ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು? ಇದರ ಬೆಲೆ ಕೇವಲ 6.14 ಲಕ್ಷ ರೂಪಾಯಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು? ಇದರ ಬೆಲೆ ಕೇವಲ 6.14 ಲಕ್ಷ ರೂಪಾಯಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು? ಇದರ ಬೆಲೆ ಕೇವಲ 6.14 ಲಕ್ಷ ರೂಪಾಯಿ

ಭಾರತೀಯ ಮಾರುಕಟ್ಟೆಯಲ್ಲಿ ಎಸ್​ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಪರಿಣಾಮ ಮಾರುತಿ ಸುಜುಕಿಯ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ವಿಫ್ಟ್ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಸ್ವಿಫ್ಟ್ ಒಂದು ಸ್ಥಾನ ಕೆಳಗಿಳಿದಿದ್ದು, ಟಾಟಾ ಪಂಚ್ ಮೊದಲ ಸ್ಥಾನಕ್ಕೇರಿದೆ. ಇಲ್ಲಿದೆ ನೋಡಿ ಜೂನ್​ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ. (ಬರಹ: ವಿನಯ್‌ ಭಟ್‌)

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು? ಇದರ ಬೆಲೆ ಕೇವಲ 6.14 ಲಕ್ಷ ರೂಪಾಯಿ
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು? ಇದರ ಬೆಲೆ ಕೇವಲ 6.14 ಲಕ್ಷ ರೂಪಾಯಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ (Most Selling Car in India 2024) ಸಾಲಿನಲ್ಲಿ ಮಾರುತಿ ಕಂಪನಿ ಯಾವಾಗಲೂ ಮುಂದಿರುತ್ತದೆ. ಆದರೆ, ಟಾಪ್ ಮೈಲೇಜ್​ಗೆ ಹೆಸರುವಾಸಿಯಾಗಿರುವ ಮಾರುತಿಗೆ ಈಗ ಬಿಗ್ ಶಾಕ್ ಉಂಟಾಗಿದೆ. ಟಾಪ್ 10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಿದ್ದ ಮಾರುತಿ ಕಾರು (Maruti Car) ಈಗ ಕುಸಿದಿದೆ. ಇಲ್ಲಿಯವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಕಾರು ಮಾರುತಿ ಸ್ವಿಫ್ಟ್ (Maruti Swift) ಈಗ ಎರಡನೇ ಸ್ಥಾನಕ್ಕೆ ಇಳಿದಿದೆ. ಟಾಟಾ ಮೋಟಾರ್ಸ್​ನ (TATA Motors) ಟಾಟಾ ಪಂಚ್ (TATA Punch) ಕಳೆದ ತಿಂಗಳು ಭರ್ಜರಿ ಮಾರಾಟ ಕಂಡು ಮೊದಲ ಸ್ಥಾನ ಪಡೆದುಕೊಂಡಿದೆ.

ಟಾಟಾ ಪಂಚ್ ಜೂನ್ 2024 ರಲ್ಲಿ ಭಾರತದ ಅತ್ಯುತ್ತಮ ಮಾರಾಟವಾದ ಕಾರು ಎನಿಸಿಕೊಂಡಿದೆ. ಪಂಚ್ ಟಾಟಾದ ಅಗ್ಗದ ಎಸ್​ಯುವಿ ಆಗಿದ್ದು, ಈ ವರ್ಷದಿಂದ ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತಿದೆ. ಈ ಬಾರಿ ಅತಿ ಹೆಚ್ಚು ಮಾರಾಟವಾದ 10 ಕಾರುಗಳಲ್ಲಿ 5 ಎಸ್​ಯುವಿಗಳು, ಮೂರು ಹ್ಯಾಚ್‌ಬ್ಯಾಕ್‌ಗಳು, ಒಂದು ಸೆಡಾನ್ ಮತ್ತು ಒಂದು ಎಂ​ಪಿವಿ ಸೇರಿವೆ. ವರದಿಯ ಪ್ರಕಾರ, ಟಾಟಾ ಮೋಟಾರ್ಸ್ ಜೂನ್ 2024 ರಲ್ಲಿ 18,238 ಯುನಿಟ್ ಪಂಚ್‌ಗಳನ್ನು ಮಾರಾಟ ಮಾಡಿದೆ. ಅತ್ತ ಎರಡನೇ ಸ್ಥಾನಕ್ಕೆ ಕುಸಿದಿರುವ ಮಾರುತಿ ಕಂಪನಿಯ ಸ್ವಿಫ್ಟ್ ಕಾರು ಕಳೆದ ತಿಂಗಳು 16,422 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಪಂಚ್​ಗೆ ಹೋಲಿಸಿದರೆ 1816 ಯೂನಿಟ್ ಕಡಿಮೆ ಮಾರಾಟವಾಗಿದೆ.

ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿ ಯಾರು?

ಇತರೆ ಕಾರುಗಳ ಬಗ್ಗೆ ನೋಡುವುದಾದರೆ ಹುಂಡೈ ಕ್ರೆಟಾ 16,293 ಯುನಿಟ್‌ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. ಮಾರುತಿ ಎರ್ಟಿಗಾ 15,902 ಯುನಿಟ್‌ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮಾರುತಿ ಬಲೆನೊ 14,895 ಯುನಿಟ್‌ಗಳು ಮಾರಾಟ ಮಾಡಿದ್ದು ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ವ್ಯಾಗನ್‌ಆರ್‌ 13,790 ಯುನಿಟ್‌ಗಳು ಮಾರಾಟವಾಗಿದ್ದು, ಆರನೇ ಸ್ಥಾನದಲ್ಲಿದೆ.

ಇನ್ನು ಮಾರುತಿ ಡಿಜೈರ್ 13,421 ಯುನಿಟ್‌ಗಳ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದೆ. ಎಂಟನೇ ಸ್ಥಾನದಲ್ಲಿ ಮಾರುತಿ ಬ್ರೆಝಾ ಇದ್ದು, ಇದು 13,172 ಯುನಿಟ್‌ಗಳು ಮಾರಾಟವಾಗಿವೆ. ಒಂಬತ್ತನೇ ಸ್ಥಾನದಲ್ಲಿ ಮಹೀಂದ್ರಾದ ಸ್ಕಾರ್ಪಿಯೊ ಇದೆ, ಇದು 12,307 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಟಾ ನೆಕ್ಸಾನ್ ಹತ್ತನೇ ಸ್ಥಾನದಲ್ಲಿದೆ. ಇದರ 12,066 ಯುನಿಟ್‌ಗಳು ಮಾರಾಟವಾಗಿವೆ.

ಟಾಟಾ ಪಂಚ್‌ಗೆ ಏಕೆ ಇಷ್ಟೊಂದು ಬೇಡಿಕೆ?

ಟಾಟಾ ಮೋಟಾರ್ಸ್ ತನ್ನ ಪಂಚ್ ಕಾರನ್ನು 2021 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತು. ಇದು ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಟಾಟಾದ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಹೌದು. ಈ ಬಾರಿ ಇದರ ಮಾರಾಟ 18 ಸಾವಿರ ದಾಟಿದೆ. ಪಂಚ್ ಹೆಚ್ಚು ಜನಪ್ರಿಯವಾಗಲು ಕಾರಣವೆಂದರೆ ಅದರ ವಿನ್ಯಾಸ, ಕೈಗೆಟುಕುವ ದರ ಮತ್ತು ಸುರಕ್ಷತೆಯ ವೈಶಿಷ್ಟ್ಯಗಳು.

ಈ ಮಿನಿ SUV ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಒಟ್ಟು ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಹೀಗೆ ಮೂರೂ ಮಾದರಿಗಳಿಗೆ ಭರ್ಜರಿ ಬೇಡಿಕೆ ಇದೆ. ಟಾಟಾ ಪಂಚ್ ಪ್ರಸ್ತುತ 26 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 8 ಬಣ್ಣಗಳಲ್ಲಿ ಲಭ್ಯವಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ಬೆಲೆ 6,12,900 ರೂ. ಆಗಿದೆ. iCNG ಮಾದರಿ 7,22,900 ರೂ. ಯಿಂದ ಶುರುವಾಗುತ್ತದೆ. ಪೆಟ್ರೋಲ್ ಮೈಲೇಜ್ ಸರಿಸುಮಾರು 18.8 ಕಿ. ಮೀ ಹಾಗೂ ಸಿಎನ್‌ಜಿ 26.99 ಮೈಲೇಜ್ ಕೊಡುತ್ತದೆ. (ಬರಹ: ವಿನಯ್‌ ಭಟ್‌)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner