ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಕಟ್ಟೆ ಹಾಗೂ ಕಂಬವನ್ನು ಈ ರೀತಿ ಸಿಂಗರಿಸಿ, ಸಂಭ್ರಮದಿಂದ ಆಚರಿಸಿ
ಸ್ವಾತಂತ್ರ್ಯ ದಿನಾಚರಣೆ ಎಂದರೆ ಶಾಲಾ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಅದರ ತಯಾರಿಯಲ್ಲೇ ದಿನ ಪೂರ್ತಿ ಕಳೆಯಲು ಸಿದ್ಧರಿರುತ್ತಾರೆ. ಶಿಕ್ಷಕರಿಗೂ ಪ್ರತಿವರ್ಷ ಹೊಸದೇನಾದರೂ ಮಾಡುವ ಉತ್ಸಾಹ ಇರುತ್ತದೆ. ಅದಕ್ಕಾಗಿಯೇ ನಾವು ನಿಮಗಿಲ್ಲಿ ಕೆಲವು ಐಡಿಯಾಗಳನ್ನು ನೀಡಿದ್ದೇವೆ ಗಮನಿಸಿ.
ಹೂವಿನ ಅಲಂಕಾರ
ಆಗಸ್ಟ್ 15 ರಂದು ಎಲ್ಲಾ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳಲ್ಲಿ ಧ್ವಜಾರೋಹಣ ಮಾಡುತ್ತಾರೆ. ಅಷ್ಟೇ ಅಲ್ಲದೆ ಕೆಲವು ಕಚೇರಿಗಳಲ್ಲಿಯೂ ರಾಷ್ಟ್ರ ಭಕ್ತಿಯಿಂದ ಧ್ವಜಾರೋಹಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಮತ್ತು ಧ್ವಜ ಕಟ್ಟೆಯನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ರಾಷ್ಟ್ರಧ್ವಜದ ಒಳಗಡೆ ಹೂವುಗಳನ್ನು ಇಟ್ಟು ಅದನ್ನು ಮೇಲಕ್ಕೆ ಎರಿಸಲಾಗುತ್ತದೆ. ಹೀಗೆ ಮಾಡುವುದು ತಪ್ಪು ಎಂದು ಹಲವರ ಅಭಿಪ್ರಾಯವಿದೆ. ಇನ್ನು ಧ್ವಜ ಕಟ್ಟೆಯನ್ನು ಅಲಂಕರಿಸುವ ವಿಧಾನವನ್ನು ನೋಡುವುದಾದರೆ, ಮೇಲಿನ ಸ್ಥರದಲ್ಲಿ ಕೇಸರಿ ಹೂಗಳನ್ನು, ಮಧ್ಯದಲ್ಲಿ ಬಿಳಿ ಹೂಗಳನ್ನು ಹಾಗೂ ಅದಕ್ಕಿಂತಲೂ ಕೆಳಗಿನ ಸ್ಥಳದಲ್ಲಿ ಎಲೆಗಳನ್ನು ಹಾಕಿ ಸಿಂಗರಿಸಬಹುದು.
ಸ್ವಚ್ಛತೆ ಮುಖ್ಯ
ಇನ್ನು ಧ್ವಜಕಟ್ಟೆಯ ಸುತ್ತಲೂ ಕಂಬಗಳನ್ನು ನೆಟ್ಟು, ಅದಕ್ಕೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಬಹುದು. ಪ್ಲಾಸ್ಟಿಕ್ ಬಳಕೆ ಮಾಡುವುದು ಸರಿಯಲ್ಲ. ಹಾಗಾಗಿ ನೈಸರ್ಗಿಕವಾಗಿ ಸಿಗುವ ಹೂವು ಹಾಗೂ ಮಾವಿನ ತಳಿರು ತೋರಣಗಳಿಂದ ಧ್ವಜಕಟ್ಟೆಯನ್ನು ಅಲಂಕರಿಸಬಹುದು. ಇನ್ನು ಸಾರ್ವಜನಿಕರು ನಿಲ್ಲುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅಲ್ಲಿ ಯಾವುದೇ ರೀತಿಯ ಕಸಗಳು, ಕಡ್ಡಿಗಳು ಕಾಣಿಸದ ಹಾಗೆ ಸ್ವಚ್ಛ ಮಾಡಿ.
ಕೆಸರಿ, ಬಿಳಿ, ಹಸಿರು ಬಣ್ಣ ಬೇಡ
ಶಿಕ್ಷಕರು, ಪಾಲಕರು ಅಥವಾ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗೆ ಸಿಹಿ ತಿಂಡಿ ಅಥವಾ ಪ್ಲಾಸ್ಟಿಕ್ ಕವರ್ ಇರುವ ಸಿಹಿತಿಂಡಿ, ಚಾಕಲೇಟ್ ಗಳನ್ನು ನೀಡಿದಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್ ಕವರ್ ಅನ್ನು ಒಂದೇ ಕಡೆ ಕಸದ ಬುಟ್ಟಿಯಲ್ಲಿ ಹಾಕಲು ಸೂಚಿಸಬೇಕು. ಕೇಸರಿ, ಬಿಳಿ, ಹಸಿರು ಪೇಪರ್ ಕಟಿಂಗ್ಸ್ ಬಳಸಿಕೊಂಡು ಅಲಂಕರಿಸಬಹುದು. ಇದು ಕೂಡ ಒಂದು ನೈಸರ್ಗಿಕ ವಿಧಾನವಾಗಿದೆ. ಯಾಕೆಂದರೆ ಪೇಪರ್ ಗಳು ಮಣ್ಣಿನಲ್ಲಿ ವಿಘಟನೆ ಹೊಂದುತ್ತವೆ. ಧ್ವಜಕಟ್ಟೆಯ ಸುತ್ತಲೂ ಅಂದವಾದ ರಂಗೋಲಿಯನ್ನು ಬಿಡಿಸಿ ರಂಗೋಲಿಯನ್ನು ಬಿಡಿಸುವಾಗ ಕೇಸರಿ, ಬಿಳಿ, ಹಸಿರು ಬಣ್ಣವನ್ನು ಬಳಸಬೇಡಿ ಯಾಕೆಂದರೆ ಅದನ್ನು ಬಂದವರು ತುಳಿಯುತ್ತಾರೆ.
ಶಾಲಾ ಆವರಣದಲ್ಲಿ ಸಾರ್ವಜನಿಕರು ಬಂದು ಸೇರುವುದರಿಂದ ಅವರು ನಡೆದಾಡುವಾಗ ಆ ಬಣ್ಣಗಳನ್ನು ಮೆಟ್ಟುವ ಸಾಧ್ಯತೆ ಇದೆ. ಅಥವಾ ಯಾರೂ ಮೆಟ್ಟದ ಜಾಗದಲ್ಲಿ ರಂಗೋಲಿಯನ್ನು ಬಿಡಿಸಿದರೆ ಈ ಬಣ್ಣಗಳನ್ನು ಬಳಸಬಹುದು.
ವಿಭಾಗ