ವೈಚಾರಿಕ ಪರ -ವಿರೋಧದ ಆಟವನ್ನು ಶಿಷ್ಯರ ಮೇಲೆ ಪ್ರಯೋಗಿಸುವಾಗ ಇರಲಿ ಎಚ್ಚರ - ಪ್ರೊ ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಬರಹ: ರಾಜ್ಯದ ವಿಶ್ವವಿದ್ಯಾಲಯವೊಂದು ತನ್ನ ಪದವಿ ವಿದ್ಯಾರ್ಥಿಗಳಿಗೆ ಅಳವಡಿಸಿದ್ದ 'ರಾಷ್ಟ್ರೀಯ ಆಚರಣೆಯ ಸುತ್ತ' ಎಂಬ ಪಠ್ಯಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ವಾಪಸ್ ಪಡೆದಿದೆ. ಈ ಬಗ್ಗೆ ಪ್ರೊ ನಂದಿನಿ ಟೀಚರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

2025ರ ಜನವರಿ 26, ಭಾರತದ ಗಣರಾಜ್ಯೋತ್ಸಕ್ಕೆ ವಜ್ರ ಮಹೋತ್ಸವ ಮುಗಿಸಿದ ಸoಭ್ರಮ. ಗಣರಾಜ್ಯೋತ್ಸವದ ಪರೇಡ್ ಅನ್ನು ಪ್ರೇಕ್ಷಕನಾಗಿ ಕುಳಿತು ನೋಡುವಾಗ ಭಾರತದ ಸೇನೆಯ ಬಲವನ್ನೂ, ದೇಶವನ್ನು ಗಣರಾಜ್ಯವನ್ನಾಗಿಸುವತ್ತ ನಮ್ಮ ಹಿರಿಯರ ಶ್ರಮ ಹಾಗೂ ತ್ಯಾಗವನ್ನೂ ನೆನದಾಗ 'ಭಾರತಾಂಬೆಯೇ ನಿನಗೆ ಜಯ'ವಾಗಲಿ ಎಂಬ ಉದ್ಘೋಷ ದೇಶ ವಾಸಿಗಳೆಲ್ಲರ ಮನದಲ್ಲಿ ಅರಳುವುದು ಸ್ವಾಭಾವಿಕ. ಮಾತೃಭೂಮಿಗೆ ನಮ್ಮ 'ಜೈ' ಕಾರ ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯoತಿ, ಗಣರಾಜ್ಯೋತ್ಸವ ಹೀಗೆ ರಾಷ್ಟ್ರೀಯ ಆಚರಣೆಯ ಇಂತಹ ಸಮಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.
ದೇಶದ ಗಡಿಭಾಗಗಳಲ್ಲಿ ಅದೆಷ್ಟೋ ದೂರಕ್ಕೆ ದೃಷ್ಟಿಯನ್ನಿಟ್ಟು ಮೈಯೆಲ್ಲಾ ಕಣ್ಣಾಗಿ ತಮ್ಮನ್ನು ಆವರಿಸುವ ಏಕಾಂಗಿಭಾವವನ್ನು ಮೆಟ್ಟಿ, ಪ್ರಕೃತಿಯ ವಿಪರೀತ ಪರಿಸ್ಥಿತಿಯಲ್ಲಿಯೂ ದೇಶದ ಗಡಿಯ ರಕ್ಷಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಸೈನಿಕರ ಸಾಹಸ ನೆನೆದಾಗ, ವಘಾ ಗಡಿಯಲ್ಲಿ ಸಂಜೆ ಸಮಯದಲ್ಲಿ ಸೇರುವ ಜನಸಾಗರದ ಮಧ್ಯೆ ಕುಳಿತು ಅಲ್ಲಿ ನಡೆಯುವ 'ಬೀಟಿಂಗ್ ರೀಟ್ರೀಟ್' ವೀಕ್ಷಿಸುವಾಗ, ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಆ ಕ್ಷಣವನ್ನು ಅನುಭವಿಸಿದಾಗ, ಭಾರತೀಯ ವಿಜ್ಞಾನಿಗಳು ಸಾಧನೆಯ ಸoಭ್ರಮಾಚರಣೆಯ ಸoದಭ೯ ಇಂತಹ ಹತ್ತಾರು ಸನ್ನಿವೇಶಗಳಲ್ಲಿ ದೇಶದ ಪ್ರತಿ ಪ್ರಜೆಯ ಮನದ ಮಧ್ಯಭಾಗದಿಂದೆದ್ದು ಬರುವ ಸ್ವಭಾವಿಕ ಕೂಗು ಭಾರತಾoಬೆಯೇ ನಿನಗೆ 'ಜಯ' ವಾಗಲಿ ಎoದು ಅಲ್ಲವೇ?
ಮಾತೃಭೂಮಿಗೆ ನಾವು ಜೈಕಾರವನ್ನು ಉದ್ಘೋಷಿಸುವಾಗ ಎದೆ ಗರ್ವದಿಂದ ಉಬ್ಬಿ ದೇಶಪ್ರೇಮದ ಭಾವುಕತೆ ಮನವನ್ನೆಲ್ಲಾ ಆವರಿಸಿ ಕಣ್ಣಲ್ಲಿ ತಾಯ್ನಾಡ ಕುರಿತು ಹೆಮ್ಮೆ ಸಿಡಿಲೊಡೆಯುತ್ತದೆ. ಇದೇ ಭಾವ ಭಾರತ ಮಾತೆಯ ತನುಜಾತೆ ಜಯ ಹೇ ಕನಾ೯ಟಕ ಮಾತೆ ಎಂದು ಹಾಡುವಾಗಲೂ. ಒಕ್ಕೊರಲಿನಿಂದ ಹೊರಹೊಮ್ಮುವ ಮಾತೃ ಭೂಮಿಯತ್ತದ 'ಜೈ' ಕಾರದ ಝೇಂಕಾರ ನಾವು ಜನಿಸಿದ ಮಣ್ಣಿಗೆ, ನಂಬಿ ಆಚರಿಸುವ ಪದ್ಧತಿಗೆ, ಭಾರತೀಯ ಸಂಸ್ಕೃತಿಗೆ, ರಾಷ್ಟ್ರೀಯ ಲಾಂಛನಗಳಿಗೆ ಸಲ್ಲುವುದೆಂದೂ ನಂಬಿದ್ದೇವೆ. ಅರೆ! ಹೀಗೆನ್ನಿಸುವುದು ಸರಿಯಲ್ಲವೇ..ಸ್ವಾಭಾವಿಕವಲ್ಲವೇ ಎಂಬ ಭಾವ ಅರೆ ಕ್ಷಣದಲ್ಲಿ ಮನದಲ್ಲಿ ಮಿಂಚಿ ಹೋದದ್ದು ರಾಜ್ಯದ ವಿಶ್ವವಿದ್ಯಾಲಯವೊಂದು ತನ್ನ ಪದವಿ ವಿದ್ಯಾಥಿ೯ಗಳಿಗಾಗಿ ಅಳವಡಿಸಿದ್ದ 'ರಾಷ್ಟ್ರೀಯ ಆಚರಣೆಯ ಸುತ್ತ' ಎಂಬ ಪಠ್ಯವನ್ನು ಓದಿದಾಗ.
ಪ್ರತಿಭಟನೆಗೆ ಸ್ಪಂದಿಸಿದ ವಿಶ್ವವಿದ್ಯಾಲಯ ಪಠ್ಯವನ್ನು ಹಿಂದಕ್ಕೆ ಪಡೆದಿದೆ. ಆದರೆ…
ಹೌದಲ್ಲ, ವಿದ್ಯಾರ್ಥಿ ಸಂಘಟನೆ ಹಾಗೂ ಪಕ್ಷಾತೀತವಾಗಿ ಜನರು ನಡೆಸಿದ ಪ್ರತಿಭಟನೆಗಳಿಗೆ ತಲೆಬಾಗಿ ವಿಶ್ವವಿದ್ಯಾಲಯ ಅದಾಗಲೇ ಪಠ್ಯವನ್ನು ಈಗಾಗಲೇ ಹಿoದಕ್ಕೆ ಪಡೆದಾಯಿತಲ್ಲ . ಪ್ರಶ್ನೆ ಪತ್ರಿಕೆಯನ್ನು ಹಿಂಪಡೆದು ಪರೀಕ್ಷೆಯ ದಿನವನ್ನೂ ಮುoದೂಡಲಾಯಿತಲ್ಲ… ಮತ್ತೇಕೆ ಕೊರಗು ... ಆ ಕುರಿತ ಮಾತು? ನಿಜ. ಪ್ರತಿಭಟನೆಗೆ ಸ್ಪಂದಿಸಿದ ವಿಶ್ವವಿದ್ಯಾಲಯ ಪಠ್ಯವನ್ನು ಹಿಂದಕ್ಕೆ ಪಡೆದಿದೆ. ಆದರೆ ಮೂಲ ಪ್ರಶ್ನೆ ಆ ಧಾಟಿಯ ಪಠ್ಯವನ್ನು ಅಳವಡಿಸಿತೇಕೆ? ರಾಷ್ಟ್ರೀಯ ಭಾವಕ್ಕಿಂತ ಮೇಲಾಯಿತೇ ಮಿಕ್ಕೆಲ್ಲ ಭಾವ. ಯೋಚಿಸಿ.
ಪಠ್ಯದ ಬೋಧನೆಯಿ೦ದ ಈಗಾಗಲೇ ವಿದ್ಯಾರ್ಥಿಗಳ ಮೇಲೆ ಆಗಿರಬಹುದಾದ ಪರಿಣಾಮವನ್ನು ಪಠ್ಯ ಹಿಂಪಡೆಯುವ ಮೂಲಕ ಸರಿಮಾಡಲು ಸಾಧ್ಯವೇ? ಕಳೆದ ಮೂರು ತಿಂಗಳಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ತರಗತಿಗಳಲ್ಲಿ ಈ ಪಠ್ಯವನ್ನು ಕನ್ನಡ ಉಪನ್ಯಾಸಕರು ವಿವರಿಸುವಾಗ ವಿದ್ಯಾಥಿ೯ಗಳ ಮೇಲೆ ಆಗಿರಬಹುದಾದ ಪರಿಣಾಮವನ್ನು ನಾವು ತಳ್ಳಿ ಹಾಕಲು ಸಾಧ್ಯವೇ? ಮುಖ್ಯವಾಗಿ - ವಿಶ್ವವಿದ್ಯಾಲಯ ಪುಸ್ತಕವನ್ನು ಹಿoಪಡೆದಿಲ್ಲ ಪಠ್ಯವನ್ನೊಳಗೊಂಡಿರುವ ಪುಸ್ತಕ ವಿದ್ಯಾರ್ಥಿಯ ಬಳಿಯೇ ಇದೆ. ಪಠ್ಯ ಪರೀಕ್ಷೆಗಿಲ್ಲ ಅಷ್ಟೇ. ನಿಯಮಗಳನ್ನು ಮುರಿಯುವುದನ್ನು ಸಂಭ್ರಮಿಸುವ ಭಾವದ ಜೊತೆಗೆ ಬೆಳೆಯುವವರು ನಾವು (ಉದಾಹರಣೆಗೆ ಸಿಗ್ನಲ್ ಹಾರಿಸುವುದು, ಹೆಲ್ಮೆಟ್ ಧರಿಸದೇ/ ಲೈಸನ್ಸ್ ರಹಿತ ವಾಹನ ಚಾಲನೆ ಮಾಡುವುದು, ಟಿಕಿಟ್ ರಹಿತ ಪ್ರಯಾಣಿಸುವುದು). ಇoತಹ ನಾವು ವಿದ್ಯಾರ್ಥಿಗಳಲ್ಲಿ ಈ ಪಠ್ಯ ಬೇಡ - ಓದಬೇಡಿಯೆಂದರೆ ಅವರು ಓದದೆ ಸುಮ್ಮನಿರುವರೇ? ಓದಿದ್ದನ್ನು ಅಥ೯ಮಾಡಿಕೊಳ್ಳಲಾರರೇ?
ಪಠ್ಯವೊoದು ಪರೀಕ್ಷೆಗಿಲ್ಲ ಎಂದರೆ, ಶಿಕ್ಷಣದ ಮೂಲ ಪರಿಕಲ್ಪನೆಗೇ ಧಕ್ಕೆ ಬಂದಂತಾಗುವುದಿಲ್ಲವೇ? ಯೋಚಿಸಿ. ಅಲ್ಲಿಗೆ ಶಿಕ್ಷಣದ ಮೂಲ ಉದ್ದೇಶ ಕೇವಲ ಪರೀಕ್ಷೆ ನಡೆಸುವುದು, ಅಂಕಗಳನ್ನು ಸ೦ಪಾದಿಸುವುದೇ ಹೊರತು ಪಠ್ಯದ ಸಾರವನ್ನು ವಿದ್ಯಾರ್ಥಿಗೆ ಅರಿದು ಕುಡಿಸುವುದಲ್ಲವೆಂದು ವಿಶ್ವವಿದ್ಯಾಲಯವೇ ಹೇಳಿದಂತಾಗಲಿಲ್ಲವೇ? ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಎನ್ನುವ ಕೂರಗು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ/ರಾಷ್ಟ್ರೀಯ ಭಾಷೆಯ ಕಲಿಕೆ ರಾಜ್ಯದ ಇನ್ನಿತರ ಭಾಷೆಗಳನ್ನು ಎರಡನೇ ದರ್ಜೆಗೆ ತಳ್ಳುತ್ತದೆಂಬ ಭಾವದ ಪಠ್ಯಗಳು ವಿದ್ಯಾರ್ಥಿಗಳೆದುರಲ್ಲಿ ಬಂದರೆ ಹೇಗೆ? ಶಾಲಾ ಪಠ್ಯಗಳ ಆಯ್ಕೆಯಲ್ಲೂ ನಾವು ರಾಷ್ಟ್ರೀಯ ಸಾಮರಸ್ಯವನ್ನು ಕದಡುವ ಮನೋಭಾವವನ್ನು ಕಂಡಿದ್ದೇವೆ. ಮತ್ತೆ ಮತ್ತೆ ಇಂತಹ ಪ್ರಯತ್ನಗಳೇಕೆ?
‘ದೇಶದ ಸಂವಿಧಾನಕ್ಕಿರುವಷ್ಟೇ ಮಹತ್ವದ ಸ್ಥಾನ ಪಠ್ಯಕ್ರಮಕ್ಕಿದೆ’
ಪಠ್ಯಕ್ರಮವು ಶಿಕ್ಷಣದ ಯಾವುದೇ ಸ್ಥರದ್ದಾಗಿರಲಿ ಅಳವಡಿಸಲಾಗುವ ಪಠ್ಯಗಳ ಆಯ್ಕೆಗೊ೦ದು ಸಮಿತಿಯ ರಚನೆಯಾಗುತ್ತದೆ. ನುರಿತ ವಿಷಯ ತಜ್ಞರು ಈ ಸಮಿತಿಯಲ್ಲಿರುತ್ತಾರೆ. ಪಠ್ಯಗಳನ್ನು ಓದಿಯೇ ಪಠ್ಯಕ್ರಮದಲ್ಲಿ ಅದರ ಸೇರ್ಪಡೆಗೆ ಒಪ್ಪಿಗೆಯನ್ನು ಸಮಿತಿ ಸೂಚಿಸಲಾಗುತ್ತದೆ. ಪಠ್ಯಗಳ ಆಯ್ಕೆಯ ಸಂಪೂಣ೯ ಜವಾಬ್ದಾರಿ ಸಮಿತಿಯದ್ದೇ. ಯಾವುದೇ ದೇಶದ ಆಡಳಿತದಲ್ಲಿ ಆ ದೇಶದ ಸಂವಿಧಾನಕ್ಕಿರುವಷ್ಟೇ ಮಹತ್ವದ ಸ್ಥಾನ ಪಠ್ಯಕ್ರಮಕ್ಕಿದೆ. ಜ್ಞಾನಾರ್ಜನೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗಾಗಿ ವಿಶ್ವ ವಿದ್ಯಾಲಯ ರಚಿಸುವ ಸಮಿತಿಯ ಮಾರ್ಗದರ್ಶನದಲ್ಲಿ ವ್ಯವಸ್ಥೆಗೊಳಿಸಿದ ಅನುಭವದ ಒಟ್ಟು ಪರಿಣಾಮವಾಗಿ ಪಠ್ಯಕ್ರಮದ ರಚನೆಯಾಗುತ್ತದೆ. ಹೀಗಿರುವಾಗ ಸಮಿತಿ ಹಿಂಪಡೆದ ಆ ಪಠ್ಯವನ್ನು ಅಳವಡಿಸಿತೇಕೆ? ಉತ್ತರ ಬೇಕಿದೆ.
ಶಿಕ್ಷಣದ ಮೂಲ ಪರಿಕಲ್ಪನೆಯೇ ನಾಳಿನ ಸದೃಢ ಯುವಜನಾಂಗವನ್ನು ಮಾನಸಿಕವಾಗಿ, ಶಾರೀರಿಕವಾಗಿ, ವ್ಯಾವಸಾಯಿಕವಾಗಿ, ನೈತಿಕವಾಗಿ ಹಾಗೂ ಅಧ್ಯಾತ್ಮಿಕವಾಗಿ ಕಟ್ಟುವುದಾಗಿರುವುದರಿಂದ ಪಠ್ಯಕ್ರಮದ ರಚನೆಯಲ್ಲಿರುವ ಪ್ರತಿಭಾವಂತರು ಬಹು ಎಚ್ಚರದಿಂದ ಕಾರ್ಯನಿರ್ವಹಿಸಬೇಕಾದ್ದು ಅತ್ಯಗತ್ಯ. ಸಾಮಾನ್ಯವಾಗಿ ಪಠ್ಯಕ್ರಮ ರಚಿಸುವ ಯೋಚನೆ ಕ್ರಮಬದ್ಧವಾಗಿ ವಿದ್ಯಾರ್ಥಿ ಜ್ಞಾನದ ಅವಶ್ಯಕತೆಗನುಣವಾಗಿ, ಕಲಿಯುತ್ತಿರುವ ವಿಷಯಗಳಿಗೆ ಸoಬಂಧ ಕಲ್ಲಿಸುತ್ತಾ, ನಿರಂತರತೆ ಕಾಪಾಡುತ್ತ ಸಾಗುತ್ತದೆ. ಅದರಲ್ಲೂ ಸಾಹಿತ್ಯದ ಪಠ್ಯಕ್ರಮ ಸಿದ್ಧಪಡಿಸುವಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಅನುಭವ ನೀಡುವ, ಸಮಾಜದಲ್ಲಿ ಚಾರಿತ್ರ್ಯವಂತರನ್ನಾಗಿಸುವ, ಗೌರವದಿ೦ದ ಪ್ರಮಾಣಿಕತೆಯಿ೦ದ ಬದುಕು ನಡೆಸುವ ಸಾಹಿತ್ಯದ ಪರಿಚಯವಾದರೆ ಚೆನ್ನ.
'ವೊಕಿಸಮ್', 'ಕ್ಯಾನ್ಸಲ್ ಕಲ್ಚರ್' ಎಂಬೆಲ್ಲಾ ಧೋರಣೆಗೆ ಸಿಲುಕಿ ಈಗಾಗಲೇ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಯುವಜನತೆಗೆ ರಾಷ್ಟ್ರೀಯ ಐಕ್ಯತೆ, ದೇಶದ ಸಂಸ್ಕೃತಿ ಮತ್ತು ಅಧ್ಯಾತ್ಮಿಕ ಮೌಲ್ಯಗಳು, ಕಲೆ, ಸಾಮಾಜಿಕ ನ್ಯಾಯ, ಸಾಮರಸ್ಯ, ಪರಂಪರೆಯ ಬಗ್ಗೆ ಹೆಮ್ಮೆ ಗೌರವ ಮೂಡಿಸುವoತಹ ಪಠ್ಯಗಳು ಅಗತ್ಯವೇ ಹೊರತು ದೇಶಕ್ಕೊಂದು ಸ೦ಸ್ಕೃತಿಯೇ? ಎನ್ನುವ ಭಾವದ ಪಠ್ಯವನ್ನು ಅಳವಡಿಸುವುದು ಸರಿಯೇ? ಪಠ್ಯದ ಸಂಪಾದಕೀಯ ಸಮಿತಿ ಗಂಭೀರವಾಗಿ ಯೋಚಿಸಬೇಕು.
ವಿದ್ಯಾಥಿ೯ಗಳನ್ನು ಭಾಷೆಯ ಜೊತೆಗೆ ಭಾವದ ಲಹರಿಯಲ್ಲೂ ತೇಲಿಸಬಲ್ಲ ಭಾಷೆಯ ಶಿಕ್ಷಕರು ವಿದ್ಯಾಥಿ೯ಗಳಿಗೆ ಅತಿ ಪ್ರಿಯರು. ವೈಚಾರಿಕತೆಯ ಪರ -ವಿರೋಧದ ಆಟವನ್ನು ಶಿಷ್ಯರ ಮೇಲೆ ಪ್ರಯೋಗಿಸುವಾಗ ಬಹಳ ಎಚ್ಚರದಿಂದ ಇರಬೇಕಾದ್ದು ಅನಿವಾರ್ಯ. ನಿಜ ಸಾಹಿತ್ಯದ ವಿದ್ಯಾಥಿ೯ಗೆ ವಿವಿಧ ವಿಚಾರಧಾರೆಗಳ ಸಾಹಿತ್ಯದ ಪರಿಚಯವಾಗಬೇಕು. ಆದರೆ ಅದು 'ದೇಶ ಮೊದಲು' ಭಾವನೆಗೆ ಧಕ್ಕೆತರಬಾರದಲ್ಲವೇ. ರಾಷ್ಟ್ರೀಯತೆಯ ವಿಚಾರಧಾರೆಗೆ ಧಕ್ಕೆ ಬರಬಹುದಾದ ಬರಹಗಳನ್ನು ವಿದ್ಯಾಥಿ೯ಗಳ ಮುoದಿಡುವ ಯೋಚಿತ ಪ್ರಯತ್ನದತ್ತ ಶಿಕ್ಷಣ ಕ್ಷೇತ್ರ ಎಚ್ಚರದಿಂದರಲಿ. ಭಾರತಾಂಬೆಯೊಂದಿಗೆ ಅವಳ ಹೆಮ್ಮೆಯ ಮಗಳಾದ ತಾಯಿ ಭುವನೇಶ್ವರಿಯ 'ಜಯ' ಕಾರಕ್ಕೆಂದೂ ಕೊರತೆಯಾಗದಿರಲಿ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
