Alto K10: ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಹೊಸ ಆಲ್ಟೊ ಕೆ10, ಹಾರ್ಟೆಕ್ಟ್‌ ಪ್ಲಾಟ್‌ಫಾರ್ಮ್‌, ಇನ್ನಷ್ಟು ಹಗುರ, ಹೆಚ್ಚು ಮೈಲೇಜ್‌
ಕನ್ನಡ ಸುದ್ದಿ  /  ಜೀವನಶೈಲಿ  /  Alto K10: ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಹೊಸ ಆಲ್ಟೊ ಕೆ10, ಹಾರ್ಟೆಕ್ಟ್‌ ಪ್ಲಾಟ್‌ಫಾರ್ಮ್‌, ಇನ್ನಷ್ಟು ಹಗುರ, ಹೆಚ್ಚು ಮೈಲೇಜ್‌

Alto K10: ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಹೊಸ ಆಲ್ಟೊ ಕೆ10, ಹಾರ್ಟೆಕ್ಟ್‌ ಪ್ಲಾಟ್‌ಫಾರ್ಮ್‌, ಇನ್ನಷ್ಟು ಹಗುರ, ಹೆಚ್ಚು ಮೈಲೇಜ್‌

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಮಾಡೆಲ್‌ ಆಲ್ಟೊ ಕೆ10ನ ಹೊಸ ಆವೃತ್ತಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಆಧರಿಸಿದ ಈ ಹೊಸ ಆಲ್ಟೊ ಇನ್ನಷ್ಟು ಹಗುರವಾಗಿರಲಿದ್ದು, ಹೆಚ್ಚು ಮೈಲೇಜ್‌ ನೀಡುವ ಸೂಚನೆಯಿದೆ.

Alto K10: ಮಾರುತಿ  ಫ್ಯಾಕ್ಟರಿಯಿಂದ ಹೊಸ ಆಲ್ಟೊ ಕೆ10, ಇನ್ನಷ್ಟು ಹಗುರ, ಹೆಚ್ಚು ಮೈಲೇಜ್‌
Alto K10: ಮಾರುತಿ ಫ್ಯಾಕ್ಟರಿಯಿಂದ ಹೊಸ ಆಲ್ಟೊ ಕೆ10, ಇನ್ನಷ್ಟು ಹಗುರ, ಹೆಚ್ಚು ಮೈಲೇಜ್‌

ಮಾರುತಿ ಸುಜುಕಿ ಆಲ್ಟೊ ಕೆ10 ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹೊಸದಾಗಿ ಕಾರು ಖರೀದಿಸುವವರು, ಮೊದಲ ಬಾರಿಗೆ ಕಾರು ಖರೀದಿಸುವವರು, ಕಡಿಮೆ ಬಜೆಟ್‌ ಇರುವವರು, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸುವವರು.. ಸೇರಿದಂತೆ ಬಹುತೇಕರ ಅಚ್ಚುಮೆಚ್ಚಿನ ಆಯ್ಕೆ ಆಲ್ಟೋ ಕೆ10 ಎಂದರೆ ತಪ್ಪಾಗದು. ಜಪಾನಿನ ಕಾರು ತಯಾರಕರು ಸದ್ಯ ಈಗಿನ ಆಲ್ಟೊ ಕೆ 10ನ ಮುಂದಿನ ಪೀಳಿಗೆಯ ಆವೃತ್ತಿಯನ್ನು ರೆಡಿ ಮಾಡುತ್ತಿದ್ದಾರೆ. ಈ ಕೆಲಸ ಇದು 2026ರಲ್ಲಿ ಮುಗಿಯುವ ನಿರೀಕ್ಷೆಯಿದೆ. ದೇಶದಲ್ಲಿ ಸಣ್ಣ ಕಾರುಗಳ ಮಾರಾಟದಲ್ಲಿ ಆಲ್ಟೊ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದೆ. ಭಾರತಕ್ಕೆ ಒಂದು ಎರಡು ವರ್ಷಗಳಲ್ಲಿ ಹೊಸ ಆಲ್ಟೊ ಕೆ10 ಆಗಮಿಸುವ ನಿರೀಕ್ಷೆಯಿದೆ.

ಮುಂದಿನ ಪೀಳಿಗೆಯ ಮಾರುತಿ ಸುಜುಕಿ ಆಲ್ಟೊ ಕೆ10 ಹೊಸ ತಲೆಮಾರಿನ ಹಾರ್ಟೆಕ್ಟ್ ಆರ್ಕಿಟೆಕ್ಚರ್ ಆಧರಿಸಿ ಬರಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ಎಚ್‌ಟಿ ಆಟೋ ವರದಿ ಮಾಡಿದೆ. ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಜಪಾನ್‌ ಬ್ರಾಂಡ್‌ನ ಪ್ರಮುಖ ವಾಹನ ಆರ್ಕಿಟೆಕ್ಚರ್‌ಗಳಲ್ಲಿ ಒಂದಾಗಿದೆ. ಇದು ವ್ಯಾಗನ್ಆರ್, ಸ್ವಿಫ್ಟ್, ಬಲೆನೊ, ಫ್ರಾಂಕ್ಸ್ ಸೇರಿದಂತೆ ಬಹುತೇಕ ಮಾರುತಿ ಕಾರುಗಳಲ್ಲಿ ಇರುವ ಪ್ಲಾಟ್‌ಫಾರ್ಮ್‌ ಆಗಿದೆ. ಇದನ್ನು ಇನ್ನುಮುಂದೆ ಆಲ್ಟೋಗೂ ಅಳವಡಿಸಲ ಕಂಪನಿ ಮುಂದಾಗಿದೆ. ಇದಕ್ಕಾಗಿ ಒಇಎಂ ಅಲ್ಟ್ರಾ-ಹೈ ಟೆನ್ಸಿಲ್ ಸ್ಟೀಲ್ (UHSS) ಮತ್ತು ಸುಧಾರಿತ ಹೈ ಟೆನ್ಸೈಲ್ ಸ್ಟೀಲ್ (AHSS) ಅನ್ನು ಬಳಸಿ ಕಾರು ನಿರ್ಮಿಸಲಾಗುತ್ತದೆ. ಇದು ಕಾರಿನ ತೂಕ ಹೆಚ್ಚಳವಾಗದೆ, ಗಟ್ಟಿಮುಟ್ಟಾದ ಕಾರಿನ ನಿರ್ಮಾಣಕ್ಕೆ ನೆರವಾಗುತ್ತದೆ. ಸುಜುಕಿಯು ಸುಸ್ಥಿರತೆ ಗುರಿಗೆ ತಕ್ಕಂತೆ ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಬಂಧಿಸುತ್ತದೆ.

ಹಗುರವಾಗಿರಲಿದೆ ಹೊಸ ಆಲ್ಟೊ ಕೆ10

ಮುಂದಿನ ಪೀಳಿಗೆಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಆಗಮಿಸುವುದರಿಂದ ಈಗಿನ ಆಲ್ಟೊ ಕೆ10ಗಿಂತ ತೂಕ ಸಾಕಷ್ಟು ಕಡಿಮೆಯಾಗಲಿದೆ. ಕಾರಿನ ಕರ್ಬ್‌ ತೂಕದಲ್ಲಿ ಇಳಿಕೆಯಾಗಲಿದೆ. ಆಲ್ಟೊ K10 ಈಗಾಗಲೇ ಭಾರತದಲ್ಲಿ ಅತ್ಯಂತ ಹಗುರವಾದ ಕಾರುಗಳಲ್ಲಿ ಒಂದಾಗಿದೆ. ಆಲ್ಟೊ ಕಾರಿನ ನಿರ್ವಹಣೆ ವೆಚ್ಚ ಕಡಿಮೆ ಇರುತ್ತದೆ. ಮೈಲೇಜ್‌ ಹೆಚ್ಚು ದೊರಕುವುದರಿಂದ ಹೊಸ ಕಾರು ಮಾತ್ರವಲ್ಲದೆ ಹಳೆ ಆಲ್ಟೋಗೂ ಸಾಕಷ್ಟು ಬೇಡಿಕೆಯಿದೆ. ಹೊಸ ಪ್ಲಾಟ್‌ಫಾರ್ಮ್ನಿಂದಾಗಿ ಆಲ್ಟೊ ಹ್ಯಾಚ್‌ಬ್ಯಾಕ್‌ನ ಕರ್ಬ್ ತೂಕವನ್ನು ಈಗಿನ 680-760 ಕೆಜಿಯಿಂದ 580-660 ಕೆಜಿಗೆ ಇಳಿಸುವ ನಿರೀಕ್ಷೆಯಿದೆ.

ಅತ್ಯಧಿಕ ಮೈಲೇಜ್‌ ನೀಡಲಿದೆ ಹೊಸ ಆಲ್ಟೊ

ಮುಂದಿನ ತಲೆಮಾರಿನ ಮಾರುತಿ ಸುಜುಕಿ ಆಲ್ಟೊ ಕಾರಿನ ಇಂಧನ ದಕ್ಷತೆಯೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಇದು ಪ್ರತಿಲೀಟರ್‌ಗೆ 30 ಕಿ.ಮೀ. ಮೈಲೇಜ್‌ ನೀಡಿದರೂ ಅಚ್ಚರಿಯಿಲ್ಲ. ಈಗಿನ ಆಲ್ಟೊ ಕಾರು 25.2 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ. ಈ ಕಾರಿನ ತೂಕ ಸುಮಾರು 100 ಕೆಜಿ ಕಡಿಮೆಯಾದರೆ ಇಂಧನ ದಕ್ಷತೆ ಇನ್ನಷ್ಟು ಹೆಚ್ಚಾಗಲಿದೆ.

ಹೈಬ್ರಿಡ್‌ ಟೆಕ್‌ ಅಳವಡಿಸುವ ಸಾಧ್ಯತೆ

ಹೊಸ ಆಲ್ಟೊ ಎಂದಿನಂತೆ ಪೆಟ್ರೋಲ್‌ ಆವೃತ್ತಿಗಳಲ್ಲಿ ದೊರಕಲಿದೆ. ಇದೇ ಸಮಯದಲ್ಲಿ ಮಿಡ್‌ ರೇಂಜ್‌ನ ಹೈಬ್ರಿಡ್‌ ತಂತ್ರಜ್ಞಾನದ ಮಾಡೆಲ್‌ ಆಗಮಿಸಿದರೂ ಅಚ್ಚರಿಯಿಲ್ಲ.

ಆಲ್ಟೋ ಕಾರಿಗೆ ಹೆಚ್ಚು ಬೇಡಿಕೆ

ಸದ್ಯ ಆಲ್ಟೋ ಕಾರಿಗೆ ಬೇಡಿಕೆ ಮೊದಲಿನಂತೆ ಇದೆ. ಮೊದಲ ಬಾರಿಗೆ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಆಯ್ಕೆ ಇದಾಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಮಾರುಕಟ್ಟೆಯಲ್ಲೂ ಆಲ್ಟೋಗೆ ಸಾಕಷ್ಟು ಬೇಡಿಕೆಯಿದೆ. ಉತ್ತಮ ಮೈಲೇಜ್‌ ದೊರಕುವ ಕಾರಣಕ್ಕೆ ಹೆಚ್ಚಿನ ಜನರು ಆಲ್ಟೋ ಕಾರು ಖರೀದಿಗೆ ಆದ್ಯತೆ ನೀಡುತ್ತಾರೆ. 1982ರಲ್ಲಿ ಮಾರುತಿ ಮತ್ತು ಸುಜುಕಿ ನಡುವಿನ ಪಾಲುದಾರಿಕೆಯ ನಂತರ ಆಲ್ಟೊ 2000 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 27, 2000 ರಲ್ಲಿ ಬಿಡುಗಡೆ ಮಾಡಲಾಯಿತು. 2015 ರಲ್ಲಿ ಆಲ್ಟೊ ಹೊಸ, ಶಕ್ತಿಯುತ 1.0 ಲೀಟರ್ ಕೆ10ಬಿ ಎಂಜಿನ್‌ನೊಂದಿಗೆ ಆಗಮಿಸಿತು. ಇದರ ಕಾರ್ಯಕ್ಷಮತೆ, ಇಂಧನ ದಕ್ಷತೆ ಹೆಚ್ಚಿತು. ಆಲ್ಟೊ ಕೆ10 ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಆಲ್ಟೊ ಸಿಎನ್‌ಜಿ ಆಯ್ಕೆಯಲ್ಲಿಯೂ ಲಭ್ಯವಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 33 ಕಿಮೀಗಿಂತ ಹೆಚ್ಚು. ಇದರ ಮೈಲೇಜ್ ಈ ವಿಭಾಗದ ಇತರ ಕಾರುಗಳಿಗಿಂತ ಹೆಚ್ಚು. ಇದು ಗ್ಲೋಬಲ್ ಎನ್‌ಕ್ಯಾಪ್‌ನಲ್ಲಿ 2 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.

Whats_app_banner