BYD Floating Car: ದೋಣಿಯಂತೆ ನೀರಿನಲ್ಲಿ ತೇಲುವ ಐಷಾರಾಮಿ ಎಸ್‌ಯುವಿ; ಜಿನೀವಾ ಮೋಟಾರ್ ಶೋನಲ್ಲಿ ಗಮನ ಸೆಳೆದ ಕಾರು
BYD Floating Car: ಜಿನೀವಾ ಮೋಟಾರ್ ಶೋನಲ್ಲಿ ನೀರಿನಲ್ಲಿ ತೇಲುವ ಐಷಾರಾಮಿ ಎಸ್‌ಯುವಿ ಗಮನ ಸೆಳೆದಿದೆ. ಚೀನಾ ಮೂಲದ ಈ ಕಾರಿನ ಕುರಿತ ಮಾಹಿತಿ ಮತ್ತು ವಿಡಿಯೊ ಇಲ್ಲಿದೆ.
ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಟೆಸ್ಲಾಗೆ ನಡುಕ ಹುಟ್ಟಿಸಿರುವ ಚೀನಾದ ಬಿವೈಡಿ (BYD Cars) ಕಾರುಗಳು ಹೊಸ ತಂತ್ರಜ್ಞಾನದ ಅಪ್ಡೇಟ್‌ಗಳೊಂದಿಗೆ ಮತ್ತೆ ಸುದ್ದಿಯಾಗಿದ್ದು, ನೀರಿನಲ್ಲಿ ತೇವಲುವಂತ ಐಷಾರಾಮಿ ಎಸ್‌ಯುವಿಯನ್ನು ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಿದೆ. ಈ ಎಸ್‌ಯುವಿಯ ಹೆಸರು ಯಾಂಗ್ವಾಂಗ್ ಯು8 ಅಂತ. ಇದು ಪ್ಲಗ್-ಇನ್ ಹೈಬ್ರಿಡ್ ಆಗಿದೆ. ಈ ಕಾರು ದೋಣಿಯಂತೆ ನೀರಿನ ಮೇಲೆ ತೇಲುತ್ತದೆ. ಇದು ಅಚ್ಚರಿ ಎನಿಸಿದರು ನಿಜ. ಈಗಾಗಲೇ ಚೀನಾದಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳುತ್ತಿರುವ ಬಿವೈಡಿ ಯುರೋಪ್ ಮಾರುಕಟ್ಟೆಯತ್ತ ಗಮನ ಹರಿಸಿದೆ. ಇದರ ಅಂಗವಾಗಿ ಜಿನೀವಾ ಕಾರ್ ಶೋನಲ್ಲಿ 1,200 ಎಚ್‌ಪಿ ಯಾಂಗ್‌ವಾಂಗ್ ಯು8 ಪ್ಲಗ್-ಇನ್ ಹೈಬ್ರಿಡ್ ಕಾರನ್ನು ಪ್ರದರ್ಶಿಸಿದೆ. ಇದು ಎಲೆಕ್ಟ್ರಿಕ್ ಎಸ್‌ಯುವಿ ಅನ್ನೋದು ಮತ್ತೊಂದು ವಿಶೇಷ.
ಈ ಎಸ್‌ಯುವಿ ಆಫ್-ರೋಡ್‌ನಲ್ಲಿ ಮಾತ್ರವಲ್ಲ, ಆಫ್-ಲ್ಯಾಂಡ್‌ನಲ್ಲಿಯೂ ಪ್ರಯಾಣಿಸಬಹುದು! ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವಂತೆ ಕಂಪನಿಯು ಈ ವಾಹನವನ್ನು ವಿನ್ಯಾಸಗೊಳಿಸಿದೆ. ನೀವು ಪ್ರವಾಹದಲ್ಲಿ ಸಿಲುಕಿಕೊಂಡರೆ, ಈ ಎಸ್‌ಯುವಿಯ ಎಂಜಿನ್ ನಿಲ್ಲುತ್ತದೆ. ಕೂಡಲೇ ಎಚ್‌ವಿಎಸಿ ಸಿಸ್ಟಮ್ ಆನ್ ಆಗುತ್ತದೆ. ಮರು-ಪರಿಚಲನೆ ಮೋಡ್ ಪ್ರಾರಂಭವಾಗುತ್ತದೆ. ಕಿಟಕಿಗಳು ಸಂಪೂರ್ಣವಾಗಿ ಮುಚ್ಚುತ್ತವೆ. ಹಾಗೆ ನೀರಿನಲ್ಲಿ 30 ನಿಮಿಷ ಪ್ರಯಾಣಿಸಬಹುದು!
Yangwang u8 Electric SUV: ಯಾಂಗ್‌ವಾಂಗ್ ಯು8 ಹೊಸ ಆವೃತ್ತಿಯ ಎಲೆಕ್ಟ್ರಿಕ್ ಎಸ್‌ಯುವಿ 360 ಡಿಗ್ರಿ ಟ್ಯಾಂಕ್ ಟರ್ನ್ ಅನ್ನು ಸಹ ಮಾಡಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹೈಬ್ರಿಡ್ ಕಾರು ಎಕ್ಸ್‌ಟೆಂಡೆಡ್ ರೇಂಜ್ ವಿ. ಅಂದರೆ ಇದು 4 ಮೋಟಾರ್ ಎಲೆಕ್ಟ್ರಿಕ್ ಎಂಜಿನ್, 2.0 ಲೀಟರ್ ಟರ್ಬೋಚಾರ್ಜ್ಡ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 620 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಬಹುದು ಎಂದು ಕಂಪನಿ ಹೇಳಿದೆ.
ಈ ಯಾಂಗ್‌ವಾಂಗ್ ಯು8 ಪ್ಲಗ್-ಇನ್ ಹೈಬ್ರಿಡ್ ಎಸ್‌ಯುವಿ ಬೆಲೆಯನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಆದರೆ ಇದರ ಆರಂಭಿಕ ಬೆಲೆ 1,50,000 ಡಾಲರ್ ಇರಬಹುದು ಎಂಬ ಮಾತು ಕೇಳಿಬರುತ್ತಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ 1.24 ಕೋಟಿ ರೂಪಾಯಿ ಇರಲಿದೆ.
ಬಿವೈಡಿ ಯಾಂಗ್‌ವಾಂಗ್ ಯು8 ಇತ್ತೀಚಿನ ಪ್ರೀಮಿಯಂ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸುತ್ತದೆ ಎಂಬ ನಿರೀಕ್ಷೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಮರ್ಸಿಡಿಸ್ ಬೆಂಝ್ ಜಿ ವ್ಯಾಗ್ನರ್ ಮತ್ತು ರೇಂಜ್ ರೋವರ್‌ಗೆ ಪರ್ಯಾಯವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ನಂಬಿವೆ. ವಾಸ್ತವವಾಗಿ ಇದು ಬಿಡಬ್ಲ್ಯೂವೈಡಿಯ ತಂತ್ರವೂ ಆಗಿದೆ! ಯುರೋಪಿಯನ್ ಮಾರುಕಟ್ಟೆಯಲ್ಲಿ ತನ್ನ ಶಕ್ತಿಯನ್ನು ಹರಡಲು ಚೀನಾ ಮೂಲದ ಬಿವೈಡಿ ಕಂಪನಿಯ ಪ್ರಯತ್ನಕ್ಕೆ ಇದಕ್ಕೆ ಸಾಕ್ಷಿಯಾಗಿದೆ.
ಆದರೆ ನೀರಿನ ಮೇಲೆ ತೇಲುವ ವಾಹನವನ್ನು ಸೃಷ್ಟಿಸಿದ ಮೊದಲ ಕಂಪನಿ ಬಿಡಬ್ಲ್ಯೂಡಿ ಅಲ್ಲ! ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದಾರೆ. ಅವರ ಸೈಬರ್ ಟ್ರಕ್ ಸ್ವಲ್ಪ ಸಮಯದವರೆಗೆ ದೋಣಿಯಂತೆ ಕೆಲಸ ಮಾಡುತ್ತದೆ ಎಂದು ಮಸ್ಕ್ 2023ರಲ್ಲಿ ಟ್ವೀಟ್ ಮಾಡಿದ್ದರು. ಮುಂದಿನ ದಿನಗಳಲ್ಲಿ ರಸ್ತೆ ಜೊತೆಗೆ ನೀರಿನಲ್ಲಿ ತೇಲುವಂತ ಕಾರುಗಳಲ್ಲೂ ಪೈಪೋಟಿ ನಡೆದರೆ ಅಚ್ಚರಿ ಪಡಬೇಕಾಗಿಲ್ಲ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.