Mileage Tips: ನಿಮ್ಮ ಕಾರಿನ ಮೈಲೇಜ್ ಹೆಚ್ಚಾಗಬೇಕೇ? ಕ್ಲಚ್‌ ಒತ್ತುವಾಗ ಈ ತಪ್ಪು ಮಾಡಬೇಡಿ: ನೀವು ತಿಳಿದಿರಲೇಬೇಕಾದ ಟಿಪ್ಸ್ ಇವು
ಕನ್ನಡ ಸುದ್ದಿ  /  ಜೀವನಶೈಲಿ  /  Mileage Tips: ನಿಮ್ಮ ಕಾರಿನ ಮೈಲೇಜ್ ಹೆಚ್ಚಾಗಬೇಕೇ? ಕ್ಲಚ್‌ ಒತ್ತುವಾಗ ಈ ತಪ್ಪು ಮಾಡಬೇಡಿ: ನೀವು ತಿಳಿದಿರಲೇಬೇಕಾದ ಟಿಪ್ಸ್ ಇವು

Mileage Tips: ನಿಮ್ಮ ಕಾರಿನ ಮೈಲೇಜ್ ಹೆಚ್ಚಾಗಬೇಕೇ? ಕ್ಲಚ್‌ ಒತ್ತುವಾಗ ಈ ತಪ್ಪು ಮಾಡಬೇಡಿ: ನೀವು ತಿಳಿದಿರಲೇಬೇಕಾದ ಟಿಪ್ಸ್ ಇವು

ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ಅಪಘಾತ ತಪ್ಪಿಸಬಹುದು ಎಂಬ ಮಾತಿದೆ. ಸರಿಯಾದ ಕ್ರಮದಲ್ಲಿ ಕಾರ್ ಓಡಿಸಿದರೆ ಮೈಲೇಜ್ ಸಹ ಸುಧಾರಿಸುತ್ತದೆ. ನೀವು ಕಾರನ್ನು ಚಲಾಯಿಸುವಾಗ ಮಾಡುವ ಕೆಲವು ಸಣ್ಣ ತಪ್ಪುಗಳೇ ನಿಮ್ಮ ಕಾರಿನ ಮೈಲೇಜ್ ಅನ್ನು ಕಡಿಮೆ ಮಾಡುತ್ತೆವೆ. ಹಾಗಾದರೆ, ಕಾರಿನ ಮೈಲೇಜ್ ಹೆಚ್ಚಿಸಲು ಏನು ಮಾಡಬೇಕು?, ಇಲ್ಲಿದೆ ನೋಡಿ ಟಿಪ್ಸ್. (ಬರಹ: ವಿನಯ್ ಭಟ್)

ಕಾರ್ ಮೈಲೇಜ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್
ಕಾರ್ ಮೈಲೇಜ್ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಇಂದು ಬಿಡುಗಡೆ ಆಗುತ್ತಿರುವ ಹೆಚ್ಚಿನ ಕಾರುಗಳಲ್ಲಿ ಮೈಲೇಜ್ ದೊಡ್ಡ ಸಮಸ್ಯೆಯಾಗಿದೆ. ಒಂದು ಕಡೆ ಹದಗೆಟ್ಟ ರಸ್ತೆಗಳು, ಮತ್ತೊಂದೆಡೆ ಟ್ರಾಫಿಕ್. ಈ ಸಮಸ್ಯೆಗಳಿಂದಾಗಿ ಸಾಮಾನ್ಯ ಕಾರುಗಳಲ್ಲಿ ಮೈಲೇಜ್ 15 ಕಿಲೋ ಮೀಟರ್ ದಾಟುವುದು ಅಸಾಧ್ಯವಾಗಿದೆ. ಇವುಗಳ ಜೊತೆಗೆ ನಾವು ಮಾಡುವ ಕೆಲವು ತಪ್ಪುಗಳಿಂದ ಕೂಡ ಮೈಲೇಜ್ ಕುಸಿಯುತ್ತದೆ. ಮುಖ್ಯವಾಗಿ ಕ್ಲಚ್‌ನ ಅಸಮರ್ಪಕ ಬಳಕೆಯು ಕಾರಿನ ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ವಾಹನದ ಕ್ಲಚ್ ಮತ್ತು ಗೇರ್‌ಬಾಕ್ಸ್ ಅನ್ನು ಸಹ ಹಾನಿಗೊಳಿಸುತ್ತದೆ. ಹಾಗಾದರೆ ಕ್ಲಚ್ ಬಳಸುವಾಗ ನಾವು ಆಗಾಗ್ಗೆ ಮಾಡುವ ಕೆಲವು ತಪ್ಪುಗಳು ಯಾವುವು? ಸರಿಪಡಿಸುವುದು ಹೇಗೆ ಎಂಬುದನ್ನು ನೋಡೋಣ.

ಹಾಫ್-ಡಿಪ್ರೆಸಿಂಗ್ ಕ್ಲಚ್

ಕಾರು ಚಾಲನೆ ಮಾಡುವಾಗ, ನಾವು ಅನೇಕ ಬಾರಿ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತುವುದಿಲ್ಲ, ಇದರಿಂದಾಗಿ ವಾಹನದ ಕ್ಲಚ್ ಪ್ಲೇಟ್ ಮತ್ತು ಪ್ರೆಶರ್ ಪ್ಲೇಟ್ ಮೇಲೆ ಒತ್ತಡಬಿದ್ದು ಸಮಸ್ಯೆ ಶುರುವಾಗುತ್ತದೆ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ ಮತ್ತು ಕ್ಲಚ್ ಬೇಗನೆ ಹಾಳಾಗುತ್ತದೆ.

ವಾಹನವನ್ನು ನಿಲ್ಲಿಸುವಾಗ ಕ್ಲಚ್ ಒತ್ತುವುದು

ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿರುವಾಗ ಅಥವಾ ಟ್ರಾಫಿಕ್ ಜಾಮ್‌ ಇರುವಾಗ ಆಗಾಗ್ಗೆ ಕ್ಲಚ್ ಒತ್ತುತ್ತಲೇ ಇರುತ್ತೇವೆ. ಇದು ತಪ್ಪು ಬಳಕೆ. ಹೀಗೆ ಮಾಡುವುದರಿಂದ, ಕ್ಲಚ್ ಪ್ಲೇಟ್ ಮತ್ತು ಪ್ರೆಶರ್ ಪ್ಲೇಟ್ ನಿರಂತರ ಕೆಲಸ ಮಾಡುತ್ತಿರುತ್ತದೆ. ಮೈಲೇಜ್ ಕುಸಿಯಲು ಇದು ಮುಖ್ಯ ಕಾರಣ.

ತಪ್ಪು ಗೇರ್‌ನಲ್ಲಿ ಚಾಲನೆ

ಅತಿ ಕಡಿಮೆ RPM ನಲ್ಲಿ ಚಾಲನೆ ಮಾಡುವುದು ಅಥವಾ ಕೊನೆಯ ಗೇರ್‌ನಲ್ಲಿ ಚಾಲನೆ ಮಾಡುವುದು ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ. ವಾಹನದ ವೇಗಕ್ಕೆ ಅನುಗುಣವಾಗಿ ಸರಿಯಾದ ಗೇರ್ ಬಳಸಬೇಕು. ಇಂಥ ಸಂದರ್ಭಗಳಲ್ಲಿ ಕ್ಲಚ್ ಬಳಕೆಯೂ ವಾಹನದ ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡುತ್ತದೆ.

ಇದ್ದಕ್ಕಿದ್ದಂತೆ ಚಾಲನೆ ಮಾಡುವುದು

ದಿಢೀರ್ ಎಂದು ಬ್ರೇಕ್ ಹಾಕುವುದು ಮತ್ತು ಸಡನ್ ಆಗಿ ಎಕ್ಸಲೇಟರ್ ಕೊಟ್ಟು ವೇಗವಾಗಿ ತೆರಳುವುದರಿಂದ ಕೂಡ ಮೈಲೇಜ್ ಕಡಿಮೆ ಆಗುತ್ತದೆ. ವಾಹನವನ್ನು ಯಾವಾಗಲೂ ನಿಧಾನವಾಗಿ ಮತ್ತು ಸರಾಗವಾಗಿ ಓಡಿಸಬೇಕು.

ಕ್ಲಚ್‌ನ ಅತಿಯಾದ ಬಳಕೆ

ಚಾಲನೆ ಮಾಡುವಾಗ, ಕ್ಲಚ್ ಅನ್ನು ಸಾಧ್ಯವಾದಷ್ಟು ಕಡಿಮೆ ಬಳಸಬೇಕು. ಟ್ರಾಫಿಕ್‌ನಲ್ಲಿ ಚಾಲನೆ ಮಾಡುವಾಗ, ವಾಹನವನ್ನು ನ್ಯೂಟ್ರಲ್‌ನಲ್ಲಿ ಇರಿಸಬೇಕು ಮತ್ತು ಸ್ವಲ್ಪ ಸಮಯ ನಿಲ್ಲಿಸಿದ ನಂತರ ಕ್ಲಚ್ ಅನ್ನು ಬಿಡಬೇಕು.

ಕ್ಲಚ್ ಬಳಕೆ ಕುರಿತು ನೀವು ತಿಳಿದಿರಬೇಕಾದ ಮಾಹಿತಿ

1) ಚಾಲನೆ ಮಾಡುವಾಗ, ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತಿ

2) ಕಾರನ್ನು ನಿಲ್ಲಿಸಿರುವಾಗ ಕ್ಲಚ್ ಬಿಟ್ಟುಬಿಡಿ, ಒತ್ತುತ್ತಲೇ ಇರಬೇಡಿ.

3) ವಾಹನದ ವೇಗಕ್ಕೆ ಅನುಗುಣವಾಗಿ ಸರಿಯಾದ ಗೇರ್ ಬಳಸಿ.

4) ಕಾರನ್ನು ನಿಧಾನವಾಗಿ ಓಡಿಸಿ.

ಈ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಬಹುದು. ಜೊತೆಗೆ ಕ್ಲಚ್ ಮತ್ತು ಗೇರ್‌ಬಾಕ್ಸ್‌ನ ಜೀವಿತಾವಧಿ ಹೆಚ್ಚಿಸಬಹುದು.

ಉತ್ತಮ ಮೈಲೇಜ್ ಪಡೆಯಲು ಈ ಅಂಶ ನೆನಪಿಡಿ

1) ವಾಹನವನ್ನು ನಿಯಮಿತವಾಗಿ ಸರ್ವೀಸ್ ಮಾಡುತ್ತಿರಿ.

2) ಟೈರ್‌ಗಳಲ್ಲಿ ಸರಿಯಾದ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳಿ.

3) ಕಾರಿನಲ್ಲಿ ಅನಗತ್ಯ ವಸ್ತುಗಳನ್ನು ಇಡಬೇಡಿ.

4) ಎಸಿ ಬಳಕೆ ಕಡಿಮೆ ಮಾಡಿ.

ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ. ನಿಮ್ಮ ಕಾರಿನ ಮೈಲೇಜ್ ಅನ್ನು ಶೇ 20 ರಷ್ಟು ಹೆಚ್ಚಿಸಬಹುದು. ಇದು ನಿಮಗೆ ಹಣ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ.

Whats_app_banner