Sunday Live Update: ಮೋದಿ ಈಜಿಪ್ತ್‌ ಪ್ರವಾಸ ಮುಕ್ತಾಯ; ಕರ್ನಾಟಕದ ಮಳೆ ಮಾಹಿತಿ; ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಫೋಟ
ಕನ್ನಡ ಸುದ್ದಿ  /  latest news  /  Sunday Live Update: ಮೋದಿ ಈಜಿಪ್ತ್‌ ಪ್ರವಾಸ ಮುಕ್ತಾಯ; ಕರ್ನಾಟಕದ ಮಳೆ ಮಾಹಿತಿ; ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಫೋಟ

ಈಜಿಪ್ತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಯೋಗಪಟುಗಳು ಭೇಟಿ ಮಾಡಿದರು.

Sunday Live Update: ಮೋದಿ ಈಜಿಪ್ತ್‌ ಪ್ರವಾಸ ಮುಕ್ತಾಯ; ಕರ್ನಾಟಕದ ಮಳೆ ಮಾಹಿತಿ; ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಫೋಟ

04:52 PM ISTJun 25, 2023 05:58 PM HT Kannada Desk
  • twitter
  • Share on Facebook
04:52 PM IST

ಪ್ರಧಾನಿ ನರೇಂದ್ರ ಮೋದಿ ಈಜಿಪ್ತ್‌ ದೇಶದ ಎರಡು ದಿನಗಳ ಪ್ರವಾಸ ಆರಂಭಿಸಿದರು. ಈಗಾಗಲೇ ದೇಶದ ಕೆಲವು ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕರ್ನಾಟಕದಲ್ಲೂ ಮಳೆಯ ವಾತಾವರಣವಿದೆ. ದಿನದ ಬೆಳವಣಿಗೆಗಳ ಮಾಹಿತಿ ಇಲ್ಲಿದೆ

Sun, 25 Jun 202304:17 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈಜಿಪ್ಟ್‌ ಪ್ರವಾಸ ಸಂಪನ್ನ

ನಾಲ್ಕು ದಿನಗಳ ಅಮೆರಿಕ ಪ್ರವಾಸ ಮತ್ತು ಎರಡು ದಿನಗಳ ಈಜಿಪ್ಟ್‌ ಪ್ರವಾಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.  

ಎರಡು ದಿನಗಳ ಈಜಿಪ್ಟ್‌ ಪ್ರವಾಸ ಐತಿಹಾಸಿಕ ಮತ್ತು ಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿವರ ಓದಿಗೆ - PM Modi: ಪಿಎಂ ಮೋದಿಗೆ ಆರ್ಡರ್ ಆಫ್ ದಿ ನೈಲ್ ಗೌರವ, 2 ದಿನದ ಈಜಿಪ್ಟ್‌ ಪ್ರವಾಸ ಸಂಪನ್ನ

Sun, 25 Jun 202303:36 PM IST

ಮುಖ್ಯಮಂತ್ರಿ ಆಗುವ ಇರಾದೆ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

 ಸಚಿವ ಕೆ.ಎನ್‌.ರಾಜಣ್ಣ ಅವರು ಸತೀಶ್‌ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಎಂಬ ಹೇಳಿಕೆ ನೀಡಿದಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ, ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ಇದೆ. ಅದರೆ ಈಗ ಅಲ್ಲ, ಸಿದ್ದರಾಮಯ್ಯನವರ ನಂತರ ಮುಂದಿನ ಅವಧಿಗೆ ಎಂದು ಸಮಜಾಯಿಷಿ ನೀಡಿದರು.

Sun, 25 Jun 202302:36 PM IST

ಎಲ್ಲ ರಾಜ್ಯಗಳಲ್ಲೂ ತಿರುಪತಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯೋಜನೆ

ಮುಂಬರುವ ವರ್ಷಗಳಲ್ಲಿ ಎಲ್ಲ ರಾಜ್ಯಗಳಲ್ಲಿ ವೆಂಕಟೇಶ್ವರ ದೇವಾಲಯವನ್ನು ಸ್ಥಾಪಿಸಲು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್‌ ತೀರ್ಮಾನಿಸಿದೆ. ವಿವರ ಓದಿಗೆ - Tirupati Temple: ಪ್ರತಿ ರಾಜ್ಯದಲ್ಲಿ ತಿರುಪತಿ ಬಾಲಾಜಿ ದೇಗುಲ, ಯಾವ್ಯಾವ ರಾಜ್ಯಗಳಲ್ಲಿ ಟಿಟಿಡಿ ಯೋಜನೆ; ವಿವರ ಇಲ್ಲಿದೆ

Sun, 25 Jun 202301:56 PM IST

ಮಳೆಗಾಗಿ ಶವದ ಬಾಯಿಗೆ ನೀರು ಬಿಟ್ಟ ವಿಜಯಪುರ ಜನರು

ಸತ್ತವರ ಶವ ಹೂತಾಗ ಅದು ಬಾಯಿ ತೆಗೆದೇ ಇದ್ದರೆ ಮಳೆಯಾಗಲ್ಲ, ಹೀಗಾಗಿ ಹೂತಿರುವ ಶವದ ಬಾಯಿಗೆ ನೀರನ್ನು ಹಾಕಿ ಅದನ್ನು ತೃಪ್ತಿ ಪಡೆಸಬೇಕು, ಆಗ ಮತ್ತೆ ಮಳೆ ಬರುತ್ತದೆ ಎಂಬ ನಂಬಿಕೆ ಹಿನ್ನೆಲೆ ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ಅವರ ನೇತೃತ್ವದಲ್ಲಿ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ವಿವರ ಓದಿಗೆ - Vijayapura News: ಮಳೆಗಾಗಿ ಸ್ಮಶಾನದ ಮೊರೆ ಹೋದ ವಿಜಯಪುರ ಜನರು; ಶವದ ಬಾಯಿಗೆ ನೀರು ಬಿಟ್ಟು ಪ್ರಾರ್ಥನೆ

Sun, 25 Jun 202301:44 PM IST

ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24X7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

ರಾಜ್ಯದಲ್ಲೀಗ ಗೃಹಜ್ಯೋತಿ (200 ಯೂನಿಟ್‌ ಕರೆಂಟ್‌ ಫ್ರೀ), ಪವರ್‌ಕಟ್‌, ವಿದ್ಯುತ್‌ ಬಿಲ್‌ ಏಕಾಕಿ ಏರಿಕೆ ಆಗಿರುವ ವಿಚಾರ ಬಹಳ ಚರ್ಚೆಯಲ್ಲಿದೆ. ಪದೇಪದೆ ಪವರ್‌ಕಟ್‌ ಕಿರಿಕಿರಿ ಬೇರೆ. ಸಾಕಪ್ಪಾ ಸಾಕು ಎನ್ನುವಂತಹ ಈ ವಿದ್ಯಮಾನದ ನಡುವೆ ಗಮನ ಸೆಳದ ವಿಚಾರ ಇದು. 24X7 ವೈರ್‌ಲೆಸ್‌ ಪವರ್‌ ಇನ್ನು ಕೆಲವೇ ವರ್ಷಗಳಲ್ಲಿ ನನಸಾಗಲಿದೆ. ವಿವರ ಓದಿಗೆ - Power Cut: ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ, ಹೀಗಂತ ಚಿಂತೆ ಮಾಡ್ಬೇಡಿ; 24X7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

Sun, 25 Jun 202312:28 PM IST

ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿಗೆ ಮರುಜೀವ ತುಂಬಲು ಲಕ್ಷ್ಮಣ ಸವದಿ ಪ್ರಯತ್ನ

ರಾಜ್ಯದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆ. ಇದೇ ಕಾರಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ದಿವಂಗತ ಉಮೇಶ್ ಕತ್ತಿ ಆಗಾಗ ಧ್ವನಿ ಎತ್ತುತ್ತಿದ್ದರು. ಆದರೆ ಅವರ ನಿಧನದ ಬಳಿಕ ಆ ಕೂಗು ಮರೆಯಾಗಿತ್ತು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಆ ಮೂಲಕ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿಗೆ ಮರುಜೀವ ತುಂಬಲು ಪ್ರಯತ್ನ ಮಾಡಿದರು. ಅವರು ಇಂದು (ಜೂ.25) ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಈ ವಿಚಾರ ಪ್ರಸ್ತಾಪಿಸಿದರು.

Sun, 25 Jun 202311:59 AM IST

ಜಾತಿ ಆಧಾರದಲ್ಲಿ ಮಂತ್ರಿ ಆಗಬೇಕಾಗಿ ಬಂದರೆ ನಾವು ಅಂತಹ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ ಎಂದ ಎಚ್‌.ಕೆ.ಪಾಟೀಲ್‌

ಜಾತಿಯ ಆಧಾರದಲ್ಲಿ ಮಂತ್ರಿ ಆಗುವಂತಹ ಸನ್ನಿವೇಶ ಎದುರಾದರೆ ಆಗ ಮಂತ್ರಿ ಪದವಿ ಬೇಡ ಎಂದು ಬಿಡುವೆ ಎಂದು ಸಚಿವ ಎಚ್ ಕೆ ಪಾಟೀಲ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ರೆಡ್ಡಿ ಸಮಾಜದ ನೂತನ ಶಾಸಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪಾಟೀಲ್‌ ಅವರು, ಜಾತಿ ಲೆಕ್ಕಾಚಾರದಲ್ಲಿ ಮಂತ್ರಿ ಪದವಿ ಕೇಳುವವರಲ್ಲ ನಾವು. ರಾಮಲಿಂಗಾ ರೆಡ್ಡಿ ಮತ್ತು ನಾನು ಜಾತಿಯ ಆಧಾರದಲ್ಲಿ ಮಂತ್ರಿಗಳಾದವರಲ್ಲ. ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಕೆಲಸ ನೋಡಿಕೊಂಡು ಮಂತ್ರಿ ಹೊಣೆಗಾರಿಕೆ ಹೆಗಲೇರಿದೆ ಎಂದು ಹೇಳಿದರು. 

Sun, 25 Jun 202311:46 AM IST

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ಶೀಘ್ರದಲ್ಲೇ ಜಾರಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪ್ರೋತ್ಸಾಹಿಸುವ ಹಾಗೂ ಹೊಸ ಯೋಜನೆ ರೂಪಿಸುವ ನಿಟ್ಟಿನಲ್ಲಿ ವಿಶೇಷ ಕೈಗಾರಿಕಾ ನೀತಿ ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ವಿವರ ಓದಿಗೆ - Kalaburagi News: ಶೀಘ್ರದಲ್ಲೇ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ಜಾರಿ: ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭರವಸೆ

Sun, 25 Jun 202310:51 AM IST

ದೆಹಲಿ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಯುವತಿ ಸಾವು 

ನವದೆಹಲಿಯಲ್ಲಿ ಮಳೆಯ ನಡುವೆ ಕೊಚ್ಚೆಗುಂಡಿಗೆ ಹೋಗುವುದನ್ನು ತಪ್ಪಿಸಲು ವಿದ್ಯುತ್ ಕಂಬವನ್ನು ಹಿಡಿದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ದೆಹಲಿಯ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ.

Sun, 25 Jun 202309:55 AM IST

ಜನಸಾಮಾನ್ಯರಲ್ಲಿ ಕಾನೂನು ಜಾಗೃತಿ ಆಗಬೇಕು; ಬಿಜೆಪಿ ಕಾನೂನು ಪ್ರಕೋಷ್ಟದ ಸಭೆಯಲ್ಲಿ ವಿ.ಸೋಮಣ್ಣ

ಜನಸಾಮಾನ್ಯರಿಗೂ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯದ ಮಾಜಿ ಸಚಿವ ವಿ. ಸೋಮಣ್ಣ ಅವರು ಮನವಿ ಮಾಡಿದರು. ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು (ಜೂ.25) ನಡೆದ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ಪ್ರತಿಪಾದನೆ, ಅದರ ಪ್ರತಿಪಾದನೆಯಿಂದ ಆಗುವ ಸಾಧಕ- ಬಾಧಕಗಳ ಅರಿವು ಮೂಡಿಸುವುದು ಶ್ಲಾಘನೀಯ ಎಂದು ಅವರು ಹೇಳಿದರು.

Sun, 25 Jun 202309:42 AM IST

ಬ್ಯಾಟರಾಯನಪುರದಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ತಮ್ಮೇಶ್‌ ಗೌಡ ಅಸಮಾಧಾನ ಬಹಿರಂಗ

ಬಿಜೆಪಿ ಕಾರ್ಯಕರ್ತರ ಸಭೆಗೆ ಆಗಮಿಸಿದ ಬ್ಯಾಟರಾಯನಪುರದಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ತಮ್ಮೇಶ್‌ ಗೌಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಬಳಿ ಸಭಾ ಸ್ಥಳದ ಹೊರಗೆ ಮಾತನಾಡಿದ ತಮ್ಮೇಶ್‌ ಗೌಡ, ತಮ್ಮ ವಿರುದ್ಧ ಕಾಂಗ್ರೆಸ್‌ ಪರವಾಗಿ ಕೆಲಸಮಾಡಿದ ಮುನೇಂದ್ರ ಕುಮಾರ್‌ ಅವರನ್ನು ಪಕ್ಷದಿಂದ ಹೊರಗೆ ಹಾಕಿ. ನಂತರ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.

Sun, 25 Jun 202309:39 AM IST

ಬೆಂಗಳೂರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೈಡ್ರಾಮಾ 

ಶಾಸಕ ಮುನಿರತ್ನ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಿಜೆಪಿ ಉತ್ತರ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ನಡೆದಿದೆ. ಕೊನೆಗೆ ವೇದಿಕೆ ಮೇಲಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎದ್ದು ನಿಂತು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಸಭೆಯ ನಂತರ 10 ನಿಮಿಷ ಕುಳಿತು ಅಸಮಾಧಾನ ಹೇಳಿಕೊಳ್ಳಲು ಅವಕಾಶ ನೀಡುವುದಾಗಿ ಹೇಳಿದ ಬಳಿಕ ಸಭೆ ಮುಂದುವರಿಯಿತು. 

Sun, 25 Jun 202309:12 AM IST

ಬೆಂಗಳೂರು ಉತ್ತರ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ (ಜೂ.25) ಬಿಜೆಪಿಯ ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆಗೆ ಚಾಲನೆ ನೀಡಿದರು. ಮಾಜಿ ಸಚಿವರಾದ ಕೆ ಗೋಪಾಲಯ್ಯ ,ಅಶ್ವಥ್ ನಾರಾಯಣ್, ಗೋವಿಂದ್ ಕಾರಜೋಳ, ಎಸ್ ಟಿ ಸೋಮಶೇಖರ್, ಜಿಲ್ಲಾಧ್ಯಕ್ಷ ನಾರಾಯಣ ,ಎಸ್ ಹರೀಶ್, ನೆಲ ನರೇಂದ್ರ ಬಾಬು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು

Sun, 25 Jun 202309:14 AM IST

ಬೀದರ್‌ನಲ್ಲಿ ಅಕ್ರಮ ಗಾಂಜಾ ಸಾಗಿಸಿದ ಇಬ್ಬರ ಬಂಧನ, 118 ಕೆಜಿ ಗಾಂಜಾ ವಶ

ಬೀದರ್‌ನಲ್ಲಿ ಅಕ್ರಮ ಗಾಂಜ ಸಾಗಾಣಿಕೆ ಮಾಡುತ್ತಿದ್ಡ ಇಬ್ಬರನ್ನು ಬಂಧಿಸಿ ಅವರಿಂದ 1.23 ಕೋಟಿ ಮೌಲ್ಯದ 118 ಕೆಜಿ ಗಾಂಜಾ, ಒಂದು ಮಾರುತಿ ಸುಜುಕಿ ಕಾರ್, 3 ಮೊಬೈಲ್, ಹಾಗೂ 15 ಸಾವಿರ ರೂಪಾಯಿ ನಗದು ವಶಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌  ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.  ವಿವರ ಓದಿಗೆ - Bidar Ganja News: ಅಕ್ರಮ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳ ಬಂಧನ, ಕೋಟಿ ಮೌಲ್ಯದ 118 ಕೆಜಿ ಗಾಂಜಾ ವಶ

Sun, 25 Jun 202308:33 AM IST

ಈಜಿಪ್ತ್‌ ಪ್ರಧಾನಿ ಭೇಟಿಯಾದ ಮೋದಿ 

ಈಜಿಪ್ತ್‌ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಅಬ್ದೆಲ್‌ ಫತಾ ಅಲ್‌ ಸಿಸಿ ಅವರನ್ನು ಕೈರೋದಲ್ಲಿ ಭಾನುವಾರ ಮಧ್ಯಾಹ್ನ ಭೇಟಿಯಾದರು. ಸಿಸಿ ಅವರೊಂದಿಗೆ ಉಭಯ ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿ ವಿಸ್ತೃತವಾಗಿ ಚರ್ಚಿಸಿದರು. ಖುದ್ದು ಸಿಸಿ ಅವರೇ ಮೋದಿ ಅವರನ್ನು ಸ್ವಾಗತಿಸಿ ಸಚಿವರು ಹಾಗೂ ಅಧಿಕಾರಿಗಳನ್ನು ಪರಿಚಯಿಸಿದರು

Sun, 25 Jun 202307:59 AM IST

ಮಳೆ ಅನಾಹುತ:ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವು

ದಿಲ್ಲಿಯಲ್ಲಿ ಶನಿವಾರದಿಂದಲೇ ಮಳೆ ಜೋರಾಗಿದ್ದು, ರೈಲ್ವೆ ನಿಲಾಣದಲ್ಲಿ ಕಂಬ ಉರುಳಿ ಮಹಿಳೆ ಮೃತಪಟ್ಟಿದ್ದಾರೆ. ಸಾಕ್ಷಿ ಅಹುಜಾ ಎನ್ನುವವರು ಕುಟುಂಬದವರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು. ಈ ವೇಳೆ ಬಿದ್ದಿದ್ದ ವಿದ್ಯುತ್‌ ಕಂಬ ತುಳಿದಿದ್ದಾರೆ. ವಿದ್ಯುತ್‌ ಪ್ರವಹಿಸಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾರೆ ಎಂದು ಪೊಲೀಸರು ತಿಳಿಸಿದ್ಧಾರೆ.

Sun, 25 Jun 202307:15 AM IST

ದಿಲ್ಲಿಯಲ್ಲೂ ಉತ್ತಮ ಮಳೆ

ಮುಂಗಾರು ದೇಶದ ಹಲವು ಭಾಗಗಳಲ್ಲಿ ಪ್ರವೇಶಿಸಿದ್ದು ರಾಜಧಾನಿ ದಿಲ್ಲಿಯಲ್ಲೂ ಭಾನುವಾರ ಮಳೆಯ ಅಬ್ಬರ ಜೋರಾಗಿದೆ. ಎರಡು ದಿನ ತಡವಾಗಿ ಮಳೆ ದಿಲ್ಲಿ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಗಿಂತ ಮೊದಲೇ ಮಳೆ ಶುರುವಾಗಿದೆ. ಬಿಸಿಲ ಬೇಗೆಯಿಂದ ಬಳಲಿದ್ದ ದಿಲ್ಲಿ ಜನತೆ ಮಳೆಯಿಂದಾಗಿ ನಿರಾಳರಾದರು. ಮುಂದಿನ ಒಂದೆರಡು ದಿನಗಳಲ್ಲಿ ದಿಲ್ಲಿಯಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Sun, 25 Jun 202306:43 AM IST

ಮುಂಬೈನಲ್ಲಿ ಮಳೆಗೆ ಕುಸಿದ ಕಟ್ಟಡ ಕುಸಿತ

ಮುಂಬೈನಲ್ಲಿ ಮುಂಗಾರು ಮಳೆಯಿಂದ ಕಟ್ಟಡವೊಂದು ಕುಸಿದುಬಿದ್ದು ಮೂವರು ಅದರಡಿ ಸಿಲುಕಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಘಾಟ್‌ಕೋಪರ್‌ನಲ್ಲಿ ಕಟ್ಟಡವೊಂದು ಕುಸಿದುಬಿದ್ದಿದೆ. ಅದರಡಿ ಮೂವರು ಸಿಲುಕಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೊಬ್ಬರನ್ನೂ ರಕ್ಷಿಸಲಾಗುತ್ತಿದೆ.

Sun, 25 Jun 202305:56 AM IST

ಅಸ್ಸಾಂನಲ್ಲಿ ಮಳೆ ತಗ್ಗಿದರೂ ನಿಲ್ಲದ ಪ್ರವಾಹ

ಅಸ್ಸಾಂ ರಾಜ್ಯದಲ್ಲಿ ಭಾನುವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಪ್ರವಾಹದ ಸ್ಥಿತಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗೆಯೇ ಇದೆ. ಪುನರ್ವಸತಿ ಕೇಂದ್ರಗಳಲ್ಲಿ ಜನರಿಗೆ ಆಸರೆ ಒದಗಿಸಲಾಗಿದೆ. ಮಳೆ ಅನಾಹುತದಿಂದ ನಾಲಬರಿ ಜಿಲ್ಲೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಈವರೆಗೂ ಮೂವರು ಮೃತಪಟ್ಟಂತಾಗಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಕೂಡಲೇ ಪರಿಹಾರ ಚುರುಕುಗೊಳಿಸುವಂತೆ ಕೇಂದ್ರಗೃಹ ಸಚಿವ ಅಮಿತ್‌ ಶಾ ಅಸ್ಸಾಂ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.

Sun, 25 Jun 202304:50 AM IST

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ: ಇಬ್ಬರ ಸಾವು

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತಕ್ಕೆ ಇಬ್ಬರು ಸಾವನ್ನಪ್ಪಿದ್ದು, ಅಪರಿಚಿತ ವಾಹನ ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ.

ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಪ್ಲೈಓವರ್ ನಲ್ಲಿ (ಜೂ.25) ಭಾನುವಾರ ಮುಂಜಾನೆ ನಡೆದಿದೆ.

Sun, 25 Jun 202304:18 AM IST

ರೈಲುಗಳ ಡಿಕ್ಕಿ; ತನಿಖೆಗೆ ಆದೇಶ

ಪಶ್ಚಿಮ ಬಂಗಾಳದಲ್ಲಿ ಭಾನುವಾರ ಬೆಳಗ್ಗೆ ಎರಡು ರೈಲುಗಳ ನಡುವೆ ಡಿಕ್ಕಿಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ಬಂಕುರ ಜಿಲ್ಲೆ ಒಂಡಾಗ್ರಾಮ್‌ ಎನ್ನುವ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗಿನ ಜಾವ 4 ಕ್ಕೆ ಈ ದುರ್ಘಟನೆ ಸಂಭವಿಸಿದೆ. 

ಒಂಡಾಗ್ರಾಮ್‌ ನಿಲ್ದಾಣದಲ್ಲಿ ರೈಲು ಮಾರ್ಗಗಳ ನಿರ್ವಹಣೆ ನಡೆಯುತ್ತಿತ್ತು. ಈ ವೇಳೆ ಇದೇ ಮಾರ್ಗದಲ್ಲಿ ಹೊರಟಿದ್ದ ಗೂಡ್ಸ್‌ ರೈಲು ನಿಲ್ದಾಣದಲ್ಲಿ ನಿಂತಿದ್ದ ನಿರ್ವಹಣಾ ರೈಲಿಗೆ ಡಿಕ್ಕಿ ಹೊಡಿದಿದೆ. ಕೆಂಪು ಸಿಗ್ನಲ್‌ ನೀಡಿದ್ದರೂ ರೈಲು ನಿಲ್ಲಿಸುವ ಬದಲು ವೇಗವಾಗಿ ಹೊರಟಿದ್ದು ದುರ್ಘಟನೆಗೆ ಕಾರಣ ಎನ್ನುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. 

ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಬಳಿಕ ನಿಖರ ಕಾರಣ ತಿಳಿಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Sun, 25 Jun 202303:39 AM IST

ರೈಲುಗಳ ಡಿಕ್ಕಿ: ರೈಲುಗಳ ಮಾರ್ಗ ಬದಲಾವಣೆ

ಪಶ್ಚಿಮ ಬಂಗಾಳದಲ್ಲಿ ಎರಡು ಸರಕು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಬಂಕುರ ಜಿಲ್ಲೆ ಒಂಡಾ ಎನ್ನುವ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಇದರಿಂದ ಖರಗ್‌ಪುರ ಬಂಕುರ ಅದ್ರಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ.

ಇದರಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಹದಿನಾಲ್ಕು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ ಎಂದು ಅದ್ರಾ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ

Sun, 25 Jun 202303:36 AM IST

ಸರಕು ರೈಲುಗಳ ಡಿಕ್ಕಿ

 

ಪಶ್ಚಿಮ ಬಂಗಾಳದಲ್ಲಿ ಎರಡು ಸರಕು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಬಂಕುರ ಜಿಲ್ಲೆ ಒಂಡಾ ಎನ್ನುವ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಇದರಿಂದ ಖರಗ್‌ಪುರ ಬಂಕುರ ಅದ್ರಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Sun, 25 Jun 202302:55 AM IST

ಮಣಿಪುರ ಉಗ್ರರನ್ನು ಬಿಡುಗಡೆ ಮಾಡಿದ ಸೇನೆ

 

ಮಣಿಪುರದಲ್ಲಿ ಮಹಿಳೆಯರ ಪ್ರತಿಭಟನೆಗೆ ಮಣಿದು ಹನ್ನೆರಡು ಉಗ್ರರನ್ನು ಸೇನೆ ಭಾನುವಾರ ಬಿಡುಗಡೆ ಮಾಡಿದೆ.

ಇಂಫಾಲ ಪೂರ್ವ ಜಿಲ್ಲೆಯ ಇಥಾಮ್‌ ಎನ್ನುವ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಶನಿವಾರ ಸೇನಾ ಪಡೆ ಸುತ್ತುವರೆದು ಆಕ್ರೋಶ ಹೊರ ಹಾಕಿದ್ದರು. ಅನಾಹುತ ತಪ್ಪಿಸಲು ಉಗ್ರರನ್ನು ಬಿಡುಗಡೆ ಮಾಡಿರುವುದಾಗಿ ಸೇನೆ ತಿಳಿಸಿದೆ.

Sun, 25 Jun 202302:10 AM IST

ಕಜಕಸ್ತಾನದಲ್ಲಿ ಭೂಕಂಪ

 

ಕಜಕಸ್ತಾನ ದೇಶದಲ್ಲಿ ಭಾನುವಾರ ಬೆಳಗ್ಗೆ ಭೂಕಂಪವಾಗಿದೆ. ಕಜಕಸ್ತಾನ ದೇಶದ ಪೂರ್ವ ಭಾಗದ ಹಲವು ಕಡೆ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ 4.5 ಮ್ಯಾಗ್ನಿಟೂಡ್‌ನಲ್ಲಿ ಇತ್ತು. ಯಾವುದೇ ಜೀವ ಹಾನಿಯಾಗಿರುವ ವರದಿಯಾಗಿಲ್ಲ. ಆ ಕುರಿತು ಹೆಚ್ಚಿನ ವಿವರಕ್ಕಾಗಿ ಕಾಯಲಾಗುತ್ತಿದೆ ಎಂದು ಯುನೈಟೆಡ್‌ ಸ್ಟೇಟ್ಸ್‌ ಜಿಯಾಲಾಜಿಕಲ್‌ ಸರ್ವೇ ವರದಿ ಮಾಡಿದೆ.

Sun, 25 Jun 202301:43 AM IST

ಮುಂಬೈನಲ್ಲಿ ಮುಂದುವರೆದ ಮಳೆ

 

ಈಗಾಗಲೇ ಮಹಾರಾಷ್ಟ್ರವನ್ನು ಪ್ರವೇಶಿಸಿರುವ ಮುಂಗಾರು ಮಳೆ ಮುಂಬೈನಲ್ಲಿ ಜೋರಾಗಿಯೇ ಸುರಿಯುತ್ತಿದೆ. ಶನಿವಾರದಿಂದಲೇ ಮುಂಬೈ ಮಳೆ ಶುರುವಾಗಿದ್ದು, ಭಾನುವಾರವೂ ಮಳೆಯಾಗುತ್ತಿದೆ. ಕೆಲವು ಕಡೆ ಮಳೆಯಿಂದ ಅಂಡರ್‌ಪಾಸ್‌ಗಳು ತುಂಬಿಕೊಂಡು ಜನ ತೊಂಧರೆ ಅನುಭವಿಸುವಂತಾಗಿದೆ. ಮುಂದಿನ ಮೂರ್ನಾಲ್ಕು ದಿನ ಮುಂಬೈನಲ್ಲಿ ಮಳೆಯಾಗುವ ಕುರಿತು ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Sun, 25 Jun 202301:14 AM IST

ಈಜಿಪ್ತ್‌ ನಲ್ಲಿ ತಜ್ಞರ ಜತೆ ಮೋದಿ ಮಾತುಕತೆ

ಈಜಿಪ್ತ್‌ ನಲ್ಲಿ ತಜ್ಞರ ಜತೆ ಮೋದಿ ಮಾತುಕತೆ

ಎರಡು ದಿನಗಳ ಈಜಿಪ್ತ್‌ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಈಜಿಪ್ತ್‌ನ ತಜ್ಞರ ಜತೆಗೆ ಮಾತುಕತೆ ನಡೆಸಿದರು. ಕಂಪೆನಿಗಳ ಮುಖ್ಯಸ್ಥರೊಂದಿಗೂ ಚರ್ಚಿಸಿದರು. ಖ್ಯಾತ ಲೇಖಕ ಹಾಗೂ ಪೆಟ್ರೋಲಿಯಂ ತಜ್ಞ ಹೆಗ್ಗಿ ಟರೇಕ್‌ ಅವರೊಂದಿಗೆ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಯಿತು. ಉದ್ಯಮಿ ಹಸ್ಸನ್‌ ಆಲಂ ಅವರೊಂದಿಗೆ ಆರ್ಥಿಕ ಚಟುವಟಿಕೆಗಳು, ಹೂಡಿಕೆಗಳ ಕುರಿತು ಮಾತುಕತೆ ಕೈಗೊಂಡರು.

Sun, 25 Jun 202312:59 AM IST

ಬೆಲರೂಸ್‌ನತ್ತ ಯೆವೆಗೆನಿ ಪಡೆ

 

ರಷ್ಯಾಕ್ಕೆ ತಲೆನೋವು ತಂದಿದ್ದ ಮೆರ್ಸಿನೆರಿ ಕಮಾಂಡರ್‌ ಯೆವೆಗೆನಿ ಪ್ರಿಗೋಝಿನ್‌ ತಮ್ಮ ಖಾಸಗಿ ಪಡೆ ಮಾಸ್ಕೋ ಕಡೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ರಷ್ಯಾ ವಶಪಡಿಸಿಕೊಳ್ಳುವುದಾಗಿ ಹೊರಟಿದ್ದ ಖಾಸಗಿ ಪಡೆಯ ಮುಖ್ಯಸ್ಥರೊಂದಿಗೆ ರಷ್ಯಾ ಮಾತುಕತೆ ನಡೆಸಿದ್ದರಿಂದ ಪಡೆ ಬೆಲೂರಸ್‌ಗೆ ತೆರಳಲಿದೆ. ಅನಗತ್ಯ ರಕ್ತಪಾತ, ದೇಶದೊಳಗೆ ಕಚ್ಚಾಟ ಆಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ, ಬೆಲರೂಸ್‌ ಅಧ್ಯಕ್ಷರೂ ಇದಕ್ಕೆ ಒಪ್ಪಿದ್ದಾರೆ. ಯೆವೆಗೆನಿ ಪ್ರಿಗೋಝಿನ್‌ ವಿರುದ್ದ ಕ್ರಿಮಿನಲ್‌ ಮೊಕದ್ದಮೆಯನ್ನೂ ವಾಪಾಸ್‌ ಪಡೆಯಲಿದ್ದಾರೆ ಎಂದು ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಿಳಿಸಿದ್ದಾರೆ.

Sun, 25 Jun 202312:44 AM IST

ಬಿಸಿಲಗಾಳಿಗೆ ಬಿಹಾರದಲ್ಲಿ ಶಾಲೆ ರಜೆ

 

ಉತ್ತರಭಾರತದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಬಿಸಿಗಾಳಿಯ ವಾತಾವರಣ ಮುಂದುವರೆದಿದೆ. ಉತ್ತರ ಪ್ರದೇಶದಲ್ಲಿ ಹಲವರು ಮೃತಪಟ್ಟು, ಅಸ್ವಸ್ಥರಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದಲ್ಲೂ ಬಿಸಿಗಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಪಾಟ್ನಾ ಜಿಲ್ಲೆಯಲ್ಲಿ ಈಗಾಗಲೇ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜೂನ್‌ 28ರವರೆಗೆ ವಿಸ್ತರಿಸಲಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ.

Sun, 25 Jun 202312:27 AM IST

ಈಜಿಪ್ತ್‌ ಯೋಗಪಟುಗಳನ್ನು ಭೇಟಿಯಾದ ಮೋದಿ

ಈಜಿಪ್ತ್‌ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಮುಖ ಯೋಗ ತರಬೇತುದಾರರಾದ ರೀಮ್‌ ಜಬಕ್‌ ಹಾಗೂ ನಾದಾ ಅಡೆಲ್‌ ಭೇಟಿ ಮಾಡಿದರು. ಈಜಿಪ್ತ್‌ ನಲ್ಲಿ ಯೋಗದ ಬಳಕೆ, ಜನರ ಆಸಕ್ತಿ ಕುರಿತು ಅವರೊಂದಿಗೆ ಮೋದಿ ಚರ್ಚಿಸಿದರು. ಯೋಗ ಕುರಿತು ಇಬ್ಬರಿಗೂ ಇರುವ ಬದ್ದತೆಯನ್ನು ಮೋದಿ ಪ್ರಶಂಸಿಸಿದರು. ಭಾರತಕ್ಕೆ ಆಗಮಿಸುವಂತೆ ಇಬ್ಬರಿಗೂ ಆಹ್ವಾನ ನೀಡಿದರು. ಇದನ್ನು

ಹಂಚಿಕೊಳ್ಳಲು ಲೇಖನಗಳು

  • twitter

ವಿಭಾಗ