50 ಲಕ್ಷಕ್ಕೂ ಅಧಿಕ ಜನರು ಖರೀದಿಸಿದ ಏಕೈಕ ಕಾರು… 33 ಕಿಮೀ ಮೈಲೇಜ್, ದರ 4 ಲಕ್ಷ ರೂಪಾಯಿಗಿಂತ ಕಡಿಮೆ!
Maruti Suzuki Alto: ಮಾರುತಿ ಆಲ್ಟೊ ದೇಶದಲ್ಲಿ ಹೆಚ್ಚು ಮಾರಾಟವಾಗುವ ಪುಟ್ಟ ಕಾರು. ಕಂಪನಿಯು ಇದನ್ನು 2000ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಅಂದಿನಿಂದ 50 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. ಮೊದಲ ಕಾರು ಖರೀದಿಸುವವರ ಫೇವರಿಟ್ ಆಯ್ಕೆ ಮಾರುತಿ ಆಲ್ಟೋ.
Maruti Suzuki Alto: ಮಾರುತಿ ಆಲ್ಟೊ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು. ಇದುವರೆಗೆ 50 ಲಕ್ಷ ಯೂನಿಟ್ ಆಲ್ಟೋ ಕಾರುಗಳು ಮಾರಾಟವಾಗಿವೆ. ಈ ಸಾಧನೆ ಮಾಡಿದ ಏಕೈಕ ಮಾಡೆಲ್ ಕೂಡ ಇದಾಗಿದೆ. ಇಷ್ಟು ವರ್ಷಗಳ ನಂತರವೂ ಅದರ ಬೇಡಿಕೆ ಹಾಗೆಯೇ ಉಳಿದಿರುವುದು ಗಮನಾರ್ಹ. ಇದು ಟಾಪ್-10 ಕಾರುಗಳ ಪಟ್ಟಿಯಲ್ಲಿ ಇಲ್ಲದಿದ್ದರೂ, ಪ್ರತಿ ತಿಂಗಳು 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಖರೀದಿಸುತ್ತಾರೆ. ಇದು ಕಂಪನಿಯ ಎಂಟ್ರಿ ಲೆವೆಲ್ ಕಾರು ಕೂಡ ಹೌದು. ಇದು ದೇಶದ ಅತ್ಯಂತ ಅಗ್ಗದ ಕಾರು ಕೂಡ ಆಗಿದೆ. ಮೊದಲು ಟಾಟಾ ನ್ಯಾನೊ ಕಡಿಮೆ ದರದ ಕಾರೆಂಬ ಹಿರಿಮೆಗೆ ಪಾತ್ರವಾಗಿತ್ತು. ಆಲ್ಟೋ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂ. ಮೊದಲ ಬಾರಿಗೆ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಆಯ್ಕೆ ಇದಾಗಿದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಆಲ್ಟೋಗೆ ಸಾಕಷ್ಟು ಬೇಡಿಕೆಯಿದೆ. ಉತ್ತಮ ಮೈಲೇಜ್ ದೊರಕುವ ಕಾರಣಕ್ಕೆ ಹೆಚ್ಚಿನ ಜನರು ಆಲ್ಟೋ ಕಾರು ಖರೀದಿಗೆ ಆದ್ಯತೆ ನೀಡುತ್ತಾರೆ.
ಮಾರುತಿ ಆಲ್ಟೊ ಇತಿಹಾಸ
ಕಡಿಮೆ ದರಕ್ಕೆ ಫ್ಯಾಮಿಲಿ ಕಾರು ಹುಡುಕುವವರಿಗೆ ಮಾರುತಿ ಆಲ್ಟೋ ಅಚ್ಚುಮೆಚ್ಚಿನ ಆಯ್ಕೆ. ಇದನ್ನು ಮೊದಲು ವಿದೇಶಿ ಮಾರುಕಟ್ಟೆಯಲ್ಲಿ 1979 ರಲ್ಲಿ ಪರಿಚಯಿಸಲಾಯಿತು. 1984ರಲ್ಲಿ 2ನೇ ತಲೆಮಾರಿನ ಮಾದರಿ, 1988ರಲ್ಲಿ 3ನೇ ತಲೆಮಾರಿನ ಮಾದರಿ, 1993ರಲ್ಲಿ 4ನೇ ತಲೆಮಾರಿನ ಮಾದರಿ, 1998ರಲ್ಲಿ 5ನೇ ತಲೆಮಾರಿನ ಮಾದರಿ ಬಿಡುಗಡೆಯಾಗಿತ್ತು. ಇದರ 8 ನೇ ಪೀಳಿಗೆಯು ಪ್ರಸ್ತುತ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
1982ರಲ್ಲಿ ಮಾರುತಿ ಮತ್ತು ಸುಜುಕಿ ನಡುವಿನ ಪಾಲುದಾರಿಕೆಯ ನಂತರ ಆಲ್ಟೊ 2000 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 27, 2000 ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಬಿಡುಗಡೆಯಾದ ಆಲ್ಟೋ ಮಾಡೆಲ್ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾದ 5 ನೇ ತಲೆಮಾರಿನ ಆಲ್ಟೊದಿಂದ ಸ್ಫೂರ್ತಿ ಪಡೆದಿದೆ. ಆಲ್ಟೊದ ಮುಂದಿನ ಪೀಳಿಗೆಯ ಮಾದರಿಯನ್ನು ಅಕ್ಟೋಬರ್ 16, 2012 ರಂದು ಬಿಡುಗಡೆ ಮಾಡಲಾಯಿತು. ಈ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಉತ್ತಮ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಆ ಸಮಯದಲ್ಲಿ ಮಾರುಕಟ್ಟೆಯನ್ನು ಅಲ್ಲಾಡಿಸಿತು. ಆಗ ಇದರ ಮೈಲೇಜ್ ಪ್ರತಿ ಲೀಟರ್ ಗೆ 24.7 ಕಿ.ಮೀ. ಇತ್ತು. ಇದು ಗ್ರಾಹಕರನ್ನು ಸೆಳೆಯಿತು.
ಆಲ್ಟೋ ಕೆ10 ಬಳಿಕ ಹೆಚ್ಚಿದ ಬೇಡಿಕೆ
2015 ರಲ್ಲಿ ಆಲ್ಟೊ ಹೊಸ, ಶಕ್ತಿಯುತ 1.0 ಲೀಟರ್ ಕೆ10ಬಿ ಎಂಜಿನ್‌ನೊಂದಿಗೆ ಆಗಮಿಸಿತು. ಇದರ ಕಾರ್ಯಕ್ಷಮತೆ, ಇಂಧನ ದಕ್ಷತೆ ಹೆಚ್ಚಿತು. ಆಲ್ಟೊ ಕೆ10 ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಆಲ್ಟೊ ಸಿಎನ್‌ಜಿ ಆಯ್ಕೆಯಲ್ಲಿಯೂ ಲಭ್ಯವಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 33 ಕಿಮೀಗಿಂತ ಹೆಚ್ಚು. ಇದರ ಮೈಲೇಜ್ ಈ ವಿಭಾಗದ ಇತರ ಕಾರುಗಳಿಗಿಂತ ಹೆಚ್ಚು. ಇದು ಗ್ಲೋಬಲ್ ಎನ್‌ಕ್ಯಾಪ್‌ನಲ್ಲಿ 2 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.
ಅತ್ಯುತ್ತಮ ಇಂಧನ ದಕ್ಷತೆ ಆಲ್ಟೋ ಹೆಗ್ಗಳಿಕೆ
ಆಲ್ಟೊ ಕೆ10 ಹೊಸ ತಲೆಮಾರಿನ ಕೆ-ಸರಣಿಯ 1.0 ಲೀಟರ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸ್ವಯಂಚಾಲಿತ ಆವೃತ್ತಿಯು ಪ್ರತಿಲೀಟರ್‌ಗೆ 24.90 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ ಆದರೆ ಮ್ಯಾನುಯಲ್ ಗಿಯರ್‌ನ ಆವೃತ್ತಿಯು ಪ್ರತಿಲೀಟರ್‌ಗೆ 24.39 ಮೈಲೇಜ್ ನೀಡುತ್ತದೆ. ಸಿಎನ್‌ಜಿ ಆಲ್ಟೋ ಆವೃತ್ತಿಯು 33.85 ಮೈಲೇಜ್ ನೀಡುತ್ತದೆ.
ಪುಟ್ಟ ಕಾರಲ್ಲಿ ಹಲವು ಫೀಚರ್‌ಗಳು
ಹೊಸ ಆಲ್ಟೊ ಕೆ10 7 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಈ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಈಗಾಗಲೇ ಎಸ್-ಪ್ರೆಸ್ಸೊ, ಸೆಲೆರಿಯೊ ಮತ್ತು ವ್ಯಾಗನಾರ್‌ನಲ್ಲಿ ನೀಡಲಾಗಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಜೊತೆಗೆ ಯುಎಸ್‌ಬಿ, ಬ್ಲೂಟೂತ್, ಆಕ್ಸ್ ಕೇಬಲ್ ಅನ್ನು ಬೆಂಬಲಿಸುತ್ತದೆ.
ಈ ಹ್ಯಾಚ್‌ಬ್ಯಾಕ್ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಕೂಡ ಹೊಂದಿದೆ. ಈ ಕಾರು ವೇಗ ಸಂವೇದಿ ಆಟೋ ಡೋರ್ ಲಾಕ್, ಹೈ ಸ್ಪೀಡ್ ಅಲರ್ಟ್ ಮುಂತಾದ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಪೀಡಿ ಬ್ಲೂ, ಅರ್ಥ್ ಗೋಲ್ಡ್, ಸಿಜ್ಲಿಂಗ್ ರೆಡ್, ಸಿಲ್ಕಿ ವೈಟ್, ಸಾಲಿಡ್ ವೈಟ್ ಮತ್ತು ಗ್ರಾನೈಟ್ ಗ್ರೇ ಎಂಬ 6 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಟ್ಟಾರೆ ದೇಶದ ಅತ್ಯಂತ ಬೇಡಿಕೆಯ ಸಣ್ಣಕಾರಾಗಿ ಆಲ್ಟೋ ಆಗಲೂ ಈಗಲೂ ಜನರ ಮನಗೆದ್ದಿದೆ.