ಕನ್ನಡ ಸುದ್ದಿ  /  Sports  /  Dcw Vs Ggw Gujarat Giants Won By 11 Runs Against Delhi Capitals

DCW vs GGW: ಡೆಲ್ಲಿ ವಿರುದ್ಧ ಗೆದ್ದ ಗುಜರಾತ್​​​.. ಆರ್​​ಸಿಬಿ ಪ್ಲೇಆಫ್​ ಕನಸಿಗೆ ಅಡ್ಡಿ!

DCW vs GGW: ಮಹಿಳಾ ಪ್ರೀಮಿಯರ್​ ಲೀಗ್​​​​​ನಲ್ಲಿ ಗುಜರಾತ್ ಜೈಂಟ್ಸ್​​ ರೋಚಕ ಗೆಲುವು ಸಾಧಿಸಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​ ಎದುರು 11 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಟೂರ್ನಿಯಲ್ಲಿ 2ನೇ ಗೆಲುವನ್ನು ತಮ್ಮದಾಗಿಸಿಕೊಂಡಿದೆ.

ಗುಜರಾತ್ ಜೈಂಟ್ಸ್​ಗೆ ಗೆಲುವು
ಗುಜರಾತ್ ಜೈಂಟ್ಸ್​ಗೆ ಗೆಲುವು (WPL/Twitter)

ಮಹಿಳಾ ಪ್ರೀಮಿಯರ್​ ಲೀಗ್​​​​​ನಲ್ಲಿ ಗುಜರಾತ್ ಜೈಂಟ್ಸ್​​ ರೋಚಕ ಗೆಲುವು ಸಾಧಿಸಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​ ಎದುರು 11 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಟೂರ್ನಿಯಲ್ಲಿ 2ನೇ ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿದ್ದ ಗುಜರಾತ್​, ಭರ್ಜರಿ ಕಂಬ್ಯಾಕ್​ ಮಾಡಿದೆ. ಇದರೊಂದಿಗೆ ಪ್ಲೇ ಆಫ್​ ಕನಸನ್ನೂ ಮತ್ತಷ್ಟು ಜೀವಂತ ಮಾಡಿಕೊಂಡಿದೆ. ಜೊತೆಗೆ ಆರ್​​ಸಿಬಿ ಪ್ಲೇ ಆಫ್​ ಕನಸಿಗೆ ಅಡ್ಡಿಯಾಗಿದೆ.

ಗುಜರಾತ್​ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​​​, ಆರಂಭಿಕ ಆಘಾತಕ್ಕೆ ಒಳಗಾಯಿತು. ಸ್ಫೋಟಕದ ಆಟದ ಮೂಲಕ ಗಮನ ಸೆಳೆಸಿದ್ದ ಶಫಾಲಿ ವರ್ಮಾ ಅಬ್ಬರ ಗುಜರಾತ್​ ಮುಂದೆ ನಡೆಯಲಿಲ್ಲ. ಕೇವಲ 8 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ನಾಯಕಿ ಮೆಗ್​ ಲ್ಯಾನಿಂಗ್​​ (18) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಗುಜರಾತ್​ ಬೌಲರ್​​ಗಳ ಕಂಬ್ಯಾಕ್​ ಬೌಲಿಂಗ್​ನಿಂದ ತತ್ತರಿಸಿದ ಡೆಲ್ಲಿ, ಬ್ಯಾಕ್​ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು.

ಕ್ರೀಸ್​ನಲ್ಲಿ ಕೆಲ ಹೊತ್ತು ಅಬ್ಬರಿಸಿದ ಅಲೀಸ್​ ಕ್ಯಾಪ್ಸಿ 22 ರನ್​​​​ ಗಳಿಸಿದ್ದಾಗ ರನೌಟ್​ ಆದರೆ, ಜೆಮಿಮಾ ರೋಡ್ರಿಗಸ್​ 1 ರನ್​ ಗಳಿಸಿ ಕಿಮ್​ ಗಾರ್ತ್​ಗೆ ವಿಕೆಟ್​ ಒಪ್ಪಿಸಿದರು. ಜೆಸ್​ ಜೊನಾಸನ್​, ತಾನಿಯಾ ಭಾಟಿಯಾ ರಾಧಾ ಯಾದವ್​ ಯಾರೂ ಕೂಡ ಎದುರಾಳಿಗೆ ತಿರುಗೇಟು ನೀಡುವ ಯತ್ನಕ್ಕೆ ಮುಂದಾಗಲಿಲ್ಲ. ಮರಿಜಾನ್​ ಕಪ್​ ಮಾತ್ರ 36 ರನ್​​ ಗಳಿಸಿ ತಂಡದ ಗೆಲುವಿಗೆ ಆಸೆ ಹೆಚ್ಚಿಸಿದರು.

ಆದರೆ, ಕೊನೆಯ ಹಂತದಲ್ಲಿ ಕಪ್​ ಔಟಾದರು. ಬಳಿಕ ಸಂಘಟಿತ ಪ್ರದರ್ಶನ ನೀಡಿದ ಅರುಂಧತಿ ರೆಡ್ಡಿ, ಪಂದ್ಯದ ಚಿತ್ರಣವನ್ನೇ ಬದಲಿಸಿದರು. 9 ವಿಕೆಟ್​ಗೆ 35 ರನ್​​ಗಳ ಜೊತೆಯಾಟವಾಡಿ ಡೆಲ್ಲಿ ಕ್ಯಾಂಪ್​​ನಲ್ಲಿ ಗೆಲುವಿನ ಆಸೆ ಮತ್ತಷ್ಟು ಹೆಚ್ಚಿಸಿದರು. ಗುಜರಾತ್​ ಬೌಲರ್​​​ಗಳ ಎದುರು ಹೋರಾಟ ನಡೆಸಿದ ಅರುಂಧತಿ 25 ರನ್ ಗಳಿಸಿ ವಿಕೆಟ್​​​ ಒಪ್ಪಿಸಿದರು. ಆಗ ಡೆಲ್ಲಿ ಗೆಲುವಿಗೆ 12 ಎಸೆತಗಳಲ್ಲಿ 13 ರನ್​​ಗಳ ಅಗತ್ಯ ಇತ್ತು. ಜೊತೆಗೆ ಸೋಲು ಕೂಡ ಖಚಿತವಾಯಿತು. ಕೊನೆಯಲ್ಲಿ ಪೂನಮ್​ ಯಾದವ್​ ಔಟಾದರು.

ಅಂತಿಮವಾಗಿ 18.4 ಓವರ್​​​​ಗಳಲ್ಲಿ 136 ರನ್​​ಗಳಿಗೆ ಡೆಲ್ಲಿ ಆಲೌಟ್​ ಆಯಿತು. ಆ ಮೂಲಕ 2ನೇ ಸೋಲು ಕಂಡಿದೆ. ಕಿಮ್​ ಗಾರ್ತ್​​​, ತನುಜ ಕನ್ವರ್​, ಆ್ಯಶ್ಲೆ ಗಾರ್ಡ್ನರ್​​​​​ ತಲಾ 2 ವಿಕೆಟ್​ ಪಡೆದು ಮಿಂಚಿದರೆ, ಹರ್ಲೀನ್​ ಡಿಯೋಲ್​, ಸ್ನೇಹ್​ ರಾಣಾ ತಲಾ 1 ವಿಕೆಟ್​ ಕಬಳಿಸಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ಜೈಂಟ್ಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಸೋಫಿಯಾ ಡಂಕ್ಲಿ ಕೇವಲ 4 ರನ್​ಗಳಿಗೆ ಆಟ ಮುಗಿಸಿ ನಿರಾಸೆ ಮೂಡಿಸಿದರು. ಮಾರಿಜನ್​ ಕಪ್​ ಬೌಲಿಂಗ್​​ನಲ್ಲಿ ಡಂಕ್ಲಿ ಡಗೌಟ್​ಗೆ ಮರಳಿದರು. ಬಳಿಕ ಲಾರಾ ವೊಲ್ವಾರ್ಡ್ಟ್ ಮತ್ತು ಹರ್ಲೀನ್​​ ಡಿಯೋಲ್​ ತಂಡವನ್ನು ಆಧರಿಸಿದರು. ಈ ಜೋಡಿ, 2ನೇ ವಿಕೆಟ್​ಗೆ 49 ರನ್​ಗಳ ಜೊತೆಯಾಟ ಆಡಿ ಗಮನ ಸೆಳೆಯಿತು.

ಅರ್ಧಶತಕ ಸಿಡಿಸಿದ ಲಾರಾ ವೊಲ್ವಾರ್ಡ್ಟ್

ಲಾರಾ ವೊಲ್ವಾರ್ಡ್ಟ್​​​​​​​ಗೆ ಸಖತ್​ ಸಾಥ್​ ನೀಡಿದ ಹರ್ಲೀನ್​ ಡಿಯೋಲ್​, 33 ರನ್​ಗಳ ಕಾಣಿಕೆ ನೀಡಿದರು. 33 ಎಸೆತಗಳಿಗೆ 31 ರನ್​ಗಳಿಸಲಷ್ಟೇ ಶಕ್ತರಾದರು. ಇನ್ನು ಟೂರ್ನಿಯಲ್ಲಿ ಆಡಿದ ತನ್ನ 2ನೇ ಪಂದ್ಯದಲ್ಲೇ ಲಾರಾ ವೊಲ್ವಾರ್ಡ್ಟ್ ಅರ್ಧಶತಕ ಸಿಡಿಸಿ ಮಿಂಚಿದರು. ಆ ಮೂಲಕ ಆರಂಭಿಕ ಆಘಾತದಿಂದ ಪಾರು ಮಾಡಿದರು. 45 ಎಸೆತಗಳಲ್ಲಿ 57 ರನ್​ ಗಳಿಸಿ ಮಿಂಚಿದರು.

ಕೊನೆಗೂ ಫಾರ್ಮ್​ಗೆ ಬಂದ ಗಾರ್ಡ್ನರ್​​​

ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆ್ಯಶ್ಲೆ ಗಾರ್ಡ್ನರ್​, ಕೊನೆಗೂ ಫಾರ್ಮ್​ಗೆ ಬಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಮಾರಕ ಬೌಲಿಂಗ್​ ನಡುವೆಯೂ ಅಬ್ಬರಿಸಿದ ಆ್ಯಶ್ಲೆ ಗಾರ್ಡ್ನರ್​​​​​​ ಅರ್ಧಶತಕ ಸಿಡಿಸಿ ಮಿಂಚಿದರು. ಭರ್ಜರಿ 9 ಬೌಂಡರಿಗಳನ್ನು ಸಿಡಿಸಿ ಅಜೇಯ 51 ರನ್​ ಚಚ್ಚಿದರು. ಆ ಮೂಲಕ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ತಂಡದ ಮೊತ್ತವನ್ನು 140ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಡೆಲ್ಲಿ ಕ್ಯಾಪಿಟಲ್ಸ್​ ಪರ ಜೆಸ್​ ಜೊನಾಸನ್​ 2 ವಿಕೆಟ್​, ಮಾರಿಜನ್ ಕಪ್, ಅರುಂಧತಿ ರೆಡ್ಡಿ ತಲಾ 2 ವಿಕೆಟ್​ ಪಡೆದರು.

ಆರ್​ಸಿಬಿ ಪ್ಲೇ ಆಫ್​ ಹಾದಿ

ಗುಜರಾತ್​ ಗೆಲುವು ಆರ್​ಸಿಬಿ ಪ್ಲೇ ಆಫ್​ ಕನಸಿಗೆ ಅಡ್ಡಿಯಾಗಿದೆ. ಆರ್​ಸಿಬಿ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್​ಗೇರುವ ಅವಕಾಶ ಇದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಗುಜರಾತ್​ ಮತ್ತು ಯುಪಿ ವಾರಿಯರ್ಸ್​ ತಂಡಗಳು ಎಲ್ಲಾ ಪಂದ್ಯಗಳಲ್ಲೂ ಸೋಲು ಕಾಣಬೇಕು. ಇದು ಸಾಧ್ಯವಾಗದಿದ್ದರೆ, ಆರ್​ಸಿಬಿ ಟೂರ್ನಿಯಿಂದ ಹೊರ ಬೀಳಲಿದೆ.

ಡೆಲ್ಲಿ ಕ್ಯಾಪಿಟಲ್ಸ್​​ ಪ್ಲೇಯಿಂಗ್​ ಇಲೆವೆನ್​

ಮೆಗ್ ಲ್ಯಾನಿಂಗ್ (ನಾಯಕಿ) , ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್​ ಕೀಪರ್​), ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್

ಗುಜರಾತ್​ ಜೈಂಟ್ಸ್​​ ಪ್ಲೇಯಿಂಗ್​ ಇಲೆವೆನ್​

ಸೋಫಿಯಾ ಡಂಕ್ಲಿ, ಲಾರಾ ವೋಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್ ಕೀಪರ್​​), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ