ಆಕಾಂಕ್ಷ ಸಾವಿನ ವಿಚಾರ: ಆತ್ಮಹತ್ಯೆ ಪ್ರಕರಣ ದಾಖಲಿಸಿದ ಪೊಲೀಸರು, ಸಾವಿನ ಕುರಿತು ಅನುಮಾನ ಎಂದು ದೂರು ನೀಡಿದ ಪೋಷಕರು
ಕಾಲೇಜಿಗೆ ಹೋದ ಆಕೆ ಅಲ್ಲಿನ ಕೇರಳ ಮೂಲದ ಪ್ರಾಧ್ಯಾಪಕರನ್ನು ಭೇಟಿ ಮಾಡಲು ಹೋಗಿದ್ದು, ಈ ವೇಳೆ ಅವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಹರೀಶ ಮಾಂಬಾಡಿ)

ಮಂಗಳೂರು: ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ಸಾವು ಪ್ರಕರಣದಲ್ಲಿ ಪ್ರೇಮ ವೈಫಲ್ಯದ ಕಾರಣದಿಂದ ಅತ್ಮಹತ್ಯೆಗೆ ಶರಣಾಗಿದ್ದಾಗಿ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಆಕಾಂಕ್ಷ ಆತ್ಮಹತ್ಯೆ ಮಾಡಿಕೊಂಡದ್ದಲ್ಲ ಎಂದು ಹೇಳಿರುವ ಪೋಷಕರು ಆಕೆಯನ್ನು ಕೊಂದಿರಲೂಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು , ಈ ಕುರಿತು ದೂರನ್ನೂ ನೀಡಿದ್ದಾರೆ. ಮೃತಳ ಮನೆಯವರಿಂದ ಮತ್ತೊಂದು ದೂರನ್ನು ಪೊಲೀಸರು ಸ್ವೀಕರಿಸಿದ್ದು, ಯಾವ ರೀತಿ ತನಿಖೆ ಸಾಗುತ್ತದೆ ಎಂದು ಕಾದುನೋಡಬೇಕು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಮರಣೋತ್ತರ ಪರೀಕ್ಷೆ ನಿಗದಿತ ಸಮಯಕ್ಕೆ ಆರಂಭಗೊಂಡಿಲ್ಲ.
ಘಟನೆ: ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಂತೆ ಪಂಜಾಬ್ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್.ಪಿ.ಯು(Lovely Professional University) ಮೆಂಟರ್ ಪ್ರೊಫೆಸರ್ ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂ(45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿಸುತ್ತಿದ್ದಾಗಿ ಹೇಳಲಾಗಿದ್ದು, ತನ್ನನ್ನು ಮದುವೆಯಾಗಬೇಕು ಎಂದು ಹೇಳಿದ್ದಕ್ಕೆ ಮ್ಯಾಥ್ಯೂ ಕ್ಯಾರೆ ಮಾಡದೆ ಇದ್ದ ಕಾರಣ, ನೊಂದ ಆಕಾಂಕ್ಷ ಮೇ 17 ರಂದು ಬೆಳಗ್ಗೆ 11 ಗಂಟೆಗೆ ಕೇರಳ ಮೂಲದ ಸ್ನೇಹಿತನ ಜೊತೆ ಬೈಕ್ ಮೂಲಕ ಕಾಲೇಜಿಗೆ ಹೋಗಿ ಮ್ಯಾಥ್ಯೂಗೆ ನಾನು ಸಾಯುತ್ತೇನೆ ಎಂದು ಮೆಸೇಜ್ ಹಾಕಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿದ್ದಾರೆ ಎನ್ನಲಾಗಿದೆ.
ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲು: ಜಲಂದರ್ ಜಿಲ್ಲೆಯ ಪಗ್ವಾಡ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಆಕಾಂಕ್ಷ ಸಹೋದರ ಆಕಾಶ್ ನಾಯರ್ ಮೇ.18 ರಂದು ಸಂಜೆ ಎಲ್.ಪಿ.ಯು ಕಾಲೇಜಿನ ಪ್ರೊಫೆಸರ್ ಕೇರಳದ ಕೊಟ್ಟಾಯಂ ನಿವಾಸಿಯಾಗಿರುವ ಬಿಜಿಲ್ ಮ್ಯಾಥ್ಯೂ(45) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲಿದ್ದಾರೆ.
ಮೃತಪಟ್ಟ ಆಕಾಂಕ್ಷ ಮೃತದೇಹ ಪಂಜಾಬ್ ರಾಜ್ಯದ ಜಲಂದರ್ ಜಿಲ್ಲೆಯ ಪಗ್ವಾಡ ತಾಲೂಕಿನ ಸಿವಿಲ್ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು. ಕುಟುಂಬಸ್ಥರು ಮೇ.18 ರಂದು ಸಂಜೆ ಆಸ್ಪತ್ರೆಗೆ ಹೋಗಿ ಮೃತದೇಹ ನೋಡಿದ ಬಳಿಕ ಸಹೋದರ ದೂರು ನೀಡಿದ್ದು ತಡವಾದ ಕಾರಣ ಮೇ.19 ರಂದು ಶವಪರೀಕ್ಷೆ ನಿಗದಿಯಾಗಿತ್ತು. ಆದರೆ ಇದೀಗ ದೂರಿನ ಗೊಂದಲದಿಂದ ಸಮಯಕ್ಕೆ ಸರಿಯಾಗಿ ಶವಪರೀಕ್ಷೆ ನಡೆಯಲಿಲ್ಲ.
ಮೊಬೈಲ್‌ನಲ್ಲಿ ಡೆತ್ ನೋಟ್ ಪತ್ತೆ: ಆಕಾಂಕ್ಷ ಸಾವಿಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಮೇ.17 ರಂದು ವಾಟ್ಸಪ್‌ನಲ್ಲಿ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಮೊಬೈಲ್‌ಗೆ ಕಳುಹಿಸಿದ ಡೆತ್ ನೋಟ್ ಪತ್ತೆಯಾಗಿದ್ದು ಮೊಬೈಲ್ ತನಿಖೆಗಾಗಿ ಪಗ್ವಾಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸರ್ಟಿಫಿಕೇಟ್ ತರಲು ಅಂತ ಹೇಳಿದ್ದಳು: ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ನಾನು ಡೆಲ್ಲಿಯಿಂದ ಎಲ್.ಪಿ.ಯು ಕಾಲೇಜಿಗೆ ಸರ್ಟಿಫಿಕೇಟ್ ತರಲು ಹೋಗುತ್ತಿರುವುದಾಗಿ ಹೇಳಿ ತಾಯಿಯಿಂದ 2 ಸಾವಿರ ಹಣ ಬೇಕೆಂದು ಗೂಗಲ್ ಪೇ ಮಾಡಿಸಿದ್ದಳು. ಬಳಿಕ ಕರೆ ಸ್ವೀಕರಿಸದೆ ಮೆಸೇಜ್ ಮಾಡಿ ಕಾಲೇಜಿನಲ್ಲಿರುವುದಾಗಿ ಹೇಳಿ ಕೊನೆಗೆ ಸಾವಿನ ಸುದ್ದಿ ಮನೆಯವರಿಗೆ ಪೊಲೀಸರಿಂದ ತಲುಪಿತ್ತು.