ಕನ್ನಡ ಸುದ್ದಿ  /  Lifestyle  /  Be Sure To Learn These Life Lessons Before Turning 30

30ಕ್ಕೆ ಕಾಲಿಡುವ ಮೊದಲು ಬದುಕಿನ ಈ ಪಾಠಗಳನ್ನು ಕಲಿಯಲು ಮರೆಯದಿರಿ

30ನೇ ವರ್ಷಕ್ಕೆ ಕಾಲಿಡುವ ಮೊದಲು ಈ ಕೆಲವು ಪಾಠಗಳನ್ನು ಕಲಿಯುವುದರಿಂದ ಭವಿಷ್ಯದ ಹಾದಿಗೆ ಭದ್ರ ಬುನಾದಿಯಾಗುವುದು ಮಾತ್ರವಲ್ಲ, ಜೀವನದ ಯಶಸ್ಸಿಗೂ ದಾರಿಯಾಗುತ್ತದೆ.

30
30

30ನೇ ವರ್ಷಕ್ಕೆ ಕಾಲಿಡುವ ಮೊದಲು ಜೀವನದ ಹಲವು ಪ್ರಮುಖ ಪಾಠಗಳ ಬಗ್ಗೆ ನಾವು ಅರಿತಿರಬೇಕು. ಜೀವನದಲ್ಲಿ ಅನಿರೀಕ್ಷಿತ ಸವಾಲು ಹಾಗೂ ಅವಕಾಶಗಳು ಎದುರಾಗುವುದರಿಂದ ಬದಲಾವಣೆ ಹಾಗೂ ಅನಿಶ್ಚಿತತೆಯನ್ನು ಒಪ್ಪಿಕೊಳ್ಳುವುದು ಅವಶ್ಯವಾಗುತ್ತದೆ. ಈ ಕೆಲವು ಬದುಕಿನ ಪಾಠಗಳನ್ನು ಮೊದಲೇ ಕಲಿಯುವುದರಿಂದ ಭವಿಷ್ಯದ ಹಾದಿಗೆ ಭದ್ರ ಬುನಾದಿಯಾಗುವುದು ಮಾತ್ರವಲ್ಲ, ಜೀವನದ ಯಶಸ್ಸಿಗೂ ದಾರಿಯಾಗುತ್ತದೆ.

ತಪ್ಪುಗಳಿಂದ ಕಲಿಯಿರಿ

ನಿಮ್ಮ ತಪ್ಪುಗಳನ್ನು ಜವಾಬ್ದಾರಿಯನ್ನಾಗಿ ತೆಗೆದುಕೊಳ್ಳಿ, ಅಲ್ಲದೆ ಅದನ್ನು ಒಪ್ಪಿಕೊಳ್ಳಿ. ತಪ್ಪುಗಳಿಂದ ಕಲಿಯುವುದನ್ನು ಅಭ್ಯಾಸ ಮಾಡಿ. ನಿಮ್ಮ ಸೋಲುಗಳಿಗೆ ಬೇರೆಯವರನ್ನು ಹೊಣೆ ಮಾಡುವ ಕೆಟ್ಟ ಚಾಳಿಯನ್ನು ರೂಢಿಸಿಕೊಳ್ಳಬೇಡಿ.

ನಿಮ್ಮ ಮೇಲೆ ಕಾಳಜಿ ತೋರಿ

ನಿಮ್ಮ ವಿದ್ಯೆ, ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಹೂಡಿಕೆ ಮಾಡಿ. ಹೊಸ ಹೊಸ ಕೌಶಲಗಳು, ದೈನಂದಿನ ವ್ಯಾಯಾಮ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೇಲೆ ಗಮನ ಹರಿಸಿ.

ಹಣಕಾಸಿನ ನಿರ್ವಹಣೆ ಕಲಿಯಿರಿ

ಹಣ ಉಳಿತಾಯ, ಬಂಡವಾಳ ಹೂಡಿಕೆ, ಹಣಕಾಸಿನ ಸಮರ್ಪಕ ಬಳಕೆ ಇವುಗಳ ಬಗ್ಗೆ ತಿಳಿಯಿರಿ. ದೈನಂದಿನ ಜೀವನದಲ್ಲಿ ಉತ್ತಮ ಆರ್ಥಿಕ ಹವ್ಯಾಸಗಳನ್ನು ರೂಢಿಸಿಕೊಳ್ಳಿ.

ಸಂಬಂಧಗಳನ್ನು ಬಲಪಡಿಸಿಕೊಳ್ಳಿ

ಸ್ನೇಹಿತರು, ಕುಟುಂಬದವರು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ. ಪರಿಣಾಮಕಾರಿ ಸಂವಹನ ಹಾಗೂ ಪರಸ್ಪರ ಕೌಶಲವನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು ಒಂದಲ್ಲ ಒಂದು ರೀತಿಯ ಬದುಕಿನ ಪಾಠವನ್ನು ಕಲಿಸುತ್ತವೆ. ಅದು ಕೆಟ್ಟದ್ದಾಗಿರಬಹುದು ಅಥವಾ ಒಳ್ಳೆಯದ್ದಾಗಿರಬಹುದು.

ಬದಲಾವಣೆಗಳನ್ನು ಒಪ್ಪಿಕೊಳ್ಳಿ

ಜೀವನಪೂರ್ತಿ ಬದಲಾವಣೆಗಳೇ ಎದುರಾಗುತ್ತಿರುತ್ತವೆ. ಇದನ್ನು ಒಪ್ಪಿಕೊಳ್ಳಿ. ಜೀವನದ ಬದಲಾವಣೆಗಳನ್ನು ಸ್ವೀಕರಿಸುವುದು ಅಮೂಲ್ಯವಾದ ಕೌಶಲ. ಹೊಸ ಅನುಭವ ಮತ್ತು ಅವಕಾಶಗಳಿಗೆ ತೆರೆದುಕೊಳ್ಳಿ. ಬದಲಾವಣೆಗಳಿಂದ ಕಲಿಯುವುದು ಸಾಕಷ್ಟಿರುತ್ತದೆ.

ಆಸಕ್ತಿಯನ್ನು ಮುಂದುವರಿಸಿ

ನಿಮ್ಮ ಆಸಕ್ತಿ ಹಾಗೂ ಒಲವು ಏನಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಮುಂದುವರಿಸಿ. ಆಸಕ್ತಿಗೂ ವಯಸ್ಸಿಗೂ ಸಂಬಂಧವಿಲ್ಲ. ಕಲಿಕೆಗೂ ವಯಸ್ಸಿನ ಹಂಗಿಲ್ಲ. ಹಾಗಾಗಿ ಹೊಸತನ್ನು ಕಲಿಯುವ ಅವಕಾಶ ಸಿಕ್ಕಾಗ ಬೇರೆ ಯೋಚಿಸದೇ ಕಲಿಯಿರಿ. ಜೀವನದ ಅರ್ಥ ಹಾಗೂ ಉದ್ದೇಶವನ್ನು ಅರ್ಥಮಾಡಿಕೊಳ್ಳಿ.

ಕೃತಜ್ಞತೆ ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ

ನಿಮ್ಮ ಬಳಿ ಏನಿದೆ ಅದಕ್ಕೆ ಕೃತಜ್ಞರಾಗಿರಿ. ಜೀವನದಲ್ಲಿ ಎದುರಾಗುವ ಸಣ್ಣ ಸಣ್ಣ ವಿಷಯಗಳಿಂದಲೂ ಕಲಿಯಲು ಪ್ರಯತ್ನಿಸಿ. ಸಕಾರಾತ್ಮಕ ದೃಷ್ಟಿಕೋನ ಮತ್ತು ಮನೋಭಾವವನ್ನು ಬೆಳೆಸಿಕೊಳ್ಳಿ.

ಕ್ಷಮಿಸಲು ಕಲಿಯಿರಿ

ದ್ವೇಷ ಹಾಗೂ ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದರಿಂದ ನಿಮಗೆ ನೋವುಂಟಾಗುತ್ತದೆ. ಇದರಿಂದ ಮನಃಶಾಂತಿ, ಸಂಬಂಧ ಎಲ್ಲವೂ ಹಾಳಾಗುತ್ತದೆ. ಆ ಕಾರಣಕ್ಕೆ ಪ್ರತಿಯೊಬ್ಬರನ್ನು ಕ್ಷಮಿಸಲು ಕಲಿಯಿರಿ. ನಿಮ್ಮಲ್ಲಿನ ಎಲ್ಲಾ ಋಣಾತ್ಮಕ ಭಾವವನ್ನು ಹೊರ ಹೋಗಲು ಬಿಡಿ.

ಮನಃಶಾಂತಿಯಿಂದ ಬದುಕಲು ಅಭ್ಯಾಸ ಮಾಡಿ

ಮನಸ್ಸನ್ನು ಆಹ್ಲಾದಕರವಾಗಿ ಇರಿಸಿಕೊಳ್ಳಿ. ಸದಾ ಖುಷಿಯಿಂದ ಇರಿ. ಒತ್ತಡ ನಿರ್ವಹಣೆಯನ್ನು ಕಲಿಯಿರಿ. ಮನಸ್ಸಿಗೆ ಬೇಸರವಾದಾಗ ಬೇಸರ ಕಳೆಯಲು ಒಂದಿಷ್ಟು ಹವ್ಯಾಸಗಳನ್ನು ರೂಢಿಸಿಕೊಳ್ಳಿ.

ನಿಮಗೆ ನೀವೇ ಮೋಸ ಮಾಡಿಕೊಳ್ಳಬೇಡಿ

ಬೇರೆಯವರಿಗೋಸ್ಕರ ನಿಮ್ಮದಲ್ಲದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಮೌಲ್ಯ, ನಂಬಿಕೆಗಳಿಗೆ ಬೆಲೆ ಕೊಡಿ. ನೀವು ನೀವಾಗಿರಿ. ನಿಮ್ಮ ನಂಬಿಕೆಯ ಮೇಲೆ ನೀವು ದೃಢವಾಗಿ ನಿಲ್ಲುವುದನ್ನು ಮರೆಯಬೇಡಿ.

ವಿಭಾಗ