ಶಿಕ್ಷಣದಲ್ಲಿ ಗರಿಗೆದರಲಿ ಖಗೋಳವಿಜ್ಞಾನ, ಈ ಮಣ್ಣಲ್ಲಿ ಸೃಷ್ಟಿಯಾಗಲಿ ಪ್ರಚ೦ಡ ಖಗೋಳ ವಿಜ್ಞಾನಿಗಳು; ನಂದಿನಿ ಟೀಚರ್ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಶಿಕ್ಷಣದಲ್ಲಿ ಗರಿಗೆದರಲಿ ಖಗೋಳವಿಜ್ಞಾನ, ಈ ಮಣ್ಣಲ್ಲಿ ಸೃಷ್ಟಿಯಾಗಲಿ ಪ್ರಚ೦ಡ ಖಗೋಳ ವಿಜ್ಞಾನಿಗಳು; ನಂದಿನಿ ಟೀಚರ್ ಅಂಕಣ

ಶಿಕ್ಷಣದಲ್ಲಿ ಗರಿಗೆದರಲಿ ಖಗೋಳವಿಜ್ಞಾನ, ಈ ಮಣ್ಣಲ್ಲಿ ಸೃಷ್ಟಿಯಾಗಲಿ ಪ್ರಚ೦ಡ ಖಗೋಳ ವಿಜ್ಞಾನಿಗಳು; ನಂದಿನಿ ಟೀಚರ್ ಅಂಕಣ

ನಂದಿನಿ ಟೀಚರ್ ಅಂಕಣ: ಅ೦ತರಿಕ್ಷ ಯಾನ ಮುಗಿಸಿ ಬಂದ ಸುನೀತಾರಿಗೆ 59 ವರ್ಷ ವಯಸ್ಸು. ಕ್ಷಣಕಾಲ ಯೋಚಿಸಿ, ಆಕಸ್ಮಾತ್ ಸುನೀತಾ ಭಾರತದಲ್ಲಿಯೇ ಹುಟ್ಟಿ ಬೆಳೆದಿದ್ದರೆ ಈ ವಯಸ್ಸಿನಲ್ಲಿ ಅವರು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ?.

ಶಿಕ್ಷಣದಲ್ಲಿ ಗರಿಗೆದರಲಿ ಖಗೋಳವಿಜ್ಞಾನ; ನಂದಿನಿ ಟೀಚರ್ ಅಂಕಣ
ಶಿಕ್ಷಣದಲ್ಲಿ ಗರಿಗೆದರಲಿ ಖಗೋಳವಿಜ್ಞಾನ; ನಂದಿನಿ ಟೀಚರ್ ಅಂಕಣ

ಯುಗಾದಿ ಹಬ್ಬವನ್ನು ಇತ್ತೀಚೆಗೆ ಆಚರಿಸಿದ್ದೇವೆ. ಹೊಸ ವರ್ಷವನ್ನು ಯುಗಾದಿಯಿಂದ ಆರಂಭಿಸುವ ನಾವು ಈ ದಿನ ಮಿಕ್ಕೆಲ್ಲ ಆಚರಣೆಗಳ ಜೊತೆಗೆ ಪಂಚಾಂಗ ಶ್ರವಣ ಹಬ್ಬದ ಮುಖ್ಯ ಭಾಗವಾಗಿ ಹಮ್ಮಿಕೊಳ್ಳುತ್ತೇವೆ. ಸೂರ್ಯ ಮತ್ತು ಆತನ ಸುತ್ತ ತಿರುಗುವ ಭೂಮಿ ಹಾಗೂ ಇನ್ನಿತರ ಆಕಾಶಕಾಯಗಳ ಚಲನೆಯನ್ನು ಕರಾರುವಕ್ಕಾಗಿ ದಾಖಲಿಸುವ ಪಂಚಾಂಗವನ್ನು ಪೂಜಿಸಿ ನಂತರ ಓದುವ ಪರಿಪಾಠ ಎಲ್ಲರ ಮನೆಯಲ್ಲಿ ನಡೆದಂತೆ ಗೆಳತಿಯೊಬ್ಬಳ ಮನೆಯಲ್ಲೂ ನಡೆದಿತ್ತು. ಪಂಚಾಂಗ ಕೇಳುತ್ತ ಅಲ್ಲಿಯೇ ಕುಳಿತಿದ್ದ ಗೆಳತಿಯ ಮೊಮ್ಮಗ ‘ಸುನೀತಾ ವಿಲಿಯಮ್ಸ ಭಾರತೀಯ ಮೂಲದವರು ಅವರು ಕೂಡ ಪಂಚಾಂಗ ಶ್ರವಣ ಮಾಡ್ತಾರಾ?‘ ಎoದು ಕೇಳಿದನಂತೆ. ಗೆಳತಿಗೆ ಗೊ೦ದಲ. ಯಾಕೆಂದು ಕೇಳಿದ ಅಜ್ಜಿಗೆ ‘ಪಂಚಾಂಗದಲ್ಲೂ ಸೂರ್ಯ, ಚಂದ್ರ, ಭೂಮಿ, ನಕ್ಷತ್ರಗಳ ಬಗ್ಗೆ ಓದ್ತಾ ಇದ್ದಾರೆ, ಸುನೀತಾ ವಿಲಿಯಮ್ಸ ಅಂತರಿಕ್ಷದಲ್ಲಿ ಮಾಡಿದ್ದು ಇದೇ ಕೆಲಸ ಅಲ್ವಾ‘ ಎಂದನಂತೆ. ಮತ್ತೆ ‘ಅಜ್ಜೀ, ಸುನೀತಾ ವಿಲಿಯಮ್ಸಗೆ ನಿಂಗೆ ಒಂದೇ ವಯಸ್ಸು, ನೀನೂ ಸ್ಪೇಸ್‌ಗೆ ಹೋಗಬಹುದು ನೋಡು‘ ಎಂದನಂತೆ. ಅವನು ಅದು ಹೇಗೆ ವಿಷಯ ಜೋಡಿಸಿದ ಎಂದು ಅವನಜ್ಜಿ ಮೊಮ್ಮಗನಿಗೆ ಭಾರತದಲ್ಲಿ ನಾವು ಪ್ರತಿ ಹಬ್ಬ ಅಥವಾ ಕಾರ್ಯವನ್ನು ಪಂಚಾಂಗ ನೋಡಿಯೇ ಹಮ್ಮಿಕೊಳ್ಳುತ್ತೇವೆ. ಪಂಚಾಂಗಕ್ಕೆ ಪೂಜೆ ಮಾಡುವ ಮೂಲಕ ಭಾರತೀಯ ಖಗೋಳ ಜ್ಞಾನ ಪರಂಪರೆಗೆ ನಮನ ಸಲ್ಲಿಸುವ ಕ್ರಮವನ್ನು ನಾವು ಗಮನಿಸಬೇಕು ಎ೦ದು ತನಗೆ ತಿಳಿದಂತೆ ಸಮಾಧಾನ ಹೇಳಿದಳಾದರೂ, ‘ನನ್ನ ವಯಸ್ಸಿನ ಭಾರತೀಯ ಹೆಣ್ಣುಮಗಳು ಅoತರಿಕ್ಷಯಾನ ಮಾಡುವಳೇ?‘ ಎನ್ನುವ ಯೋಚನೆಯ ಮಧ್ಯೆಯೇ ಮಕ್ಕಳು ಕೇಳುವ ಎಷ್ಟೋ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲವೆಂದು ಬೇಸರ ತೋಡಿಕೊಂಡರು.

ಇತ್ತೀಚಿನ ದಿನಗಳಲ್ಲಿ ಆಕಾಶಕಾಯಗಳ ಅಧ್ಯಯನವೆಂದೊಡನೆಯೇ ಭಾರತದ ಸಂಜಾತೆ ಸುನೀತಾ ವಿಲಿಯಮ್ಸ್ ಅವರ ಹೆಸರೇ ಎಲ್ಲರ ಬಾಯಲ್ಲಿ ಕೇಳಿ ಬರುತ್ತದೆ. ಕಾರಣ ಬೆರಳೆಣಿಕೆಯಷ್ಟು ದಿನಗಳ ಕಾಲದ ಅಂತರಿಕ್ಷಯಾನ ಮತ್ತು ಅಧ್ಯಯನಕ್ಕಾಗಿ ಹೊರಟ ಸುನೀತಾ ಭೂ ಕಕ್ಷೆಗೆ ಹಿಂದಿರುಗುವ ಅನಿಶ್ಚತತೆಯ ಮಧ್ಯೆ ಸರಿಸುಮಾರು 9 ತಿoಗಳ ಕಾಲ ಜೀವಿಸಿದರು. ಅಂತರಿಕ್ಷದಲ್ಲಿದ್ದಷ್ಟು ಸಮಯ ಅನೇಕ ಪ್ರಯೋಗಗಳನ್ನು ನಡೆಸಿದರು. ಸುನೀತಾ ಭೂಮಿಗೆ ಹಿಂತಿರುಗುವ ಕಡೆಯ ಕ್ಷಣದವರೆಗೂ ಉಸಿರು ಬಿಗಿಹಿಡಿದು ಜನ ಕಾದರು ಮತ್ತು ಪ್ರಾರ್ಥಿಸಿದರು. ಇದಕ್ಕೂ ಹಿಂದೆ ಗಗನಯಾತ್ರಿಯಾಗಿ ಹೊರಟ ಕಲ್ಪನಾ ಚಾವ್ಲಾ ಅವರನ್ನು ಕಳೆದುಕೊಂಡ ಕಹಿ ನೆನಪು ಎಲ್ಲರನ್ನೂ ಬಾಧಿಸುತ್ತಲೇ ಇದೆ. ನಮ್ಮ ಇಂದಿನ ಆಲೋಚನೆಯ ದಾರಿ ಭಾರತೀಯ ಖಗೋಳ ವಿಜ್ಞಾನದ ಹಿನ್ನೆಲೆಯಲ್ಲೇ ಸುತ್ತಲಿದೆ.

ಖಗೋಳ ಶಾಸ್ತ್ರವು ವಿಜ್ಞಾನಗಳ ತಾಯಿ

ನೈಸರ್ಗಿಕ ವಿಜ್ಞಾನ - ಖಗೋಳಶಾಸ್ತ್ರ ಅಥವಾ ಅಸ್ಟ್ರೋನಮಿಗೆ ಭಾರತ ಕೊಡುಗೆ ಅಪಾರವಿದೆ. ಖಗೋಳ ಶಾಸ್ತ್ರವನ್ನು ವಿಜ್ಞಾನಗಳ ತಾಯಿ ಎಂದೇ ನಾವು ಗುರುತಿಸಬಹುದು. ಅದರಲ್ಲೂ ಗಣಿತಕ್ಕೂ ಮತ್ತು ಖಗೋಳ ವಿಜ್ಞಾನಕ್ಕೂ ಸಮೀಪದ ನಂಟು. ಭಾರತೀಯ ಜ್ಞಾನ ಪರಂಪರೆಯಲ್ಲಿ ಋಗ್ವೇದದ 36 ಸಂಪುಟ ಯಜುರ್ವೇದದ 45 ಸoಪುಟ ಹಾಗೂ ಅಥರ್ವವೇದದಲ್ಲಿಯೂ ನಮಗೆ ಆಕಾಶಕಾಯಗಳ ಕುರಿತು ಮಾಹಿತಿ ಸಿಗುತ್ತದೆ. ಕ್ರಿಸ್ತಪೂರ್ವದಲ್ಲಿ ಲಗಾಧ ಋಷಿ ಈ ವಿಷಯದ ಕುರಿತು ಬರೆದ ಮಾಹಿತಿ ನಮಗೆ ಸಿಗುತ್ತದೆ. ರಾಜ ವಿಕ್ರಮಾದಿತ್ಯನ ಆಸ್ಥಾನದ ವರಾಹಮಿಹಿರ, ನಾವು ನೆನಪಿಸಿಕೊಳ್ಳಬೇಕಾದ ಮಾಹಾಮೇಧಾವಿ. ಸುಮಾರು 1,500 ವರ್ಷಗಳಿಗೆ ಹಿ೦ದೆಯೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣ ಇದೆ ಎಂದು ಹೇಳಿದ್ದ ವಿಜ್ಞಾನಿ. ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ, ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ ವರಾಹಮಿಹಿರರು ತಮ್ಮ 13ನೇ ವಯಸ್ಸಿನಲ್ಲಿ ‘ಸೂರ್ಯಸಿದ್ಧಾಂತ‘ವನ್ನು ಬರೆದರು. ಇದರಲ್ಲಿ ನಕ್ಷತ್ರ ಮoಡಲ, ಸೂರ್ಯಗ್ರಹಣ ಮತ್ತು ಗ್ರಹಗಳ ಸ್ಥಾನಗಳ ಕುರಿತು ವಿವರಿಸಿದ್ದಾರೆ. ವರಾಹಮಿಹಿರು ಹವಾಮಾನ, ಗುರುತ್ವಾಕರ್ಷಣೆಯ ಬಗ್ಗೆಯೂ ಜ್ಞಾನವನ್ನು ಹೊಂದಿದ್ದರಷ್ಟೇ ಅಲ್ಲದೇ ಗಣಿತಜ್ಞರೂ ಆಗಿದ್ದರು. ಇವರ ಕಾಲದಲ್ಲಿ ಉಜ್ಜಯಿನಿ ವಿಶ್ವವಿದ್ಯಾಲಯದಲ್ಲಿ ಗಣಿತ ಸoಶೋಧನೆಗಳು ಕೂಡ ನಡೆಯುತ್ತಿದ್ದವು ಎ೦ದು ದಾಖಲೆಗಳು ಹೇಳುತ್ತವೆ. ಆಧುನಿಕ ಗಣಿತದ ಎಂದೇ ಖ್ಯಾತರಾದ ಆರ್ಯಭಟ ವರಾಹಮಿಹಿರರ ಕೆಲಸವನ್ನು ಮುಂದುವರಿಸಿದರು.

ಭಾಸ್ಕರಾಚಾರ್ಯ ಹುಟ್ಟಿದ ನಾಡು 

ಭಾರತದ ಅನೇಕ ಗಣಿತಜ್ಞರ ನಡುವೆ ನಮ್ಮ ರಾಜ್ಯದವರೇ ಆದ ಭಾಸ್ಕರಾಚಾರ್ಯರನ್ನು ನಾವು ಮರೆಯಲುಂಟೇ? ವಿಜಯಪುರದ ಸಮೀಪದ ಬಿಜ್ಜಡಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ, ತಮ್ಮ ತಂದೆ ಮಹೇಶ್ವರೋಪಾಧ್ಯಾಯರಿಂದ ಗಣಿತದಲ್ಲಿ ಪ್ರಭಾವಿತರಾದರು. ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಭಾಸ್ಕರಾಚಾರ್ಯ ಒಟ್ಟು ಆರು ಗ್ರoಥಗಳನ್ನು ರಚಿಸಿದರು. ಸಿದ್ಧಾಂತ ಶಿರೋಮಣಿ ಎಂಬ ಖಗೋ-ಗಣಿತದ ಗ್ರಂಥದಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗೂ ಗ್ರಹಗಳ ಚಲನೆಯ ಸಂಪೂರ್ಣ ವಿವರಣೆ ನಮಗೆ ದೊರಕುತ್ತದೆ. ಖಗೋಳ ವಿಜ್ಞಾನಿಗಳ ಸೃಷ್ಟಿಸುವ ಪರಂಪರೆಯನ್ನು ಭಾರತ ಮುಂದುವರೆಸಿಕೊಂಡೇ ಬಂದಿದೆ. ವಿಕ್ರಮ್ ಸಾರಾಭಾಯ್, ಯುಆರ್ ರಾವ್, ನಂಬಿ ನಾರಾಯಣ್, ಕಿರಣ್ ಕುಮಾರ್ ಹೀಗೊಂದು ದೊಡ್ಡ ಪಟ್ಟಿ ನಮ್ಮ ಮುಂದಿದೆ. ಮಂಗಳಯಾನ ಹಾಗೂ ಚಂದ್ರಯಾನಗಳಲ್ಲಂತೂ ಮಹಿಳಾ ವಿಜ್ಞಾನಿಗಳ ದೊಡ್ಡ ತಂಡವೇ ಕೆಲಸ ಮಾಡಿ, ವಿಶ್ವವನ್ನು ಭಾರತದತ್ತ ಹೊರಳುವoತೆ ಮಾಡಿದ್ದಾರೆ. ಸುನೀತಾ ವಿಲಿಯಮ್ಸ್‌ರಂತೆ ಬಾಹ್ಯಾಕಾಶಯಾನ ಮಾಡಿದ ವಿಜ್ಞಾನಿಗಳೂ ಭಾರತದ ಮಣ್ಣಿನಲ್ಲಿ ಜನ್ಮಿಸಿದ್ದಾರೆ.

ಸಾಧನೆ ದೊಡ್ಡದೇ ಆದರೂ ನಮ್ಮಲ್ಲಿರುವ ಸತ್ವಕ್ಕೆ ತಕ್ಕಷ್ಟು ಬೆಳೆಬಂದಿಲ್ಲವೆಂದೇ ಅನ್ನಿಸುತ್ತದೆ. ಶಿಕ್ಷಣವ್ಯವಸ್ಥೆಯಲ್ಲಿ ಈ ಕೊರತೆ ಎದ್ದು ಕಾಣುತ್ತಿದೆ. ಮೊದಲನೆಯದಾಗಿ ಖಗೋಳ ಶಾಸ್ತ್ರದ ಬಗ್ಗೆ ಹಾಗೂ ಗಣಿತ ಶಾಸ್ತ್ರ ಅಥವಾ ಇನ್ನಿತರ ವಿಜ್ಞಾನಗಳಿಗೆ ಖಗೋಳ ವಿಜ್ಞಾನದ ನoಟನ್ನು ತಿಳಿಸಿಕೊಡುವಲ್ಲಿ ನಮ್ಮ ಪಠ್ಯಗಳು ವಿಫಲವಾಗಿವೆ. ಅದರಲ್ಲೂ ಗಣಿತದ application. ವಿವಿಧ ಕ್ಷೇತ್ರಗಳಲ್ಲಿ ನಾವು ಹೇಗೆ ಅಪ್ಲೈ ಮಾಡಬಹುದು ಎಂಬ ಅರಿವೇ ಇಲ್ಲದ ಗಣಿತದ ಕಲಿಕೆ ಕಬ್ಬಿಣದ ಕಡಲೆಯಾಗುತ್ತದೆ. ಅಲ್ಲದೇ ಖಗೋಳ ವಿಜ್ಞಾನದಲ್ಲಿ ಭಾರತೀಯರ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾಶಿಕ್ಷಣದಲ್ಲಿ ಉತ್ಸಾಹ/ ಆಸಕ್ತಿ ಮೂಡಿಸುವ ಪಠ್ಯಗಳನ್ನೂ ನಾವು ಅಳವಡಿಸಿಲ್ಲ. ಶಾಲಾ ಶಿಕ್ಷಣದಲ್ಲಷ್ಟೇ ಅಲ್ಲದೇ ಪದವಿ ಶಿಕ್ಷಣದಲ್ಲೂ ನಾವು ವಿದ್ಯಾರ್ಥಿಗಳಿಗೆ ಆಸ್ಟ್ರೋ ಫಿಸಿಕ್ಸ್ ಕಲಿಯುವ ವ್ಯವಸ್ಥೆಯನ್ನು ಇಂದಿನ ತಂತ್ರಜ್ಞಾನಕ್ಕನುಗುಣವಾಗಿ ಕಲ್ಪಿಸಿ ಕೊಡುವಲ್ಲಿ ಸೋಲುತ್ತೇವೆ. ವಿದ್ಯಾರ್ಥಿ ಕಲಿಯಬೇಕೆಂದರೆ ಭಾರತದ ಪ್ರತಿಷ್ಠಿತ ಐಐಎಸ್‌ಸಿಯಂತಹ ಸಂಸ್ಥೆಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಸೂಕ್ತ ವ್ಯವಸ್ಥೆಯಿಲ್ಲ. ಈ ಕುರಿತು ಪಠ್ಯ ರಚನೆಯಲ್ಲಿರುವ ಶಿಕ್ಷಕರಿಗೂ ಆಸಕ್ತಿಯಿಲ್ಲ. ಇದಕ್ಕೆ ಉದಾಹರಣೆಯಾಗಿ ಇಸ್ರೋದಂತಹ ಸಂಸ್ಥೆ ಇದ್ದುಕೊಂಡೂ ತಂತ್ರಜ್ಞಾನಕ್ಕೆ ತೆರೆದುಕೊಳ್ಳದ ನಮ್ಮ ಪ್ಲಾನೆಟೋರಿಯಂಗಳೇ ಸಾಕ್ಷಿ. ಭಾಸ್ಕರಾಚಾರ್ಯ ಬೆಳೆದ ಈ ನಾಡಿನ ಮಣ್ಣಿನಲ್ಲಿ ಎಂತಹ ಪ್ರಚ೦ಡ ಖಗೋಳ ವಿಜ್ಞಾನಿಗಳನ್ನು ಸೃಷ್ಟಿಸಬಹುದು ಕ್ಷಣಕಾಲ ಯೋಚಿಸಿ.

ಸುನೀತಾ ಭಾರತದಲ್ಲಿಯೇ ಹುಟ್ಟಿ ಬೆಳೆದಿದ್ದರೆ ಅಂತರೀಕ್ಷಕ್ಕೆ ಹೋಗಲು ಸಾಧ್ಯವಾಗುತ್ತಿತ್ತೇ? 

ಕೊನೆಗೊಂದು ಮಾತು. ಅ೦ತರಿಕ್ಷಯಾನಕ್ಕೆ ಸಜ್ಜಾದ ಸುನೀತಾರಿಗೆ 59 ವಯಸ್ಸು. ‘ಆಕಸ್ಮಾತ್ ಸುನೀತಾ ಭಾರತದಲ್ಲಿಯೇ ಹುಟ್ಟಿ ಬೆಳೆದಿದ್ದರೆ ಅವರಿಂದ ಅವರೀಗಿರುವ ವಯಸ್ಸಿನಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ?‘ ‘ಈ ವಯಸ್ಸಿನಲ್ಲಿ ಅಂತರಿಕ್ಷಯಾನಕ್ಕೆ ಭಾರತದ ಹೆಣ್ಣುಮಗಳು ಹೊರಡುತ್ತಿದ್ದಳೇ?‘ ‘ಅವಳನ್ನು ಅವಳ ಮನೆಯ/ಕಚೇರಿಯ ಸದಸ್ಯರು ಕಳುಹಿಸುತ್ತಿದ್ದರೇ?‘ ಎನ್ನುವ ಪ್ರಶ್ನೆಗಳೂ ಮನದಲ್ಲಿ ಕೊರೆಯಲಾರಂಭಿಸಿದೆ. ಸಾಧನೆಯ ಹಾದಿಯಲ್ಲಿ ಭಾರತದ ಮಹಿಳೆ ಹಠ ತೊಟ್ಟು ಮುನ್ನುಗ್ಗಬೇಕು. ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳು ‘ಯಾನ‘ಗಳಿಗೆ ಭಾರತದಲ್ಲಿಯೇ ಸಿದ್ಧರಾಗುವoತೆ ಮಾಡುವುದು ನಮ್ಮ ಕರ್ತವ್ಯ. ಭಾರತದಿ೦ದಾಚೆ ಬೆಳೆದ ಭಾರತೀಯ ಮೂಲದ ಮಕ್ಕಳು ಸಾಧನೆ ನಮಗೆ ಹೆಮ್ಮೆ, ಆದರೆ ನಮ್ಮದೇ ಮಣ್ಣಿನ ಮಕ್ಕಳಲ್ಲಿ ಈ ಸ್ಥೈರ್ಯ, ಧೈರ್ಯ ತುಂಬುವುದು ನಮ್ಮ ಮು೦ದಿರುವ ಅಗತ್ಯ. ಮಕ್ಕಳಲ್ಲಿ ಏಳುವ ಹಲವಾರು ಪ್ರಶ್ನೆಗಳಿಗೆ ಮಹಿಳೆ ವೈಜ್ಞಾನಿಕ ದೃಷ್ಟಿಕೋನದ ಉತ್ತರ ನೀಡುವುದನ್ನೂ ಕಲಿಯಬೇಕು. ‘ಮಾಡುತ್ತಾ ಹೋಗು ಮುಂದೊಂದು ದಿನ ನಿನಗೆ ಅರ್ಥವಾಗುತ್ತದೆ‘ ‘ನಾವು ನಮ್ಮ ಹಿರಿಯರು ಹೇಳಿದಂತೆ ಕೇಳುತ್ತಾ ಬಂದೆವು, ಪ್ರಶ್ನೆ ಮಾಡಿದರೆ ಏಟು ಬೀಳುತ್ತಿತ್ತು‘ ಎನ್ನುವ ಉತ್ತರವನ್ನು ನೀಡದೇ ಪ್ರಶ್ನೆಗಳನ್ನು ಪ್ರೋತ್ಸಾಹಿಸಿ, ಅಧ್ಯಯನ ನಡೆಸಿ, ಅಧ್ಯಯನ ನಡೆಸಲು ದಾರಿಮಾಡಿಕೊಡಿ.

ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ

ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.

ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‌‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.

 

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.