ADAS Technology: ಕಾರಿನಲ್ಲಿರುವ ಎಡಿಎಎಸ್‌ ಫೀಚರ್‌ನಿಂದ ಸುರಕ್ಷತೆಗೆ ಅಪಾಯವೇ? ಹೊಸ ಅಧ್ಯಯನ ಹೇಳಿದ್ದಿಷ್ಟು-automobile news is adas in your car a safety hazard heres what this insurance institute for highway safety study pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Adas Technology: ಕಾರಿನಲ್ಲಿರುವ ಎಡಿಎಎಸ್‌ ಫೀಚರ್‌ನಿಂದ ಸುರಕ್ಷತೆಗೆ ಅಪಾಯವೇ? ಹೊಸ ಅಧ್ಯಯನ ಹೇಳಿದ್ದಿಷ್ಟು

ADAS Technology: ಕಾರಿನಲ್ಲಿರುವ ಎಡಿಎಎಸ್‌ ಫೀಚರ್‌ನಿಂದ ಸುರಕ್ಷತೆಗೆ ಅಪಾಯವೇ? ಹೊಸ ಅಧ್ಯಯನ ಹೇಳಿದ್ದಿಷ್ಟು

ADAS Technology: ಈಗ ಬಹುತೇಕ ಕಾರುಗಳಿಗೆ ಕಂಪನಿಗಳು ಸುರಕ್ಷತೆಯ ಫೀಚರ್‌ ಆಗಿ ಎಡಿಎಸ್‌ ಅಥವಾ ಅಡ್ವಾನ್ಸಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ ಅಳವಡಿಸುತ್ತವೆ. ಆದರೆ, ಇಂತಹ ತಂತ್ರಜ್ಞಾನಗಳಿಂದ ಚಾಲಕರು ವಿಚಲಿತರಾಗುವ ಸಾಧ್ಯತೆ ಹೆಚ್ಚು ಅಧ್ಯಯನವೊಂದು ಹೇಳಿದೆ. ಇದು ಗಂಭೀರ ವಾಹನ ಅಪಘಾತಕ್ಕೆ ಕಾರಣವಾಗಬಹುದು.

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS Technology) ತಂತ್ರಜ್ಞಾನದ ಕುರಿತು ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ ಹೊಸ ಅಧ್ಯಯನ (Representational image)
ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS Technology) ತಂತ್ರಜ್ಞಾನದ ಕುರಿತು ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ ಹೊಸ ಅಧ್ಯಯನ (Representational image)

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS Technology) ತಂತ್ರಜ್ಞಾನವಿರುವ ವಾಹನಗಳು ಈಗ ಹೆಚ್ಚುತ್ತಿವೆ. ಸುಮಾರು ಹತ್ತು ಲಕ್ಷ ರೂಪಾಯಿ ಆಸುಪಾಸಿನ ಕಾರಿನಲ್ಲೂ ಇಂತಹ ಫೀಚರ್‌ಗಳು ಈಗ ಸೇರ್ಪಡೆಯಾಗುತ್ತಿವೆ. ಈ ಕಾರಲ್ಲಿ ಎಡಿಎಎಸ್‌ ಇದೆ ಗೊತ್ತಾ? ಎಂದು ಹೆಮ್ಮೆಯಿಂದ ಕಾರು ಮಾಲೀಕರು ಹೇಳಿಕೊಳ್ಳುತ್ತಿದ್ದಾರೆ. ಕಾರು ಕಂಪನಿಗಳೂ ಇಂತಹ ಫೀಚರ್‌ಗಳನ್ನು ಪ್ರತಿಷ್ಠೆಯಾಗಿ ದುಬಾರಿ ಕಾರುಗಳಲ್ಲಿ ನೀಡಲು ಪ್ರಯತ್ನಿಸುತ್ತವೆ. ಇದರಿಂದ ವಾಹನ ಚಾಲನೆ ಹೆಚ್ಚು ಸುರಕ್ಷತೆ ಎಂಬ ನಂಬಿಕೆಯಿದೆ. ಆದರೆ, ಇನ್ಶುರೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ (ಐಐಎಚ್‌ಎಸ್‌) ನಡೆಸಿದ ಅಧ್ಯಯನವೊಂದರ ಪ್ರಕಾರ ಎಡಿಎಎಸ್‌ನಿಂದ ವಾಸ್ತವವಾಗಿ ಸುರಕ್ಷತೆಗಿಂತ ಅಪಾಯವೇ ಜಾಸ್ತಿಯಂತೆ. ಎಡಿಎಎಸ್‌ ಎನ್ನುವುದು ವಾಹನ ಚಾಲಕ ಮತ್ತು ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ಹೆಚ್ಚು ಸುರಕ್ಷತೆ ಉಂಟು ಮಾಡುತ್ತದೆ ಎಂಬ ಇಲ್ಲಿನವರೆಗಿನ ನಂಬಿಕೆಗೆ ಈ ಅಧ್ಯಯನದ ಫಲಿತಾಂಶ ವಿರುದ್ಧವಾಗಿದೆ.

ಸುರಕ್ಷತೆಗೆ ಎಡಿಎಎಸ್‌ ಅಪಾಯ ಹೇಗೆ?

ಅಧ್ಯಯನದ ಪ್ರಕಾರ ಎಡಿಎಎಸ್‌ನಂತಹ ಸುರಕ್ಷತೆಯ ಫೀಚರ್‌ ಇರುವ ಕಾರಿನ ಮಾಲೀಕರು ವಾಹನ ಚಾಲನೆ ಸಮಯದಲ್ಲಿ ಫೋನ್‌ ನೋಡುವುದು, ತಿನ್ನುವುದು ಅಥವಾ ಡಿಸ್ಟರ್ಬೆನ್ಸ್‌ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುತ್ತಾರೆ ಎಂದು ಅಧ್ಯಯನ ತಿಳಿಸಿದೆ. ವೋಲ್ವೋದ ಪೈಲಟ್ ಅಸಿಸ್ಟ್ ಬಳಸಿ 29 ಡ್ರೈವರ್‌ಗಳನ್ನು ಮತ್ತು ಟೆಸ್ಲಾ ಆಟೋಪೈಲಟ್ ಬಳಸಿ 14 ಡ್ರೈವರ್‌ಗಳನ್ನು ಈ ಅಧ್ಯಯನವು ಅವಲೋಕಿಸಿ ಈ ಷರಾ ಬರೆದಿದೆ. ಅಂದ್ರೆ, ಐಐಎಚ್‌ಎಸ್‌ ಇಷ್ಟು ಚಾಲಕರನ್ನು ಅಧ್ಯಯನಕ್ಕೆ ಬಳಸಿಕೊಂಡಿದೆ. ಈ ಎಡಿಎಎಸ್‌ ವ್ಯವಸ್ಥೆ ಇರುವಾಗ ಚಾಲಕರು ರಸ್ತೆಯ ಮೇಲೆ ಹೆಚ್ಚು ಗಮನ ನೀಡುವಂತೆ ನಾಟಕ ಮಾಡುತ್ತಾರೆ. ಈ ಸಂದರ್ಭದಲ್ಲಿ ಇವರ ಮನಸ್ಸು ಎಲ್ಲೋ ಇರುತ್ತದೆ. ಈ ಮೂಲಕ ತಂತ್ರಜ್ಞಾನವನ್ನು ಚಾಲಕರು ಮೋಸಗೊಳಿಸುತ್ತಾರೆ ಎಂದು ಅಧ್ಯಯನ ಹೇಳಿದೆ.

ಈ ಅಧ್ಯಯನದ ಕುರಿತು ಐಐಎಚ್‌ಎಸ್‌ ಹೀಗೆ ತಿಳಿಸಿದೆ. "ವೋಲ್ವೋ ಪೈಲಟ್ ಅಸಿಸ್ಟ್ ಪಾರ್ಷಿಯಲ್‌ ಆಟೋಮೇಷನ್‌ ಸಿಸ್ಟಮ್‌ ಬಳಸುವಾಗ ಚಾಲಕರು ತಮ್ಮ ಫೋನ್‌ಗಳನ್ನು ಪರಿಶೀಲಿಸಲು ಗಮನ ನೀಡುತ್ತಿದ್ದರು ಅಥವಾ ಏನಾದರೂ ತಿನ್ನಲು ಆದ್ಯತೆ ನೀಡುತ್ತಿದ್ದರು. ಈ ರೀತಿಯ ತಂತ್ರಜ್ಞಾನ ಬಳಸುವಾಗ ಈ ರೀತಿ ಏನಾದರೂ ಚಟುವಟಿಕೆಯಲ್ಲಿ ತೊಡಗುವ ಅಪಾಯ ಹೆಚ್ಚು ಕಾಣಿಸಿದೆ. ಇದೇ ಸಮಯದಲ್ಲಿ ಟೆಸ್ಲಾ ಆಟೋಪೈಲಟ್ ಚಾಲಕರನ್ನು ಗಮನಿಸಿದಾಗಲೂ ತಿಳಿದುಬಂದಿದೆ. ಆಟೊಪೈಲಟ್ ಚಾಲನೆಯ ಸಂದರ್ಭದಲ್ಲಿ ತಮ್ಮ ಮನಸ್ಸು ವಿಚಲಿತವಾಗಿಸಲು ಚಾಲಕರು ಆದ್ಯತೆ ನೀಡುತ್ತಾರೆ. ಈ ಎರಡು ಅಧ್ಯಯನಗಳಲ್ಲಿಯೂ ಚಾಲಕರು ಎಡಿಎಎಸ್‌ನಂತಹ ಚಾಲಕ ವ್ಯವಸ್ಥೆಯನ್ನು ಹೊಂದಿರುವಾಗ ರಸ್ತೆಯತ್ತ ಗಮನ ಹರಿಸದೆ ಇರುವುದು ಸೇರಿದಂತೆ ಹೆಚ್ಚುವರಿ ಚಟುವಟಿಕೆಗಳತ್ತ ಆಸಕ್ತಿ ವಹಿಸಿರುವುದು ಕಂಡುಬಂದಿದೆ" ಎಂದು ಐಐಎಚ್‌ಎಸ್‌ ತಿಳಿಸಿದೆ.

ಈ ಅಧ್ಯಯನವು ಅಮೆರಿಕದಲ್ಲಿ ನಡೆದಿದೆ. ಆದರೆ, ಜಗತ್ತಿನ ಇತರೆ ಭಾಗಗಳಿಗೂ ಇದು ಅನ್ವಯಿಸುತ್ತದೆ. ಭಾರತದಂತಹ ದೇಶಗಳಲ್ಲಿಯೂ ಈಗ ಎಡಿಎಎಸ್‌ ಇರುವ ಕಾರುಗಳು ಹೆಚ್ಚಾಗಿವೆ. ಸುರಕ್ಷತೆಯ ಕೆಲಸವನ್ನು ಎಡಿಎಎಸ್‌ ನೋಡಿಕೊಳ್ಳುತ್ತದೆ ಎಂದು ಚಾಲಕರು ರಸ್ತೆಯ ಮೇಲಿಂದ ಗಮನ ಬೇರೆಕಡೆಗೆ ಹೋಗಲು ಅನುವು ಮಾಡಿಕೊಳ್ಳದೆ ಇರುವುದು ಉತ್ತಮ. ಇಲ್ಲವಾದರೆ ಎಡಿಎಎಸ್‌ ಇದ್ದರೂ ರಸ್ತೆಯಲ್ಲಿ ಗಂಭೀರ ಅಪಘಾತಕ್ಕೆ ನಿಮ್ಮ ಕಾರು ತುತ್ತಾಗಬಹುದು.

ಏನಿದು ಎಡಿಎಎಸ್‌?

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಅಥವಾ ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆ. ಸೆನ್ಸಾರ್‌ ಮತ್ತು ಕ್ಯಾಮೆರಾಗಳನ್ನು ಬಳಸಿ ಎಡಿಎಸ್‌ ಚಾಲನೆ ಸುರಕ್ಷತೆ ಮತ್ತು ಕಂಫರ್ಟ್‌ ಹೆಚ್ಚಿಸುತ್ತದೆ. ಎಡಿಎಎಸ್‌ ವ್ಯವಸ್ಥೆಗಳು ರಸ್ತೆಯಲ್ಲಿ ಪಾದಚಾರಿಗಳನ್ನು ಗುರುತಿಸಬಲ್ಲದು. ಮುಂದೆ ಅಡ್ಡ ಬರುವ ವಾಹನಗಳ ಮೇಲೆ ನಿಗಾ ಇಡುತ್ತದೆ. ಸಂಭಾವ್ಯ ಅಪಾಯಗಳ ಕುರಿತು ಎಡಿಎಸ್‌ ಚಾಲಕರನ್ನು ಎಚ್ಚರಗೊಳಿಸುತ್ತವೆ. ಕೆಲವೊಂದು ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತವೆ. ಇದರ ಕೆಲಸಕ್ಕೆ ಕೆಲವೊಂದು ಉದಾಹರಣೆಗಳು. ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌: ಒಂದು ನಿರ್ದಿಷ್ಟ ವೇಗ ಸೆಟ್‌ ಮಾಡಿ ಸಾಗುತ್ತದೆ, ಮುಂದೆ ವಾಹನ ಇದ್ದರೆ ಪತ್ತೆ ಹಚ್ಚುತ್ತದೆ. ಸಡನ್‌ ಆಗಿ ಏನಾದರೂ ಅಡ್ಡ ಬಂದರೆ ಎಮರ್ಜೆನ್ಸಿ ಬ್ರೇಕ್‌ ಹಾಕುತ್ತದೆ. ಲೇನ್‌ ಬಿಟ್ಟು ವಾಹನ ಬೇರೆ ಕಡೆಗೆ ಹೋದರೆ ಎಚ್ಚರಿಸುತ್ತದೆ. ವಾಹನದ ಚಾಲಕನಿಗೆ ಕಾಣದ ಕುರುಡು ಸ್ಥಳ ಅಂದರೆ ಬ್ಲೈಂಡ್‌ ಸ್ಪಾಟಗಳನ್ನು ಗುರುತಿಸುತ್ತದೆ.

mysore-dasara_Entry_Point