Pilot Requirements: ಪೈಲಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ; ಹೀಗಿದ್ದರಷ್ಟೇ ಪೈಲಟ್ ಆಗಲು ಸಾಧ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Pilot Requirements: ಪೈಲಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ; ಹೀಗಿದ್ದರಷ್ಟೇ ಪೈಲಟ್ ಆಗಲು ಸಾಧ್ಯ

Pilot Requirements: ಪೈಲಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ; ಹೀಗಿದ್ದರಷ್ಟೇ ಪೈಲಟ್ ಆಗಲು ಸಾಧ್ಯ

ಜೀವನದಲ್ಲಿ ಒಮ್ಮೆಯಾದ್ರೂ ವಿಮಾನದಲ್ಲಿ ಹೋಗಬೇಕು ಎನ್ನುವುದು ಕೆಲವರ ಕನಸಾದರೆ, ಪೈಲಟ್ ಆಗಬೇಕು ಅನ್ನೋದು ಇನ್ನೂ ಕೆಲವರ ಕನಸು. ಪೈಲಟ್ ಆಗೋಕೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ. ಪೈಲಟ್‌ ಆಗುವ ಆಸೆ ಇರುವವರಿಗೆ ಈ ಗೈಡ್‌ಲೈನ್ಸ್‌.

ಪೈಲಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ; ಹೀಗಿದ್ದರಷ್ಟೇ ಪೈಲಟ್ ಆಗಲು ಸಾಧ್ಯ (ಸಾಂಕೇತಿಕ ಚಿತ್ರ)
ಪೈಲಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ; ಹೀಗಿದ್ದರಷ್ಟೇ ಪೈಲಟ್ ಆಗಲು ಸಾಧ್ಯ (ಸಾಂಕೇತಿಕ ಚಿತ್ರ) (PC: Canva)

ಬೆಂಗಳೂರಿನ ಯಲಹಂಕದಲ್ಲಿ ಪ್ರತಿವರ್ಷ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭವಾಗಿದೆ. ಬಾನಂಗಳದಲ್ಲಿ ರೆಕ್ಕೆ ಬಿಚ್ಚಿ ಹಾರುವ ವಿಮಾನಗಳ ಹಾರಾಟದ ಸೊಬಗನ್ನು ನೋಡುವುದೇ ಅಂದ. ಈ ಸಂದರ್ಭದಲ್ಲಿ ವಿಮಾನಯಾನ, ಪೈಲಟ್‌, ಯುದ್ಧ ವಿಮಾನಗಳ ಬಗ್ಗೆ ಜನರಲ್ಲಿ ಆಸಕ್ತಿ ಮೂಡುವುದು ಸಹಜ.

ಅದರಲ್ಲೂ ಆಕಾಶದೆತ್ತರಲ್ಲಿ ರೆಕ್ಕೆ ಬಿಚ್ಚಿ ಹಾರುವ ವಿಮಾನಗಳನ್ನು ಕಂಡಾಗ ತಾನು ಪೈಲಟ್ ಆಗಬೇಕು ಎನ್ನುವ ಕನಸು ಕಾಣುವವರೇ ಅನೇಕರು. ನೀವು ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಪೈಲಟ್ ಆಗಬೇಕು ಎನ್ನುವ ಕನಸು ಕಾಣುತ್ತಿದ್ದರೆ ಫಿಸಿಕಲ್ ಫಿಟ್‌ನೆಸ್ ಬಗ್ಗೆ ತಿಳಿದುಕೊಂಡಿರಬೇಕು. ಯಾಕೆಂದರೆ ಪೈಲೆಟ್ ಆಗುವವರಿಗೆ ಫಿಸಿಕಲ್ ಫಿಟ್‌ನೆಸ್ ಬಹಳ ಮುಖ್ಯ. 

ಖಾಸಗಿ ಪೈಲಟ್, ವಾಣಿಜ್ಯ (ಕರ್ಮಷಿಯಲ್‌) ಪೈಲಟ್ ಅಥವಾ ವಿಮಾನಯಾನ ಪೈಲಟ್ ಎಂಬುದನ್ನು ಆಧರಿಸಿ ಎಫ್‌ಎಎ (Federal Aviation Administration (ಪೈಲಟ್‌ಗಳಿಗೆ ಅಗತ್ಯವಿರುವ ಮೂರು ವರ್ಗದ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡುತ್ತದೆ. ಎಫ್‌ಎಎ ವೈದ್ಯಕೀಯ ಪರೀಕ್ಷೆಯ ವಿವರಗಳನ್ನು ಮತ್ತು ಪ್ರತಿಯೊಂದು ರೀತಿಯ ಪೈಲಟ್‌ಗೆ ಅಗತ್ಯತೆಗಳು ಏನೆಂದು ತಿಳಿಯೋಣ.

ಖಾಸಗಿ ಪೈಲೆಟ್‌ಗೆ ಏನೆಲ್ಲಾ ಇರಬೇಕು

ಯಾವುದೇ ಪೈಲೆಟ್ ಆಗಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಉತ್ತಮ ಪೈಲೆಟ್ ತರಬೇತಿ ಹಾಗೂ ಅಗತ್ಯವಿರುವ ಗಂಟೆಗಳ ಹಾರಾಟದ ಅವಧಿಯು ಇವರಿಗೆ ಮುಖ್ಯವಾಗುತ್ತದೆ. ಖಾಸಗಿ ವಿಮಾನಗಳ ಪೈಲೆಟ್ ಆಗಲು ಕ್ಲಾಸ್ 3 ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ಒಳಗೊಂಡಿರುತ್ತವೆ.

ಕರ್ಮಷಿಯಲ್ ಪೈಲೆಟ್‌ಗೆ ಅಗತ್ಯಗಳು

ಕರ್ಮಷಿಯಲ್ ಪೈಲೆಟ್ ದೊಡ್ಡ ವಿಮಾನವನ್ನು ಮುನ್ನಡೆಸುವವನಾಗಿರುತ್ತಾನೆ. ವಾಣಿಜ್ಯ ಪೈಲಟ್ ಆಗಲು ನೀವು ಎಫ್‌ಎಎಗೆ ಫಲಿತಾಂಶಗಳನ್ನು ವರದಿ ಮಾಡುವ ವಾಯುಯಾನ ವೈದ್ಯಕೀಯ ಪರೀಕ್ಷಕರಿಂದ ವರ್ಗ 2 ವೈದ್ಯಕೀಯ ಪ್ರಮಾಣಪತ್ರವನ್ನು ಪಡೆಯಬೇಕು. ಇವರಿಗೆ ದೈಹಿಕ ಪರೀಕ್ಷೆ ಸ್ವಲ್ಪ ಕಠಿಣವಾಗಿರುತ್ತದೆ. ಇವರು ಸರಕುಗಳನ್ನು ಸಾಗಿಸುವ ವಿಮಾನಗಳನ್ನು ಚಾಲಾಯಿಸುತ್ತಾರೆ.

ಏರ್‌ಲೈನ್ಸ್‌ ಪೈಲೆಟ್‌

ಎಫ್‌ಎಎನಿಂದ ಎಟಿಪಿ ಅಥವಾ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಪರವಾನಗಿಯನ್ನು ಪಡೆಯಲು, ನಿಮಗೆ ಕ್ಲಾಸ್ 1 ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದೆ. ಪೈಲಟ್ ಆಗಲು ದೈಹಿಕ ಅವಶ್ಯಕತೆಗಳು ಇದರಲ್ಲಿ ಹೆಚ್ಚು ನಿಖರವಾಗಿವೆ. ಏರ್‌ಲೈನ್ ಪೈಲಟ್‌ಗಳು ನಿಗದಿತ ಸರಕು ಅಥವಾ ಪ್ರಯಾಣಿಕ ವಿಮಾನಗಳನ್ನು ಹಾರಿಸುತ್ತಾರೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ರಕ್ಷಿಸಲು ಅತ್ಯುನ್ನತ ಭೌತಿಕ ಗುಣಮಟ್ಟವನ್ನು ಹೊಂದಿರಬೇಕಾಗುತ್ತದೆ.

  • ಕಣ್ಣುಗಳು 20/20 ದೂರದ ದೃಷ್ಟಿ ಸಾಮರ್ಥ್ಯವನ್ನು ಹೊಂದಿರಬೇಕು.
  • 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು 20/40 ಮಧ್ಯಂತರ ಶ್ರೇಣಿಯ ದೃಷ್ಟಿ ಸಾಮರ್ಥ್ಯ ಹೊಂದಿರಬೇಕು.
  • ಆರು ಅಡಿ ದೂರದಲ್ಲಿನ ಸಂಭಾಷಣೆಯ ಧ್ವನಿಯನ್ನು ಕೇಳುವ ಸಾಮರ್ಥ್ಯ ಎರಡೂ ಕಿವಿಗಳಿರಬೇಕು.
  • ರಕ್ತದೊತ್ತಡ 155/95 ಕ್ಕಿಂತ ಅಧಿಕವಾಗಿರಬಾರದು.
  • ತಲೆತಿರುಗುವಿಕೆ, ಮಾತನಾಡುವ ಸಮಸ್ಯೆಗಳು ಅಥವಾ ಸಮತೋಲನದ ಸಮಸ್ಯೆಗಳಂತಹ ಯಾವುದೇ ವೈದ್ಯಕೀಯ ತೊಂದರೆಗಳನ್ನು ಹೊಂದಿರಬಾರದು.

ಪೈಲಟ್ ಆಗುವುದರಿಂದ ಅನರ್ಹಗೊಳಿಸುವ ವೈದ್ಯಕೀಯ ಪರಿಸ್ಥಿತಿಗಳು

ಈ ಕೆಳಗಿನ ಸಮಸ್ಯೆಗಳನ್ನು ಹೊಂದಿರುವವರಿಗೆ ಪೈಲೆಟ್ ಆಗುವ ಅರ್ಹತೆ ನಿರಾಕರಣೆಯಾಗುವ ಸಾಧ್ಯತೆ ಇದೆ.

  • ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವಿರುವ ಮಧುಮೇಹ
  • ಎಪಿಲೆಪ್ಸಿ ಅಥವಾ ನಡುಕದ ಸಮಸ್ಯೆ ಹೊಂದಿರುವುದು
  • ಪರಿಧಮನಿಯ ಹೃದಯ ಕಾಯಿಲೆ, ಹೃದಯಾಘಾತದ ಇತಿಹಾಸ, ಹೃದಯ ಬದಲಿ, ಹೃದಯ ಕವಾಟ ಬದಲಾವಣೆ, ಅಥವಾ ಪೇಸ್‌ಮೇಕರ್ ಅಗತ್ಯ ಸಮಸ್ಯೆ ಇರುವುದು
  • ಸೈಕೋಸಿಸ್, ಬೈಪೋಲಾರ್ ಡಿಸಾರ್ಡರ್ ಸೇರಿದಂತೆ ಯಾವುದೇ ಗಂಭೀರ ಮಾನಸಿಕ ಆರೋಗ್ಯ ತೊಂದರೆ ಹೊಂದಿರುವುದು
  • ನರವೈಜ್ಞಾನಿಕ ಸಮಸ್ಯೆಗಳು.

ಈ ಯಾವುದೇ ಸಮಸ್ಯೆಗಳಿದ್ದರೆ ಎಫ್‌ಎಎ ಅಧಿಕಾರಿಗಳು ನಿಮಗೆ ಸರ್ಟಿಫಿಕೇಟ್ ನೀಡುವುದಿಲ್ಲ. ಇದರಿಂದ ನೀವು ಪೈಲೆಟ್ ಆಗುವ ಆಸೆಗೆ ಬ್ರೇಕ್ ಬೀಳಬಹುದು. ಯಾವುದೇ ವಿಮಾನಕ್ಕೆ ಪೈಲೆಟ್ ಆಗುವುದಿದ್ದರೂ ನಿರ್ದಿಷ್ಟ ಎತ್ತರ, ತೂಕ ಇರಬೇಕು ಎನ್ನುವ ನಿಯಮಗಳಿಲ್ಲ. ಆದರೆ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು. ಅದಕ್ಕಿಂತ ಹೆಚ್ಚಿಗೆ ಇರುವಂತಿಲ್ಲ, ಇದರೊಂದಿಗೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner