kalaburgi News: ಟ್ರಾಕ್ಟರ್ ಹತ್ತಿಸಿ ಪೊಲೀಸ್ ಹತ್ಯೆ: ಮರಳು ದಂಧೆ ತಡೆಯಲು ಹೋದಾಗ ಕಲಬುರಗಿ ಜಿಲ್ಲೆಯಲ್ಲಿ ಕೃತ್ಯ
ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಮೈಸೂರ್ ಚೌಹಾಣ್ ಅವರು ತಪಾಸಣೆಗೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಬೈಕ್ ನಲ್ಲಿ ಹೋಗುತ್ತಿದ್ದ ಮೈಸೂರ್ ಚೌಹಾಣ್ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ ಮೈಸೂರ್ ಚೌಹಾಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಲಬುರಗಿ: ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಪೊಲೀಸ್ ಮುಖ್ಯಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಹೆಡ್ ಕಾನ್ಸ್ಟೇಬಲ್ ಮೈಸೂರ್ ಚೌಹಾಣ್ (51) ಹತ್ಯೆ ಮಾಡಲಾಗಿದ್ದು, ಪರಿಸ್ಥಿತಿ ಉದ್ಘಿಗ್ನವಾಗಿದೆ. ಘಟನೆ ಹಿನ್ನೆಲೆಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇದಕ್ಕೆ ಸಹಕರಿಸಿದ ಇನ್ನೂ ಕೆಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಮೈಸೂರ್ ಚೌಹಾಣ್ ಅವರು ತಪಾಸಣೆಗೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಬೈಕ್ ನಲ್ಲಿ ಹೋಗುತ್ತಿದ್ದ ಮೈಸೂರ್ ಚೌಹಾಣ್ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ ಮೈಸೂರ್ ಚೌಹಾಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೈಸೂರ್ ಚೌಹಾಣ್ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸ್ವಗ್ರಾಮ ನೆಲೋಗಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.
ಈ ಹಿಂದೆ ಕರ್ನಾಟಕದಲ್ಲಿಯೇ ಮರಳುಗಾರಿಕೆ ತಡೆಯಲು ಹೋದ ಅಧಿಕಾರಿಯೊಬ್ಬರ ಮೇಲೆ ವಾಹನ ನುಗ್ಗಿಸುವ ಪ್ರಯತ್ನ ನಡೆದಿತ್ತು.
ರಾಜ್ಯದ ನದಿ ಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ನಿರಂತರ ಪ್ರಯತ್ನ ನಡೆದಿದ್ದರೂ ಅಕ್ರಮಕ್ಕೆ ಬ್ರೇಕ್ ಬಿದ್ದಿಲ್ಲ. ಇದಕ್ಕಾಗಿ ಮರಳು ಗಣಿ ನೀತಿಯನ್ನು ರೂಪಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಗಣಿ, ಕಂದಾಯ, ಪೊಲೀಸ್ ಇಲಾಖೆಗಳು ಜಂಟಿಯಾಗಿ ದಾಳಿ ನಡೆಸುತ್ತಲೇ ಇದ್ದು, ಆಗಾಗ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.
ಸಚಿವ ಖರ್ಗೆ ಸಾಂತ್ವನ
ಅಕ್ರಮ ಮರುಳು ಸಾಗಾಣಿಕೆ ಟ್ರಾಕ್ಟರ್ ಹರಿದು ಪೊಲೀಸ್ ಪೇದೆ ಸಾವು ಘಟನೆ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಅಕ್ರಮ ಮರುಳು ಸಾಗಾಣಿಕೆ ತಡೆಗೆ ಕೂಡಲೇ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದ್ದಾರೆ.
ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದ ಟ್ರಾಕ್ಟರ್ ಹರಿದು ಜೇವರ್ಗಿ ತಾಲೂಕು ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಲೂರು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು ಇದು ಅತ್ಯಂತ ನೋವಿನ ಸಂಗತಿಯಾಗಿದೆ ಖೇದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಯೂರ ತಂದೆ ಭೀಮು ಚವ್ಹಾಣ (50) ಮೃತಪಟ್ಟಿದ್ದು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದು ತನಿಖೆಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ಸಾಂತ್ವನ ಹೇಳಿರುವ ಸಚಿವರು ಸರ್ಕಾರವತಿಯಿಂದ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
"ಜಿಲ್ಲೆಯಲ್ಲಿ ಅಕ್ರಮ ಮರುಳು ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದ್ದರೂ ಕೂಡ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಬಂಧಿಸಿದ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿ ಈ ಕೂಡಲೇ ಅಕ್ರಮ ಮರುಳು ಸಾಕಾಣಿಕೆ ವಿರುದ್ದ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಣ್ಣೀರಿಟ್ಟ ಎಸ್ಪಿ ಪಂತ್
ಕಾನ್ಸಟೇಬಲ್ ಹತ್ಯೆ ಪ್ರಕರಣದಿಂದ ಭಾವುಕರಾದ ಎಸ್ ಪಿ ಇಶಾಪಂತ್ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮುನ್ನ ಭಾವಕರಾಗಿ ಕಣ್ಣಿರು ಹಾಕಿದ ಘಟನೆ ನಡೆಯಿತು.
ಗುರುವಾರ ರಾತ್ರಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ನಮ್ಮ ಹೆಡ್ ಕಾನ್ಸಟೇಬಲ್ ಮೈಸೂರ್ ಚಹ್ವಾಣ್ ರನ್ನ ಕೊಲೆ ಮಾಡಲಾಗಿದೆ. ಮರಳು ತುಂಬಿಕೊಂಡು ಹೋಗ್ತಿದ್ದ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾರೆ ಎಂದು ಎಸ್ಪಿ ವಿವರಿಸಿದರು.
ನೆಲೋಗಿ ಪೊಲೀಸ್ ಠಾಣೆಯ ನಾರಾಯಣಪುರದ ಬಳಿ ಒಟ್ಟು 9000 ಮೆಟ್ರಿಕ್ ಟನ್ ಮರಳು ಸ್ಟಾಕ್ ಮಾಡಿದ್ದಾರೆ. ಇದರಲ್ಲಿ 3000 ಮೇಟ್ರಿಕ್ ಟನ್ ಪಿಡಬ್ಲುಡಿ ಯವರು ಸೀಜ್ ಮಾಡಿದ್ದಾರೆ. ಇನ್ನೂ 6000 ಮೇಟ್ರಿಕ್ ಟನ್ ಲೀಸ್ ತಗೆದು ಕೊಂಡವರ ಹೆಸರಿನಲ್ಲಿ ಅಲ್ಲೆ ಇದೆ. ರಾತ್ರಿ ನಮ್ಮ ಕಾನ್ಸಟೇಬಲ್ ಪ್ರಮೋದ್ ಮತ್ತು ಹೆಡ್ ಕಾನ್ಸಟೇಬಲ್ ಮೈಸೂರ್ ಚಹ್ವಾಣ್ ರನ್ನ ಅಕ್ರಮ ಮರಳುಗಾರಿಕೆ ತಡೆಯಲು ಚೆಕ್ ಪೊಸ್ಟ್ ಬಳಿ ನೇಮಕ ಮಾಡಲಾಗಿತ್ತು. ಆಗ ಒಂದು ಟ್ರ್ಯಾಕ್ಟರ್ ನಲ್ಲಿ ಕದ್ದು ಮುಚ್ಚಿ ಅಕ್ರಮ ಮರಳು ಸಾಗಾಣೆ ಮಾಡ್ತಿದ್ದರು. ಆಗ ನಮ್ಮ ಸಿಬ್ಬಂದಿ ಟ್ರ್ಯಾಕ್ಟರ್ ನಿಲ್ಲಿಸಲು ಹೇಳಿದ್ರು. ಆಗ ಟ್ರ್ಯಾಕ್ಟರ್ ನಿಲ್ಲಿಸಿಲ್ಲ ನಮ್ಮ ಕಾನ್ಸಟೇಬಲ್ ಚೇಜ್ ಮಾಡಿದ್ದಾರೆ. ಆಗ ನಮ್ಮ ಕಾನ್ಸಟೇಬಲ್ ಹತ್ಯೆ ಮಾಡಿದ್ದಾರೆ. ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣ ಅರೆಸ್ಟ್ ಆಗಿದ್ದಾನೆ , ಸಾಯಿಬಣ್ಣಾ ತೆಲೆ ಮರೆಸಿಕೊಂಡಿದ್ದಾನೆ ಎಂದು ಎಸ್ಪಿ ವಿವರಣೆ ನೀಡಿದರು.
( ವರದಿ: ಎಸ್‌ಬಿ ರೆಡ್ಡಿ ಕಲಬುರಗಿ)

ವಿಭಾಗ