ಕಪ್ಪು ಕಾರಿನ ಸಮಸ್ಯೆ ಒಂದೆರಡಲ್ಲ: ನೀವು ಕಪ್ಪು ಬಣ್ಣದ ಕಾರು ಖರೀದಿಸಲು ಹೊರಟಿದ್ದರೆ ಈ ವಿಷಯ ಮೊದಲು ತಿಳ್ಕೊಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಪ್ಪು ಕಾರಿನ ಸಮಸ್ಯೆ ಒಂದೆರಡಲ್ಲ: ನೀವು ಕಪ್ಪು ಬಣ್ಣದ ಕಾರು ಖರೀದಿಸಲು ಹೊರಟಿದ್ದರೆ ಈ ವಿಷಯ ಮೊದಲು ತಿಳ್ಕೊಳಿ

ಕಪ್ಪು ಕಾರಿನ ಸಮಸ್ಯೆ ಒಂದೆರಡಲ್ಲ: ನೀವು ಕಪ್ಪು ಬಣ್ಣದ ಕಾರು ಖರೀದಿಸಲು ಹೊರಟಿದ್ದರೆ ಈ ವಿಷಯ ಮೊದಲು ತಿಳ್ಕೊಳಿ

ಇಂದು 6-7 ಲಕ್ಷಕ್ಕೆ ಹೊಸದಾದ ಅತ್ಯುತ್ತಮ ಕಾರುಗಳು ಸಿಗುತ್ತಿರುವುದರಿಂದ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ತಮ್ಮ ನೆಚ್ಚಿನ ಕಾರನ್ನು ಖರೀದಿಸಲು ಮುಂದಾಗುತ್ತಾರೆ. ನೀವು ಕೂಡ ಕಪ್ಪು ಬಣ್ಣದ ಕಾರನ್ನು ಖರೀದಿಸಲು ಹೊರಟಿದ್ದರೆ ಇದಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆಯೂ ತಿಳಿದಿರಬೇಕು. (ಬರಹ: ವಿನಯ್ ಭಟ್)

ನೀವು ಕಪ್ಪು ಬಣ್ಣದ ಕಾರು ಖರೀದಿಸಲು ಹೊರಟಿದ್ದರೆ ಈ ವಿಷಯ ಮೊದಲು ತಿಳ್ಕೊಳಿ
ನೀವು ಕಪ್ಪು ಬಣ್ಣದ ಕಾರು ಖರೀದಿಸಲು ಹೊರಟಿದ್ದರೆ ಈ ವಿಷಯ ಮೊದಲು ತಿಳ್ಕೊಳಿ

ಇಂದು ಮಾರುಕಟ್ಟೆಗೆ ನಾನಾ ಬಣ್ಣಗಳ ಕಾರುಗಳು ಪ್ರವೇಶಿಸುತ್ತಿವೆ. ಆದರೆ, ಹೆಚ್ಚಿನ ಜನರು ಖರೀದಿಸುವ ಕಾರು ಬಿಳಿ ಅಥವಾ ಕಪ್ಪು ಬಣ್ಣದ್ದು. ನೀವು ಕೂಡ ಶೀಘ್ರದಲ್ಲೇ ಕಪ್ಪು ಬಣ್ಣದ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು. ಕಪ್ಪು ಬಣ್ಣದ ಕಾರು ನೋಡಲು ಅಂದವಾಗಿ ಕಾಣುತ್ತದೆ, ಆದರೆ ಕಪ್ಪು ಬಣ್ಣಕ್ಕೆ ಸಂಬಂಧಿಸಿದ ಕೆಲವು ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ?

ಕಪ್ಪು ಕಾರಿನ ಅನಾನುಕೂಲಗಳು

1) ಬೇಗ ಬಿಸಿಯಾಗುತ್ತೆ, ಮೈಲೇಜ್ ಮೇಲೆಯೂ ಪರಿಣಾಮ: ಕಪ್ಪುಬಣ್ಣವು ಸೂರ್ಯನ ಬೆಳಕನ್ನು ಮತ್ತು ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಅಂದರೆ ಕಪ್ಪು ಬಣ್ಣದ ವಾಹನವು ಇತರ ಯಾವುದೇ ಬಣ್ಣದ ವಾಹನಗಳಿಗಿಂತ ವೇಗವಾಗಿ ಬಿಸಿಯಾಗುತ್ತದೆ. ವಾಹನದ ಕ್ಯಾಬಿನ್ ಕೂಡ ತುಂಬಾ ಬಿಸಿಯಿಂದ ಕೂಡಿರುತ್ತದೆ. ಆಗ ಎಸಿ ಆನ್ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಎಸಿ ಹೆಚ್ಚು ಬಳಸಿದರೆ ಇಂಧನ ವೆಚ್ಚವೂ ಹೆಚ್ಚಾಗುತ್ತದೆ, ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.

2) ಪಾಲಿಶ್ ಖರ್ಚು ಹೆಚ್ಚು: ಕಾರು ಕಪ್ಪು ಬಣ್ಣದಲ್ಲಿದ್ದರೆ ಅದರ ಮೇಲೆ ಗೀರುಗಳು ಮತ್ತು ದೂಳು ಸುಲಭವಾಗಿ ಗೋಚರಿಸುತ್ತದೆ. ದೂಳನ್ನು ತೆಗೆದುಹಾಕಲು ವಾಹನವನ್ನು ಪದೇಪದೇ ತೊಳೆಯಬೇಕಾಗುತ್ತದೆ ಮತ್ತು ಗೀರುಗಳನ್ನು ಸರಿಪಡಿಸಲು ಪಾಲಿಶ್ ಮಾಡುವ ವೆಚ್ಚ ಹೆಚ್ಚಾಗಬಹುದು. ಇದರರ್ಥ ಕಪ್ಪು ಕಾರಿನ ನಿರ್ವಹಣೆಗೆ ನೀವು ಮಾಡುವ ವೆಚ್ಚಗಳು ಹೆಚ್ಚಾಗುತ್ತವೆ.

3) ಬಣ್ಣ ಮಾಸುವ ಸಮಸ್ಯೆ: ಕಪ್ಪು ಬಣ್ಣದ ವಾಹನಗಳನ್ನು ಓಡಿಸುವವರು ಹೆಚ್ಚಾಗಿ ಬಣ್ಣ ಮಾಸುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸೂರ್ಯನ ಬೆಳಕು ಹೆಚ್ಚಾಗಿರುವ ಜಾಗದಲ್ಲಿ ಕಾರನ್ನು ಹೆಚ್ಚು ಹೊತ್ತು ನಿಲ್ಲಿಸಿದರೆ ಬಣ್ಣದ ಹೊಳಪು ಕಡಿಮೆಯಾಗುತ್ತದೆ. ಹಾಗೆಂದು ಬೇರೆ ಬಣ್ಣಗಳ ಕಾರುಗಳು ಮಸುಕಾಗುವುದಿಲ್ಲ ಎಂದು ಅಲ್ಲ, ಆದರೆ ಕಪ್ಪುಬಣ್ಣದ ಹೊಳಪು ಇತರ ಬಣ್ಣಗಳಿಗಿಂತ ಹೆಚ್ಚು ಮಾಸುತ್ತದೆ. ಬಣ್ಣವು ಮಸುಕಾಗಲು ಪ್ರಾರಂಭಿಸಿದರೆ ಕಾರು ಖರೀದಿಸಿ ಒಂದು ವರ್ಷವಾದಾಗ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತದೆ.

4) ಅಪಘಾತ ಹೆಚ್ಚು: ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿಯ ಪ್ರಕಾರ, ಕಪ್ಪು ಬಣ್ಣದ ಕಾರುಗಳು ಅಪಘಾತಗಳಿಗೆ ಹೆಚ್ಚು ಒಳಗಾಗುತ್ತವೆ. ಕಪ್ಪು ಕಾರು ಅಪಘಾತದಲ್ಲಿ ಸಿಲುಕುವ ಸಾಧ್ಯತೆ ಶೇ 47 ರಷ್ಟು ಇದೆ. ಬೂದು ಬಣ್ಣದ ಕಾರು ಶೇಕಡಾ 11, ಸಿಲ್ವರ್ ಕಲರ್ ಕಾರಿನಲ್ಲಿ ಶೇ 10 ಮತ್ತು ಕೆಂಪು ಬಣ್ಣದ ಕಾರಿನಲ್ಲಿ ಶೇ 7 ರಷ್ಟು ಅಪಾಯವಿದೆಯಂತೆ. ಬಿಳಿ ಬಣ್ಣದ ಕಾರುಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳುತ್ತದೆ.

Whats_app_banner