ಕನ್ನಡ ಸುದ್ದಿ  /  Latest News  /  Iaf Receives Highest Ever Recruitment Registrations Due To Agnipath

IAF Recruitment: ವಾಯುಸೇನೆಯ 3 ಸಾವಿರ ಅಗ್ನಿಪಥ್ ಹುದ್ದೆಗಳಿಗೆ 7.5 ಲಕ್ಷ ಅರ್ಜಿಗಳು

ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದ್ದ ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಭಾರತೀಯ ವಾಯುಸೇನೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. 3 ಸಾವಿರ ಹುದ್ದೆಗಳ ಭರ್ತಿಗೆ ಬರೋಬ್ಬರಿ 7.5 ಲಕ್ಷ ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್‌ನ ಹಿಂಡನ್ ವಾಯುಪಡೆಯ ನಿಲ್ದಾಣದಲ್ಲಿ ಐಎಎಫ್ ಸಿಬ್ಬಂದಿ (ಫೋಟೋ - ಸಂಗ್ರಹ)
ದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್‌ನ ಹಿಂಡನ್ ವಾಯುಪಡೆಯ ನಿಲ್ದಾಣದಲ್ಲಿ ಐಎಎಫ್ ಸಿಬ್ಬಂದಿ (ಫೋಟೋ - ಸಂಗ್ರಹ)

ನವದೆಹಲಿ: ಭಾರತೀಯ ಸೇನೆಯಲ್ಲಿ ಅಲ್ಪಾವಧಿಯ ಸೇವೆಗಾಗಿ ಕೇಂದ್ರ ಸರ್ಕಾರದ ಹೊಸ ಅಗ್ನಿಪಥ್ ಯೋಜನೆಯಡಿ ಐಎಎಫ್(ಭಾರತೀಯ ವಾಯುಪಡೆಗ) ನೇಮಕಾತಿಗಾಗಿ ಸುಮಾರು 7,50,000 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರ ಭರತ್ ಭೂಷಣ್ ಬಾಬು, ವಾಯು ಸೇನೆಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಯ ನೋಂದಣಿಗೆ 7,49,899 ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ.

ವಾಯುಪಡೆಯಲ್ಲಿ ಯಾವುದೇ ನೇಮಕಾತಿಗೆ ಇಷ್ಟೊಂದು ಅರ್ಜಿಗಳ ಬಂದಿರಲಿಲ್ಲ. ಇದೇ ಅತಿ ಹೆಚ್ಚು ಎಂದು ಐಎಎಫ್ ಹೇಳಿದೆ.

ಕೋವಿಡ್ ನಿಂದಾಗಿ ವಾಯುಪಡೆ ಮತ್ತು ನೌಕಾಪಡೆಯು ಸೀಮಿತ ಪ್ರಮಾಣದಲ್ಲಿ ನಡೆಸುವ ನೇಮಕಾತಿಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಸೇನಾ ನೇಮಕಾತಿಗಳನ್ನು ಮತ್ತೆ ಆರಂಭಿಸಬೇಕೆಂದು ಹರಿಯಾಣದ ಆಕಾಂಕ್ಷಿಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಏಪ್ರಿಲ್‌ನಲ್ಲಿ ವರದಿ ಮಾಡಿತ್ತು.

ಅಗ್ನಿಪಥ್ ಅಡಿಯಲ್ಲಿ ಐಎಎಫ್ ಪ್ರವೇಶಕ್ಕಾಗಿ ಆನ್‌ಲೈನ್ ನೋಂದಣಿಗಳು ಜೂನ್ 24 ರಿಂದ ಆರಂಭಿಸಿ ಮಂಗಳವಾರ ಮುಚ್ಚಲ್ಪಟ್ಟಿದೆ. ನೋಂದಾಯಿಸಿದ ಅಭ್ಯರ್ಥಿಗಳು ವಾಯುಪಡೆಯಲ್ಲಿ 3,000 ಉದ್ಯೋಗಗಳಿಗೆ ಸ್ಪರ್ಧಿಸಲಿದ್ದಾರೆ.

ವಾಯುಸೇನೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವರ್ಷ 7,49,899 ಅರ್ಜಿಗಳನ್ನು ಸ್ವೀಕರಿಸಿದೆ, ಇದು ಹಿಂದಿನ ಯಾವುದೇ ನೇಮಕಾತಿಗಿಂತ ಅತ್ಯಧಿಕವಾಗಿದೆ. 6,31,528 ಅರ್ಜಿಗಳು ಸಲ್ಲಿಕೆಯಾಗಿರುವುದು ಹಿಂದಿನ ಗರಿಷ್ಠವಾಗಿತ್ತು. ಹೊಸ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ.

ಆಕಾಂಕ್ಷಿಗಳು ಈಗ ಜುಲೈ 24 ಮತ್ತು ಜುಲೈ 31 ರ ನಡುವೆ ಆನ್‌ಲೈನ್ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರು ಆಗಸ್ಟ್ ಮತ್ತು ನವೆಂಬರ್ ನಡುವೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಡಿಸೆಂಬರ್ ಆರಂಭದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ ಮತ್ತು ಡಿಸೆಂಬರ್ 30 ರಿಂದ ಆಯ್ಕೆಯಾದವರ ತರಬೇತಿ ಪ್ರಾರಂಭವಾಗಲಿದೆ.

ಅಗ್ನಿಪಥ್ ಯೋಜನೆಯಡಿ, ಸರ್ಕಾರವು ಈ ವರ್ಷ 46,000 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತ್ತು. ಇದರಲ್ಲಿ 40,000 ಭೂಸೇನೆ, ಹಾಗೂ ನೌಕಾಪಡೆ, ವಾಯುಸೇನೆ ತಲಾ 3,000 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ.

ಜುಲೈ 1 ರಂದು ಸೇನೆ ಮತ್ತು ನೌಕಾಪಡೆಯ ಆಕಾಂಕ್ಷಿಗಳಿಗೆ ಆನ್‌ಲೈನ್ ನೋಂದಣಿ ಆರಂಭಿಸಿತ್ತು. ಸೇನೆ ಆಗಸ್ಟ್‌ನಲ್ಲಿ ನೇಮಕಾತಿ ರ್ಯಾಲಿಗಳನ್ನು ಪ್ರಾರಂಭಿಸುತ್ತದೆ, ನಂತರ ಸೈನ್ಯದ ನೇಮಕಾತಿ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 16 ಮತ್ತು ನವೆಂಬರ್ 13 ರ ನಡುವೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಡಿಸೆಂಬರ್‌ನಲ್ಲಿ ತರಬೇತಿ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಸೇನೆಗೆ ಮೊದಲ ಹಂತದ ಅಗ್ನಿವೀರರು 2023ರ ಜುಲೈನಲ್ಲಿ ತಮ್ಮ ಘಟಕಗಳನ್ನು ಸೇರಿಕೊಳ್ಳಲಿದ್ದಾರೆ. ನೌಕಾಪಡೆಯು ಇದೇ ರೀತಿಯ ಸಮಯವನ್ನು ಅನುಸರಿಸುತ್ತದೆ.

ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಐಎಎಫ್ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆಯು ಯೋಜನೆಯನ್ನು ವಿರೋಧಿಸುವವರ ಆತಂಕಗಳು ಆಧಾರರಹಿತವಾಗಿವೆ ಎಂದು ಸಾಬೀತುಪಡಿಸುತ್ತದೆ ಎಂದು ಏರ್ ಪವರ್ ಸ್ಟಡೀಸ್ ಕೇಂದ್ರದ ಪ್ರಧಾನ ನಿರ್ದೇಶಕ ಏರ್ ಮಾರ್ಷಲ್ ಅನಿಲ್ ಚೋಪ್ರಾ (ನಿವೃತ್ತ) ಹೇಳಿದ್ದಾರೆ. ಹೊಸ ಯೋಜನೆಯ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಜನರು ಇನ್ನೂ ಉತ್ತಮ ಅವಕಾಶವನ್ನು ಹೊಂದಿದ್ದಾರೆಂದು ಭಾವಿಸುತ್ತಾರೆ. ಸ್ಪರ್ಧಿಸಲು ಮತ್ತು ಶಾಶ್ವತ ವಾಯು ಯೋಧರಾಗಲು ತುಂಬಾ ಶ್ರಮಿಸುತ್ತಾರೆ ಎಂದು ತಿಳಿಸಿದ್ದಾರೆ.

ಕಳೆದ ಜೂನ್ 14 ರಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿತ್ತು. ಆದರೆ ಇದಕ್ಕೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಬಿಹಾರ ಸೇರಿದಂತೆ ಹಲವೆಡೆ ಸೇನೆ ಸೇರಲು ಆಸಕ್ತಿ ಹೊಂದಿದ್ದ ಯುವಕರು ಪ್ರತಿಭಟನೆಯನ್ನು ಮಾಡಿದ್ದರು. ಆದರೆ ಯೋಜನೆ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು.