ಬನ್ನಿ ಬೆಂಗಳೂರಿನ ಕನ್ನಡ ರಾಜ್ಯೋತ್ಸವಕ್ಕೆ ಹೋಗಿ ಒಂದು ಸುತ್ತು ಸುತ್ತಿ ಬರೋಣ; ಹಣ ಕೊಡುವುದು ಬೇಡ ಮನಸಿನಲ್ಲಿ ಕನ್ನಡದ ಕಂಪಿದ್ದರೆ ಸಾಕು
ಬೆಂಗಳೂರಿನಲ್ಲಿ ಸದಾಕಾಲ ಕನ್ನಡ ಹಬ್ಬವೇ. ಇಲ್ಲಿನ ಜನರಿಗೆ ಕನ್ನಡದ ಬಗ್ಗೆ ಇರುವ ಪ್ರೀತಿ ಅಂತಹದ್ದು. ಕನ್ನಡ ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸುತ್ತಾರೆ. ಕೆಲವೆಡೆ ಭಾಷಣ, ಸಭಾಕಾರ್ಯಕ್ರಮ ಇದ್ದರೆ ಇನ್ನು ಕೆಲವೆಡೆ ಈ ರೀತಿ ಮೆರವಣಿಗೆ
ನವೆಂಬರ್‌ನಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲಿ ಸದಾಕಾಲ ಕನ್ನಡ ಹಬ್ಬವೇ. ಇಲ್ಲಿನ ಜನರಿಗೆ ಕನ್ನಡದ ಬಗ್ಗೆ ಇರುವ ಪ್ರೀತಿ ಅಂತಹದ್ದು. ನಾವಿಲ್ಲಿ ಬೆಂಗಳೂರಿನ ಏರಿಯಾ ಒಂದರ ಕನ್ನಡ ಹಬ್ಬದ ಸಂಭ್ರಮವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದೇವೆ. ರಾಜಾಜಿನಗರದ ಕನ್ನಡ ಹಬ್ಬದ ಕಂಪು ಹೀಗಿತ್ತು ನೋಡಿ. ಮೊದಲು ನೀವು ಮಹಾಕವಿ ಕುವೆಂಪು ಮೆಟ್ರೊ ಮಾರ್ಗವಾಗಿ ಬರುತ್ತೀರಾ ಎಂದಿಟ್ಟುಕೊಳ್ಳಿ ಈಗ ನಿಮ್ಮ ಕಣ್ಣಿಗೆ ಒಂದು ಉದ್ದನೆಯ ರಸ್ತೆ ಕಾಣಿಸುತ್ತದೆ. ರಸ್ತೆಯುದ್ದಕ್ಕೂ ಮೆರವಣಿಗೆ. ಒಂದನೇ ಕ್ರಾಸ್, ಎರಡನೇ ಕಾಸ್ರ್, ಮೂರನೆ ಕ್ರಾಸ್ ಹೀಗೆ ಮೆರವಣಿಗೆ ಸಾಗುತ್ತಲೇ ಇರುತ್ತದೆ. ಮೆರವಣಿಗೆ ದೂರದಲ್ಲಿ ನಿಮಗೀಗ ಕಾಣಿಸುತ್ತಿದೆ ಎಂದುಕೊಳ್ಳಿ. ಆದರೆ ಮೆರವಣಿಗೆಗೆ ಇಟ್ಟ ಮೂರ್ತಿ ಯಾವುದಿರಬಹುದು? ಎಂದು ನಿಮಗೆ ಅಂದಾಜೂ ಆಗುತ್ತಿಲ್ಲ. ಯಾಕೆಂದರೆ ಮೆರವಣಿಗೆ ಅಷ್ಟು ದೂರ ಇದೆ. ಕನ್ನಡ ರಾಜ್ಯೋತ್ಸವ ಎಂದರೆ ಯಾರ ಮೆರವಣಿಗೆ ಇರಬಹುದು? ಯಾವ ಮೂರ್ತಿ ಇರಬಹುದು ಎಂದು ಒಮ್ಮೆ ನೀವೇ ಆಲೋಚಿಸಿಕೊಳ್ಳಿ.
ಅಷ್ಟಾದ ಮೇಲೆ ಒಂದಷ್ಟು ಜನರ ಗುಂಪು ನಿಮ್ಮ ಕಣ್ಣಿಗೆ ಕಾಣುತ್ತದೆ. ಎಲ್ಲರ ಕತ್ತಿನಲ್ಲೂ ತೂಗಿ ಹಾಕಿಕೊಂಡ ಕೆಂಪು ಹಾಗೂ ಹಳದಿ ಬಣ್ಣದ ಶಾಲುಗಳಿದೆ. ಕೆಲವರು ಅದನ್ನು ಕುಣಿಯಲು ತ್ರಾಸಾಗಬಾರದು ಎಂದು ಸೊಂಟಕ್ಕೂ ಕಟ್ಟಿಕೊಂಡಿದ್ದಾರೆ. ಇದೇ ರೀತಿ ನೋಡುತ್ತಾ ನೀವು ಮುಂದೆ ಸಾಗುತ್ತಿದ್ದರೆ, ಮೆರವಣಿಗೆ ನಿಮಗಿಂತಲೂ ಮುಂದೆ ಸಾಗುತ್ತದೆ. ಜನರ ಜಾತ್ರೆಯೇ ಅಲ್ಲಿದೆ. ಇನ್ನು ಅಕ್ಕಪಕ್ಕ ಮನೆಯವರೆಲ್ಲ ಇದೇನಿದು ಇಷ್ಟು ಗಲಾಟೆ ಎಂದು ಗೇಟಿನಿಂದಲೇ, ಇನ್ನು ಕೆಲವರು ಮಹಡಿಯಿಂದಲೇ ಇಣುಕಿ ನೋಡುತ್ತಾರೆ. ನೀವು ಅವರನ್ನು ನೋಡುತ್ತೀರಾ.
'ಬೆಳ್ಳಿ ರಥದಲಿ ಸೂರ್‍ಯ ತಂದ ಕಿರಣ' ಹಾಡು ಜೋರು ಜೋರಾಗಿ ಕೇಳಿಸುತ್ತದೆ. ಅಷ್ಟರಲ್ಲಾಗಲೇ ಹಾಡಿನ ಸಾಲುಗಳು ಸ್ಪಷ್ಟವಾಗಿ ಕೇಳದ ಹಾಗೆ ಮುಂದೆ ಒಂದಷ್ಟು ಜನ ಸಾಂಪ್ರದಾಯಿಕವಾಗಿ ಚಂಡೆ ನುಡಿಸುತ್ತಾ ಇರುತ್ತಾರೆ. ಅವರ ಚಂಡೆ ನಾದಕ್ಕೆ ನಿಮಗೆ ನಿಂತಲ್ಲೇ ಕುಣಿಯಬೇಕು ಎಂದೆನಿಸಿದರೆ ತಪ್ಪೇನೂ ಇಲ್ಲ. ನೀವೂ ಕುಣಿದರೆ ಅವರಿಗೂ ಖುಷಿ. ಇನ್ನು ಲೈವ್ ಸಿಂಗಿಂಗ್ ಬ್ಯಾಂಡ್‌ನವರು ಆ ಹಾಡನ್ನು ಹಾಡುತ್ತಿದ್ಧಾರೆ. ಅದು ಕ್ಯಾಸೆಟ್ ಮೂಲಕ ಬಂದ ಈ ಮೊದಲೇ ರೆರ್ಕಾಡರ್ ಆಗಿರುವ ಹಾಡಲ್ಲ ಎಂದು ನಿಮಗೆ ಈಗ ಗೊತ್ತಾಗುತ್ತದೆ. ಯಾಕೆಂದರೆ ಬೆಳ್ಳಿ ರಥದಂತೆಯೇ ಅಲಂಕಾರಗೊಂದಿದ್ದ ಒಂದು ಗಾಡಿಯಲ್ಲಿ ಕುಳಿತು ಒಂದಷ್ಟು ಜನ ಹಾಡುತ್ತಿದ್ದರೆ ಇನ್ನೊಂದಷ್ಟು ಜನ ಲೈವ್ ಬ್ಯಾಂಡ್ ಬಾರಿಸುತ್ತಿದ್ದಾರೆ.
ಅರೇ ಇಷ್ಟಕ್ಕೆ ನಿಲ್ಲೋದಿಲ್ಲ ಇದು, ಅದಕ್ಕಿಂತ ಸ್ವಲ್ಪವೇ ಸ್ಪಲ್ಪ ಮುಂದೆ ತಮಟೆ ಬಡಿಯುವವರೂ ಇದ್ದಾರೆ. ಒಂದರ ಧ್ವನಿ ಒಂದರ ತಾಳ, ಇನ್ನೊಂದರ ಕುಣಿತ ಒಟ್ಟಿನಲ್ಲಿ ಗಲಾಟೆಯೋ ಗಲಾಟೆ. ಪಕ್ಕದಲ್ಲಿ ನಿಂತು ನೀವು ಈಗ ಏನಾದರೂ ನಿಮಗೆ ಬಂದ ಅನುಮಾನವನ್ನು ಕೇಳಿದರೆ ಖಂಡಿತ ಆ ಅನುಮಾನಕ್ಕೆ ನನ್ನ ಬಳಿ ಉತ್ತರ ಹೇಳಲು ಸಾಧ್ಯವಿಲ್ಲ ಅಷ್ಟು ಶಬ್ಧವಾಗುತ್ತಿರುತ್ತದೆ. ಇನ್ನು ತಮಟೆ ಬಡಿಯುವವರೂ ಕೂಡ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಅವರೆಲ್ಲರೂ ತಮ್ಮ ಆಸಕ್ತಿ ಹಾಗೂ ಖುಷಿಗಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಅವರ ಮುಖ ನೋಡಿಯೇ ತಿಳಿಯುತ್ತದೆ. ಬಾಯಿ ತುಟಿಗಳನೆಲ್ಲಾ ಕಚ್ಚಿ ಹಿಡಿದು, ಇದ್ದಷ್ಟೂ ಶಕ್ತಿ ಹಾಕಿ, ಕೈಯ್ಯಲ್ಲಿರುವ ಕೋಲು ಮುರಿಯುವಂತೆ ತಮಟೆ ಬಡಿಯುತ್ತಿದ್ದಾರೆ.
ಮಗುವಲ್ಲೂ ಅಚ್ಚೊತ್ತಿದ ಉತ್ಸಾಹ
ಹುಟ್ಟಿ ಒಂದು ಮೂರು ತಿಂಗಳಾದ ಮುಗುವನ್ನು ಕರೆದುಕೊಂಡು ಯಾವುದೋ ಪುಣ್ಯಾತ್ಮ ಮನೆಯ ಹೊರಗಡೆ ಬಂದಿದ್ದಾನೆ. ನಮಗೇ ಆ ಕಿವಿಗಡಚಿಕ್ಕುವ ಧ್ವನಿ ಕೇಳಿ ಎದೆಯೂ ಹೊಡೆದುಕೊಳ್ಳುವ ರೋತಿ ಶಬ್ದವಾಗುವಾಗ ಆ ಎಳೆ ಕಂದಮ್ಮನ ಕಿವಿಯ ತಮಟೆಗಳು ಏನಾಗಿರಬಹುದು ಅಲ್ವಾ? ಆದರೂ ಆ ಮಗು ಅಳುತ್ತಿಲ್ಲ. ಬಿಟ್ಟ ಕಣ್ಣು ಬಿಟ್ಟ ಹಾಗೆ ದೊಡ್ದಾಗಿ ನೋಡುತ್ತಾ ಅಪ್ಪನ ಭುಜವನ್ನು ಗಟ್ಟಿಯಾಗಿ ತಬ್ಬಿದೆ. ಇನ್ನು ತಮಟೆ ಏಟಿಗೆ ಕುಣಿಯುವವರ ಸಂಖ್ಯೆಯಂತು ಹೆಚ್ಚುತ್ತಲೇ ಬಂತು. ಅಬ್ಬಾ! ಅಲ್ಲಿ ನೋಡಿ, ಬೇಗ ನೋಡಿ… ಈಗಷ್ಟೇ ನಡೆಯಲು ಕಲಿತ ಮಗುವನ್ನು ಅಪ್ಪನೊಬ್ಬ ಟಪ್ಪಾಂಗುಚ್ಚಿ ಆಡು ಬಾ ಎಂದು ರೋಡಿನ ಮದ್ಯ ನಿಲ್ಲಿಸಿ ಈಗಿನಿಂದಲೇ ಕುಣಿಯಲು ಟ್ರೇನಿಂಗ್ ನೀಡುತ್ತಿದ್ಧಾನೆ.
ಈ ಹಾಡು ಬೇಕಿತ್ತೇ?
ಈಗಷ್ಟೇ ಒಂದನೇ ತರಗತಿ ಸೇರಿರಬಹುದು ಎಂಬ ಮುವಂತು ಯಾವ ಅಂಜಿಕೆಯೂ ಇಲ್ಲದೆ ಬಿಂದಾಸ್ ಆಗಿ ಕುಣಿಯುತ್ತಿದೆ. ಈಗ ನಾವಲ್ಲ ನಮ್ಮ ಸಮೀಪಕ್ಕೆ ಮರವಣಿಗೆ ಬಂತು ಕಾಣುತ್ತಿರುವುದು ಗಣೇಶನ ಮೂರ್ತಿ. ಅದರ ಪಕ್ಕದಲ್ಲಿ ಕನ್ನಡಾಂಬೆ. ಇನ್ನು ಗಣೇಶ ವಿಸರ್‍ಜನೆಯೇ ಆಗಲಿಲ್ಲವೇ ಎಂಬ ಅನುಮಾನ ಈಗ ನಮಗಿಬ್ಬರಿಗೂ ಬಂತಲ್ಲವೇ? ಆದರೆ ಇಷ್ಟೆಲ್ಲ ಕನ್ನಡ ಹಬ್ಬ ಮಾಡಿ ನಡುವಲ್ಲಿ “ಶೇಕ್ ಇಟ್ ಪುಷ್ಪವತಿ” ಎನ್ನುವ ಹಾಡಿನೊಂದಿಗೆ ಮೆರವಣಿಗೆ ಸಾಗಿದ್ದು ಯಾಕೋ ಅಸಹಜವಾಗಿತ್ತು
ಬರಹ: ಸುಮಾ. ಕಂಚೀಪಾಲ್
ಇದನ್ನೂ ಓದಿ: Brain Teaser: ನೀವು ಬಹಳ ಬುದ್ಧಿವಂತರಾದ್ರೆ ಈ ಟೀ ಶರ್ಟ್ನಲ್ಲಿ ಎಷ್ಟು ತೂತುಗಳಿವೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ