Monsoon Car Care: ಮಳೆ ಬಿಟ್ಟ ಬಳಿಕ ಕಾರಿನ ಕಾಳಜಿ ಹೇಗೆ, ಮಳೆಗಾಲದಲ್ಲಿ ವಾಹನ ಸುರಕ್ಷತೆಗೆ ಈ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ
Monsoon Car Care Tips: ಮಳೆಗಾಲದಲ್ಲಿ ಮತ್ತು ಮಳೆಗಾಲ ಮುಗಿದ ಬಳಿಕ ಕಾರಿನ ಕಾಳಜಿ ವಹಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಮಳೆನೀರು, ಮಣ್ಣು, ಕೆಸರು, ತೇವಾಂಶದಿಂದ ವಾಹನಕ್ಕೆ ಸಾಕಷ್ಟು ಹಾನಿಯಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸಬೇಕು.
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಈಗ ಬಹುತೇಕ ಕಡೆಗಳಲ್ಲಿ ಕಡಿಮೆಯಾಗಿದೆ. ಈ ಸಮಯದಲ್ಲಿ ಕಾರು ಮಾಲೀಕರು ತಮ್ಮ ಕಾರಿನ ಕುರಿತು ಕಾಳಜಿ ವಹಿಸಬೇಕು. ವಾಹನ ಮಾಲೀಕರಿಗೆ ಮಳೆಗಾಲ ತುಸು ಸವಾಲನ್ನು ಒಡ್ಡುತ್ತದೆ. ತೇವಾಂಶ, ರಸ್ತೆಯ ಗುಂಡಿಗಳು, ರಸ್ತೆಯಲ್ಲಿ ನೀರು ತುಂಬಿರುವುದು, ಕೆಸರು ರಸ್ತೆಯಲ್ಲಿ ಸಾಗಬೇಕಿರುವುದು ಇತ್ಯಾದಿ ಹಲವು ಸವಾಲುಗಳು ಇವೆ. ಇದರಿಂದ ಕಾರಿನ ದೀರ್ಘ ಬಾಳ್ವಿಕೆಗೂ ತೊಂದರೆಯಾಗುತ್ತದೆ. ಮಳೆ ಬಿಟ್ಟ ಬಳಿಕ ಕಾರನ್ನು ತುಸು ಕಾಳಜಿಯಿಂದ ನೋಡಿಕೊಂಡರೆ ಕಾರಿಗೆ ಉತ್ತಮ. ಮಳೆ ಬಿಟ್ಟ ಬಳಿಕ ಕಾರಿನ ಕಾಳಜಿ ಹೇಗಿರಬೇಕು ಎಂದು ತಿಳಿಯೋಣ.
ಕಾರಿನ ಹೊರಭಾಗ ಶುಚಿಗೊಳಿಸಿ
ಮಳೆಗಾಲದಲ್ಲಿ ಬಹುತೇಕರ ಕಾರು ಕೆಸರಿನಿಂದ ಆವೃತ್ತವಾಗಿರಬಹುದು. ಟೈರ್, ಬಾನೆಟ್, ಕಾರಿನ ಕೆಳಭಾಗವಂತೂ ಕೆಸರು ಅಂಟಿಕೊಂಡು ನೋಡಲು ಸಾಧ್ಯವಿಲ್ಲ ಎನ್ನುವಂತೆ ಇರಬಹುದು. ಕಾರಿನ ಹೊರಭಾಗವು ಕೆಸರು, ಮಾಲಿನ್ಯಕಾರಕಗಳಿಂದ ತುಂಬಿರಬಹುದು. ಇದನ್ನು ಸಂಪೂರ್ಣವಾಗಿ ಶುಚಿಗೊಳಿಸುವುದು ಅಗತ್ಯ. ಪಿಎಚ್ ಸಮತೊಲಿತ ಕಾರ್ ಶ್ಯಾಂಪು ಬಳಸಿ ತೊಳೆಯಿರಿ. ಕಾರಿನ ಕೆಳಭಾಗಕ್ಕೂ ಸರಿಯಾಗಿ ನೀರು ಹಿಡಿಯಿರಿ. ಕಾರ್ ಸರ್ವೀಸ್ ಸೆಂಟರ್‌ನಲ್ಲಿ ತೊಳೆದರೆ ಉತ್ತಮ. ಕಾರನ್ನು ಸಂಪೂರ್ಣವಾಗಿ ತೊಳೆದು ಒಣಗಿಸಿ. ಬಳಿಕ ಕಾರಿನ ಬಣ್ಣದ ಮೇಲೆ ರಕ್ಷಣಾತ್ಮಕ ಪದರ ಸೇರಿಸಲು ಕಾರ್ ವ್ಯಾಕ್ಸ್ ಹಚ್ಚಬಹುದು.
ತುಕ್ಕು ಹಿಡಿಯದಂತೆ ನೋಡಿಕೊಳ್ಳಿ
ಮುಂಗಾರು ಮಳೆ ಮುಗಿದ ಬಳಿಕ ಕಾರಿಗೆ ತುಕ್ಕು ಹಿಡಿದಿರುವುದೇ ಎಂದು ಪರಿಶೀಲಿಸಬೇಕು. ತೇವಾಂಶಕ್ಕೆ ಒಡ್ಡಿಕೊಂಡಿರುವುದರಿಂದ ಕಾರಿನ ಲೋಹದ ಭಾಗಗಳಲ್ಲಿ ತುಕ್ಕು ಹಿಡಿದಿರಬಹುದು. ತುಕ್ಕು ಕಂಡಾಕ್ಷಣ ಸರಿಪಡಿಸಿಕೊಳ್ಳಿ. ಇಲ್ಲವಾದರೆ ಇತರೆ ಭಾಗಗಳಿಗೂ ತುಕ್ಕು ಹರಡಬಹುದು. ತುಕ್ಕು ವಿರೋಧಿ ಸ್ಪ್ರೇ ಬಳಸಿ.
ಕಾರಿನ ಟೈರ್‌ಗಳನ್ನು ಪರಿಶೀಲಿಸಿ
ಪ್ರತಿನಿತ್ಯ ಕಾರಿನ ಟೈರ್ ಪರಿಶೀಲನೆ ಮಾಡಬೇಕು. ಬೇಸಿಗೆ, ಚಳಿಗಾಲ, ಮಳೆಗಾಲ ಎಲ್ಲಾ ಅವಧಿಯಲ್ಲೂ ಟೈರ್ ಕುರಿತು ಗಮನ ಹರಿಸಬೇಕು. ಕಾರಿನ ಟೈರ್‌ಗೆ ಏನಾದರೂ ಹಾನಿಯಾಗಿದೆಯೇ ಎಂದು ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರು ನಿಂತ ಗುಂಡಿಯ ಮೇಲೆ ತಿಳಿಯದೆ ಕಾರು ಹಾದು ಹೋಗಿರಬಹುದು, ಕೆಸರು, ಮಣ್ಣುಗಳ ನಡುವೆ ಕಾರಿನ ಟೈರ್‌ಗೆ ಹಾನಿಯಾಗುವಂತಹ ವಸ್ತುಗಳಿಂದ ತೊಂದರೆಯಾಗಿರಬಹುದು. ಹೀಗಾಗಿ, ಟೈರ್ ಪರಿಶೀಲನೆ ನಡೆಸಿ. ಸುರಕ್ಷಿತ ಪ್ರಯಾಣಕ್ಕೆ ಕಾರಿನ ಟೈರ್ ಕಾಳಜಿ ವಹಿಸುವುದು ಅತ್ಯಂತ ಅಗತ್ಯ.
ಕಾರಿನ ಇಂಟೀರಿಯರ್ ಕ್ಲೀನ್ ಮಾಡಿ
ಕಾರಿನ ಹೊರಭಾಗದಂತೆ ಕಾರಿನ ಕ್ಯಾಬಿನ್ ಕೂಡ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತದೆ. ತೇವಾಂಶ ಇತ್ಯಾದಿಗಳಿಂದ ಕಾರಿನ ಕ್ಯಾಬಿನ್‌ನೊಳಗೂ ಹಾನಿಯಾಗಿರಬಹುದು. ಕಾರಿನೊಳಗೆ ಕೆಟ್ಟ ವಾಸನೆ ತುಂಬಬಹುದು. ಈ ರೀತಿ ಆಗದಂತೆ ನಿತ್ಯ ಕಾರಿನ ಇಂಟೀರಿಯರ್ ಕ್ಲೀನ್ ಮಾಡುತ್ತ ಇರಿ. ಕಾರಿನ ಸೀಟ್ ಅನ್ನು ವಾಕ್ಯುಂ ಮಾಡಿ, ಕಾರ್ಪೆಟ್ ಮತ್ತು ಫ್ಲೋರ್ ಮ್ಯಾಟ್‌ಗಳನ್ನು ತೆಗೆದು ಶುಚಿಗೊಳಿಸಿ. ಅತ್ಯುತ್ತಮ ಇಂಟೀರಿಯರ್ ಕ್ಲೀನರ್ ಬಳಸಿ ಡ್ಯಾಷ್‌ಬೋರ್ಡ್, ಡೋರ್ ಪ್ಯಾನೇಲ್ ಮತ್ತು ಇತರೆ ಭಾಗಗಳನ್ನು ಶುಚಿಗೊಳಿಸಿ.
ಎಲೆಕ್ಟ್ರಿಕಲ್ ವಿಷಯಗಳು
ಮಳೆಗಾಲದಲ್ಲಿ ಕಾರಿನ ಎಲೆಕ್ಟ್ರಿಕ್ ಭಾಗಗಳಿಗೂ ಹಾನಿಯಾಗಿರಬಹುದು. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಿಷಯಗಳನ್ನು ಪರಿಶೀಲನೆ ಮಾಡಿ. ಆಧುನಿಕ ಕಾರುಗಳಲ್ಲಿ ಸಾಕಷ್ಟು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳು ಇರುತ್ತವೆ. ಕಾರಿನ ಹೆಡ್‌ಲ್ಯಾಂಪ್, ಟೇಲ್‌ಲೈಟ್, ಇಂಡಿಕೇಟರ್, ಫಾಗ್ ಲ್ಯಾಂಪ್ ಇತ್ಯಾದಿಗಳನ್ನು ಪರಿಶೀಲನೆ ಮಾಡಿ. ಇವೆಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಬಲ್ಬ್ ಹೋಗಿದ್ದರೆ ಬದಲಾಯಿಸಿಕೊಳ್ಳಿ.
ಇಲಿಗಳಿಂದ ಕಾರನ್ನು ಕಾಪಾಡಿ
ಮಳೆ ಬಿಟ್ಟರೂ ಚಳಿ ಬಿಡದು. ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಇಲಿಗಳು, ಹೆಗ್ಗಣಗಳು ಕಾರು ಬೆಚ್ಚಗಿದೆ ಎಂದು ಒಳಸೇರಿಬಿಡಬಹುದು. ಕಾರಿನ ವೈರ್‌ಗಳನ್ನು ಕತ್ತರಿಸಬಹುದು. ಹೀಗಾಗಿ ಇಲಿಗಳ ಕುರಿತೂ ಎಚ್ಚರಿಕೆಯಿಂದ ಇರಿ.