ಅಡಿಕೆ ಕೊಯ್ಲು ಎಂಬ ಊರ ಹಬ್ಬ! ಕಷ್ಟವೋ, ಸುಖವೋ ಇದು ಹಳ್ಳಿ ಜನರ ಹಾಡುಪಾಡು - ಬದುಕು ನಿತ್ಯೋತ್ಸವ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡಿಕೆ ಕೊಯ್ಲು ಎಂಬ ಊರ ಹಬ್ಬ! ಕಷ್ಟವೋ, ಸುಖವೋ ಇದು ಹಳ್ಳಿ ಜನರ ಹಾಡುಪಾಡು - ಬದುಕು ನಿತ್ಯೋತ್ಸವ

ಅಡಿಕೆ ಕೊಯ್ಲು ಎಂಬ ಊರ ಹಬ್ಬ! ಕಷ್ಟವೋ, ಸುಖವೋ ಇದು ಹಳ್ಳಿ ಜನರ ಹಾಡುಪಾಡು - ಬದುಕು ನಿತ್ಯೋತ್ಸವ

ಪ್ರತಿವರ್ಷವೂ ಚಳಿಗಾಲ ಆರಂಭವಾದರೆ ಸಾಕು ಅದರ ಜೊತೆ ಜೊತೆಗೇ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಅಡಿಕೆ ಕೊಯ್ಲು ಆರಂಭವಾದರೆ ಮುಗಿದೇ ಹೋಯ್ತು ಊರಿನ ಜನರಿಗೆ ಅದೊಂದು ಹಬ್ಬ ಇದ್ದಂತೆ. ಹಳ್ಳಿ ಜನರ ಕಷ್ಟ, ಸುಖ ಇಲ್ಲಿದೆ ನೋಡಿ.

ಅಡಿಕೆ ಕೊಯ್ಲು ಎಂಬ ಊರ ಹಬ್ಬ
ಅಡಿಕೆ ಕೊಯ್ಲು ಎಂಬ ಊರ ಹಬ್ಬ

ಹಳ್ಳಿಗಳಲ್ಲಿ ಅದರಲ್ಲೂ ಉತ್ತರ ಕನ್ನಡ ಭಾಗದ ಯಲ್ಲಾಪುರ, ಸಿರಸಿ, ಸಿದ್ದಾಪುರ ಸಾಗರ ಹೀಗೆ ಹಲವು ಭಾಗಗಳಲ್ಲಿ ಅಡಿಕೆ ಕೊಯ್ಲು ಒಂದು ಸಂಭ್ರಮ. ಊರವರೆಲ್ಲ ಒಂದೆರಡು ತಿಂಗಳು ಒಟ್ಟಾಗಿ ಅವರಿಗಿವರು, ಇವರಿಗವರು ಸಹಕರಿಸುವ ದಿನ. ಅಡಿಕೆ ಕೊಯ್ಲು ಎಂದರೆ ಅದು ಸುಲಭದ ಮಾತಂತೂ ಅಲ್ಲ. ಅಡಿಕೆ ಕೊಯ್ಲು ಆರಂಭವಾದರೆ ಅದು ನಿಲ್ಲುವ ಮಾತೂ ಅಲ್ಲ. ಒಂದಿಡೀ ಊರಿನಲ್ಲಿ ಎಲ್ಲರ ಮನೆಯಲ್ಲೂ ಒಂದೇ ರೀತಿ ವಾತಾವರಣ ನಿರ್ಮಾಣವಾಗಿಬಿಡುತ್ತದೆ. ಆಗ ಚಳಿಯೂ ಜೋರು. ಅಡಿಕೆ ಸುಲಿಯುಲು ರಾತ್ರಿಯೆಲ್ಲ ನಿದ್ದೆಗೆಟ್ಟು ಜನರಂತು ಮಂಕಾಗಿ ಹೋಗಿರುತ್ತಾರೆ. ಅವರ ಕೈಗಂಟಿದ ತೊಗರು ಹೋಗಲು ಮತ್ತೊಂದಷ್ಟು ವಾರಗಳೇಬೇಕು.

ಅಡಿಕೆ ಕೊಯ್ಲಿನ ತಯಾರಿ

ಹೀಗಿರುವಾಗ ಚಳಿಗಾಲದಲ್ಲಿ ಅವರ ಉಡುಪು ಅಡಿಕೆ ಕೊಯ್ಲಿಗೆಂದೇ ಹೊಸ ಹೊಸ ಖರೀದಿ. ಇದೆಲ್ಲವನ್ನು ನೋಡುತ್ತಿದ್ದರೆ ಒಂದು ಮದುವೆ ಸಿದ್ಧತೆ ಇದ್ದಂತೆ ಇರುತ್ತದೆ. ಯಾಕೆಂದರೆ ಅಡಿಕೆ ಸುಲಿಯಲು ಅಂಗಳದಲ್ಲಿ ಕೂರಬೇಕು. ಸುತ್ತ ಗೋಡೆ ಇಲ್ಲದ ಕಾರಣ ಚಳಿ ತಡೆದುಕೊಳ್ಳಲು ಒಂದೆರಡು ಅಂಗಿ ಜೊತೆಗೊಂದು ಸ್ವೆಟರ್ ಬೇಕೇ ಬೇಕು. ಅದರ ಜೊತೆ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹೋಗಬೇಕಲ್ಲ, ನಡೆದುಕೊಂಡು ಹೋಗುವುದಾದರೆ ಬೆಳಕಿಗೆ ಎಂದು ಹೊಸ ಬ್ಯಾಟರಿ ಖರೀದಿ ಮಾಡಬೇಕು. ಇನ್ನು ಕಿವಿಗೊಂದು ಮಂಕಿಟೊಪ್ಪಿ. ಅಡಿಕೆ ಒಣಗಿಸಲೆಂದು ಹೊಸ ಅಟ್ಟ ಇದೆಲ್ಲವನ್ನೂ ಸಿದ್ಧ ಮಾಡಿಕೊಳ್ಳಬೇಕು. ಬಂದವರಿಗೆಲ್ಲ ಚಹಾ, ಕಷಾಯದ ವ್ಯವಸ್ಥೆ ಆಗಬೇಕು.

ಅಡಿಕೆ ಕೊಯ್ಯವವನಿಗೊಂದಷ್ಟು ಪಗಾರು ಕೊಡಬೇಕು. ಕೊನೆಯ ಕೊಯ್ಲಿನ ದಿನ ಭರ್ಜರಿಯಾದ ಅಡುಗೆ ಮಾಡಬೇಕು. ಪ್ರತಿ ದಿನ ಬಡಿಸುವಾಗಲೂ ಕೊನೆ ಕೊಯ್ಯುವವರಿಗೆ ವಿಷೇಶ ಕಾಳಜಿ ಅವರ ಊಟದ ಬಟ್ಟಲಿಗೊಂದಷ್ಟು ತುಪ್ಪ ಬಿತ್ತು ಎಂದೇ ತಿಳಿಯಿರಿ. ಯಾಕೆಂದರೆ ಅವರಿಗೆ ಮೈಕೈ ನೋವಾಗಿರುತ್ತದೆ. ಮತ್ತು ಮರ ಹತ್ತಲು ಇನ್ನಷ್ಟು ಬಲುಮೆ ಬೇಕಿರುತ್ತದೆ. ಆದರೆ ಕೊನೆ ಕೊಯ್ಯುವವರನ್ನು ಮೆಚ್ಚಲೇ ಬೇಕು, ಒಂದೇ ಬಾರಿ ಮರ ಏರಿ ಒಂದರಿಂದ ಇನ್ನೊಂದು ಮರಕ್ಕೆ ಹಾರಿ ಅಡಿಕೆ ಕೊಯ್ಯುವ ಅವರ ಸಾಹಸವನ್ನು ಮೆಚ್ಚಲೇಬೇಕು.

ಅಡಿಕೆ ಮರ ಎಂದರೆ ಗೊತ್ತಲ್ಲ, ಅದಕ್ಕೆ ಯಾವುದೇ ಕೊಂಬೆ ಇಲ್ಲ. ಎಷ್ಟೊಂದು ಸಪೂರ. ಬರಿ ಒಂದು ಹುಗಿದಿಟ್ಟ ಕಂಬದಂತಿರುತ್ತದೆ. ಇದನ್ನು ಹತ್ತಲು ಸಾಕಷ್ಟು ಜಾಗ್ರತೆಯ ಅವಶ್ಯಕತೆಯೂ ಇದೆ. ಹೀಗಿರುವಾಗ ಅವರು ಕೇಳುವ ಪಗಾರು ತುಸು ಹೆಚ್ಚಾಯ್ತು ಎಂದು ಯಾವಾಗಲೂ ಜಮೀನು ಇರುವವರಿಗೆ ಕಾಣುವುದಂತು ಹಿಂದಿನಿಂದಲೂ ಬಂದ ವಾಡಿಕೆಯೇ. ಇವರಾದರೂ ಏನು ಮಾಡುತ್ತಾರೆ ಪಾಪ. ಅಡಿಕೆ ಮಾರಿ ಬಂದ ಹಣದಲ್ಲಿ ಅರ್ಧದಷ್ಟು ಆಳಿಗೇ ಹೋದರೆ ಉಳಿವುದೇನು?

ಅಡಿಕೆ ಹೆಕ್ಕುವುದೇ ಒಂದು ದೊಡ್ಡ ಕೆಲಸ
ಅಡಿಕೆ ಕೊಯ್ಯುವವರು ಕೊಯ್ಯುತ್ತಾರೆ. ಹಗ್ಗ ಹಿಡಿಯುವವರು ಹಿಡಿಯುತ್ತಾರೆ. ಆದರೆ ಅವರೆಲ್ಲ ಮಾಡಿ ಬಿಟ್ಟ ಕೆಲಸ. ಅಳಿದುಳಿದ ಅಡಿಕೆಯನ್ನು ಹೆಕ್ಕುವುದಿದೆಯಲ್ಲ ಅದೂ ಒಂದು ಸವಾಲೇ. ಏಕೆ ಎಂದು ಪ್ರಶ್ನೆ ಮಾಡುವುದಾದರೆ ಕೇಳಿ.. ಅಡಿಕೆ ಹೆಕ್ಕುವುದು ಕಷ್ಟ ಯಾಕೆಂದರೆ ತೋಟದ ಕಾಲಿಗೆಯಲ್ಲಿ, ಹೆಗ್ಗಣ ಮಾಡಿಟ್ಟ ಜಾರಿನಲ್ಲಿ, ಕೆರೆ ಇದ್ದರೆ ಅದರಲ್ಲಿ, ಬೇರೆ ಮರವಿದ್ದರೆ ಅದರ ಬುಡದಲ್ಲಿ, ಸಂಕದ ಅಡಿಯಲ್ಲಿ ಹೀಗೆ ಹೊಕ್ಕಿ, ಹುಡುಕಿ ಹೆಕ್ಕಬೇಕಲ್ಲ ಅದೇ ಒಂದು ಸವಾಲು. '

ಅಡಿಕೆ ದರ, ಗಾಳಿ ಸುದ್ದಗಳ ಹಾವಳಿ
ಅಡಿಕೆ ಒಂದು ವಾಣಿಜ್ಯ ಬೆಳೆ ಮಾತ್ರ, ಇದನ್ನು ತಿನ್ನದೆ ಇದ್ದರೆ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಲು ಇದು ಬತ್ತ, ಗೋಧಿ, ಜೋಳ ಅಥವಾ ರಾಗಿ ಇದ್ಯಾವುದೂ ಅಲ್ಲ. ಹೀಗಿರುವಾಗ ಯಾರಾದರೂ ಇನ್ನು ಮುಂದೆ ಈ ಬೆಳೆಗೆಲ್ಲ ಬೆಲೆ ಇಲ್ಲ ಪೂರಾ ದರ ಕುಸಿತ ಕಂಡು ನೀವು ಬಡವರಾಗ್ತೀರಿ ಎಂದು ಹೇಳುತ್ತಾರೆ.. ಇನ್ನು ಕೆಲವೊಮ್ಮೆ ನಿಜಕ್ಕೂ ಅಡಿಕೆ ಧರದಲ್ಲಿ ಭಾರೀ ಕುಸಿತ ಕಾಣುತ್ತದೆ. ಇನ್ನು ಚಳಿಗಾದಲ್ಲೂ ಮಳೆಗಾಲ ಆರಂಭವಾಗಿ ಸುಲಿದ ಅಡಿಕೆಯನ್ನು ಒಣಗಿಸಲೂ ಆಗದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ.

Whats_app_banner