ಹಸಿರುಕ್ರಾಂತಿ ಎಂಬುದು ಅತಿದೊಡ್ಡ ವಂಚನೆ, ಕೃಷಿರಂಗ ಬಿಕ್ಕಟ್ಟಿಗೆ ಕಾರಣವಾದ ಅಧಿಕ ಇಳುವರಿ; ಬೇಳೂರು ಸುದರ್ಶನ್ ಬರಹ
Agriculture News: ಕೃಷಿಯ ಸಹಜ ಗುಣಗಳನ್ನೇ ಅಲಕ್ಷಿಸಿ, ಹೆಚ್ಚು ಕೀಟನಾಶಕ ಬಳಸಿ ಹೆಚ್ಚು ಇಳುವರಿ ಪಡೆಯುವುದರ ದೂರಗಾಮಿ ಅಪಾಯಗಳ ಬಗ್ಗೆ ಅರಿವು ಬೆಳೆಸಿಕೊಳ್ಳಲೇಬೇಕಾದ ತುರ್ತಿದೆ ಎಂದು ಬೇಳೂರು ಸುದರ್ಶನ್ ಅವರು ಹೇಳಿದ್ದಾರೆ.

ಇಂದಿನ ಸೋಷಿಯಲ್ ಮೀಡಿಯಾ ರೌಂಡಪ್‌ನಲ್ಲಿ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕೃಷಿ ಕ್ರಾಂತಿಗಳ ಮೇಲೆ ಬೆಳಕು ಚೆಲ್ಲುವ ಬೇಳೂರು ಸುದರ್ಶನ್ ಅವರ ಫೇಸ್‌ಬುಕ್ ಬರಹವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದೆ.
ಪಂಜಾಬನ್ನು ನಾಶ ಮಾಡಿದ ಹಸಿರುಕ್ರಾಂತಿ
ಹಸಿರು ಕ್ರಾಂತಿ ಎಂಬುದು ಕಳೆದ ಶತಮಾನದ ಅತಿದೊಡ್ಡ ಸ್ಕ್ಯಾಮ್. ಅಧಿಕ ಇಳುವರಿಯನ್ನು ಕೊಡುತ್ತಲೇ ಪಂಜಾಬನ್ನು ಸರ್ವನಾಶ ಮಾಡಿತು. ಈ ಬಗ್ಗೆ ದಶಕದ ಹಿಂದೆಯೇ ನಾನು ಸಾಕಷ್ಟು ಓದಿ ಹಲವು ಲೇಖನಗಳನ್ನು ಬರೆದಿದ್ದೇನೆ.
`ಅಧಿಕ ಇಳುವರಿ’ ಎಂಬುದೇ ಇಲ್ಲಿನ ಒಂದು ದೊಡ್ಡ ಮೂಢನಂಬಿಕೆ. ಈ ತಳಿಗಳೇ ತುಂಬಾ ಫಸಲು ಕೊಡುತ್ತವೆ ಎಂಬ ನಂಬಿಕೆಯೇ ತಪ್ಪು. ಈ ತಳಿಗಳು ಒಳ್ಳೆಯ ಫಸಲು ಕೊಡುತ್ತಿದ್ದುದು ಭಾರೀ ಪ್ರಮಾಣದ ರಸಗೊಬ್ಬರಕ್ಕೆ ಮತ್ತು ಹೆಚ್ಚು ಹರಿವ ನೀರಿಗೆ. ಆದ್ದರಿಂದ ಇವನ್ನು `ಅಧಿಕ ಸ್ಪಂದಿಸುವ ತಳಿಗಳು’ ಎಂದು ಕರೆಯುವುದೇ ಸೂಕ್ತ. ಇವುಗಳಿಗೆ ರಸಗೊಬ್ಬರ ಮತ್ತು ನೀರನ್ನು ಕೊಡದಿದ್ದರೆ ಇವು ಸ್ಥಳೀಯ ತಳಿಗಳಿಗಿಂತ ಕಳಪೆ ಫಸಲು ಕೊಡುತ್ತವೆ! ಆದ್ದರಿಂದ ಇಲ್ಲಿ ಹೊರಸುರಿಗಿಂತ (ಫಸಲು) ಒಳಸುರಿಗಳ (ರಸಗೊಬ್ಬರ, ನೀರು) ವೆಚ್ಚವೇ ಹೆಚ್ಚು.
ಇಡೀ ಜಗತ್ತಿನಲ್ಲಿ ಗೋಧಿ ಸಸ್ಯಗಳನ್ನೇ ಹೆಚ್ಚಾಗಿ ತಿನ್ನುವ ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್) ಬಗ್ಗೆ `ನಾವು ತಡ ಮಾಡಿದೆವು. ಈ ವಿದ್ಯಮಾನವು ಮನುಕುಲಕ್ಕೆ, ಸಮಾಜಕ್ಕೆ ಭಾರೀ ದುರಂತ ತಂದೊಡ್ಡಬಹುದು’ ಎಂದು ಜಗತ್ತನ್ನು ಎಚ್ಚರಿಸಿದವರು ಬೇರಾರೂ ಅಲ್ಲ, ಹಸಿರು ಕ್ರಾಂತಿಯ ಪಿತಾಮಹ ನಾರ್ಮನ್ ಬೋರ್ಲಾಗ್ ! ಅಚ್ಚರಿ ಯಾಕೆಂದರೆ, ಈ ಫಂಗಸ್ ತಿನ್ನುತ್ತಿದ್ದುದು ಈ ಬೋರ್ಲಾಗ್ ಕಂಡುಹಿಡಿದ / ಅವನ ಹಾದಿಯಲ್ಲೇ ರೂಪುಗೊಂಡ ಅಧಿಕ ಇಳುವರಿಯ ತಳಿಯ ಗೋಧಿ ಸಸಿಗಳನ್ನು!
ಹೆಚ್ಚು ಗೋಧಿ ಬೆಳೆಯುವುದು ಅಭಿವೃದ್ಧಿ. ಹೆಚ್ಚು ಗೋಧಿ ಬೆಳೆದ ಮೇಲೆ ಹಾಗೆ ಬೆಳೆದ ನಾಡು ಸಮೃದ್ಧಿಯಿಂದ, ಸುಖ - ಶಾಂತಿಯಿಂದ, ನೆಮ್ಮದಿಯಿಂದ ಕೂಡಿರಬೇಕಿತ್ತು; ಆಗ ಅಭ್ಯುದಯವನ್ನು ಕಾಣಬಹುದಾಗಿತ್ತು. ಆದರೆ ಪಂಜಾಬ್ ವಿಭಜಕ ಶಕ್ತಿಗಳಿಂದ ಕೂಡಿ ಹೈರಾಣಾಗಿದ್ದು, ಮಾದಕ ದ್ರವ್ಯದ ಪಿಡುಗಿನಿಂದ ಬಸವಳಿದಿದ್ದು - ಎಲ್ಲವನ್ನೂ ಮರೆಯುವ ಹಾಗಿಲ್ಲ. ಅಲ್ಲಿನ ಅತಿ ಕೀಟನಾಶಕ ಬಳಕೆಯಿಂದ ಭಟಿಂಡಾ - ಬಿಕಾನೇರ್ ರೈಲಿಗೆ ಕ್ಯಾನ್ಸರ್ ಟ್ರೈನ್ ಎಂಬ ಕುಖ್ಯಾತಿ ಬಂದಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ.
ಈಗಲೂ ಪಂಜಾಬಿನ ಸಾಲ - ಒಟ್ಟಾರೆ ಆಂತರಿಕ ಉತ್ಪನ್ನದ ಅನುಪಾತ ಶೇಕಡಾ 46.8 ರಷ್ಟಿದೆ. ಇದಕ್ಕೆ ಮುಖ್ಯ ಕಾರಣ ಪಂಜಾಬಿನ ಕೃಷಿರಂಗ ಬಿಕ್ಕಟ್ಟಿನಲ್ಲಿರೋದು ಎಂದು ವರದಿಯೊಂದು ದಾಖಲಿಸಿದೆ.
ನಾರ್ಮನ್ ಬೋರ್ಲಾಗ್ ನಡೆಸಿದ ಹಸಿರು ಕ್ರಾಂತಿಯಿಂದ ಪಂಜಾಬ್ ಬೋರಲಾಗಿದೆ.
ಕೃಷಿಕ್ರಾಂತಿಗಳ ಬಗ್ಗೆ ಕೆಲವೊಮ್ಮೆ ಅತಿರಂಜಿತವಾದ ವ್ಯಕ್ತಿತ್ವಗಳನ್ನು ನೋಡಿ ನಾವೂ ಮರುಳಾಗುವುದು ಸಹಜ. ಆದರೆ ಕೃಷಿಯ ಸಹಜ ಗುಣಗಳನ್ನೇ ಅಲಕ್ಷಿಸಿ, ಹೆಚ್ಚು ಕೀಟನಾಶಕ ಬಳಸಿ ಹೆಚ್ಚು ಇಳುವರಿ ಪಡೆಯುವುದರ ದೂರಗಾಮಿ ಅಪಾಯಗಳ ಬಗ್ಗೆ ಅರಿವು ಬೆಳೆಸಿಕೊಳ್ಳಲೇಬೇಕಾದ ತುರ್ತಿದೆ ಎಂದು ಬೇಳೂರು ಸುದರ್ಶನ್ ಬರೆದಿದ್ದಾರೆ.
