2023 Recap: ಮನೆಯಿಂದ ಹೊರಗೆ ಹೋದ ಶಿವಪ್ಪ ಮತ್ತೆ ಜೀವಂತವಾಗಿ ಬರಲೇ ಇಲ್ಲ
ಅರ್ಧ ಗಂಟೆಯಲ್ಲಿ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಯ್ತು. ಡಿಸೆಂಬರ್‌ನಲ್ಲಿ ಹೊಸಕೋಟೆ ಶಿವಪ್ಪ ಸಾವು 2023 ರಲ್ಲಿ ಮರೆಯಲಾರದ ಘಟನೆ ಅಷ್ಟೇ ಅಲ್ಲ, ಜೀವನವಿಡೀ ನನ್ನನ್ನು ಬಾಧಿಸುವ ನೋವು.
ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಮನುಷ್ಯನ ಜೀವ ಮಳೆ ನೀರಿನಲ್ಲಿ ತೇಲಿ ಬಂದು ಕ್ಷಣ ಮಾತ್ರದಲ್ಲಿ ಒಡೆದು ಹೋಗುವ ನೀರಿನ ಗುಳ್ಳೆಯಂತೆ ಎಂಬುದು ಮತ್ತೊಮ್ಮ ಸಾಬೀತಾಗಿದೆ. 2023ರಲ್ಲಿ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಿದ ನನಗೆ ಹೊಸಕೋಟೆಯ ಶಿವಲಿಂಗಪ್ಪ (ಶಿವಪ್ಪ) ಅವರ ಸಾವು ನಿಜಕ್ಕೂ ಆಘಾತವನ್ನುಂಟು ಮಾಡಿತ್ತಲ್ಲದೆ, ತುಂಬಾ ದುಃಖದ ಸುದ್ದಿ. ಕಾಯಿಲೆ ಬಂದು ಇಲ್ಲವೇ ವಯೋಸಹಜವಾಗಿ ಮೃತಪಟ್ಟರೇ ದುಃಖದ ಬಾಧೆ ಬಹುದಿನ ಕಾಡುವುದಿಲ್ಲ. ಆದರೆ ಹಠಾತ್ ಸಾವುಗಳು ತುಂಬುವ ಖಾಲಿತನ ನಿವಾರಿಸಿಕೊಳ್ಳುವುದು ಕಷ್ಟ. ಗಟ್ಟಿಮುಟ್ಟಾಗಿದ್ದ ವ್ಯಕ್ತಿ ಮನೆಯಿಂದ ಹೊರಗಡೆ ಹೋದ ಅರ್ಧ ಗಂಟೆಯಲ್ಲಿ ‘ಡೆಡ್ ಬಾಡಿ’ಯಾಗಿ ಆ್ಯಂಬುಲೆನ್ಸ್‌ನಲ್ಲಿ ಮನೆಗೆ ತಗೊಂಡು ಬಂದರೆ ಹೇಗಿರುತ್ತೆ?
ನವೆಂಬರ್ 20 ರಂದು ಹೊಸಕೋಟೆಯ ಕಲ್ಯಾಣ ಮಂಟಪವೊಂದರಲ್ಲಿ ಪುತ್ರಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದ ಶಿವಪ್ಪನವರ ಕುಟುಂಬದವರು ಖುಷಿಯಲ್ಲೇ ಇದ್ದರು. ಆದರೆ ಈ ಖುಷಿ ಕ್ಷಣಿಕ ಅನ್ನೋದನ್ನ ಮಾತ್ರ ಯಾರೂ ಊಹಿಸಿರಲಿಲ್ಲ. ಡಿಸೆಂಬರ್ 3ರ ಶನಿವಾರ ಅನಿರೀಕ್ಷಿದ ಘಟನೆಯೊಂದು ನಡೆದು ಹೋಯ್ತು. ಅಂದು ರಜೆ ಇದ್ದ ಕಾರಣ ಮನೆಯಲ್ಲೇ ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಇವರಿಗೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ.
ಈ ವಿಚಾರವನ್ನ ಮನೆಯಲ್ಲಿದ್ದ ಯಾರಿಗೂ ಹೇಳದೆ ತನ್ನ ಬೈಕ್‌ನಲ್ಲಿ ಫ್ಯಾಮಿಲಿ ವೈದ್ಯರನ್ನು ಸಂಪರ್ಕಿಸಲು ಹೊರಟಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ತುಂಬಾ ರಷ್ ಇದ್ದ ಕಾರಣ ಕ್ಯೂನಲ್ಲೇ ಕೆಲ ನಿಮಿಷಗಳಕಾಲ ನಿಂತಿದ್ದಾರೆ. ಆದರೆ ಎದೆ ನೋವು ಜಾಸ್ತಿಯಾಗುತ್ತಿದ್ದಂತೆ ತನ್ನ ಸಹೋದರನಿಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ. ತಮ್ಮ ಗಿರೀಶ್ ಸ್ಥಳಕ್ಕೆ ಬರುಷ್ಟರಲ್ಲಿ ನೋವು ತಡೆದುಕೊಂಡೇ ನಿಂತಿದ್ದ ಇವರು ಸರತಿ ಸಾಲಿನಲ್ಲೇ ಕುಸಿದು ಬಿದ್ದಿದ್ದಾರೆ.
ಇದನ್ನ ತಿಳಿದ ವೈದ್ಯರು ಕೂಡಲೇ ಬಂದು ತಪಾಸಣೆ ಮಾಡಿದ್ದಾರೆ. ಚಿಕಿತ್ಸಾ ಕೊಠಡಿಗೆ ತೆಗೆದುಕೊಂಡು ಹೋಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ನಂತರ ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗೆ ಕೆಲವೇ ಕೆಲವು ನಿಮಿಷಗಳ ಅಂತರದಲ್ಲಿ ಆಸ್ಪತ್ರೆಗಳ ಸುತ್ತಾಟವಾಗಿದೆ. ಆದರೆ ಈ ವೇಳೆಗಾಗಲೇ ಶಿವಪ್ಪ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆ ಪುತ್ರಿ, ಅಳಿಯ ಸೇರಿದಂತೆ ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದ ಶಿವಪ್ಪ ಅವರು ಸಂಜೆ 4.30ರ ವೇಳೆಗೆ ಶವವಾಗಿದ್ದರು.
ಸರಳ, ಸಜ್ಜನ ವ್ಯಕ್ತಿಯಾಗಿದ್ದ ನಮ್ಮ ಮಾವ (ನನ್ನ ಹೆಂಡತಿಯ ದೊಡ್ಡಮ್ಮನ ಗಂಡ) ಶಿವಪ್ಪ ಅವರು ಉನ್ನತ ಹುದ್ದೆಯಲ್ಲಿದ್ದರೂ ಯಾರನ್ನಾದರೂ ಕೂಡ ತುಂಬಾ ಗೌರವದಿಂದ ಮಾತನಾಡಿಸುತ್ತಿದ್ದರು. ಈ ವ್ಯಕ್ತಿಯನ್ನು ನೋಡಿದಾಗಲೆಲ್ಲಾ ಅನಿಸುತ್ತಿದ್ದದ್ದು ಒಂದೇ, ಇವರಲ್ಲಿನ ಇಂಥ ಗುಣಗಳನ್ನು ನಾನು ಕೂಡ ಅಳವಡಿಸಿಕೊಳ್ಳಬೇಕು ಅಂತ.
ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC) ಉನ್ನತ ಹುದ್ದೆಯಲ್ಲಿದ್ದ ಶಿವಪ್ಪ 2024ರ ಜುಲೈನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ ಇದಕ್ಕೂ ಮೊದಲೇ ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.
ಶಿಸ್ತುಬದ್ದ ಜೀವನಕ್ಕೆ ಶಿವಲಿಂಗಪ್ಪ ನಿದರ್ಶನ
2023ರಲ್ಲಿ ಮರೆಯಲಾರದ ಘಟನೆಗೆ ಇವರನ್ನೇ ಯಾಕೆ ತಗೊಂಡೆ ಅನ್ನೋದಕ್ಕೆ ಇದೊಂದು ಪ್ರಮುಖ ಕಾರಣ . ಇವರ ಜೀವನ ಶೈಲಿ ಹಲವರಿಗೆ ಮಾದರಿ. ಪ್ರತಿದಿನ ಬೆಳಗ್ಗೆ 4.30ಕ್ಕೆ ನಿದ್ದೆಯಿಂದ ಏಳುತ್ತಿದ್ದ ಇವರು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ, ಬೆಳಗ್ಗೆ 6.30 ರೊಳಗೆ ಊಟದ ಬುತ್ತಿಯೊಂದಿಗೆ ಮನೆಯಿಂದ ಹೊರಟರೆ ಸಂಜೆ 4 ರ ನಂತರವೇ ಮನೆಗೆ ವಾಪಾಸ್ ಬರುತ್ತಿದ್ದರು. ಈ ದೈನಂದಿನ ಚಟುವಟಿಕೆಗಳು ಒಮ್ಮೆಯೂ ನಿಂತಿರಲಿಲ್ಲ. ಬೀಡಿ, ಸಿಗರೇಟ್, ಗುಟ್ಕಾ, ಮದ್ಯ ಸೇರಿದಂತೆ ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದ ಶಿವಪ್ಪನವರು ಊಟದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರು. ಆದರೆ ಇಷ್ಟು ಕ್ರಮಬದ್ಧ ಜೀವನ ನಡೆಸುತ್ತಿದ್ದವರು ಹೃದಯಾಘಾತದಿಂದ ಮೃತಪಟ್ಟಿದ್ದು ನನಗೆ ಅಚ್ಚರಿ ಎನಿಸಿತು. ಇದು 2023 ರಲ್ಲಿ ಮರೆಯಲಾರದ ಘಟನೆ ಅಷ್ಟೇ ಅಲ್ಲ, ಜೀವನವಿಡೀ ನನ್ನನ್ನು ಬಾಧಿಸುವ ನೋವು.