Ligier Mini EV: ಭಾರತಕ್ಕೆ ಲಿಗಿಯರ್ ಎಲೆಕ್ಟ್ರಿಕ್ ಕಾರು ಬರುತ್ತಂತೆ, ದರ 1 ಲಕ್ಷ ರೂಗಿಂತ ಕಡಿಮೆ ಇರಬಹುದೇ? ಇಲ್ಲಿದೆ ವಿವರ
Ligier Mini EV: ಭಾರತಕ್ಕೆ ಲಿಗಿಯರ್ ಎಲೆಕ್ಟ್ರಿಕ್ ಕಾರು ಆಗಮಿಸುವ ಸಾಧ್ಯತೆ ಇದೆ ಮತ್ತು ಇದರ ದರ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿರಬಹುದು ಎಂದು ವರದಿಗಳು ತಿಳಿಸಿವೆ. ಈಗಾಗಲೇ ಈ ಕಾರು ಭಾರತದಲ್ಲಿ ಟೆಸ್ಟಿಂಗ್ ಹಂತದಲ್ಲಿದೆ ಎಂದು ವರದಿಗಳು ತಿಳಿಸಿವೆ.

Ligier Mini EV: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿವೆ. ಬಜೆಟ್ ಸ್ನೇಹಿ ಕಾರುಗಳನ್ನು ಪರಿಚಯಿಸಲು ಕಾರು ಕಂಪನಿಗಳು ಪ್ರಯತ್ನಿಸುವೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿರುವ ಲಿಗಿಯರ್ ಮಿನಿ ಎಲೆಕ್ಟ್ರಿಕ್ ವಾಹನ ಭಾರತಕ್ಕೂ ಆಗಮಿಸುವ ಸೂಚನೆ ದೊರಕಿದೆ. ಭಾರತದಲ್ಲಿ ಈ ಚಿಕಿಣಿ ಕಾರು ಟೆಸ್ಟ್ ಡ್ರೈವ್ ಮಾಡುವುದು ಪತ್ತೆಯಾಗಿದೆ. ಈ ಪುಟಾಣಿ ಕಾರು ದರ ಒಂದು ಲಕ್ಷ ರೂಪಾಯಿಯೊಳಗೆ ಇರಬಹುದೆಂದು ಹಲವು ವರದಿಗಳು ತಿಳಿಸಿವೆ.
ಯುರೋಪ್‌ನ ಲಿಗಿಯರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದು ಹಲವು ವರದಿಗಳು ತಿಳಿಸಿವೆ. ಫ್ರಾನ್ಸ್ ಮತ್ತು ಇತರೆ ದೇಶಗಳಲ್ಲಿ 14 ವರ್ಷಕ್ಕಿಂತ ಹೆಚ್ಚು ವಯಸ್ಸಿನವರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಇದು ಹಗರ ಕ್ವಾಡ್ರಿಸೈಕಲ್ ಆಗಿದೆ. ಭಾರತದಲ್ಲಿ ಇದು ವಿವಿಧ ಬ್ಯಾಟರಿ ಆಯ್ಕೆಗಳಲ್ಲಿ ದೊರಕಬಹುದು. ಆಯಾ ಬ್ಯಾಟರಿ ಪ್ಯಾಕ್‌ಗೆ ತಕ್ಕಂತೆ ಒಂದು ಫುಲ್ ಚಾರ್ಜ್‌ನಲ್ಲಿ 63ರಿಂದ 192 ಕಿ.ಮೀ. ದೂರ ಪ್ರಯಾಣಿಸುವ ಆಯ್ಕೆಗಳಲ್ಲಿ ಬಿಡುಗಡೆಯಾಗಬಹುದು. ಕಡಿಮೆ ದರದ ಸಣ್ಣ ಎಲೆಕ್ಟ್ರಿಕ್ ಕಾರು ಬಯಸುವವರಿಗೆ ಇದು ಸೂಕ್ತವಾಗಬಹುದು.
ಲಿಗಿಯರ್ ಮಿನಿ ಇವಿಯು ನಾಲ್ಕು ಆವೃತ್ತಿಗಳಲ್ಲಿ ಭಾರತದಲ್ಲಿ ದೊರಕುವ ಸಾಧ್ಯತೆ ಇದೆ. ಪ್ರತಿಯೊಂದು ಆವೃತ್ತಿಗಳು ಮೂರು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರುವ ಸೂಚನೆ ಇದೆ. ಇವುಗಳು ಕ್ರಮವಾಗಿ 63 ಕಿಮೀ, 123 ಕಿಮಿ ಮತ್ತು 192 ಕಿಮೀ ರೇಂಜ್ ನೀಡುವ ಸಾಧ್ಯತೆ ಇದೆ. ಇದು ವಿದೇಶದಲ್ಲಿರುವ ಲಿಗಿಯರ್ ಕಾರುಗಳ ಆಧಾರದಲ್ಲಿ ನೀಡಲಾಗಿರುವ ಮಾಹಿತಿಯಾಗಿದೆ.
ದರ ಎಷ್ಟಿರಬಹುದು?
ಈ ಕಾರಿನ ದರ ಎಷ್ಟು ಇರಬಹುದು ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ. ಇದರ ದರ ಸುಮಾರು ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇರಬಹುದು ಎನ್ನಲಾಗಿದೆ. ಇಷ್ಟು ಕಡಿಮೆಗೆ ದೊರಕಿದರೆ ಬೈಕ್, ಸ್ಕೂಟರ್ ಬದಲು ಎಲ್ಲರೂ ಈ ಇವಿ ಖರೀದಿಸಲು ಗಮನ ನೀಡಬಹುದು.
ವಿನ್ಯಾಸ
ಲಿಗಿಯರ್ ಮಿನಿ ಎಲೆಕ್ಟ್ರಿಕ್ ಕಾರು ಚಿಕ್ಕ ಗಾತ್ರ ಹೊಂದಿದೆ. ಇದು ಮೊಪೆಡ್ ವಿನ್ಯಾಸದಲ್ಲಿ ಬರಬಹುದು. ಈ ಇವಿಯು 2958 ಮಿ.ಮೀ. ಉದ್ದ, 1499 ಮಿ.ಮೀ ಅಗಲ ಮತ್ತು 1541 ಮಿ.ಮೀ. ಎತ್ತರವಿರುತ್ತದೆ. ಯುರೋಪಿಯನ್ ಮಾದರಿಯನ್ನು ಆಧರಿಸಿದ ಈ ಇವಿ ಕೇವಲ ಎರಡು ಬಾಗಿಲುಗಳನ್ನು ಹೊಂದಿದೆ. ಇದು 12 ರಿಂದ 13 ಇಂಚಿನ ಚಕ್ರಗಳನ್ನು ಹೊಂದಿದೆ. ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಸ್ಲಿಮ್ ಗ್ರಿಲ್ ಜೊತೆಗೆ ಮುಂಭಾಗದಲ್ಲಿ ದುಂಡಗಿನ ಹೆಡ್‌ಲೈಟ್ ಕಂಡುಬರುತ್ತದೆ. ಹಿಂಭಾಗದಲ್ಲಿ, ದೊಡ್ಡ ಗಾಜಿನ ಕಿಟಕಿ ಇದೆ. ಸೈಡ್ ಲುಕ್ ಸ್ವಲ್ಪ ಸ್ಪೋರ್ಟಿ ಆಗಿ ಕಾಣಿಸಬಹುದು.
ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಪೋರ್ಟ್, ಪವರ್ ಸ್ಟೀರಿಂಗ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಹೊಂದಿರುವ ಚಾಲಕ ಸೀಟು ಮತ್ತು ಮೂಲೆಯಲ್ಲಿ ಏಸಿ ವೆಂಟ್‌ಗಳನ್ನು ಒಳಗೊಂಡಿದೆ. ಈ ವರ್ಷದ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಈ ಕಾರನ್ನು ಪ್ರದರ್ಶಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ಡಿಸ್‌ಕ್ಲೈಮರ್: ಇದು ಲಭ್ಯವಿರುವ ವರದಿಗಳನ್ನು ಮತ್ತು ಮಾಹಿತಿಗಳನ್ನು ಆಧರಿಸಿದ ಬರಹವಾಗಿದೆ. ಈ ಕಾರಿನ ದರ ಮತ್ತು ಇತರೆ ಮಾಹಿತಿಯನ್ನು ಕಂಪನಿಯು ಮುಂದಿನ ದಿನಗಳಲ್ಲಿ ಪ್ರಕಟಿಸಬಹುದು. ನಾವು ಇಲ್ಲಿ ಕೇವಲ ಅಂದಾಜು ದರವನ್ನು ಮಾತ್ರ ಪ್ರಕಟಿಸಿದ್ದೇವೆ. ನಿಖರ ದರ ಮತ್ತು ಬಿಡುಗಡೆ ವಿವರವನ್ನು ಕಂಪನಿಯ ವೆಬ್‌ಸೈಟ್‌ನಿಂದ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಿ.
