ಕನ್ನಡ ಸಾಹಿತ್ಯಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ತಂದಿತ್ತ ಲೇಖಕಿ ಬಾನು ಮುಷ್ತಾಕ್; ಅನುವಾದದ ಹೆಗಲು ಕೊಟ್ಟ ದೀಪಾ ಭಾಸ್ತಿ
ಕನ್ನಡ ಸಾಹಿತಿ ಹಾಸನದ ನೆಲೆಯ ಬಾನು ಮುಷ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ ಹಾರ್ಟ್ ಲ್ಯಾಂಪ್ (Heart Lamp) ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಿಕ್ಕಿದೆ. ಖ್ಯಾತ ಅನುವಾದಕಿ ದೀಪಾ ಭಾಸ್ತಿ ಅವರು ಬಾನು ಮುಷ್ತಾಕ್ ಅವರ ಹನ್ನೆರಡು ಪ್ರಾತಿನಿಧಿಕ ಕನ್ನಡದ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. (ಬರಹ- ಮುರಳೀಧರ ಖಜಾನೆ)

ಎಪ್ಪತ್ತು-ಎಂಭತ್ತರ ದಶಕದಲ್ಲಿ, ಕಾಗದದಲ್ಲಿ ಪೆನ್ನಿನಲ್ಲಿ ಬರೆಯುತ್ತಿದ್ದ ಕಾಲದಲ್ಲಿ, ಪತ್ರಿಕೆಗಳಿಗೆ ಕಥೆ, ಕವನ, ಲೇಖನ ಕಳುಹಿಸಬೇಕಿದ್ದರೆ, ಕಾಗದದ ಒಂದೇ ಮಗ್ಗಲಿಗೆ, ಅಂದರೆ ಕಾಗದದ ಹಿಂದಿನ ಭಾಗದಲ್ಲಿ ಬರೆಯದೆ ಮುಂಭಾಗದಲ್ಲಿ ಮಾತ್ರ ಬರೆಯಬೇಕೆಂಬ ನಿಯಮವಿತ್ತು. ಕಾಗದದ ಒಂದೇ ಮಗ್ಗಲಿಗೆ ಬರೆಯುವುದೆಂದರೆ ಹೇಗೆಂದು ತಿಳಿಯದ ಮುಸ್ಲಿಂ ಸಮುದಾಯದ ಹೆಣ್ಣುಮಗಳೊಬ್ಬಳು ಇಂದು, ಸಾಹಿತ್ಯ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಬೆಳೆದು, ಇಂದು (ಬುಧವಾರ) ಮುಂಜಾನೆ ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ತಂದುಕೊಟ್ಟು, ಕನ್ನಡದ ಸಾಹಿತ್ಯ, ಸಂಸ್ಕೃತಿಯ ವೈವಿಧ್ಯತೆಯನ್ನು ಜಗದಗಲ ಮುಗಿಲಗಲಕ್ಕೆ ವಿಸ್ತರಿಸಿದ್ದಾರೆ. ಈಕೆ ನಮ್ಮ ನಡುವಿನ ಕವಿ, ಲೇಖಕಿ, ಸಣ್ಣ ಕತೆಗಾರ್ತಿ, ಒಂದು ಕಾಲದಲ್ಲಿ ಪತ್ರಕರ್ತರಾಗಿದ್ದ ಬಾನು ಮುಷ್ತಾಕ್.
ಮೊದಲ ಹೆಜ್ಜೆ
ಸಾಹಿತ್ಯ ಲೋಕಕ್ಕೆ ನೀವು ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರೆ ಕಾಣಿಸುವ ಚಿತ್ರ ಯಾವುದು? ಎಂದು, ಬಾನು ಅವರ Heart Lamp ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ದೀರ್ಘ ಪಟ್ಟಿಯಲ್ಲಿ ಸೇರಿದಾಗ ಪ್ರಶ್ನಿಸಿದ ಈ ಬರಹಗಾರನಿಗೆ ಬಾನು ಹೇಳಿದ ಮಾತುಗಳಿವು; “ನನಗೆ ಅಕ್ಷರ ಜ್ಞಾನ ಬರುತ್ತಿದ್ದಂತೆ ನಾನು ಬರೆಯಲು ಆರಂಭಿಸಿದೆ. ನನ್ನ ತಂದೆಗೆ ಸಾಮಾಜಿಕ ಪ್ರಜ್ಞೆ ಇತ್ತು. ಆದರೆ ತಾಯಿಗೆ ಅಷ್ಟಿರಲಿಲ್ಲ. ಆ ಕಾಲಕ್ಕೆ ಇಂದಿನಂತೆ ನಮಗೆ ದಾರಿ ತೋರಿಸುವವರೂ ಇರಲಿಲ್ಲ. ನಾನು ಏಳನೇಯ ತರಗತಿಯಲ್ಲಿ ಓದುತ್ತಿದ್ದಾಗಲೇ ಕಾದಂಬರಿಯೊಂದನ್ನು ಬರೆಯುವ ಸಾಹಸ ಮಾಡಿದ್ದೆ. ನಾನು ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಕಥೆಯೊಂದನ್ನು ಕಳುಹಿಸಿದೆ. ಆಗ ಸಂಪಾದಕರಿಂದ ʼಕಾಗದದ ಒಂದೇ ಮಗ್ಗಲಿಗೆ ಬರೆದು ಕಳುಹಿಸಿʼ ಎಂಬ ಪತ್ರ ಬಂತು. ಕಾಗದದ ಒಂದೇ ಮಗ್ಗಲಿಗೆ ಬರೆಯುವುದು ಹೇಗೆ? ಎಂಬ ಜಿಜ್ಞಾಸೆ. ನನಗೆ ಗೊತ್ತಿಲ್ಲ. ಕೇಳಲು ಯಾರೂ ಇಲ್ಲ. ಅನೇಕ ಕಥೆಗಳನ್ನು ಬರೆದರೂ, ಅದನ್ನು ಪ್ರಕಟಣೆಗೆ ಕಳುಹಿಸುವುದು ಹೇಗೆಂದು ನನಗೆ ಗೊತ್ತಿರಲಿಲ್ಲ.
'ಪ್ರಜಾಮತʼದ ಮ.ನ. ಮೂರ್ತಿ
ಒಮ್ಮೆ ಬೆಂಗಳೂರಿಗೆ ಹೋದಾಗ ಜಯನಗರದಲ್ಲಿ ತಿರುಗಾಡುತ್ತಿದ್ದೆ. ಆಗ ಮನೆಯೊಂದರ ಮುಂದು ಮ.ನ. ಮೂರ್ತಿ ಎಂಬ ಫಲಕ ಕಾಣಿಸಿತು. ಅವರು ಬರಹಗಾರರು ಮತ್ತು ಪ್ರಜಾಮತ ಪತ್ರಿಕೆಯ ಸಂಪಾದಕರೆಂದು ಆ ವೇಳೆಗೆ ಗೊತ್ತಾಗಿತ್ತು. ಧೈರ್ಯ ಮಾಡಿ ಬಾಗಿಲು ತಟ್ಟಿದೆ, ಬಾಗಿಲು ತೆರೆಯಿತು. ಮ.ನ. ಮೂರ್ತಿ ಮನೆಯಲ್ಲಿಯೇ ಇದ್ದು ಒಳಕ್ಕೆ ಕರೆದು ಆತ್ಮೀಯವಾಗಿ ಮಾತನಾಡಿಸಿದರು. ಅವರ ಮುಂದೆ ಇದೇ ಪ್ರಶ್ನೆ ಇಟ್ಟೆ. ʼಕಾಗದದ ಒಂದೇ ಮಗ್ಗಲಿಗೆ ಬರೆಯುವುದೆಂದರೆ ಹೇಗೆ?ʼ ಅವರು ನಕ್ಕು ವಿವರಿಸಿದರು. ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸಿದರು. ಹಾಗೆ ಕಾಗದದ ಒಂದೇ ಮಗ್ಗಲಿಗೆ ಕಥೆಯನ್ನು ಬರೆದು ಕಳುಹಿಸುತ್ತಿದ್ದೆ. ಯಾವುದೂ ಪ್ರಕಟವಾಗಲಿಲ್ಲ. ಕೊನೆಗೆ ನನಗೆ ಉತ್ತಮವೆನ್ನಿಸಿದ ಕಥೆಯೊಂದನ್ನು ಬರೆದು ಮ. ನ. ಮೂರ್ತಿ ಅವರಿಗೆ ಕಳುಹಿಸಿದೆ. ಪ್ರತಿವಾರವೂ, ನನ್ನ ಕಥೆ ಪ್ರಕಟವಾಗುವುದೆಂದು ಕಾಯುವುದೇ ಕೆಲಸವಾಗಿತ್ತು. 1974ರಲ್ಲಿ ನನ್ನ ಮದುವೆಯಾಯಿತು, ನಾನು ನನ್ನ ತವರಿಗೆ ಹೋದಾಗ ಅಂಗಡಿಯಲ್ಲಿ ಪ್ರಜಾಮತ ಕೊಂಡ ನನ್ನ ಪತಿ ಸಂಭ್ರಮದಿಂದ ಮನೆಗೆ ಬಂದರು. ನನ್ನ ಕಥೆ ಪ್ರಕಟವಾಗಿತ್ತು. ನಾನು ಬರಹಗಾರಳಾದೆ. ಆಮೆಲಿನದು ಎಲ್ಲರಿಗೂ ಗೊತ್ತಿರುವ ಕಥೆ. ಪ್ರಜಾವಣಿಯಿಂದ ಲಂಕೇಶ್ ಪತ್ರಿಕೆಯವರೆಗೆ ಎಲ್ಲ ಸಾಪ್ತಾಹಿಕ, ಮಾಸಿಕಗಳಿಗೆ ಕಥೆಯನ್ನು ಬರೆಯುತ್ತಿದ್ದೆ…"
ಅನುವಾದೋನ್ಮಾದ
ಕನ್ನಡ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ನವ ಉತ್ಸಾಹ ಮೂಡುತ್ತಿರುವಂತೆ ಕಾಣುತ್ತಿದೆ. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ ಕೃತಿಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿವೆ. ಹಾಗಾಗಿ ಹೆಚ್ಚು ಹೆಚ್ಚು ಕನ್ನಡದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡು , ಕನ್ನಡದ ಮಣ್ಣಿನ ವಾಸನೆಯನ್ನು ಭೂಗೋಳದ ಸುತ್ತ ಹಬ್ಬಿಸುತ್ತಿದೆ. ಜಯಂತ ಕಾಯ್ಕಿಣಿ ಮತ್ತು ವಿವೇಕ್ ಶಾನುಭಾಗ್ ಅವರ ಕೃತಿಗಳು ಪ್ರಶಸ್ತಿಗಳನ್ನೂ ಪಡೆದುಕೊಂಡಿವೆ. ಜಯಂತ ಕಾಯ್ಕಿಣಿ ಅವರ ಕಥೆಗಳ ಅನುವಾದ No Presents Please: Mumbai Stories (ಅನುವಾದ; ತೇಜಸ್ವಿನಿ ನಿರಂಜನ) ಅವರ ಕೃತಿಗೆ DSC Prize for South Asian Literature ದಕ್ಕಿದೆ. ವಿವೇಕ್ ಶಾನುಭಾಗ್ ಅವರ ಕೃತಿ ಘಾಚರ್ ಘೋಚರ್ ಕೃತಿ (ಅನುವಾದ; ಶ್ರೀನಾಥ್ ಪೆರೂರ್) ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಕನ್ನಡದ classic ಗಳನ್ನು ಅನುವಾದಿಸಿರುವ ವನಮಾಲಾ ವಿಶ್ವನಾಥ್ ಇತ್ತೀಚೆಗೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು Bride in the Hills ಎಂದು ಅನುವಾದಿಸಿದ್ದಾರೆ. ಖ್ಯಾತ ಕನ್ನಡದ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಆಯ್ದ ವಿಮರ್ಶಾ ಲೇಖನಗಳ ಸಂಕಲನ Courtesy of Criticisim ಎಂದು ಕಮಲಾಕರ ಭಟ್ ಅನುವಾದಿಸಿದ್ದಾರೆ. ಲಂಕೇಶ್ ಅವರ ಸಮಗ್ರ ಬರಹ ಸಂಗ್ರಹದ ಆಯ್ದ ಭಾಗಗಳನ್ನು ಹಲವಾರು ಲೇಖಕರು-ಅನುವಾದಕರು, ಅನುವಾದಿಸಿ, ನಟರಾಜ್ ಹುಳಿಯಾರ್ ಸಂಪಾದಿಸಿದ The Sour Mango Tree Selected Works ಅನ್ನು ಪೆಂಗ್ವಿನ್ ನ Random House ಪ್ರಕಟಿಸಿದೆ. ಹಾಗೆಯೇ ಪೂರ್ಣಚಂದ್ರ ತೇಜಸ್ವಿಯವರ ಕೊನೆಯ ಪುಸ್ತಕ ʻಮಾಯಾಲೋಕʼ ವನ್ನು ಕೃಷ್ಣಮೂರ್ತಿ ಚಂದರ್ ಅದೇ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಈ ರೀತಿ ಮುಸ್ಲೀಂ ಸಮುದಾಯದ ಸಂವೇದನೆಗಳನ್ನು ಗಾಢವಾಗಿ ತಮ್ಮ ಚಿತ್ರಕ ಶೈಲಿಯಲ್ಲಿ ಕಟ್ಟಿಕೊಟ್ಟವರೆಂದರೆ ಸಾರಾ ಅಬೂಬಕರ್. ಸಾರಾ ಅಬೂಬಕರ್ ಅವರ ಬಹುಶೃತ ಕೃತಿ ʻಚಂದ್ರಗಿರಿ ತೀರದಲ್ಲಿʼ ಅನ್ನು ವನಮಾಲಾ ವಿಶ್ವನಾಥ ಅವರ Breaking Ties ಎಂಬ ಹೆಸರಿನಲ್ಲಿ English ಗೆ ಅನುವಾದಿಸಿದ್ದಾರೆ. ಈ ಪಟ್ಟಿ ಇನ್ನೂ ಉದ್ದವಿರಬಹುದು.. ಈಗ ಪ್ರತಿಷ್ಠಿತ ಕನ್ನಡ ಸಾಹಿತಿಗಳ ಸಾಲಿಗೆ ಬಾನು ಮುಷ್ತಾಕ್ ಸೇರಿದ್ದಾರೆ. ಕನ್ನಡದ ಸಾಂಸ್ಕೃತಿಕ ಲೋಕವನ್ನು ವಿಸ್ತರಿಸಿದ್ದಾರೆ. ಕನ್ನಡದ ಪ್ರತಿಷ್ಠಿತ ಸಾಹಿತಿಗಳಿಗೆ ದಕ್ಕದ ಗೌರವ ಬಾನುಗೆ ದಕ್ಕಿ ಅವರನ್ನು ಅವರ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಯು. ಆರ್. ಅನಂತಮೂರ್ತಿ ಅವರ ಕೃತಿಯೊಂದು Man Booker International Prize ಗೆ ನಾಮಕರಣಗೊಂಡಿತ್ತು. ಆದರೆ ಪ್ರಶಸ್ತಿ ಅವರಿಗೆ ದಕ್ಕಲಿಲ್ಲ. ಬಹುಶಃ ಅದಕ್ಕೆ ಅಂದಿನ ಕಾಲದ ಮಾನದಂಡಗಳೂ ಕಾರಣವಿರಬಹುದು.
ಮುಸ್ಲಿಂ ಸಮುದಾಯದ ಸಂವೇದನೆ
ಬಾನು ಅವರ ಇದುವರೆಗಿನ ಪ್ರಕಟಿತ ಸಾಹಿತ್ಯದ ಸಿಂಹಾವಲೋಕನ ಮಾಡಿದರೆ ಕಾಣಿಸುವುದು, ಆಯಾ ಕಾಲಘಟ್ಟದ ಸವಾಲುಗಳು ಮಹಿಳೆಯರ, ಅದರಲ್ಲೂ, ಮುಸ್ಲಿಂ ಮಹಿಳೆಯರ ಮೇಲೆ ಬೀರಿದ ಪರಿಣಾಮ, ಅಂದಿನ ಸಮಾಜದಲ್ಲಿ ಶೋಷಕರ ಶಕ್ತಿ-ಯುಕ್ತಿಗಳು, ಪುರುಷ ಪ್ರಧಾನ ಸಮಾಜದ ದೌರ್ಜನ್ಯವೂ ಸೇರಿದಂತೆ ಆ ಕಾಲದ ಮೌಲ್ಯಗಳ ವಿಶ್ಲೇಷಣೆ. “ಕೌಟುಂಬಿಕ ಹಾಗೂ ಸಮುದಾಯದ ತುಮುಲಗಳನ್ನು ಪ್ರಾದೇಶಿಕ ಸೊಗಡಿನೊಂದಿಗೆ ತಮ್ಮದೇ ಆದ ವ್ಯಂಗ್ಯದ ಶೈಲಿಯಲ್ಲಿ ಇಲ್ಲಿನ ಕಥೆಗಳು ಕಟ್ಟಿಕೊಟ್ಟಿವೆ” ಎಂದು Heart Lamp ಕೃತಿ ಕುರಿತು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. “ಸಮಾಜದ ಅಂಚಿನಲ್ಲಿರುವ ಸಮುದಾಯದ ಬದುಕಿನ ಅನ್ವೇಷಣೆಯ ಈ ಕೃತಿ ತೀರಾ ಸಾಂದ್ರವಾದ ಭಾವುಕ ಮತ್ತು ನೈತಿಕ ನೆಲೆಗಟ್ಟನ್ನು ಹೊಂದಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ತಳಮಳಗಳನ್ನು ಬಾನು ಮುಷ್ತಾಕ್ ತಮ್ಮ 1990 ರಿಂದ 2023ರ ವರೆಗಿನ ತಮ್ಮ ಸಣ್ಣ ಕಥೆಗಳಲ್ಲಿ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುತ್ತಾರೆ, ತೀರ್ಪುಗಾರರು. “ಕಥೆಯೊಂದನ್ನು Englishಗೆ ಅನುವಾದಿಸುವುದು ಒಂದು ಮೇಲ್ವರ್ಗದ ಅಪರೂಪದ ಸಂಗತಿ ಏನಲ್ಲ. ಪ್ರತಿಯೊಬ್ಬರೂ, ಕಲ್ಪಿಸಿಕೊಳ್ಳುವ , ಕಲ್ಪಿಸಿಕೊಳ್ಳಬಹುದಾದ ಕಥಾನಕಗಳು ಅವು. ಇದೊಂದು ರೀತಿಯಲ್ಲಿ ಆಶ್ಚರ್ಯಕರವಾಗಿ ಅನಾಮಿಕರೊಬ್ಬರನ್ನು ಅವರ ಎಲ್ಲ ಅನುಭವಗಳೊಂದಿಗೆ ಭೇಟಿ ಮಾಡಿದಂತೆ” ಎನ್ನುತ್ತಾರೆ ತೀರ್ಪುಗಾರರ ಪೈಕಿ ಒಬ್ಬರಾದ ಮ್ಯಾಕ್ಸ್ ಪೋರ್ಟರ್.
ಬಾನು ಮುಷ್ತಾಕ್ ಅವರ ʻಹಸೀನಾ ಮತ್ತು ಇತರ ಕಥೆಗಳುʼ Haseena and Other Stories ಎಂದು English ಗೆ ಅನುವಾದಗೊಂಡಿದೆ. ಈ ಕೃತಿ 2024ರ ʻPen Translation ʼ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಕೃತಿಯನ್ನು ಕೂಡ ದೀಪಾ ಭಾಸ್ತಿ ಅನುವಾದಿಸಿದ್ದಾರೆ. ಭಾನು ಮುಷ್ತಾಕ್ ಅವರ ಇತರ ಕೃತಿಗಳೆಂದರೆ, ʻಹೆಜ್ಜೆ ಮೂಡದ ಹಾದಿʼ, ʻಬೆಂಕಿ ಮಳೆʼ, ʻಎದೆಯ ಹಣತೆʼ, ʼಬಡವರ ಮಗಳು ಹೆಣ್ಣಲ್ಲʼ (ಸಣ್ಣ ಕತೆಗಳು), ʻಕುಬ್ರʼ (ಕಾದಂಬರಿ), ʻಒದ್ದೆ ಕಣ್ಣಿನ ಬಾಗಿನʼ (ಕವನ ಸಂಕಲನ), ʻಇಬ್ಬನಿಯ ಕಾವುʼ (ಪ್ರಬಂಧಗಳು), ಕೌಟುಂಬಿಕ ದೌರ್ಜನ್ಯ ಕಾಯ್ದೆ (On Domestic Violence Act) ̤̤ ಇದು ಬಾನು ಮುಷ್ತಾಕ್ ಅವರ ಬರಹದ ಹರಿವು..
ಸೀಮೋಲ್ಲಂಘನ
ಒಟ್ಟಾರೆಯಾಗಿ ಬರವಣಿಗೆ ಮಾಡುವುದು, ಅದರಲ್ಲಿಯೂ ಮುಸ್ಲೀಮ್ ಸಂವೇದನೆಯನ್ನು ಪ್ರಕಟಪಡಿಸುವುದೆ ದುಸ್ತರವಾಗಿದ್ದ ಕಾಲದಲ್ಲಿ ಬರೆಯುತ್ತಿರುವ ಹಿರಿಯ ಬರಹಗಾರ್ತಿ, ಬರವಣಿಗೆ ದಕ್ಕಿದ ಸಂದರ್ಭದಲ್ಲಿ ತಮ್ಮ ಧ್ವನಿಯನ್ನು ಹುಡುಕಿಕೊಂಡ ಕಿರಿಯ ಲೇಖಕಿ ಇಬ್ಬರೂ ಸೇರಿ ಕನ್ನಡ ಸಾಹಿತ್ಯದ ಪರಂಪರೆಯನ್ನು ಜಾಗತಿಕ ಹಂತಕ್ಕೆ ತೆಗೆದುಕೊಂಡು ಹೋಗಿರುವುದಂತೂ ಸತ್ಯ. ಅಂದರೆ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರು ಬೂಕರ್ ವೇದಿಕೆಯ ಮೇಲೆ ಒಟ್ಟಾಗಿ ಪರಸ್ಪರ ಅಭಿನಂದಿಸಿಕೊಂಡ ಕ್ಷಣವಿದೆಯಲ್ಲ, ಅದೊಂದು ಅಪರೂಪದ ಸಂದರ್ಭ ಎಂದು ಕನ್ನಡಿಗರೆಲ್ಲರಿಗೂ ಅನ್ನಿಸಿರಲು ಸಾಕು. ಇದೊಂದು ರೀತಿಯಲ್ಲಿ ಕನ್ನಡ ಸಾಹಿತ್ಯದ ಅನನ್ಯ ಸೀಮೋಲ್ಲಂಘನ ಎಂದು ಖಂಡಿತ ಹೇಳಬಹುದು.
ಹಸೀನಾ-ಕಾಸರವಳ್ಳಿ ಸಿನಿಮಾ
ಭಾನು ಮುಷ್ತಾಕ್ ಅವರ ʻಹಸೀನಾʼ ಕೃತಿಯನ್ನು ಆಧರಿಸಿ, ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅದೇ ಹೆಸರಿನಲ್ಲಿ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. 2004ರಲ್ಲಿ ಬಿಡುಗಡೆಯಾದ ಈ ಚಿತ್ರದ ನಾಯಕಿ ಪಾತ್ರಕ್ಕೆ ತಾರಾ ಅನುರಾಧ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಶ್ರೇಷ್ಠ ಕೌಟುಂಬಿಕ ಕಲ್ಯಾಣ ಶೀರ್ಷೀಕೆಯಡಿಯಲ್ಲಿ ರಜತ ಕಮಲ ಪ್ರಶಸ್ತಿಯನ್ನು ʻಹಸೀನಾʼ ತನ್ನದಾಗಿಸಿಕೊಂಡಿತ್ತು. ಬಾನು ಮುಷ್ತಾಕ್ ಅವರು ಕೆಲವು ಕಾಲ ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದರು. ಲಂಕೇಶ್ ಗರಡಿಯಲ್ಲಿ ಪಳಗಿದ ಭಾನು ಮುಷ್ತಾಕ್ ʻಲಂಕೇಶ್ ಪತ್ರಿಕೆʼಗೆ ಅತ್ಯುತ್ತಮ ವರದಿಗಳನ್ನು ಕೂಡ ಬರೆದಿದ್ದಾರೆ. ಈ ಲೇಖಕನಿಗೆ ನೆನಪಿರುವಂತೆ ಅವರು ಮುಸ್ಲಿಮ್ ಸಮುದಾಯದ ಕುರಿತ ಲೇಖನವೋ ಕೃತಿಯೋ ವಿವಾದಾತ್ಮಕವಾಗಿ ಅವರನ್ನು ಮುಸ್ಲಿಮ್ ಸುಮುದಾಯ ಬಹಿಷ್ಕರಿಸಿದ್ದ ಘಟನೆಯೂ ಇಪ್ಪತ್ತೈದು ವರ್ಷದ ಹಿಂದೆ ನಡೆದಿತ್ತು. ಇತ್ತೀಚಿನ ಕೆಲವು ದಶಕಗಳಲ್ಲಿ ಕೋಮು ಸೌಹಾರ್ದಕ್ಕೆ ಬಂದಿರುವ ಧಕ್ಕೆಯನ್ನು ಕುರಿತು ನೇರವಾಗಿ ದಿಟ್ಟವಾಗಿ ಮಾತನಾಡುತ್ತಿರುವ ಕೆಲವೇ ಕೆಲವರಲ್ಲಿ ಬಾನು ಮುಷ್ತಾಕ್ ಕೂಡ ಒಬ್ಬರು.
ಸೀಮೆಎಣ್ಣೆ ಪ್ರಸಂಗ
ಬಾನು ಅವರ Heart Lamp ನಲ್ಲಿ ಒಂದು ಸೀಮೆಎಣ್ಣೇ ಪ್ರಸಂಗ ಬರುತ್ತದೆ. ಅದು ಸ್ವಂತ ಅನುಭವ ಎಂದು ಬಾನು ಒಪ್ಪಿಕೊಂಡಿದ್ದಾರೆ. ಅವರದೊಂದು ಅವಿಭಕ್ತ ಕುಟುಂಬ. ಅವರು ನಾಲ್ಕು ಗೋಡೆಗಳ ನಡುವೆ ಬಂಧಿಯಾದಂತೆ ಬಾನುಗೆ ಭಾಸವಾಗುತ್ತಿತ್ತು. ಬಾನು ಮತ್ತು ಆಕೆಯ ಪತಿ ಮುಷ್ತಾಕ್ ನಡುವೆ ಸಂಘರ್ಷವಾಗುತ್ತಿತ್ತು. ಕೊನೆಗೊಂದು ದಿನ ಅದು ತೀವ್ರ ಘಟ್ಟಕ್ಕೆ ಹೋಯಿತು. ಆಗ ಅವರು ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ತಮ್ಮನ್ನು ತಾವು ಸುಟ್ಟುಕೊಳ್ಳಲು ಪ್ರಯತ್ನಿಸಿದರಂತೆ. ಆಗ ಮುಷ್ತಾಕ್, ತಮ್ಮ ಹಸುಗೂಸನ್ನು ಅಪ್ಪಿಕೊಂಡು, ತಮ್ಮನ್ನು ತೊರೆಯದಂತೆ ಬೇಡಿಕೊಂಡರಂತೆ. ಎಷ್ಟೋ ಹೊತ್ತಿನ ಮೇಲೆ ಬಾನುಗೆ ತಾವು ತೆಗೆದುಕೊಂಡ ತೀರ್ಮಾನದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡರಂತೆ….”ನನ್ನದು ಭಾವುಕ ಮನಸ್ಸು, ನನ್ನ ಪತಿಯದು ಸೌಮ್ಯ ಸ್ವಭಾವ. ʼಎಲ್ಲವನ್ನೂ ಏಕೆ ಹೃದಯಕ್ಕೆ ತೆಗೆದುಕೊಳ್ಳುತ್ತೀ..ʼ ಎಂದು ಆಗಾಗ ಹೇಳುತ್ತಿರುತ್ತಾರೆ. ಈಗ ನನಗೆ ಎಪ್ಪತ್ತೇಳು ವರ್ಷ” ಎನ್ನುತ್ತಾರೆ ಬಾನು.
Heart Lamp ಕೃತಿಯ ಯಶಸ್ಸಿನ ಹಾದಿ
ಭಾನು ಮುಷ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ Heart Lamp ಕೃತಿ ಅನುವಾದಕ್ಕೆ ಅನುವಾದ ಕ್ರಿಯೆಯನ್ನು ಕುರಿತು ಪ್ರಶ್ನಿಸಿದರೆ, “ನನ್ನ ಕಥೆಗಳ ಅನುವಾದಕ್ಕೆ ಕಾಲ ಪಕ್ವವಾಗಿದೆ ಅನ್ನಿಸಿದಾಗ ನನ್ನ ಗೆಳೆಯರಾದ ಬಸವ ಬಿರಾದಾರ್ ಅವರ ಸಲಹೆ ಕೇಳಿದ್ದೆ. ಅವರು ದೀಪಾ ಭಾಸ್ತಿ ಅವರ ಹೆಸರನ್ನು ಸೂಚಿಸಿ, ಅವರಿಂದ ಅನುವಾದ ಮಾಡಿಸಬಹುದೆಂದರು. ದೀಪಾ ಭಾಸ್ತಿ ಗೆ ನನ್ನ ʻಹಸೀನಾʼ ಕಥೆಯನ್ನು ಕಳುಹಿಸಿ ಇಷ್ಟವಾದರೆ Englishಗೆ ಅನುವಾದ ಮಾಡಿ ಎಂದು ಮನವಿ ಮಾಡಿದೆ. ಅದರ ಅನುವಾದವಾದ ನಂತರ ಆ ಕಥೆಯನ್ನು PEN Printer Prize ಪ್ರಶಸ್ತಿಗೆ ಅವರು ಕಳುಹಿಸಿದರು. ನಮ್ಮ ಕಥೆ ಅವರ ಆಯ್ಕೆಯ ಸಂಕ್ಷಿಪ್ತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದೇ ಅಲ್ಲದೆ, ಪ್ರಶಸ್ತಿಯನ್ನೂ ಗಳಿಸಿಕೊಂಡಿತು. ಈ ಪ್ರಶಸ್ತಿಯ ಒಂದು ಮುಖ್ಯ ಸಂಗತಿಯೆಂದರೆ, ಈ ರೀತಿ ಆಯ್ಕೆಯಾದ ಕಥೆಯೂ ಸೇರಿದಂತೆ ಹನ್ನೆರಡು ಕಥೆಗಳನ್ನು ಆಯ್ಕೆಮಾಡಿದರೆ ಅದನ್ನು ಪ್ರಕಟಿಸಲಾಗುತ್ತದೆ. ಅದಕ್ಕೆ ಅವರ literary Agent ನಮ್ಮನ್ನು ಸಂಪರ್ಕಿಸಿದರು. ಅದರಲ್ಲಿನ Red Lungi ಎನ್ನುವ ಕಥೆಗೆ Paris Review ನಲ್ಲಿ ಉತ್ತಮ ಪ್ರತಿಕ್ರಿಯೆ ಬಂದು ಅದರಲ್ಲಿ ಪ್ರಕಟವೂ ಆಯಿತು. ಅದೇ ರೀತಿ ನನ್ನ ಇನ್ನೊಂದು ಕಥೆ “ಒಮ್ಮೆ ಹೆಣ್ಮಗು ಪ್ರಭುವೇ” ಕಥೆ The Bffler literary magazine (This is Americas leading voice of interesting and unexpected left wing political criticism cultural analysis short stories poems and art) ನಲ್ಲಿ ಪ್ರಕಟವಾಯಿತು. ಇದೀಗ Heart Lamp ಕೃತಿ ಪ್ರಕಟಣೆಗೆ ಸಿದ್ಧವಾಗಿದೆ. ಅಷ್ಟೇ ಅಲ್ಲ. ಸದ್ಯಕ್ಕೆ ಬಾನು ತಮ್ಮ ಆತ್ಮಕತೆಯನ್ನು ಬರೆಯುತ್ತಿರುವುದಾಗಿ ಹೇಳುತ್ತಾರೆ. ಸದ್ಯಕ್ಕೆ ಈ ಬೂಕರ್ ಸಂಭ್ರಮದಲ್ಲಿ ಕಳೆದೆರೆಡು ತಿಂಗಳಿಂದ ಬರವಣಿಗೆ ನಿಧಾನವಾಗಿ ಸಾಗುತ್ತಿದೆಯಂತೆ.
(ಬರಹ- ಮುರಳೀಧರ ಖಜಾನೆ, ಬೆಂಗಳೂರು)