ಕನ್ನಡ ಸುದ್ದಿ  /  Karnataka  /  You Can Now Fly To Bengaluru Airport To Catch Your Flight

Bengaluru airport: ಟ್ರಾಫಿಕ್‌ ಚಿಂತೆ ಬಿಡಿ, ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಹಾರಿಕೊಂಡೇ ಹೋಗಬಹುದು

ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಹನಗಳೇ ತುಂಬಿರುವ ಟ್ರಾಫಿಕ್‌ನಲ್ಲಿ ಹೋಗುವವರು, 2 ಗಂಟೆಗಳ ಕಷ್ಟಕರ ಪ್ರಯಾಣಕ್ಕೆ ಇತಿಶ್ರೀ ಹಾಡಬಹುದು. ಇದರ ಬದಲಿಗೆ 15 ನಿಮಿಷಗಳಲ್ಲಿ ತ್ವರಿತವಾಗಿ ಹಾರಿಕೊಂಡು ಹೋಗುವ ಆಯ್ಕೆಯನ್ನು ಆರಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ವಿಮಾನ ನಿಲ್ದಾಣಕ್ಕೆ ಹಾರಿಕೊಂಡೇ ಹೋಗಿ
ವಿಮಾನ ನಿಲ್ದಾಣಕ್ಕೆ ಹಾರಿಕೊಂಡೇ ಹೋಗಿ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ವಾಸಿಸುವ ಜನರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೂರವಾಯ್ತು ಎನ್ನುವ ಕೊರಗು. ತಮ್ಮದೇ ವಾಹನದಲ್ಲಿ ಮನೆಯಿಂದ ಹೊರಡುವುದಾದರೂ, ತುಂಬಾ ಬೇಗನೆ ಹೋಗಬೇಕಾಗುತ್ತದೆ. ನಗರದ ಹೊರವಲಯದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಕೆಲವು ಭಾಗಗಳ ನಿವಾಸಿಗಳು ಹೋಗಲು ಈಗಲೂ ಹೆಚ್ಚು ಸಮಯ ವಿನಿಯೋಗಿಸಬೇಕಾಗಿದೆ. ಆದ್ರೆ ಇಂತಹ ಸಮಸ್ಯೆ ಇನ್ನು ಮುಂದೆ ಬರುವುದಿಲ್ಲ.

ಶೀಘ್ರದಲ್ಲೇ ನಗರದಲ್ಲೇ ಇರುವ HAL ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸವಾರಿ ಮಾಡಬಹುದು. ಈ ಮೂಲಕ ಬೇಗನೇ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಅದು ಕೂಡಾ ಕೇವಲ 15 ನಿಮಿಷಗಳಲ್ಲಿ.

ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮತ್ತೆ ನಗರಕ್ಕೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿರುತ್ತವೆ. ಆರಂಭದಲ್ಲಿ ವಾರದಲ್ಲಿ ಐದು ದಿನಗಳು ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಮತ್ತು ಭಾರತದ ಇತರ ಭಾಗಗಳಲ್ಲಿ ಚಾಪರ್‌ಗಳನ್ನು ನಿರ್ವಹಿಸುವ ಬ್ಲೇಡ್(BLADE) ಸಂಸ್ಥೆಯು ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಅಕ್ಟೋಬರ್ 10ರಂದು ಹೆಲಿಕಾಪ್ಟರ್‌ ಸೇವೆಗಳು ಪ್ರಾರಂಭವಾಗಲಿದೆ.

ಕಂಪನಿಯು ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ ಇಂಟ್ರಾ-ಸಿಟಿ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬ್ಲೇಡ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿಮಾನದಲ್ಲಿ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ವಾಹನಗಳೇ ತುಂಬಿರುವ ಟ್ರಾಫಿಕ್‌ನಲ್ಲಿ ಹೋಗುವವರು, 2 ಗಂಟೆಗಳ ಕಷ್ಟಕರ ಪ್ರಯಾಣಕ್ಕೆ ಇತಿಶ್ರೀ ಹಾಡಬಹುದು. ಇದರ ಬದಲಿಗೆ 15 ನಿಮಿಷಗಳಲ್ಲಿ ತ್ವರಿತವಾಗಿ ಹಾರಿಕೊಂಡು ಹೋಗುವ ಆಯ್ಕೆಯನ್ನು ಆರಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ಸದ್ಯ ಹೆಚ್‌ಎಎಲ್‌ನಿಂದ ಹೆಲಿಕಾಪ್ಟರ್‌ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದಲೂ ಇಂತಹ ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಆರಂಭದ ದಿನಗಳಲ್ಲಿ ಎರಡು ಬಾರಿ ಹೆಲಿಕಾಪ್ಟರ್‌ಗಳು ಹಾರಲಿವೆ. ಜನರ ಪ್ರೋತ್ಸಾಹದ ಆಧಾರದ ಮೇಲೆ ಮುಂದೆ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಸಂಸ್ಥೆ ಹೇಳಿದೆ. ಏಕಮುಖ ಪ್ರಯಾಣಕ್ಕೆ ಇದರ ಟಿಕೆಟ್‌ ದರವು ಪ್ರತಿ ಪ್ರಯಾಣಿಕನಿಗೆ 3,250 ರೂಪಾಯಿ ಮತ್ತು ತೆರಿಗೆ ಇರಲಿದೆ. ಈ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು.

ಐದು ಆಸನಗಳ ಸಾಮರ್ಥ್ಯವುಳ್ಳ ಸಿಂಗಲ್ ಇಂಜಿನ್ ಹೊಂದಿರುವ ಎರಡು ವಿಮಾನಗಳು ಇರುತ್ತವೆ. ಒಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೆಚ್‌ಎಎಲ್‌ಗೆ ಬರುತ್ತದೆ. ಅದೇ ಹೆಲಿಕಾಪ್ಟರ್‌ ಸಂಜೆ 4.15ಕ್ಕೆ ಅದೇ ಮಾರ್ಗದಲ್ಲಿ ಸಂಜೆ ಹಿಂತಿರುಗಲಿದೆ ಎಂದು ಕಂಪನಿಯು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸೇವೆಗಳನ್ನು ಈ ಹಿಂದೆಯೂ ಪ್ರಾರಂಭಿಸಲಾಗಿತ್ತು. ಆದರೆ ಪ್ರಯಾಣಿಕರ ಕೊರತೆಯಿಂದಾಗಿ ಅದು ಯಶಸ್ವಿಯಾಗಲಿಲ್ಲ. ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ 2018ರಲ್ಲಿ ಪ್ರಾರಂಭಿಸಲಾಗಿದ್ದ ಸೇವೆಯನ್ನು ಬಳಿಕ ಸ್ಥಗಿತಗೊಳಿಸಲಾಗಿತ್ತು.

ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಬೆಂದಿರುವ ಜನರಿಗೆ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಈಗ ನಿಮ್ಮ ಕೈಯಲ್ಲಿ ಹಣವಿದ್ದರೆ, ಟ್ರಾಫಿಕ್‌ ಚಿಂತೆಯಿಲ್ಲದೆ ಹಾರಿಕೊಂಡೇ ವಿಮಾನ ನಿಲ್ದಾಣಕ್ಕೆ ತೆರಳಬಹುದು.