Aadhaar Update: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಉಚಿತವಾಗಿ ಬದಲಾಯಿಸುವುದು ಹೇಗೆ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Aadhaar Update: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಉಚಿತವಾಗಿ ಬದಲಾಯಿಸುವುದು ಹೇಗೆ? ಇಲ್ಲಿದೆ ವಿವರ

Aadhaar Update: ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಉಚಿತವಾಗಿ ಬದಲಾಯಿಸುವುದು ಹೇಗೆ? ಇಲ್ಲಿದೆ ವಿವರ

Update Your Aadhaar: ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ವಿಳಾಸವನ್ನು ಉಚಿತವಾಗಿ ಮತ್ತು ಸುಲಭದಲ್ಲಿ ಬದಲಾಯಿಸಬಹುದು. ಅದು ಕೂಡ ಆನ್‌ಲೈನ್ ಮೂಲಕವೇ ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಿಲ್ಲ. ನಿಮ್ಮ ಫೋನ್ ಮೂಲಕವೇ ವಿಳಾಸ ಬದಲಾಯಿಸಿ, ಅಪ್‌ಡೇಟ್ ಮಾಡಿ, ಹೊಸ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

 ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಉಚಿತವಾಗಿ ಬದಲಾಯಿಸುವುದು ಹೇಗೆ?
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಉಚಿತವಾಗಿ ಬದಲಾಯಿಸುವುದು ಹೇಗೆ? (HT Kannada)

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್ ಇಂದು ನಮಗೆ ಬಹಳಷ್ಟು ಸಂದರ್ಭದಲ್ಲಿ ಬಳಕೆಯಾಗುತ್ತದೆ. ಆಧಾರ್ ಕಾರ್ಡ್ ಬಳಸಿಕೊಂಡು, ಹಲವು ಯೋಜನೆಗಳ ಪ್ರಯೋಜನ ಪಡೆಯಬಹುದು. ಉದ್ಯೋಗಕ್ಕೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಿಡಿಗೆ ಆಧಾರ್ ಬಳಸಬಹುದು. ಅಲ್ಲದೆ, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಉದ್ಯಮ, ವಹಿವಾಟಿಗೆ, ಆರೋಗ್ಯ ಸೇವೆ ಪಡೆಯಲು ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಜೂನ್ 14, 2025ರವರೆಗೆ ಗಡುವನ್ನು ಭಾರತೀಯ ಆಧಾರ್ ಪ್ರಾಧಿಕಾರ ವಿಸ್ತರಿಸಿದೆ. ಅದಾದ ನಂತರ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ವಿವಿಧ ಕಾರಣಕ್ಕೆ ನಾವು ವಾಸದ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಶಿಕ್ಷಣ, ಉದ್ಯೋಗ, ಮದುವೆ ಹೀಗೆ ಹಲವು ಕಾರಣಗಳು ಇರಬಹುದು. ಅಂತಹ ಸಂದರ್ಭದಲ್ಲಿ ವಿಳಾಸ ಬದಲಾವಣೆಯನ್ನು ಆಧಾರ್‌ ಕಾರ್ಡ್‌ನಲ್ಲಿ ಮಾಡಬೇಕು. ತಾತ್ಕಾಲಿಕ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ. ನಿಮ್ಮ ವಿಳಾಸ ಬದಲಾವಣೆ ಶಾಶ್ವತವಾಗಿದ್ದರೆ, ಆಗ ಆಧಾರ್ ವಿಳಾಸ ಅಪ್‌ಡೇಟ್ ಮಾಡಬೇಕು.

ಆನ್‌ಲೈನ್ ಮೂಲಕ ಆಧಾರ್ ವಿವರ ಅಪ್‌ಡೇಟ್ ಮಾಡುವುದು ಹೇಗೆ?

  • ಆಧಾರ್ ವಿಳಾಸವನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಈ ವಿಧಾನ ಅನುಸರಿಸಿ.
  • ಮೊದಲಿಗೆ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್‌ನಲ್ಲಿ https://ssup.uidai.gov.in/ssup/ ವಿಳಾಸವನ್ನು ತೆರೆಯಿರಿ.
  • ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ, ಒಟಿಪಿ ಮೂಲಕ ಲಾಗಿನ್ ಆಗಿ.
  • ನಂತರ ಅಲ್ಲಿರುವ ಅಪ್‌ಡೇಟ್ ಅಡ್ರೆಸ್ ಇನ್ ಆಧಾರ್ ಆಯ್ಕೆ ಮಾಡಿ.
  • ಅಲ್ಲಿ ನೀಡಿರುವ ವಿವರ ಪ್ರಕಾರ, ಕಾಲಂನಲ್ಲಿ ನಿಮ್ಮ ವಿಳಾಸವನ್ನು ತುಂಬಿರಿ.
  • ನಿಮ್ಮ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು, ಸರ್ಕಾರ ನಿಗದಿಪಡಿಸಿದ ಅಧಿಕೃತ ದಾಖಲೆ ಅಪ್‌ಲೋಡ್ ಮಾಡಿ. ಅಂದರೆ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್, ಅಥವಾ ಯಾವುದಾದರೂ ಅಧಿಕೃತ ಬಿಲ್ ಇರಲಿ.
  • ನಿಮ್ಮ ಕೋರಿಕೆಯನ್ನು ಸಲ್ಲಿಸುವ ಮೊದಲು, ಒಮ್ಮೆ ನೀವು ಸಲ್ಲಿಸಿರುವ ವಿವರಗಳನ್ನು ಪರಿಶೀಲಿಸಿ.
  • ಅವುಗಳನ್ನು ಸಲ್ಲಿಸಿದ ನಂತರ, ನಿಮಗೆ ಸರ್ವಿಸ್ ರಿಕ್ವೆಸ್ಟ್ ನಂಬರ್ ಬರುತ್ತದೆ, ಅದರ ಮೂಲಕ ನಿಮ್ಮ ವಿಳಾಸ ಅಪ್‌ಡೇಟ್‌ನ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು.

ಆಧಾರ್ ಕಾರ್ಡ್ ವಿಳಾಸ ಆಫ್‌ಲೈನ್‌ನಲ್ಲಿ ಬದಲಾಯಿಸುವುದು ಹೇಗೆ?

  • ಆನ್‌ಲೈನ್ ಮೂಲಕ ಬೇಡವೆಂದಾದರೆ, ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರದ ಮೂಲಕ ವಿಳಾಸ ಅಪ್‌ಡೇಟ್ ಮಾಡಲು ಕೂಡ ಅವಕಾಶವಿದೆ.
  • ಯುಐಡಿಎಐ ವೆಬ್‌ಸೈಟ್ ಮೂಲಕ ನಿಮ್ಮ ಸಮೀಪದ ಆಧಾರ್ ನೋಂದಣಿ ಕೇಂದ್ರ ಹುಡುಕಿ, ಅಲ್ಲಿಗೆ ತೆರಳಿ.
  • ಆಧಾರ್ ಅಪ್‌ಡೇಟ್ ಫಾರಂ ಅನ್ನು ಅಲ್ಲಿಂದ ಪಡೆದುಕೊಳ್ಳಿ, ಭರ್ತಿ ಮಾಡಿ. ಜತೆಗೆ ಅಗತ್ಯ ದಾಖಲೆಯ ಪ್ರತಿಯನ್ನು ಕೂಡ ಸಲ್ಲಿಸಿ. 
  • ಬಯೋಮೆಟ್ರಿಕ್ ವಿವರ ನೀಡುವ ಮೂಲಕ ನಿಮ್ಮ ವಿವರ ದೃಢೀಕರಿಸಿ. ಆಧಾರ್ ಕೇಂದ್ರದಲ್ಲಾದರೆ, 50 ರೂ. ಶುಲ್ಕ ವಿಧಿಸಲಾಗುತ್ತದೆ. 
  • ನಂತರ ರಶೀದಿ ಪಡೆದಿಕೊಳ್ಳಿ, ಅದರಲ್ಲಿ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಇರುತ್ತದೆ. ಅದನ್ನು ಗಮನಿಸಿ, ನಿಮ್ಮ ಅಧಾರ್ ವಿವರ ಅಪ್‌ಡೇಟ್ ಸ್ಥಿತಿಗತಿ ವಿವರ ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ 30 ದಿನಗಳಲ್ಲಿ ಆಧಾರ್ ಕಾರ್ಡ್ ವಿವರ ಅಪ್‌ಡೇಟ್ ಆಗುತ್ತದೆ.

ಆಧಾರ್ ಕಾರ್ಡ್ ವಿವರ ಅಪ್‌ಡೇಟ್ ಮಾಡಲು ಅಗತ್ಯವಿರುವ ದಾಖಲೆಗಳು

ಯುಐಡಿಎಐ ಹಲವು ದಾಖಲೆಗಳನ್ನು ಆಧಾರ್ ಕಾರ್ಡ್ ವಿವರ ಅಪ್‌ಡೇಟ್ ಮಾಡಲು ಮಾನ್ಯ ಮಾಡಿದೆ. ಅದರ ಪೈಕಿ, ಪಾಸ್‌ಪೋರ್ಟ್, ಬ್ಯಾಂಕ್ ಸ್ಟೇಟ್‌ಮೆಂಟ್ ಅಥವಾ ಪಾಸ್‌ಬುಕ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ವಿದ್ಯುತ್-ನೀರು ಅಥವಾ ಫೋನ್ ಬಿಲ್, ಆಸ್ತಿ ತೆರಿಗೆ ರಶೀದಿ, ಪಡಿತರ ಚೀಟಿ, ಪಿಂಚಣಿ ಕಾರ್ಡ್ ಹೀಗೆ ಹಲವು ಆಯ್ಕೆಗಳಿವೆ.

ಇದನ್ನೂ ಓದಿ: ಹಣ ಉಳಿತಾಯ ಮಾಡಬಯಸುವ ಮಹಿಳೆಯರಿಗೆ ಅಂಚೆ ಕಚೇರಿಯ ಯೋಜನೆಗಳು

ಆಧಾರ್ ಕಾರ್ಡ್ ವಿಳಾಸ ಅಪ್‌ಡೇಟ್ ಆಗಿದ್ದರೆ ದೃಢಪಡಿಸುವುದು ಹೇಗೆ?

  • ನಿಮ್ಮ ಆಧಾರ್ ವಿವರ ಭರ್ತಿ ಮಾಡಲು ಅರ್ಜಿ ಸಲ್ಲಿಸಿದ ಬಳಿಕ, ಆನ್‌ಲೈನ್ ಅಥವಾ ಆಧಾರ್ ಕೇಂದ್ರದ ಮೂಲಕ ಅದರ ಸ್ಥಿತಿಗತಿ ತಿಳಿದುಕೊಳ್ಳಬಹುದು. ಅದಕ್ಕಾಗಿ ನಿಮ್ಮಲ್ಲಿ ಸರ್ವಿಸ್ ರಿಕ್ವೆಸ್ಟ್ ನಂಬರ್ ಅಥವಾ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಇರಬೇಕು.
  • ಯುಐಡಿಎಐ ಅಪ್‌ಡೇಟ್ ವಿವರ ತಿಳಿಯಲು ಆಧಾರ್ ವೆಬ್‌ಸೈಟ್‌ಗೆ ಭೇಟಿ ನೀಡಿ-
  • ನಿಮ್ಮ ಆಧಾರ್ ನಂಬರ್ ಮತ್ತು ಸರ್ವಿಸ್ ರಿಕ್ವೆಸ್ಟ್ ನಂಬರ್ ಅಥವಾ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಅಪ್‌ಡೇಟ್ ಮಾಡಿ.
  • ಒಟಿಪಿ ಎಂಟರ್‌ ಮಾಡಿ, ದೃಢೀಕರಿಸಿ.
  • ಆಗ ನಿಮ್ಮ ಆಧಾರ್ ಅಡ್ರೆಸ್ ಅಪ್‌ಡೇಟ್ ವಿವರ ಕಾಣಿಸಿಕೊಳ್ಳುತ್ತದೆ. ಅಲ್ಲಿ, ನಿಮ್ಮ ಕೋರಿಕೆ ಇನ್ನೂ ಪೂರ್ತಿಯಾಗಿಲ್ಲ, ಅಂದರೆ ಪರಿಶೀಲನೆಗೆ ಬಾಕಿ ಇದೆ, ತಿರಸ್ಕರಿಸಲಾಗಿದೆ ಅಥವಾ ಪೂರ್ಣಗೊಂಡಿದೆ ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ: ಡಿಜಿಟಲ್ ಜಾಗೃತಿ: ಆನ್‌ಲೈನ್ ವಂಚಕರನ್ನು ಬೇಸ್ತು ಬೀಳಿಸಿದ ಪ್ರಸಂಗ

ಆಧಾರ್ ಅಪ್‌ಡೇಟ್ ಬಳಿಕ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

  • ನಿಮ್ಮ ಆಧಾರ್ ಕಾರ್ಡ್ ವಿವರ ಅಪ್‌ಡೇಟ್ ಆಗಿದ್ದರೆ, ಅದನ್ನು ಸುಲಭದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. UIDAI e-Aadhaar ಪೋರ್ಟಲ್‌ಗೆ ಹೋಗಿ, ಅಲ್ಲಿ ಡೌನ್‌ಲೋಡ್ ಆಧಾರ್ ಪೇಜ್ ಆಯ್ಕೆ ಮಾಡಿ.
  • ಅಲ್ಲಿ, ಆಧಾರ್ ನಂಬರ್ ಅಥವಾ ಎನ್‌ರೋಲ್‌ಮೆಂಟ್ ಐಡಿ ತುಂಬಿರಿ.
  • ಬಳಿಕ ನಿಮ್ಮ ರಿಜಿಸ್ಟರ್‌ ಆಗಿರುವ ಮೊಬೈಲ್ ನಂಬರ್‌ಗೆ ಬಂದಿರುವ ಒಟಿಪಿ ಎಂಟರ್ ಮಾಡಿ.
  • ಈಗ ಅಪ್‌ಡೇಟ್ ಆಗಿರುವ ಆಧಾರ್ ಕಾರ್ಡ್ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್‌ಗೆ ಲಭ್ಯವಾಗುತ್ತದೆ. ಅದಕ್ಕೆ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು ಕ್ಯಾಪಿಟಲ್ ಲೆಟರ್‌ನಲ್ಲಿ ಮತ್ತು ನಿಮ್ಮ ಹುಟ್ಟಿದ ವರ್ಷ ಪಾಸ್‌ವರ್ಡ್ ಆಗಿರುತ್ತದೆ ಎನ್ನುವುದು ಗಮನದಲ್ಲಿರಲಿ.

Whats_app_banner