ಬೆಂಗಳೂರಲ್ಲಿ ಇನ್ನೂ ಕೆಲ ದಿನ ಬಿಸಿಲಾಘಾತ, ಮೂಗಲ್ಲಿ ರಕ್ತ, ಸನ್‌ ಬರ್ನ್‌ ಕಿರಿಕಿರಿ ಸಾಮಾನ್ಯ, ಆರೋಗ್ಯ ಕಾಪಾಡಲು ಈ 10 ಟಿಪ್ಸ್ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಲ್ಲಿ ಇನ್ನೂ ಕೆಲ ದಿನ ಬಿಸಿಲಾಘಾತ, ಮೂಗಲ್ಲಿ ರಕ್ತ, ಸನ್‌ ಬರ್ನ್‌ ಕಿರಿಕಿರಿ ಸಾಮಾನ್ಯ, ಆರೋಗ್ಯ ಕಾಪಾಡಲು ಈ 10 ಟಿಪ್ಸ್ ಗಮನಿಸಿ

ಬೆಂಗಳೂರಲ್ಲಿ ಇನ್ನೂ ಕೆಲ ದಿನ ಬಿಸಿಲಾಘಾತ, ಮೂಗಲ್ಲಿ ರಕ್ತ, ಸನ್‌ ಬರ್ನ್‌ ಕಿರಿಕಿರಿ ಸಾಮಾನ್ಯ, ಆರೋಗ್ಯ ಕಾಪಾಡಲು ಈ 10 ಟಿಪ್ಸ್ ಗಮನಿಸಿ

Summer Health: ಬೆಂಗಳೂರಲ್ಲಿ ಬಿಸಿಲಾಘಾತದ ಪರಿಣಾಮ ಹೆಚ್ಚಾಗಿದ್ದು, ಅನೇಕರಿಗೆ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ. ಹಾಗಾಗಿ, ಮೂಗಲ್ಲಿ ರಕ್ತ, ಸನ್‌ ಬರ್ನ್‌ ಕಿರಿಕಿರಿ ಸಾಮಾನ್ಯ, ಆರೋಗ್ಯ ಕಾಪಾಡುವುದಕ್ಕಾಗಿ ಈ 10 ಟಿಪ್ಸ್ ಗಮನಿಸಬಹುದು.

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಇನ್ನೂ ಕೆಲದಿನ ಬಿಸಿಲಾಘಾತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ, ಮೂಗಲ್ಲಿ ರಕ್ತ, ಸನ್‌ಬರ್ನ್‌ ತಪ್ಪಿಸಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸರಳ ತಂತ್ರಗಳಿವು. (ಸಾಂಕೇತಿಕ ಚಿತ್ರ)
ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಇನ್ನೂ ಕೆಲದಿನ ಬಿಸಿಲಾಘಾತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ, ಮೂಗಲ್ಲಿ ರಕ್ತ, ಸನ್‌ಬರ್ನ್‌ ತಪ್ಪಿಸಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸರಳ ತಂತ್ರಗಳಿವು. (ಸಾಂಕೇತಿಕ ಚಿತ್ರ) (HTK / Pexels)

Summer Health: ಬೆಂಗಳೂರು ತನ್ನ ಹೃದ್ಯ ಹವಾಮಾನಕ್ಕೆ ಹೆಸರುವಾಸಿ. ಆದಾಗ್ಯೂ ಈ ಬಾರಿ ಹವಾಮಾನ ವೈಪರೀತ್ಯ ಬೆಂಗಳೂರನ್ನು ಕಾಡಿದೆ. ರಾತ್ರಿ ವೇಳೆ ಚಳಿ, ಹಗಲು ಸುಡು ಬಿಸಿಲು ಇರುವಂತಹ ಈ ಹವಾಮಾನ ವೈಪರೀತ್ಯ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತಿದೆ. ಈಗಾಗಲೇ ಅನೇಕರಿಗೆ ಒಣಹವೆಯ ಕಾರಣ ಮೂಗಲ್ಲಿ ರಕ್ತ, ಸನ್‌ ಬರ್ನ್, ನಿರ್ಜಲೀಕರಣ ಮುಂತಾದ ಸಮಸ್ಯೆ ಕಂಡುಬಂದಿದ್ದು, ವೈದ್ಯರ ನೆರವಿನೊಂದಿಗೆ ಅದಕ್ಕೆ ಪರಿಹಾರ ಕಂಡುಕೊಳ್ಳಲಾರಂಭಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಇನ್ನೂ ಕೆಲದಿನ ಬಿಸಿಲಾಘಾತ, ಮೂಗಲ್ಲಿ ರಕ್ತ, ಸನ್‌ಬರ್ನ್‌ ತಪ್ಪಿಸಲು ಈ 10 ಟಿಪ್ಸ್‌

ಪರಿಸ್ಥಿತಿ ಹೀಗಿರುವಾಗ ಅಂದರೆ, ಬೆಂಗಳೂರಲ್ಲಿ ಇನ್ನೂ ಕೆಲದಿನ ಬಿಸಿಲಾಘಾತ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಕಾರಣ, ಮೂಗಲ್ಲಿ ರಕ್ತ, ಸನ್‌ಬರ್ನ್‌ ತಪ್ಪಿಸಲು ಹಾಗೂ ಆರೋಗ್ಯ ಕಾಪಾಡಲು ಈ 10 ಟಿಪ್ಸ್‌ ಗಮನಿಸಬಹುದು.

1) ಸಾಕಷ್ಟು ನೀರು ಕುಡಿಯಿರಿ: ನೀರಡಿಕೆ ಆಗದೇ ಇದ್ದರೂ, ನಿತ್ಯ ಶರೀರಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಿರಿ. ಎಲ್ಲೇ ಹೋಗಿ, ಕೈಯಲ್ಲೊಂದು ನೀರಿನ ಬಾಟಲಿ ಜತೆಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಎಳನೀರು, ಮಜ್ಜಿಗೆ, ತಾಜಾ ಹಣ್ಣಿನ ರಸ ಸೇವಿಸುವುದನ್ನು ಮರೆಯಬೇಡಿ.

2) ಹಗುರ ಉಡುಪು ಧರಿಸಿ: ಸುಡು ಬಿಸಿಲು ಇರುವ ಕಾರಣ ಬಿಗಿಯಾದ, ಬೆಚ್ಚಗಿನ ಉಡುಪು ಧರಿಸಬೇಡಿ. ಹಗುರವಾಗಿರುವ, ಸಡಿಲವಾದ ಉಡುಪು ಧರಿಸಿ. ಕಡು ಬಣ್ಣದ ಉಡುಪಿನ ಬದಲು ಲೈಟ್ ಕಲರ್, ಬಿಳಿ ಬಣ್ಣದ ಉಡುಪಿ ಧರಿಸಿ. ಸಾಧ್ಯವಾದಷ್ಟು ಹತ್ತಿ ಅಥವಾ ಲಿನೆನ್‌ ಉಡುಪುಗಳನ್ನೇ ಬಳಸಿ. ಇಂತಹ ಉಡುಪುಗಳು ಶರೀರಕ್ಕೆ ಅಗತ್ಯ ವಾಯು ಸಂಚಾರಕ್ಕೆ ಅನುವು ಮಾಡಿಕೊಟ್ಟು, ಶರೀರವನ್ನು ತಣ್ಣಗೆ ಇರಿಸುತ್ತದೆ.

3) ಸೂರ್ಯನ ತಾಪದಿಂದ ರಕ್ಷಿಸಿ: ಸೂರ್ಯನ ತಾಪದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಸಾಧ್ಯವಾದಷ್ಟು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆ ತನಕ ಹೊರಗೆ ಅಡ್ಡಾಡಬೇಡಿ. ಒಂದೊಮ್ಮೆ ಹೋಗುವುದಾದರೂ ತಲೆಗೊಂದು ಟೊಪ್ಪಿ ಹಾಕಿಕೊಳ್ಳಿ. ಕಣ್ಣಿಗೆ ತಂಪು ಕಣ್ಣಡಕ ತೊಟ್ಟುಕೊಳ್ಳಿ. ಚರ್ಮ ಒಣಗುವುದನ್ನು ತಪ್ಪಿಸಲು, ಸನ್‌ ಬರ್ನ್‌ ಆಗದಂತೆ ತಡೆಯಲು ಎಸ್‌ಪಿಎಫ್ 30 ಅಥವಾ ಹೆಚ್ಚಿನ ಶಕ್ತಿಯ ಸನ್‌ಸ್ಕ್ರೀನ್‌ ಚರ್ಮಕ್ಕೆ ಲೇಪಿಸಿಕೊಳ್ಳಿ.

4) ಶರೀರವನ್ನು ತಣ್ಣಗಿಡುವ ಲಘು ಆಹಾರ ಸೇವಿಸಿ: ಹಣ್ಣು, ಹಂಪಲು, ಮುಳ್ಳು ಸೌತೆ, ಮದ್ರಾಸ್ ಸೌತೆ, ಕಲ್ಲಂಗಡಿ ಹಣ್ಣು ಮುಂತಾದವುಗಳನ್ನು ಸೇವಿಸಬೇಕು. ತರಕಾರಿ ಸಲಾಡ್‌ಗಳನ್ನು ಸೇವಿಸಬೇಕು. ಮಸಾಲೆ ಹೆಚ್ಚಿರುವಂತಹ ಆಹಾರ, ಖಾದ್ಯಗಳನ್ನು ಸೇವಿಸಬಾರದು. ಇಂತಹ ಆಹಾರ ವಸ್ತುಗಳು ಶರೀರದ ಉಷ್ಣಾಂಶವನ್ನು ಹೆಚ್ಚಿಸಿ, ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

5) ಸಾಧ್ಯವಾದಷ್ಟು ನೆರಳಲ್ಲಿ ಇರಿ: ಬಿಸಿಲಾಘಾತ ಇರುವ ಕಾರಣ ಸಾಧ್ಯವಾದಷ್ಟು ನೆರಳಲ್ಲಿ ಇರಬೇಕು. ಮನೆ, ಕಚೇರಿಯೊಳಗೆ ಇದ್ದರೆ ಸರಿಯಾಗಿ ಗಾಳಿ ಆಡುವ ಪ್ರದೇಶದಲ್ಲಿ ಇರಿ.

6) ತಣ್ಣೀರು ಸ್ನಾನ ಉತ್ತಮ: ಬಿಸಿಲಿಗೆ ಶರೀರವನ್ನು ತಂಪಾಗಿಡುವುದಕ್ಕಾಗಿ ತಣ್ಣೀರು ಸ್ನಾನ ಮಾಡಬಹುದು. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಬೆವರಿನ ದುರ್ವಾಸನೆಯನ್ನು ನೀಗಿಸಬಹುದು. ಶರೀರ ಸ್ವಚ್ಛತೆಯನ್ನೂ ಕಾಪಾಡಬಹುದು.

7) ಒತ್ತಡ ಹೆಚ್ಚಿರುವ ಕೆಲಸ ಮಾಡಬೇಡಿ: ಬಿಸಿಲಿನ ತಾಪ ಹೆಚ್ಚು ಇರುವ ಸಂದರ್ಭದಲ್ಲಿ ಹೊರಗೆ ಶಾರೀರಿಕ ಶ್ರಮದ ಕೆಲಸ ಮಾಡಬೇಡಿ. ಸಾಧ್ಯವಾದಷ್ಟೂ ಅಂತಹ ಕೆಲಸಗಳನ್ನು ಬೆಳಗ್ಗೆ ಬೇಗ ಶುರುಮಾಡಿ 11 ಗಂಟೆ ಸುಮಾರಿಗೆ ನಿಲ್ಲಿಸಿ. ಪುನಃ ಸಂಜೆ 4 ಗಂಟೆ ನಂತರ ಮಾಡಿ. ಇನ್ನು ವ್ಯಾಯಾಮ ಮಾಡುವುದಾದರೂ ಮುಂಜಾನೆ ಅಥವಾ ಸಂಜೆ ಬಳಿಕ ಮಾಡಿ.

8) ತಾಪಮಾನ ಸಂಬಂಧಿ ಕಾಯಿಲೆ ಗಮನಿಸಿ: ತಲೆತಿರುಗುವಿಕೆ, ತಲೆನೋವು, ವಾಕರಿಕೆ ಮತ್ತು ತ್ವರಿತ ಹೃದಯ ಬಡಿತ, ಶಾಖದ ಬಳಲಿಕೆ ಮತ್ತು ಬಿಸಿಲಾಘಾತದ ಲಕ್ಷಣಗಳನ್ನು ಗುರುತಿಸಿಕೊಳ್ಳಿ ಈ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ.

9) ಸ್ವಚ್ಛತೆ ಕಾಪಾಡಿ: ಬಿಸಿಲಾಘಾತಕ್ಕೆ ಸಂಬಂಧಿಸಿದ ಸೋಂಕುಗಳು ಹರಡದಂತೆ ಅಗತ್ಯ ಸ್ವಚ್ಛತೆ ಕಾಪಾಡಿಕೊಳ್ಳಿ. ನಿಮ್ಮ ಕೈಗಳನ್ನು ಪದೇಪದೆ ಸ್ವಚ್ಛಗೊಳಿಸಿ. ಮುಖವನ್ನೂ ತೊಳೆಯುತ್ತಿರಿ. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ.

10) ಶರೀರದ ಮಾತಿಗೂ ಗಮನಕೊಡಿ: ಹವಾಮಾನ ವೈಪರೀತ್ಯದ ಕಾರಣ ಶರೀರದಲ್ಲೂ ವ್ಯತ್ಯಾಸಗಳು ಉಂಟಾಗಬಹುದು. ಮೇಲೆ ಹೇಳಿದ ರೋಗಲಕ್ಷಣಗಳಲ್ಲದೇ ಇನ್ನೇದಾರೂ ಸಂಕೇತಗಳನ್ನು, ಲಕ್ಷಣಗಳನ್ನು ಶರೀರ ತೋರಿಸಿದರೆ ನಿರ್ಲಕ್ಷಿಸಬೇಡಿ. ಕುಟುಂಬ ವೈದ್ಯರನ್ನು ಕಂಡು ಸಮಾಲೋಚನೆ ನಡೆಸಿ, ಅಗತ್ಯ ಚಿಕಿತ್ಸೆ ಪಡೆಯಿರಿ. ಆರೋಗ್ಯವನ್ನು ಕಡೆಗಣಿಸಬೇಡಿ.

ಇಷ್ಟು ಮಾಡಿದರೆ ಸಾಕು. ಬೆಂಗಳೂರು ಮಾತ್ರವಲ್ಲ, ಕರ್ನಾಟಕ, ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳುವುದಕ್ಕೆ ಬೇಸಿಗೆಯಲ್ಲಿ ಆರೋಗ್ಯ (Summer Health) ಕಾಪಾಡಲು ಸಾಧ್ಯವಾಗಬಹುದು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner