Car Care Tips: ನೀವು ನಿಮ್ಮ ಕಾರನ್ನು ಬಿಸಿಲಿನಲ್ಲಿ ನಿಲ್ಲಿಸುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ, ಏನೆಲ್ಲ ಆಗುತ್ತೆ ನೋಡಿ
ಕಾರನ್ನು ಬಿಸಿಲಿನಲ್ಲಿ ನಿಲ್ಲಿಸುವ ಅಭ್ಯಾಸ ನಿಮಗಿದ್ದರೆ ಜಾಗರೂಕರಾಗಿರಿ. ಇದು ಕಾರಿನ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಇನ್ನೂ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕಾರ್ ಪಾರ್ಕಿಂಗ್ ವಿಷಯದಲ್ಲಿ ನೀವು ಈ ಕೆಲವು ಅಂಶಗಳನ್ನು ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಬೇಕು. ( ಬರಹ: ವಿನಯ್ ಭಟ್)
ಇಂದು ಭಾರತದಲ್ಲಿ ಕಾರುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕಾರು ಖರೀದಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಕೆಲವರಿಗೆ ತಮ್ಮ ಕಾರಿಗೆ ಯಾವುದೇ ತೊಂದರೆಯಾಗದಂತೆ ಸರಿಯಾಗಿ ನೋಡಿಕೊಳ್ಳಲು ಬರುವುದಿಲ್ಲ. ಕಾರ್ ಪಾರ್ಕಿಂಗ್ ವಿಚಾರದಲ್ಲಿ ಹಲವರು ಹಲವು ತಪ್ಪುಗಳನ್ನು ಮಾಡುತ್ತಾರೆ. ನೀವು ನಿಮ್ಮ ಕನಸಿನ ಕಾರನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ, ಅದರಿಂದ ನಿಮ್ಮ ಕಾರಿಗೆ ತೊಂದರೆ ತಪ್ಪಿದಲ್ಲ. ಹೆಚ್ಚಿನ ಜನರು ಮನೆಯಲ್ಲಿ ಪಾರ್ಕಿಂಗ್ ಸ್ಥಳವಿಲ್ಲ ಎಂದು ತಮ್ಮ ಕಾರನ್ನು ತೆರೆದ ಪ್ರದೇಶಗಳಲ್ಲಿ ಅಥವಾ ಮನೆಯ ಎದುರು ನಿಲ್ಲಿಸುತ್ತಾರೆ. ಆದರೆ, ನಿಮ್ಮ ಕಾರಿನ ದೀರ್ಘಾವಧಿಯ ಲೈಫ್‌ಲೈನ್ ಬಯಸಿದರೆ, ಕಾರನ್ನು ತಪ್ಪಿಯೂ ಬಿಸಿಲಲ್ಲಿ ನಿಲ್ಲಿಸಬಾರದು, ಕಾರನ್ನು ಬಿಸಿಲಿನಲ್ಲಿ ನಿಲ್ಲಿಸುವುದರಿಂದ ಏನೆಲ್ಲ ತೊಂದರೆ ಆಗುತ್ತದೆ ನೋಡಿ.
ಬಿಸಿಲಿನಲ್ಲಿ ಕಾರನ್ನು ನಿಲ್ಲಿಸುವ ಅನಾನುಕೂಲಗಳು
ಕಾರನ್ನು ಹೆಚ್ಚು ಕಾಲ ಬಿಸಿಲಿನಲ್ಲಿ ನಿಲ್ಲಿಸಿದರೆ ಕಾರಿನ ಡ್ಯಾಶ್‌ಬೋರ್ಡ್ ಮತ್ತು ಸೀಟುಗಳಿಗೆ ಹಾನಿಯಾಗಬಹುದು. ಕಾರಿನ ಡ್ಯಾಶ್‌ಬೋರ್ಡ್ ಮತ್ತು ಸೀಟುಗಳು ಗಟ್ಟಿಯಾದ ಪ್ಲಾಸ್ಟಿಕ್ ಮತ್ತು ಚರ್ಮದಿಂದ ಮಾಡಲ್ಪಟ್ಟಿದೆ. ಕಾರನ್ನು ದೀರ್ಘಕಾಲದವರೆಗೆ ಹೊಸದಾಗಿ ಇರಿಸಲು ನೀವು ಬಯಸಿದರೆ, ಸೂರ್ಯನ ಬೆಳಕು ನೇರವಾಗಿ ಕಾರಿನ ಮೇಲೆ ನಿಲ್ಲಿಸುವುದನ್ನು ತಪ್ಪಿಸಿ.
ಇದಲ್ಲದೇ ಕಾರಿನ ಪೇಂಟ್ ಕೂಡ ಮಂದವಾಗುವ ಸಾಧ್ಯತೆ ಇರುತ್ತದೆ. ಕಪ್ಪು, ಕೆಂಪು ಅಥವಾ ಯಾವುದೇ ಗಾಢ ಬಣ್ಣದ ಕಾರಿನ ಮೇಲೆ ಸೂರ್ಯನ ಬೆಳಕಿನ ಪರಿಣಾಮವನ್ನು ಕಾಣಬಹುದು.
ಬಿಸಿಲಿನಲ್ಲಿ ಕಾರು ಹೆಚ್ಚು ಸಮಯ ಇದ್ದರೆ ಅದು ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗಾದಾಗ ಕಾರಿನಲ್ಲಿ ಎಸಿ ಕೆಲಸ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎಸಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಎಂಜಿನ್ ಮೇಲೆ ಒತ್ತಡ ಹೆಚ್ಚುತ್ತದೆ.
ಅತಿಯಾದ ಸೂರ್ಯನ ಬೆಳಕಿನಿಂದ ಕಾರಿನ ಬ್ಯಾಟರಿ ಸಾಮರ್ಥ್ಯವು ಕಡಿಮೆಯಾಗಬಹುದು. ಇದರಿಂದಾಗಿ ಬ್ಯಾಟರಿ ಬೇಗನೆ ಹಾಳಾಗುವ ಸಾಧ್ಯತೆಗಳಿವೆ. ಸೂರ್ಯನ ಬೆಳಕಿನಿಂದಾಗಿ ಕಾರಿನ ಎಲೆಕ್ಟ್ರಾನಿಕ್ ಭಾಗಗಳಾದ ಏರ್ ಕಂಡಿಷನರ್, ಪವರ್ ವಿಂಡೋ ಕೂಡ ಹಾಳಾಗುವ ಸಂಭವವಿದೆ.
ಹಾಗೆಯೆ ಕಾರಿನಲ್ಲಿ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್ ಇಟ್ಟುಕೊಂಡು ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಿಸಿದರೆ ಈ ವಸ್ತುಗಳು ಹಾಳಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ.
ವಿಪರೀತ ಬಿಸಿಲಿದ್ದು ಅದು ಟೈರ್ ಮೇಲೆ ಬೀಳುತ್ತಿದ್ದರೆ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಟೈರ್ ಸ್ಫೋಟಗೊಳ್ಳಬಹುದು. ನೇರವಾದ ಸೂರ್ಯನ ಬೆಳಕು ಟೈರ್‌ಗಳಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಹೆಚ್ಚಾಗಿ ಹಳೆಯ ಟೈರ್ಗಳನ್ನು ಬಳಸುವುದರಿಂದ ಈ ರೀತಿ ಸಂಭವಿಸುತ್ತದೆ.
ಪಾರ್ಕ್ ಮಾಡುವಾಗ ಈ ವಿಷಯ ತಿಳಿದಿರಲಿ
ಸಾಧ್ಯವಾದಷ್ಟು ನೆರಳು ಇರುವ ಸ್ಥಳದಲ್ಲಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿ. ನೀವು ಕಾರು ಇಡುವ ಅಕ್ಕಪಕ್ಕ ಮರಗಳಿದ್ದರೆ ಅದರ ಅಡಿಯಲ್ಲಿ ಸಹ ನಿಲ್ಲಿಸಬಹುದು. ಕಾರ್ ಪಾರ್ಕಿಂಗ್ಗೆಂದು ಒಂದು ಜಾಗ ಮಾಡಿ ಅಲ್ಲಿ ನಿಲ್ಲಿಸುವುದು ಉತ್ತಮ ಆಯ್ಕೆ.
ಬೇರೆ ದಾರಿಯೇ ಇಲ್ಲ, ಕಾರನ್ನು ರಸ್ತೆಯಲ್ಲಿ ಅಥವಾ ಸೂರ್ಯನ ಕಿರಣ ಬೀಳುವ ಜಾಗದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ ಎಂದಾದರೆ, ಅದರ ಮೇಲೆ ಉತ್ತಮ ಗುಣಮಟ್ಟದ ಕವರ್ ಅನ್ನು ಹಾಕಿ. ಆಗ ಸೂರ್ಯನ ಬೆಳಕು ನೇರವಾಗಿ ನಿಮ್ಮ ಕಾರಿನ ಮೇಲೆ ಬೀಳುವುದಿಲ್ಲ. ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆಫ್‌ಲೈನ್‌ನಲ್ಲಿ ಕಾರ್ ಕವರ್‌ಗಳನ್ನು ಖರೀದಿಸಬಹುದು.
ವಿಭಾಗ