Tata Punch: ದಾಖಲೆಯ ಮಾರಾಟ ಕಂಡ ಟಾಟಾ ಪಂಚ್: ಕಳೆದ 7 ತಿಂಗಳಲ್ಲಿ ಎಷ್ಟು ಕಾರು ಸೇಲ್ ಆಗಿದೆ ಗೊತ್ತೇ?
ಮಾರುತಿ ಸುಜುಕಿ ವ್ಯಾಗನ್ ಆರ್ ನಂತಹ ಕಾರುಗಳನ್ನು ಹಿಂದಿಕ್ಕಿ ಇದೀಗ ಟಾಟಾ ಪಂಚ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವ್ಯಾಗನ್ ಆರ್ ಎರಡನೇ ಸ್ಥಾನದಲ್ಲಿದ್ದರೆ, ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದೆ.(ಬರಹ: ವಿನಯ್ ಭಟ್)
ಈ ಹಿಂದೆ ಜನರು ಕಾರು ಖರೀದಿಸಲು ಹೋದಾಗ ಆ ಕಾರಿನ ಬೆಲೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ತಮ್ಮ ಬಜೆಟ್ ಅನ್ನು ಪರಿಗಣಿಸಿ ಕಾರುಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಬೆಲೆಯ ಜೊತೆಗೆ ಸುರಕ್ಷತೆಯೂ ಬೇಕೆಂದು ಜನರ ಮನಸ್ಸಿನಲ್ಲಿ ಗಟ್ಟಿಯಾಗಿದೆ. ಬಜೆಟ್ ಬೆಲೆಗೆ ಈ ಎಲ್ಲ ವೈಶಿಷ್ಟ್ಯ ಇರುವ ಕಾರು ನೀಡುತ್ತಿರುವುದು ಟಾಟಾ ಕಂಪನಿ. ಹೀಗಾಗಿ ಟಾಟಾ ಪಂಚ್, 5 ಸ್ಟಾರ್ ಸುರಕ್ಷತಾ ದರದ ಕಾರು ಈಗ ಭಾರತದ ಹೆಚ್ಚು ಮಾರಾಟವಾಗುವ ಕಾರು ಎನಿಸಿಕೊಂಡಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್ ನಂತಹ ಕಾರುಗಳನ್ನು ಹಿಂದಿಕ್ಕಿ ಇದೀಗ ಟಾಟಾ ಪಂಚ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ವ್ಯಾಗನ್ ಆರ್ ಎರಡನೇ ಸ್ಥಾನದಲ್ಲಿದ್ದರೆ, ಹುಂಡೈ ಕ್ರೆಟಾ ಮೂರನೇ ಸ್ಥಾನದಲ್ಲಿದೆ.
ಈ ಹಿಂದೆ ಮಾರುತಿ ಸುಜುಕಿ ವ್ಯಾಗನ್ ಆರ್ ಭಾರತದ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಪಟ್ಟವನ್ನು ಹೊಂದಿತ್ತು. ಆದರೆ, ಈಗ ಟಾಟಾ ಪಂಚ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದು ಟಾಟಾದ ಅತ್ಯಂತ ಅಗ್ಗದ SUV ಕಾರು ಮಾತ್ರವಲ್ಲದೆ, ದೇಶದ ಅಗ್ಗದ SUV ಕಾರುಗಳ ಸಾಲಿಗೆಯೂ ಸೇರಿದೆ. ಟಾಟಾ ಪಂಚ್ ಅದರ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳಿಗೆ ಬಹಳ ಪ್ರಸಿದ್ಧವಾಗಿದೆ, ಆದ್ದರಿಂದ ಇದಕ್ಕೆ ಈ ಮಟ್ಟದ ಬೇಡಿಕೆ ಕಂಡುಬರುತ್ತಿದೆ.
ಟಾಟಾ ಪಂಚ್ ನಂಬರ್ 1
2024ರಲ್ಲಿ ಜನವರಿ ಮತ್ತು ಜುಲೈ ನಡುವೆ ಟಾಟಾ ಪಂಚ್‌ನ ಸುಮಾರು 1.26 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಎನಿಸಿಕೊಂಡಿದೆ. ಇದು ಕೈಗೆಟುಕುವ ಬಜೆಟ್ ಮಾತ್ರವಲ್ಲದೆ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಬರುತ್ತದೆ. ಬೆಲೆಯ ಕುರಿತು ಮಾತನಾಡುವುದಾದರೆ, ಟಾಟಾ ಪಂಚ್‌ನ ಎಕ್ಸ್ ಶೋ ರೂಂ ಬೆಲೆ 6.13 ಲಕ್ಷದಿಂದ ಪ್ರಾರಂಭವಾಗುತ್ತದೆ.
ಭಾರತದ ಟಾಪ್ 3 ಕಾರುಗಳು
ಟಾಟಾ ಪಂಚ್ ಮಾರಾಟದಲ್ಲಿ ದೇಶದ ನಂಬರ್ 1 ಕಾರು. ಅದೇ ರೀತಿ ಮಾರುತಿ ಸುಜುಕಿ ವ್ಯಾಗನ್ ಆರ್ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಜನವರಿ ಮತ್ತು ಜುಲೈ ನಡುವೆ ವ್ಯಾಗನ್ ಆರ್ ಸುಮಾರು 1.16 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಪಂಚ್ ಬಳಿಕ, ವ್ಯಾಗನ್ ಆರ್ ಭಾರತದ ಹೆಚ್ಚು ಮಾರಾಟವಾದ ಕಾರು. ಹುಂಡೈ ಕ್ರೆಟಾ 1.09 ಲಕ್ಷ ಯುನಿಟ್‌ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಟಾಟಾ ಪಂಚ್ ಏಕೆ ಉತ್ತಮ?
ಟಾಟಾ ಪಂಚ್‌ನ ವಿಶೇಷತೆಯೆಂದರೆ ನೀವು ಕಡಿಮೆ ಬೆಲೆ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಪಡೆಯುವುದು ಮಾತ್ರವಲ್ಲದೆ ನಿಮಗೆ ಹಲವಾರು ಆಯ್ಕೆಗಳನ್ನು ಸಹ ನೀಡಲಾಗುತ್ತದೆ. ನೀವು ಇದನ್ನು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಖರೀದಿಸಬಹುದು. ಕುಟುಂಬಕ್ಕೆ ಬಜೆಟ್ ಸ್ನೇಹಿ ಮತ್ತು ಸುರಕ್ಷಿತ ಕಾರನ್ನು ಖರೀದಿಸಲು ಬಯಸುವವರಿಗೆ, ಟಾಟಾ ಪಂಚ್ ಉತ್ತಮ ಆಯ್ಕೆಯಾಗಿದೆ.