ಕನ್ನಡ ಸುದ್ದಿ  /  Lifestyle  /  Anxiety: Feeling Anxious? Here Are Some Simple Solutions To Eliminate It

anxiety: ಆತಂಕ ಕಾಡುತ್ತಿದೆಯೇ? ನಿವಾರಣೆಗೆ ಇಲ್ಲಿದೆ ಕೆಲವು ಸರಳ ಪರಿಹಾರ

anxiety: ಒಂದಿಲ್ಲೊಂದು ಸಂದರ್ಭದಲ್ಲಿ ಆತಂಕ ನಮ್ಮನ್ನು ಕಾಡುವುದು ಸಹಜ. ಆದರೆ ಆತಂಕದ ಕ್ಷಣ ಶಾಶ್ವತವಲ್ಲ. ಮನಸ್ಸು ಹಾಗೂ ಯೋಚನೆಗಳನ್ನು ನಿಯಂತ್ರಿಸುವ ಮೂಲಕ ಇದನ್ನು ನಿವಾರಿಸಬಹುದು ಎನ್ನುವ ತಜ್ಞರು ಆತಂಕ ನಿವಾರಣೆಗೆ ಕೆಲವೊಂದು ಟಿಪ್ಸ್‌ಗಳನ್ನು ತಿಳಿಸಿದ್ದಾರೆ.

ಆತಂಕ
ಆತಂಕ

ಪ್ರತಿಯೊಬ್ಬರನ್ನು ಒಂದಿಲ್ಲೊಂದು ಸಮಯದಲ್ಲಿ ಆತಂಕ ಕಾಡುವುದು ಸಹಜ. ಆತಂಕ ಮಾನಸಿಕ ಸಮಸ್ಯೆಯಲ್ಲ. ಇದೊಂದು ಬದುಕಿನ ಹಂತ, ಆತಂಕವನ್ನು ಎದುರಿಸಲು ಹಲವು ಮಾರ್ಗಗಳಿವೆ. ನಮ್ಮ ಮೆದುಳು ನಮ್ಮ ದೇಹ ಹಾಗೂ ಮನಸ್ಸನ್ನು ನಿಯಂತ್ರಿಸುವ ಕಂಟ್ರೋಲ್‌ ರೂಮ್‌ ಇದ್ದ ಹಾಗೆ. ಇದು ದೇಹದ ಸಂಪೂರ್ಣ ಕಾರ್ಯಚಟುವಟಿಕೆಯನ್ನು ನಿಯಂತ್ರಣ ಮಾಡುತ್ತದೆ.

ಆತಂಕ ನಿವಾರಣೆಯ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ನೊಂದಿಗೆ ಮಾತನಾಡಿದ ಟ್ರಾನ್ಸಫಾರ್ಮೇಷನಲ್‌ ಲೈಫ್‌ ಕೋಚ್‌ ವನಿತಾ ಬಾತ್ರ ʼಆತಂಕ ನಮ್ಮ ಭಾವನಾತ್ಮಕ ಶಕ್ತಿಯನ್ನು ಕ್ಷೀಣಿಸುತ್ತದೆ. ನಿರಂತರ ಭಯ, ಅವಮಾನ ಹಾಗೂ ಕೆಟ್ಟ ಸನ್ನಿವೇಶಗಳನ್ನು ಎದುರಿಸಿದಾಗ ಮನಸ್ಸಿಗೆ ಆತಂಕ ಉಂಟಾಗುತ್ತದೆ. ಆದರೆ ಮೆದುಳಿಗೆ ತರಬೇತಿ ನೀಡುವ ಮೂಲಕ ಆತಂಕವನ್ನು ಜಯಿಸಬಹುದು. ಅಂತಹ ಕೆಲವು ತಂತ್ರ ಹಾಗೂ ತತ್ವಗಳನ್ನು ನಾವು ಕಲಿಯಬೇಕುʼ ಎನ್ನುತ್ತಾರೆ.

ಮೆಡುಸಾ ಎಕ್ಸಿಂ ಸಂಸ್ಥಾಪಕಿ ಸೋನಲ್‌ ಜಿಂದಾಲ್‌ ಅವರ ಪ್ರಕಾರ ಎಲ್ಲಾ ವಯೋಮಾನದವರು ಒಂದಿಲ್ಲೊಂದು ದಿನ ಆತಂಕವನ್ನು ಎದುರಿಸುತ್ತಾರೆ. ಇತ್ತೀಚೆಗೆ ಕೆಲಸದಲ್ಲಿನ ಅತಿಯಾದ ಒತ್ತಡವು ವ್ಯಕ್ತಿಯನ್ನು ಆತಂಕಕ್ಕೆ ತಳ್ಳುತ್ತಿದೆ, ಸಮಯದ ಕೊರತೆಯೂ ಇದರ ಭಾಗವಾಗಿರುತ್ತದೆ. ಆತಂಕವಾದಾಗ ಹೃದಯ ಬಡಿತ ಹೆಚ್ಚುತ್ತದೆ, ತಲೆತಿರುಗುತ್ತದೆ, ಮೈ ನಡುಕ, ಮೈ ಬೆವರುವುದು, ಉಸಿರು ಸಿಕ್ಕಿಕೊಂಡಂತಾಗುವುದು ಇಂತಹ ಲಕ್ಷಣಗಳು ಸಾಮಾನ್ಯ. ಅಂತಹ ಸಮಯದಲ್ಲಿ ಈ ಕೆಲವು ಅಭ್ಯಾಸಗಳು ನಮ್ಮ ಆತಂಕವನ್ನು ನಿವಾರಿಸಬಹುದು.

ಮನಸ್ಸು ಹಾಗೂ ಯೋಚನೆಗಳನ್ನು ನಿಯಂತ್ರಿಸುವ ಮೂಲಕ ಆಂತಕವನ್ನು ನಿವಾರಿಸಬಹುದು ಎನ್ನುವ ಈ ಇಬ್ಬರು ತಜ್ಞರು ಆತಂಕ ನಿವಾರಣೆಗೆ ಕೆಲವೊಂದು ಟಿಪ್ಸ್‌ಗಳನ್ನು ತಿಳಿಸಿದ್ದಾರೆ.

ತಾತ್ಕಾಲಿಕ ಎಂಬುದನ್ನು ಮರೆಯಬೇಡಿ

ಆತಂಕ ಎದುರಾದ ಸಮಯದಲ್ಲಿ ಸಾಯಬೇಕು ಎನ್ನುವ ಭಾವನೆ ಬರುತ್ತದೆ. ಆದರೆ ಆ ಕ್ಷಣದಲ್ಲಿ ʼಆತಂಕ ಈ ಕ್ಷಣದ್ದು, ಇದು ಕೇವಲ ನಮ್ಮನ್ನು ಹೆದರಿಸುತ್ತದೆ, ಇದು ತಾತ್ಕಲಿಕ, ಇದರಿಂದ ಯಾವುದೇ ತೊಂದರೆ ಇಲ್ಲʼ ಎಂದು ನಮಗೆ ನಾವೇ ಹೇಳಿಕೊಳ್ಳಬೇಕು, ಜೊತೆಗೆ ಧೈರ್ಯ ತಂದುಕೊಳ್ಳಬೇಕು.

ದೀರ್ಘ ಉಸಿರಾಟ

ಆತಂಕ, ಮಾನಸಿಕ ಒತ್ತಡ ಉಂಟಾದಾಗ ದೀರ್ಘವಾಗಿ ಉಸಿರಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಉಸಿರನ್ನು ತೆಗೆದುಕೊಳ್ಳುವುದು, ಉಸಿರು ಹೊರ ಬಿಡುವುದನ್ನು ಕಲಿಯಿರಿ. ಇದರಿಂದ ಮನಸ್ಸಿನ ನಿಯಂತ್ರಣ ಸಾಧ್ಯವಾಗುತ್ತದೆ.

ನೇರವಾಗಿ ಕುಳಿತುಕೊಳ್ಳಿ

ಆತಂಕವಾದಾಗ ನಾವು ಕುಸಿದು ಕುಳಿತುಕೊಳ್ಳುತ್ತೇವೆ. ಆದರೆ ಇದು ಸರಿಯಲ್ಲ. ಆ ಸಮಯದಲ್ಲಿ ತೋಳನ್ನು ಹಿಂದಕ್ಕೆ ಚಾಚಿ, ನೇರವಾಗಿ ನಿಂತುಕೊಳ್ಳಬೇಕು ಅಥವಾ ಕುಳಿತುಕೊಳ್ಳಬೇಕು. ನಮ್ಮ ಎದೆಯ ಭಾಗವನ್ನು ಸಡಿಲಗೊಳಿಸಬೇಕು. ಈ ವ್ಯಾಯಾಮ ಆತಂಕ ನಿವಾರಿಸಲು ಸಹಾಯ ಮಾಡುತ್ತದೆ.

ಸಿಹಿ ಸೇವನೆ ಬೇಡ

ಅತಿಯಾಗಿ ಸಕ್ಕರೆ ತಿನ್ನುವುದು ಆತಂಕದ ಭಾವನೆಗಳನ್ನು ಹೆಚ್ಚಿಸುತ್ತದೆ. ಆತಂಕವಾದಾಗ ಚಾಕೊಲೇಟ್‌, ಕ್ಯಾಂಡಿ ಅಥವಾ ಸಿಹಿ ತಿನಿಸುಗಳನ್ನು ಸೇವಿಸಲು ಬದಲು ಪ್ರೊಟೀನ್‌ ಬಾರ್‌ ಅಥವಾ ಒಂದು ಲೋಟ ನೀರು ಕುಡಿಯಬಹುದು.

ಮಾತನಾಡಿ

ಅತಿಯಾಗಿ ಆತಂಕ ನಿಮ್ಮನ್ನು ಕಾಡಿದಾಗ ಸ್ನೇಹಿತರು ಅಥವಾ ಕುಟುಂಬದವರ ಜೊತೆ ಮಾತನಾಡಿ. ನಿಮ್ಮ ಪರಿಸ್ಥಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ. ನೇರವಾಗಿ ಮಾತನಾಡಲು ಸಾಧ್ಯವಾಗದಿದ್ದಾಗ ಫೋನ್‌ ಮಾಡಿ ಮಾತನಾಡಿ. ಇದರಿಂದ ಮನಸ್ಸಿಗೆ ಸಮಾಧಾನ ಸಿಗುವುದು ಮಾತ್ರವಲ್ಲ, ಆತಂಕ ದೂರಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

ಧ್ಯಾನ ಮಾಡಿ

ನಮ್ಮ ದೈನಂದಿನ ಜೀವನದಲ್ಲಿ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳುವ ಮೂಲಕ ಭಯ, ಆತಂಕ, ಒತ್ತಡ, ಕೋಪ ಇಂತಹ ಹಲವು ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಶಾಂತವಾಗಿ ಉಸಿರಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು.

ವ್ಯಾಯಾಮ

ವಾಕಿಂಗ್‌, ಜಾಗಿಂಗ್‌, ಯೋಗ, ಈಜುವುದು ಇಂತಹ ಸರಳ ವ್ಯಾಯಾಮಗಳಿಂದ ಆತಂಕವನ್ನು ದೂರ ಮಾಡಬಹುದು. ನಮ್ಮ ದಿನಚರಿಯಲ್ಲಿ ಇದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ದೇಹ, ಮನಸ್ಸು ಎರಡೂ ಹಗುರಾಗುತ್ತದೆ.

ನಿದ್ದೆ

ನಿದ್ದೆಯ ಕೊರತೆ, ಸರಿಯಾದ ಸಮಯಕ್ಕೆ ನಿದ್ದೆ ಬಾರದೇ ಒದ್ದಾಡುವುದು ಕೂಡ ಮಾನಸಿಕ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು. ಇದು ಆತಂಕಕ್ಕೆ ಕಾರಣವಾಗಬಹುದು. ಆ ಕಾರಣಕ್ಕೆ ಅಸಮರ್ಪಕ ನಿದ್ದೆ ಅವಶ್ಯ.

ಆಹಾರ ಕ್ರಮ

ಸಮರ್ಪಕ ಆಹಾರಕ್ರಮವನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದು ಆತಂಕ ನಿವಾರಣೆಗೂ ನೆರವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಉತ್ತಮ ಎನ್ನಿಸುವ ಆಹಾರ ಸೇವನೆ ಬಹಳ ಮುಖ್ಯ.

ವಿಭಾಗ