Used Bike: ಸೆಕೆಂಡ್ ಹ್ಯಾಂಡ್ ಬೈಕ್, ಸ್ಕೂಟರ್ ಖರೀದಿಸುವಾಗ ಮಾರಾಟಗಾರರಿಂದ ತಪ್ಪದೇ ಪಡೆಯಬೇಕಾಗಿರುವ 6 ದಾಖಲೆಗಳು
Used Bike Documents: ಸಾಕಷ್ಟು ಜನರು ಡೀಲರ್‌ಗಳಿಂದ ಅಥವಾ ಇತರೆ ವ್ಯಕ್ತಿಗಳಿಂದ ಸೆಕೆಂಡ್ ಹ್ಯಾಂಡ್ ಬೈಕ್ ಅಥವಾ ಸ್ಕೂಟರ್ ಖರೀದಿಸಬಹುದು. ಈ ಸಮಯದಲ್ಲಿ ಖರೀದಿದಾರರು ತಪ್ಪದೇ ಪಡೆಯಬೇಕಾಗಿರುವ ದಾಖಲೆಗಳು ಯಾವುವು ಎಂದು ತಿಳಿಯೋಣ.
ಹೊಸ ಬೈಕ್, ಸ್ಕೂಟರ್ ಖರೀದಿಸಲಾಗದೆ ಸಾಕಷ್ಟು ಜನರು ಸೆಕೆಂಡ್ ಹ್ಯಾಂಡ್ ವಾಹನಕ್ಕೆ ತೃಪ್ತಿ ಪಡೆಯುತ್ತಾರೆ. ಬೈಕ್ ಚಾಲನೆ ಕಲಿಯುವ ಸಂದರ್ಭದಲ್ಲಿಯೂ ಹೆಚ್ಚಿನವರು ಹಳೆ ದ್ವಿಚಕ್ರ ವಾಹನ ಖರೀದಿಸಲು ಆದ್ಯತೆ ನೀಡಬಹುದು. ಕೆಲವೊಮ್ಮೆ ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಬೈಕ್‌ಗಳು, ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ದೊರಕಬಹುದು. ಪೆಟ್ರೋಲ್ ಚಾಲಿತ ಹಳೆಯ ಬೈಕ್ ಅಥವಾ ಸ್ಕೂಟರ್ ಖರೀದಿಸುವಾಗ ವಾಹನದ ಗುಣಮಟ್ಟದ ಕುರಿತು ಪರಿಶೀಲಿಸಬೇಕು. ಹಳೆ ಬೈಕ್ ಅಥವಾ ಸ್ಕೂಟರ್‌ಗಳನ್ನು ಹೊರಗೆ ಚೆನ್ನಾಗಿ ಪಾಲೀಶ್ ಹಚ್ಚಿ ಮಾರಾಟಕ್ಕೆ ಇಟ್ಟಿರುತ್ತಾರೆ. ಹೀಗಾಗಿ, ಹೊರಗಿನ ಥಳಕು ಬಳಕು ನೋಡಿ ಖರೀದಿಸಬಾರದು. ವಾಹನದ ಎಂಜಿನ್ ಸಂಖ್ಯೆ ಇತ್ಯಾದಿ ಹಲವು ಅಂಶಗಳನ್ನು ಪರಿಶೀಲಿಸಬೇಕು. ಕಳ್ಳತನ ಮಾಡಿದ ಬೈಕ್‌ಗಳನ್ನು ಕೂಡ ಮಾರಾಟ ಮಾಡಬಹುದು. ಹೀಗಾಗಿ, ಖರೀದಿ ಸಮಯದಲ್ಲಿ ತುಸು ಹೆಚ್ಚೇ ಎಚ್ಚರವಹಿಸಬೇಕು.
ಆರ್‌ಸಿ ಬುಕ್
ಹಳೆಯ ಬೈಕ್ ಖರೀದಿಸುವ ಸಮಯದಲ್ಲಿ ಆರ್‌ಸಿ ಬುಕ್ ಪಡೆಯಲು ಮರೆಯಬೇಡಿ. ಇದು ಬೈಕ್ ನೋಂದಣಿ ಮಾಡಿರುವ ಕುರಿತು ಇರುವ ದಾಖಲೆಯಾಗಿದೆ. ಇದರಲ್ಲಿ ಮಾರಾಟಗಾರರ ಹೆಸರು, ಛಾಸಿ ಹೆಸರು, ಎಂಜಿನ್ ಸಂಖ್ಯೆ ಇತ್ಯಾದಿ ಅಂಶಗಳು ಆರ್‌ಸಿ ಬುಕ್‌ನಲ್ಲಿ ಇರುತ್ತದೆ. ಬ್ಯಾಂಕ್ ಸಾಲದಿಂದ ಬೈಕ್ ಪಡೆದಿದ್ದರೆ ಸಾಲ ಪೂರ್ತಿ ತೀರಿಸಿರುವುದನ್ನು ಖಚಿತಪಡಿಸಿಕೊಳ್ಳಿ.
ವಿಮೆ ದಾಖಲೆ
ಎಲ್ಲಾ ವಾಹನಗಳು ವಿಮೆ ಹೊಂದಿರುವುದು ಕಡ್ಡಾಯ. ಹಳೆಯ ವಾಹನ ಖರೀದಿಸುವ ಸಮಯದಲ್ಲಿ ವಿಮೆ ಇರುವುದನ್ನು ಖಚಿತಪಡಿಸಿ. ಇಲ್ಲವಾದರೆ ನಿಮ್ಮ ಹೆಸರಿಗೆ ಬೈಕ್ ಅಥವಾ ಸ್ಕೂಟರ್ ಅನ್ನು ಆರ್‌ಟಿಒನಲ್ಲಿ ನೋಂದಣಿ ಮಾಡಲಾಗದು.
ಪಿಯುಸಿ ಸರ್ಟಿಫಿಕೇಟ್
ಪೊಲ್ಯುಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (ಪಿಯುಸಿ) ಇರಬೇಕು. ಇಮಿಷನ್ ಟೆಸ್ಟ್ ಮಾಡಿಸುವುದು ಸುಲಭ. ಪೆಟ್ರೋಲ್ ಬಂಕ್‌ನಲ್ಲಿ ಅಥವಾ ಇತರ ಕಡೆಗಳಲ್ಲಿ ಮಾಲಿನ್ಯ ತಪಾಸಣೆ ಮಾಡುವ ಕಾರಣ ಈ ದಾಖಲೆ ಪಡೆಯುವುದು ಕಷ್ಟವಲ್ಲ.
ಎನ್‌ಒಸಿ
ಬೇರೊಂದು ರಾಜ್ಯದಿಂದ ಬೈಕನ್ನು ಖರೀದಿಸುವುದಾದರೆ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯಬೇಕು.
ಬೈಕ್ ಖರೀದಿಸಿದ ಇನ್‌ವಾಯ್ಸ್
ಮೊದಲ ಬಾರಿಗೆ ಶೋರೂಂನಿಂದ ಬೈಕ್ ಖರೀದಿಸಿರುವ ಸಂದರ್ಭದ ಇನ್‌ವಾಯ್ಸ್ ಅನ್ನು ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಗಾರರಿಂದ ಪಡೆಯಿರಿ. ಹೊಸ ಬೈಕ್ ಖರೀದಿಸುವ ಸಮಯದಲ್ಲಿ ನೀಡಿರುವ ದಾಖಲೆಗಳನ್ನು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿದಾರರು ಪಡೆಯಬೇಕು. ಇದು ಆ ಬೈಕ್‌ನ ಮೂಲದ ಕುರಿತು ದೃಢೀಕರಿಸಲು ನೆರವಾಗುತ್ತದೆ. ಈಗ ಒಂದು ರಾಜ್ಯದಲ್ಲಿ ಕದ್ದ ಬೈಕನ್ನು ಇನ್ನೊಂದು ರಾಜ್ಯದಲ್ಲಿ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ದಾಖಲೆಗಳನ್ನು ಕೇಳಿ ಪಡೆಯುವುದು ಒಳ್ಳೆಯದು.
ಮಾರಾಟಗಾರನ ಗುರುತಿನ ಚೀಟಿ ಮತ್ತು ವಿಳಾಸದ ದಾಖಲೆ
ನೀವು ಯಾರಿಂದ ವಾಹನ ಖರೀದಿಸುವಿರೋ ಆ ವ್ಯಕ್ತಿಯ ಗುರುತಿನ ಚೀಟಿ ಪಡೆದು ಇಟ್ಟುಕೊಳ್ಳಿ. ಇದೇ ರೀತಿ ಆಧಾರ್ ಕಾರ್ಡ್‌ನಂತಹ ವಿಳಾಸ ದಾಖಲೆಗಳ ಜೆರಾಕ್ಸ್ ಪಡೆಯಿರಿ. ಈ ರೀತಿಯ ದಾಖಲೆಗಳನ್ನು ದೀರ್ಘಕಾಲ ಇಟ್ಟುಕೊಳ್ಳಿ. ಕಳೆದುಕೊಳ್ಳಬೇಡಿ.
ನಮೂನೆ 29: ಬೈಕ್ ಅಥವಾ ಸ್ಕೂಟರ್ ಮಾರಾಟಗಾರನ್ನು ಬೈಕ್ ಟ್ರಾನ್ಸ್‌ಫಾರ್ ಕುರಿತು ನಮೂನೆ 30 ಭರ್ತಿ ಮಾಡಬೇಕು. ಇದನ್ನು ಆರ್‌ಟಿಒಗೆ ಸಲ್ಲಿಸಬೇಕಾಗಿರುತ್ತದೆ.
ಅಫಿಡವಿತ್: ಬೈಕ್ ಯಾವುದೇ ಸಾಲ ಹೊಂದಿಲ್ಲ ಇತ್ಯಾದಿ ಅಫಿಡವಿತ್ ಮಾಡಿಕೊಳ್ಳಬಹುದು.