡುವೆಯೂ ಸರ್ಕಾರ ಯೋಜನೆ ಮುಂದುವರೆಸಿದೆ.